ಶೋಷಿತರ ಬದುಕಿನಲ್ಲಿ ಸ್ವಾಭಿಮಾನ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಬೆಳಕು ಮೂಡಿಸುವ ಆಶಯದೊಂದಿಗೆ ದಶಕಗಳ ಕಾಲ ಹೋರಾಟದ ಹಾದಿಯಲ್ಲಿ ಸಾಗಿದವರು ಹಿರಿಯ ದಲಿತ ಹೋರಾಟಗಾರ ಮಾರುತಿ ಬೌದ್ಧೆ. ಅಧಿಕಾರ, ಸ್ಥಾನಮಾನ ಹಾಗೂ ಯಾವುದೇ ಫಲಾಫೇಕ್ಷೆಯಿಲ್ಲದೆ ನೊಂದವರ ನೋವಿಗೆ ದನಿಯಾಗಿ, ದಲಿತ ಸಂಘರ್ಷ ಸಮಿತಿಯನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳೆಸಲು ಶ್ರಮಿಸಿದ ಅವರ ಬದುಕು ಹೋರಾಟದ ಹಲವು ಮಜಲುಗಳಿಗೆ ಸಾಕ್ಷಿಯಾಗಿದೆ.
ಬೀದರ್ ನಗರದ ಭೀಮನಗರದಲ್ಲಿ ಜನಿಸಿದ ಮಾರುತಿ ಬೌದ್ಧೆ, ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಚಳವಳಿಗಳತ್ತ ಆಕರ್ಷಿತರಾದವರು. ಹಿರಿಯ ಚಿಂತಕ ಬಿ. ಶ್ಯಾಮಸುಂದರ್ ಅವರ ವಿಚಾರಧಾರೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳು ಹಾಗೂ ಶೋಷಿತ ಸಮುದಾಯಗಳ ನೋವುಗಳು ಅವರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದವು. ಕಳೆದ ನಾಲ್ಕು ದಶಕಗಳಿಂದ ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯರಾಗಿರುವ ಅವರು, ಅನೇಕ ಹೋರಾಟಗಳು, ಸಂಘಟನಾ ಚಟುವಟಿಕೆಗಳ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿ ಧ್ವನಿ ಎತ್ತಿದ್ದಾರೆ.
ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ನೇತ್ರತ್ವದಲ್ಲಿ ಇಂದು (ನ.7) ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆಯಲಿರುವ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಹೋರಾಟಗಾರ ಮಾರುತಿ ಬೌದ್ಧೆ ಅವರನ್ನು ಆಯ್ಕೆ ಮಾಡಲಾಗಿದೆ.
ನಾಲ್ಕು ದಶಕಗಳ ಹೋರಾಟದ ಅನುಭವ, ಚಳವಳಿಯ ಏಳುಬೀಳು, ದಲಿತ ಸಂಘಟನೆಗಳ ಇಂದಿನ ಸ್ಥಿತಿಗತಿ, ಜಾತಿ ವ್ಯವಸ್ಥೆಯ ಕರಾಳತೆ ಹಾಗೂ ಹೊಸ ತಲೆಮಾರಿನ ಹೋರಾಟಗಾರರ ಜವಾಬ್ದಾರಿಗಳ ಕುರಿತು ‘ಈದಿನ ಡಾಟ್ ಕಾಮ್‘ ನಡೆಸಿದ ವಿಶೇಷ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಪ್ರಶ್ನೆ: ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವ ಲಭಿಸಿರುವುದಕ್ಕೆ ಏನು ಅನಿಸುತ್ತಿದೆ? ಈ ಗೌರವವನ್ನು ನಿರೀಕ್ಷಿಸಿದ್ದೀರಾ?
