ಬೀದರ್ ತಾಲೂಕಿನ ಜನವಾಡ ಸಮೀಪದ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ 2012ರಲ್ಲಿ ಆರಂಭಿಸಲಾದ ಕನ್ನಡ ಕೃಷಿ ಡಿಪ್ಲೋಮಾ ಕಾಲೇಜು ಗ್ರಾಮೀಣ ಭಾಗದ ರೈತರ, ಕೃಷಿಕರ ಮಕ್ಕಳಿಗೆ ಸ್ವಯಂ ಉದ್ಯೋಮದಾರರಾಗಿ ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳುವುದರ ಜತೆಗೆ, ಉದ್ಯೋಗ ಗಿಟ್ಟಿಸಿಕೊಳ್ಳಲು ತುಂಬಾ ಸಹಕಾರಿಯಾಗಿದೆ.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಈ ಕೃಷಿ ಡಿಪ್ಲೋಮಾ ವಿದ್ಯಾಲಯದಲ್ಲಿ 2026-27 ನೇ ಸಾಲಿನ ಡಿಪ್ಲೋಮಾ (ಕೃಷಿ) ಕೋರ್ಸ್‌ಗೆ ರಾಯಚೂರು ಕೃಷಿ ವಿವಿಯ ಕುಲಸಚಿವರು ಅಧಿಸೂಚನೆ ಹೊರಡಿಸಿದ್ದಾರೆ.
ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಜನವಾಡ ಸಮೀಪ 15ಕ್ಕೂ ಹೆಚ್ಚು ಎಕರೆ ವಿಸ್ತೀರ್ಣದಲ್ಲಿ ಕೃಷಿ ಸಂಶೋಧನಾ ಕೇಂದ್ರ ಇದೆ. ಇಲ್ಲಿ ಬೀಜೋತ್ಪಾದನೆ ಹಾಗೂ ಕೃಷಿ ಸಂಶೋಧನೆ ನಡೆಸಲಾಗುತ್ತದೆ. ಇದೇ ಆವರಣದಲ್ಲಿ ಸುಸಜ್ಜಿತ ಕಟ್ಟಡದಲ್ಲಿ 2012-13ರಲ್ಲಿ ಕೃಷಿ ಡಿಪ್ಲೋಮಾ ಕೋರ್ಸ್ ಕಾಲೇಜು ಆರಂಭವಾಗಿದೆ. ಈ ಹಿಂದೆ ಪ್ರತಿ ವರ್ಷ ಪ್ರತಿ ಬ್ಯಾಚ್‌ಗೆ 50 ರಿಂದ 70 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿತ್ತು. ಪ್ರಸಕ್ತ ಸಾಲಿನಲ್ಲಿ 35 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ. 50 ರಷ್ಟು ಸೀಟು :
ಎರಡು ವರ್ಷಗಳ ಈ ಕೋರ್ಸ್‌ಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇ.45 ರಷ್ಟು (ಪಜಾ/ಪಪಂ/ಪ್ರವರ್ಗ-1 ಶೇ.40ರಷ್ಟು) ಅಂಕಗಳು ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ರೈತರ ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ.50ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-(1) ಅಭ್ಯರ್ಥಿಗಳಿಗೆ 250 ರೂ. ಹಾಗೂ ಸಾಮಾನ್ಯ,ಇತರೆ ಅಭ್ಯರ್ಥಿಗಳಿಗೆ 500 ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. 2026 ಜೂನ್ 25ಕ್ಕೆ ಅಭ್ಯರ್ಥಿಗಳ ವಯಸ್ಸು 20 ವರ್ಷ ಮೀರಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ :
ಡಿಪ್ಲೋಮಾ (ಕೃಷಿ) ಕೋರ್ಸ್‌ಗೆ ಪ್ರವೇಶಕ್ಕೆ ಕುರಿತಂತೆ ಅರ್ಜಿ ನಮೂನೆಯನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ವೆಬ್ಸೈಟ್ www.uasraichur.karnataka.gov.in ನಲ್ಲಿ ಅರ್ಜಿ ಡೌನ್ಲೋಡ್ ಮಾಡಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಡಿ.ಡಿ. ಮತ್ತು ಎಲ್ಲ ಅವಶ್ಯಕ ದಾಖಲೆಗಳೊಂದಿಗೆ ರಾಯಚೂರು ಕೃಷಿ ವಿವಿ ವಿಳಾಸಕ್ಕೆ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಇದೇ ಜೂನ್ 25 ಕೊನೆಯ ದಿನವಾಗಿದೆ.
ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ಧತಿಯನ್ನು ಆಧರಿಸಿ ಸೀಟುಗಳ ಹಂಚಿಕೆಯನ್ನು ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವೆಬ್ಸೈಟ್ www.uasraichur.karnataka.gov.in ನಲ್ಲಿ ಪ್ರಕಟಿಸಲಾಗುತ್ತದೆ. ನಂತರ ಪ್ರವೇಶಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಸಂಬಂಧಪಟ್ಟ ಕೇಂದ್ರದಲ್ಲಿ ಮೂಲ ದಾಖಲಾತಿಗಳನ್ನು ಪರಿಶೀಲನೆ ಮಾಡಿಸುವ ನಿಗದಿತ ಶುಲ್ಕವನ್ನು ಪಾವತಿಸಿ ಪ್ರವೇಶ ಪಡೆಯತಕ್ಕದ್ದು ಎಂದು ರಾಯಚೂರು ಕೃಷಿ ವಿವಿಯ ಡಿಪ್ಲೋಮಾ ಶಿಕ್ಷಣದ ಮುಖ್ಯ ಸಂಯೋಜಕರಾದ ಡಾ.ಎ.ಜಿ.ಶ್ರೀನಿವಾಸ ತಿಳಿಸಿದ್ದಾರೆ.
ಡಿಪ್ಲೋಮಾ ಕೋರ್ಸ್‌ನ ಅನುಕೂಲಗಳೇನು :
ರೈತರ ಮಕ್ಕಳಿಗೆ ಅನುಕೂಲ ಆಗಲೆಂಬ ಉದ್ದೇಶದಿಂದ 2012-13ರಲ್ಲಿ ರಾಯಚೂರು ಕೃಷಿ ವಿವಿ ಅಡಿಯಲ್ಲಿ ಜನವಾಡ ಸಮೀಪದ ಕೃಷಿ ಸಂಶೋಧನಾ ಕೇಂದ್ರ ಆವರಣದಲ್ಲಿ ಕೃಷಿ ಡಿಪ್ಲೋಮಾ ಕೋರ್ಸ್ ಮೊದಲ ಬಾರಿಗೆ ಶುರುವಾಯಿತು. ಅಂದಿನಿಂದ ಇಲ್ಲಿಯವರೆಗೆ ಕೋರ್ಸ್‌ಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. 2012 ರಿಂದ ಇಲ್ಲಿಯವರೆಗೆ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಆಸಕ್ತಿಯಿಂದ ಕಲಿತಿರುವ ವಿದ್ಯಾರ್ಥಿಗಳು ವಿವಿಧ ಖಾಸಗಿ ಕಂಪನಿಗಳಲ್ಲಿ ಸ್ವಂತ ಉದ್ಯೋಗ ಗಿಟ್ಟಿಸಿಕೊಳ್ಳುವುದರ ಜತೆಗೆ ಪೋಷಕರಿಗೆ ಕೃಷಿಯಲ್ಲಿ ನೆರವಾಗುತ್ತಿದ್ದಾರೆ. ಕಲಿತ ವಿಷಯವನ್ನು ಕೃಷಿಯಲ್ಲಿಯೂ ಅಳವಡಿಸಿಕೊಂಡಿದ್ದಾರೆ.

