ಸಾಮಾಜಿಕ ಜಾಲತಾಣ ಸಂಸ್ಥೆಯಾದ ʼಮೆಟಾʼ, ಬಿಜೆಪಿಗೆ ಅನುಕೂಲಕರವಾಗಿ ನಡೆದುಕೊಳ್ಳುತ್ತಿದೆ ಎಂದು ಆಪಾದಿಸಿ ಯುವ ಕಾಂಗ್ರೆಸ್ ನಡೆಸಿರುವ ವಿನೂತನ ಅಭಿಯಾನ ಎಲ್ಲರ ಗಮನ ಸೆಳೆಯುತ್ತಿದೆ.
ಬಿಜೆಪಿ ಹರಡುತ್ತಿರುವ ನಕಲಿ ಸುದ್ದಿಗಳು, ದ್ವೇಷ ಭಾಷಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ʼಮೆಟಾʼ ಸಂಸ್ಥೆ ವಿಫಲವಾಗಿರುವುದನ್ನು ವಿರೋಧಿಸಿ ಯುವ ಕಾಂಗ್ರೆಸ್ ʼಮೆಟಾ, ಬಿಜೆಪಿ ಕಾ ಬೇಟಾ ಎಂಬ ಬ್ಯಾನರ್ ಅಳವಡಿಸುವ ಮೂಲಕ ʼಮೆಟಾʼ ಸಂಸ್ಥೆಯ ವಿರುದ್ಧ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಬೃಹತ್ ಹೋರ್ಡಿಂಗ್‌ನಲ್ಲಿ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರನ್ನು ಆರ್‌ಎಸ್‌ಎಸ್ ಉಡುಪಿನಲ್ಲಿ ಚಿತ್ರಿಸಿರುವುದು ಪ್ರಮುಖ ಆಕರ್ಷಣೆಯಾಗಿದೆ.
ವಿಮಾನ ನಿಲ್ದಾಣದ ಮಾರ್ಗದಲ್ಲಿರುವ ಸದಹಳ್ಳಿ ಗೇಟ್ ಸಮೀಪ ಅಳವಡಿಸಿರುವ ಹೋರ್ಡಿಂಗ್‌ನಲ್ಲಿ ಜುಕರ್‌ಬರ್ಗ್ ಖಾಕಿ ಚಡ್ಡಿ ಮತ್ತು ಬಿಳಿ ಅಂಗಿ ಧರಿಸಿದ್ದು, ಅವರ ತಲೆಯ ಮೇಲೆ ಕಪ್ಪು ಆರ್‌ಎಸ್‌ಎಸ್ ಟೋಪಿ ಮತ್ತು ಹಣೆಯ ಮೇಲೆ ಕುಂಕುಮದ ತಿಲಕವನ್ನು ಚಿತ್ರಿಸಲಾಗಿದೆ. ಅವರ ಪಕ್ಕದಲ್ಲಿ ಮೆಟಾ ಲೋಗೊ ಹಾಗೂ ಹೊಲೋಗ್ರಾಮ್ ಪ್ರದರ್ಶಿಸಲಾಗಿದೆ.
ʼಮಾರ್ಕ್ ಬಿಜೆಪಿ-ಬರ್ಗ್ʼ ಎಂದು ಬಣ್ಣಿಸಿರುವ ಈ ಪೋಸ್ಟರ್‌ನಲ್ಲಿ ʼಮೆಟಾ, ಬಿಜೆಪಿ ಕಾ ಬೇಟಾʼ (ʼಮೆಟಾ, ಬಿಜೆಪಿಯ ಮಗʼ) ಎಂಬ ಘೋಷಣೆ ಬರೆಯಲಾಗಿದೆ. ಕೇಂದ್ರದ ಬಿಜೆಪಿ ಸರ್ಕಾರದ ಜೊತೆ ಮೆಟಾ ಸಂಸ್ಥೆ ಹೊಂದಾಣಿಕೆ ಮಾಡಿಕೊಂಡಿದೆ, ದ್ವೇಷ ಭಾಷಣಗಳನ್ನು ನಿಯಂತ್ರಿಸುವಲ್ಲಿ ಮೆಟಾ ತಾರತಮ್ಯ ಮಾಡುತ್ತಿದೆ, ನಕಲಿ ಸುದ್ದಿಗಳ ಹರಡುವಿಕೆಗೆ ಅವಕಾಶ ನೀಡುತ್ತಿದೆ ಮತ್ತು ರಾಜಕೀಯ ಪ್ರಭಾವಕ್ಕೆ ಮಣಿಯುತ್ತಿದೆ ಎಂದು ಈ ಮೂಲಕ ಯುವ ಕಾಂಗ್ರೆಸ್ ಆರೋಪವನ್ನು ಎತ್ತಿ ತೋರಿಸಿದೆ.
ವಿಮಾನ ನಿಲ್ದಾಣ ರಸ್ತೆಯ ಚಿಕ್ಕಜಾಲ ಮತ್ತು ಇತರೆ ಸ್ಥಳಗಳಲ್ಲಿಯೂ ಬೃಹತ್ ಫ್ಲೆಕ್ಸ್ ಬ್ಯಾನರ್‌ಗಳು ಹಾಗೂ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ಈ ರಸ್ತೆಯಲ್ಲಿ ಹೆಚ್ಚಿನ ವಾಹನ ಸಂಚಾರವಿದ್ದು, ಗಣ್ಯ ವ್ಯಕ್ತಿಗಳು ಕೂಡ ಈ ಮಾರ್ಗದಲ್ಲಿ ಸಂಚರಿಸುತ್ತಾರೆ.
ಈ ಅಭಿಯಾನದಲ್ಲಿ ಮೆಟಾ ಸಂಸ್ಥೆಯ ಮುಖ್ಯಸ್ಥ ಜುಕರ್‌ಬರ್ಗ್ ಅವರನ್ನು ಗುರಿಯಾಗಿಸಿಕೊಂಡಿದ್ದು, ಸಂಸ್ಥೆಯ ಆಡಳಿತವು ರಾಜಕೀಯ ಪಕ್ಷಪಾತದ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಲಾಗಿದೆ.
ಈ ಅಭಿಯಾನದ ಕುರಿತು ಬಿಜೆಪಿ ಅಥವಾ ಮೆಟಾ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.