ಉ: ನಾನು ಕಾಲೇಜು ದಿನಗಳಿಂದಲೇ ಹೋರಾಟದ ಹಾದಿ ತುಳಿದು ಬೆಳೆದವನು. ಹಿರಿಯ ಚಿಂತಕ ಬಿ.ಶ್ಯಾಮಸುಂದರ್ ಸೇರಿದಂತೆ ಅನೇಕ ಹೋರಾಟಗಾರರ ವಿಚಾರಧಾರೆಗಳು ನನ್ನ ಮೇಲೆ ಗಾಢವಾದ ಪ್ರಭಾವ ಬೀರಿವೆ. ಕ್ರಮೇಣ ಹೋರಾಟವೇ ನನ್ನ ಬದುಕಿನ ಭಾಗವಾಯಿತು. ಇಂದಿನವರೆಗೂ ಅದೇ ಹಾದಿಯಲ್ಲಿ ಸಾಗುತ್ತಿದ್ದೇನೆ.
ನಾನು ಯಾವತ್ತೂ ಅಧ್ಯಕ್ಷ ಸ್ಥಾನ ಅಥವಾ ಗೌರವಗಳನ್ನು ನಿರೀಕ್ಷಿಸಿದವನಲ್ಲ. ನೊಂದವರ ಕಣ್ಣೀರು ಒರೆಸಿ, ಅವರ ನೋವಿಗೆ ಸ್ಪಂದಿಸುವುದರಲ್ಲಿಯೇ ಬದುಕಿನ ಸಾರ್ಥಕತೆ ಕಂಡುಕೊಂಡಿದ್ದೇನೆ. ಜನರ ಪ್ರೀತಿ, ಅಭಿಮಾನ ಮತ್ತು ಗೌರವದಿಂದ ಈ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ದೊರೆತಿದೆ. ಇದು ನನ್ನ ಬದುಕಿನ ಅತ್ಯಂತ ಅವಿಸ್ಮರಣೀಯ ಕ್ಷಣ. ನನ್ನನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.
ಪ್ರಶ್ನೆ: ನಿಮ್ಮಲ್ಲಿ ಹೋರಾಟದ ಮನೋಭಾವ ಬೆಳೆಯಲು ಪ್ರೇರಣೆಯಾದ ಸಂಗತಿಗಳು ಯಾವುವು?
ಉ: ಬೀದರ್ ನಗರದ ಭೀಮನಗರ ನನ್ನ ಹುಟ್ಟೂರು. ನಿಜಾಮರ ಆಡಳಿತದಲ್ಲಿ ಮಂತ್ರಿಯಾಗಿದ್ದ ಹಿರಿಯ ಚಿಂತಕ ಬಿ.ಶ್ಯಾಮಸುಂದರ್ ಅವರ ಹೋರಾಟಗಳು ಹಾಗೂ ಪ್ರಖರ ಚಿಂತನೆಗಳ ಕುರಿತು ನಮ್ಮ ಓಣಿಯಲ್ಲಿ ಆಗಾಗ ಚರ್ಚೆಗಳು ನಡೆಯುತ್ತಿದ್ದವು. ಅವು ನನ್ನೊಳಗೆ ಪ್ರತಿರೋಧದ ಮನೋಭಾವ ಬೆಳೆಸಲು ಕಾರಣವಾದವು. ಅಲ್ಲಿಂದಲೇ ಸಮಾಜದ ಅನ್ಯಾಯಗಳ ವಿರುದ್ಧ ಹೋರಾಡುವ ಆಸಕ್ತಿ ಹೆಚ್ಚಾಯಿತು.