“ಕೃಷಿ ಡಿಪ್ಲೋಮಾ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳು ಕೃಷಿಯಲ್ಲಿ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಉನ್ನತ ಹುದ್ದೆಗಳಿಗೆ ತೆರಳಲು ಸಹಾಯಕವಾಗುತ್ತದೆ ಎಂಬ ಆಶಾಭಾವನೆಯನ್ನು ಈ ಭಾಗದ ರೈತರು ಹೊಂದಿದ್ದಾರೆ. 2 ವರ್ಷದ ಈ ಕೋರ್ಸ್ ಮುಗಿಸಿದ ನಂತರ ಬಿಎಸ್ಸಿ (ಕೃಷಿ) ಬಯಸುವ ವಿದ್ಯಾರ್ಥಿಗಳಿಗೆ ಶೇ.5ರಷ್ಟು ಮೀಸಲಾತಿ ಇದೆ. ಬೀಜ ಮತ್ತು ಗೊಬ್ಬರ ಅಂಗಡಿ ತೆರೆಯಲು ಪರವಾನಿಗೆ ಪಡೆಯಲು ಸಹಕಾರ. ಗುತ್ತಿಗೆ ಆಧಾರದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ, ಬೀಜ ಖರೀದಿ ಕೇಂದ್ರ, ಖಾಸಗಿ ಕಂಪನಿ, ಬೀಜ ವಿತರಣಾ ಕೇಂದ್ರ ಸೇರಿದಂತೆ ಕೃಷಿ ವಿವಿಯಲ್ಲಿ ಕ್ಷೇತ್ರ ಸಹಾಯಕ ಹುದ್ದೆ ಪಡೆಯಬಹುದು” ಎಂದು ಜನವಾಡ ಕೃಷಿ ಡಿಪ್ಲೋಮಾ ಕಾಲೇಜಿನ ಸಂಯೋಜಕ ಡಾ.ಜೈನುದ್ದೀನ್ ಮುಲ್ಲಾʼ ಈದಿನʼಕ್ಕೆ ತಿಳಿಸಿದ್ದಾರೆ
ಬಾಲಕರಿಗೆ ಹಾಸ್ಟೆಲ್ ಸೌಲಭ್ಯ :
ಅಂದಾಜು 1 ಎಕರೆ ಪ್ರದೇಶದಲ್ಲಿರುವ ಕಾಲೇಜು ಸುಸಜ್ಜಿತ ಕಟ್ಟಡದಲ್ಲಿ 4 ತರಗತಿ ಕೋಣೆ, ಪ್ರಯೋಗಾಲಯ, ಎರಡು ವಿಶೇಷ ಬೋಧನಾ ಕೊಠಡಿ, ಗ್ರಂಥಾಲಯ ಸೇರಿದಂತೆ ಮೂಲ ಸೌಕರ್ಯ ಹೊಂದಿದೆ. ಕಲ್ಯಾಣ ಭಾಗದ ಬೇರೆ ಜಿಲ್ಲೆಗಳಿಂದ ಪ್ರವೇಶ ಪಡೆದು ವ್ಯಾಸಂಗ ಮಾಡುವ ಬಾಲಕರಿಗೆ ವಸತಿ ನಿಲಯ ಸೌಲಭ್ಯ ಕೂಡ ಇದೆ. ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇಲ್ಲ.
ವಿಶ್ವವಿದ್ಯಾಲಯ ಅಧೀನದಲ್ಲಿನ ಕಾಲೇಜುಗಳ ಸಂಶೋಧಕರು, ಪ್ರಾಧ್ಯಾಪಕರು ಆಗಮಿಸಿ ಇಲ್ಲಿನ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ತೆಗೆದುಕೊಳ್ಳುತ್ತಾರೆ. ಅಧ್ಯಾಪಕರು ಪೂರ್ಣ ಪ್ರಮಾಣದಲ್ಲಿ ಕಾಯಂ ಇಲ್ಲದ ಕಾರಣಕ್ಕೆ ವಸತಿ ನಿಲಯ, ಕಾಲೇಜಿನಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆʼ ಎಂದು ಕಾಲೇಜಿನ ಸಂಯೋಜಕರು ಹೇಳುತ್ತಾರೆ.