ನಾನು 9ನೇ ತರಗತಿಯಲ್ಲಿ ಓದುತ್ತಿದ್ದಾಗ ಅಂಧ ಗಾಯಕ ಗವಾಯಿ ಕಾಶಿನಾಥ ಅವರು ಕಲ್ಯಾಣ ಕರ್ನಾಟಕದಲ್ಲಿ ಎಲ್ಲ ಹಳ್ಳಿಗಳನ್ನು ಸುತ್ತಿ ಅಂಬೇಡ್ಕರ್ ಭಜನಾ ಗೀತೆಗಳನ್ನು ಹಾಡುತ್ತಾ ಜನರನ್ನು ಜಾಗೃತಿಗೊಳಿಸಿದರು. ‘ಶಾಲೆಯ ಕಲಿಯಿರಿ ಅಣ್ಣತಮ್ಮಂದಿರೇ, ಕಾಲೇಜು ಓದಿರಿ ಅಕ್ಕತಂಗಿಯರೇ’ ಎಂಬ ಅವರ ಹಾಡಿನ ಸಾಲುಗಳು ಜನರಲ್ಲಿ ಶಿಕ್ಷಣದ ಜಾಗೃತಿ ಮೂಡಿಸುತ್ತಿದ್ದವು. ಆ ಮಾತುಗಳು ನನ್ನ ಮನಸ್ಸಿನ ಮೇಲೂ ಗಾಢವಾದ ಪರಿಣಾಮ ಬೀರಿದವು. ಸಮಾಜದ ನೋವುಗಳಿಗೆ ಸ್ಪಂದಿಸಬೇಕು, ಸಮಾನತೆಗಾಗಿ ಏನಾದರೂ ಮಾಡಬೇಕು ಎಂಬ ಛಲಕ್ಕೆ ಅವು ಪ್ರೇರಣೆಯಾದವು.
ಪ್ರಶ್ನೆ: ವಿದ್ಯಾರ್ಥಿ ಚಳವಳಿಯಲ್ಲಿ ನಿಮ್ಮ ಪಾತ್ರ ಹಾಗೂ ಅಂದಿನ ಹೋರಾಟದ ಅನುಭವಗಳೇನು?
ಉ: ಆಗ ಬೀದರ್ ನಗರದ ಜನವಾಡ ರಸ್ತೆಯಲ್ಲಿ ಒಂದೇ ಒಂದು ಅಂಬೇಡ್ಕರ್ ವಿದ್ಯಾರ್ಥಿ ನಿಲಯವಿತ್ತು. ಕಾಲೇಜಿನಲ್ಲಿ ನನ್ನ ಹೆಚ್ಚಿನ ಸ್ನೇಹಿತರು ಗ್ರಾಮೀಣ ಭಾಗದವರಾಗಿದ್ದರು. ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಇಲ್ಲದ ಕಾರಣ ಬೆಳಿಗ್ಗೆ ಕಾಲೇಜಿಗೆ ಬಂದು, ಸಂಜೆವರೆಗೆ ಬಸ್ಸಿಗಾಗಿ ಕಾಯುತ್ತಾ, ಊಟಕ್ಕೂ ಪರದಾಡುತ್ತಿದ್ದ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದೇನೆ.
ಸರ್ಕಾರಿ ವಸತಿ ನಿಲಯಗಳ ಕೊರತೆಯಿಂದ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ಗಳನ್ನು ಆರಂಭಿಸಿದ್ದವು. ನಂತರ ಖಾಸಗಿ ಹಾಸ್ಟೆಲ್ಗಳಲ್ಲಿ ಉಳಿಯುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಆರ್ಥಿಕ ನೆರವು ನೀಡುವ ಯೋಜನೆ ಜಾರಿಯಾಯಿತು. ಆದರೆ, ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಆಸಕ್ತಿ ಕಡಿಮೆಯಾಯಿತು.

ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದು ನಾವು ಬೆಂಗಳೂರು ತೆರಳಿ ಹೋರಾಟ ನಡೆಸಿದೆವು. ನಮ್ಮ ಹೋರಾಟಕ್ಕೆ ಸ್ಪಂದಿಸಿದ ಅಂದಿನ ಸಮಾಜ ಕಲ್ಯಾಣ ಇಲಾಖೆ ಸಚಿವ ಧರ್ಮಸಿಂಗ್ ಅವರು ಬೀದರ್ನಲ್ಲಿ ಸರ್ಕಾರಿ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಸೂಚನೆ ನೀಡಿದರು. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕಾಗಿ ನಾವು ನಡೆಸಿದ ಹೋರಾಟಕ್ಕೆ ದೊರೆತ ಮಹತ್ವದ ಸ್ಪಂದನೆಯಾಗಿತ್ತು.