“ಕಾಲೇಜು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ವಿವಿಧ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗುವ ಉದ್ದೇಶದಿಂದ ಕೃಷಿ ಜಮೀನು ಸಹ ಇದೆ. ಕೃಷಿ ಡಿಪ್ಲೋಮಾ ಕೋರ್ಸ್‌ಗಳಲ್ಲಿ ಒಟ್ಟು ನಾಲ್ಕು ಸೆಮಿಸ್ಟರ್‌ಗಳಿದ್ದು, ಒಂದು ಸೆಮಿಸ್ಟರ್‌ಗೆ 6 ರಿಂದ 7 ವಿಷಯಗಳಿರುತ್ತವೆ. ತರಗತಿಯಲ್ಲಿ ಕನ್ನಡ ಮಾಧ್ಯಮ ಪಠ್ಯಕ್ರಮ ಬೋಧನೆ ಜತೆಗೆ ಪ್ರಾಯೋಗಿಕ, ಪ್ರಾತ್ಯಕ್ಷಿಕೆ, ಕ್ಷೇತ್ರ ವೀಕ್ಷಣೆ ಸೇರಿದಂತೆ ಹಲವು ವಿಧದ ಜ್ಞಾನಾರ್ಜನೆ ಮಾಡಿಸಲಾಗುತ್ತದೆ” ಎಂದು ವಿವರಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಏಕೈಕ ಕೃಷಿ ಡಿಪ್ಲೋಮಾ ಕಾಲೇಜು :
2023ರಲ್ಲಿ ಸ್ಥಗಿತಗೊಳಿಸಿದ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಮಂಡ್ಯ ವಿ.ಸಿ.ಫಾರ್ಮ್, ಶಿವಮೊಗ್ಗ ಕೃಷಿ ವಿ.ವಿ ವ್ಯಾಪ್ತಿಯ ಉಡುಪಿ ಜಿಲ್ಲೆಯ ಬ್ರಹ್ಮಾವರ ಕಾಲೇಜು, ಧಾರವಾಡ ಕೃಷಿ ವಿ.ವಿ ವ್ಯಾಪ್ತಿಯ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಕಾಲೇಜು ಮತ್ತು ರಾಯಚೂರು ಕೃಷಿ ವಿ.ವಿ ವ್ಯಾಪ್ತಿಯ ಬೀದರ್ ಕೃಷಿ ಡಿಪ್ಲೊಮಾ ಕಾಲೇಜುಗಳು ಪುನರಾರಂಭಗೊಂಡಿವೆ.
ಇದನ್ನೂ ಓದಿ : ಬೀದರ್ | ʼಮೇಲಾಧಿಕಾರಿಗಳ ಕಿರುಕುಳದಿಂದ ನನ್ನ ಮಗ ಸಾವುʼ : ಮೃತ ಮಹಾದೇವ ತಾಯಿ ಆರೋಪ
ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಧೀನದಲ್ಲಿ ಈ ಹಿಂದೆ ಬಳ್ಳಾರಿ ಹಾಗೂ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಹಾಗೂ ಬೀದರ್‌ನ ಜನವಾಡ ಸಮೀಪದ ಕೃಷಿ ಸಂಶೋಧನಾ ಕೇಂದ್ರದಲ್ಲಿನ ಕಾಲೇಜು ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಟ್ಟು 3 ಕಾಲೇಜುಗಳಿದ್ದವು. ಬಳ್ಳಾರಿ ಮತ್ತು ಯಾದಗಿರಿ ಜಿಲ್ಲೆಯ ಶಹಾಪುರ ಸಮೀಪದ ಭೀಮರಾಯನಗುಡಿ ಕಾಲೇಜು ಸರ್ಕಾರ ಮುಚ್ಚಿಸಿದೆ. ಸದ್ಯ ಬೀದರ್ ಜಿಲ್ಲೆಯ ಜನವಾಡ ಸಮೀಪದಲ್ಲಿರುವ ಕೃಷಿ ಡಿಪ್ಲೋಮಾ ಕಾಲೇಜು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಏಕೈಕ ಕೃಷಿ ಡಿಪ್ಲೋಮಾ ಕಾಲೇಜು ಇದಾಗಿದೆ.
ಕೃಷಿ ಡಿಪ್ಲೋಮಾ ಕೋರ್ಸ್ ಕುರಿತು ಹೆಚ್ಚಿನ ಮಾಹಿತಿಗಾಗಿ ಕೃಷಿ ಡಿಪ್ಲೋಮಾ ಕಾಲೇಜು ಸಂಯೋಜಕರಾದ ಡಾ.ಜೈನುದ್ದೀನ್ ಮುಲ್ಲಾ (88618 45057) ಕಾಂಬಳೆ ರಾಮದಾಸ (8892589036) ಹಾಗೂ 9480696306 ಸಂಖ್ಯೆಗೆ ಸಂಪರ್ಕಿಸಬಹುದು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