ಪ್ರಶ್ನೆ: ನಿಮ್ಮ ಹೋರಾಟದ ಬದುಕಿನಲ್ಲಿ ಮರೆಯಲಾಗದ ನೋವಿನ ಅನುಭವ ಯಾವುದು?
ಉ: 1987ರಲ್ಲಿ ನಾನು ದಲಿತ ಸಂಘರ್ಷ ಸಮಿತಿಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕನಾಗಿದ್ದೆ. ಅದಕ್ಕೂ ಮುನ್ನ 1986ರಲ್ಲಿ ಬೆಂಗಳೂರಿನಲ್ಲಿ ಬೃಹತ್ ಚಳವಳಿ ನಡೆದಿತ್ತು. ಆ ಚಳವಳಿಯಲ್ಲಿ ಭಾಗವಹಿಸಲು ಬೀದರ್ನಿಂದ ಚಂದ್ರಕಾಂತ ಪೋಸ್ತೆ, ವೈಜಿನಾಥ ಸೂರ್ಯವಂಶಿ ಹಾಗೂ ಭೀಮರಾವ್ ಅವರು ನಮಗೆ ₹200 ನೀಡಿ ಕಳುಹಿಸಿದ್ದರು.
ಅಮಲಾಪುರ ಶಂಭು, ನಾನು, ಹಣಮಂತ ಬನ್ನೇರ್ ಮತ್ತು ದಯಾನಂದ ಬೆಂಗಳೂರಿಗೆ ತೆರಳಿದ್ದೆವು. ನನ್ನ ಬದುಕಿನಲ್ಲಿ ಕಂಡ ಅತ್ಯಂತ ದೊಡ್ಡ ಪ್ರತಿಭಟನೆ ಅದಾಗಿತ್ತು. ಆದರೆ, ಪ್ರತಿಭಟನೆ ಮುಗಿಸಿ ವಾಪಸ್ ಬರುವಾಗ ಬಸ್ ಪ್ರಯಾಣಕ್ಕೂ, ಊಟಕ್ಕೂ ನಮ್ಮ ಬಳಿ ಹಣವಿರಲಿಲ್ಲ. ಆಗ ಯಾರೋ ಒಬ್ಬರು ನಮ್ಮನ್ನು ಹಾಸ್ಟೆಲ್ಗೆ ಕರೆದೊಯ್ದು ಊಟ ಮಾಡಿಸಿ, ಪ್ರಯಾಣಕ್ಕೆ ಹಣ ಕೊಟ್ಟು ಕಳುಹಿಸಿದರು. ಹೋರಾಟಗಾರರ ಬದುಕು ಎಷ್ಟು ಕಷ್ಟಕರವಾಗಿರುತ್ತದೆ ಎಂಬುದನ್ನು ಮೊದಲ ಬಾರಿಗೆ ಅರಿತುಕೊಂಡ ಅನುಭವವದು.
1984ರಲ್ಲಿ ತಂದೆ ನಿಧನರಾದ ಬಳಿಕ ಮನೆಯ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು. ಕುಟುಂಬದ ಜವಾಬ್ದಾರಿ ನನ್ನ ಹೆಗಲೇರಿತ್ತು. ಆಗ ದಸರಾ, ದೀಪಾವಳಿ ರಜಾ ದಿನಗಳಲ್ಲಿ ಮನೆಗಳಿಗೆ ಸುಣ್ಣಬಣ್ಣ ಬಳಿಯುವ ಕೆಲಸಕ್ಕೆ ಹೋಗಿ ದುಡಿದು ಕುಟುಂಬವನ್ನು ನಿಭಾಯಿಸುತ್ತಿದ್ದೆ. ಬಡತನದ ನಡುವೆಯೂ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ಹಂಬಲ ಮಾತ್ರ ಕಡಿಮೆಯಾಗಲಿಲ್ಲ.
ಪ್ರಶ್ನೆ: ಅಂದಿನ ಮತ್ತು ಇಂದಿನ ದಲಿತ ಚಳವಳಿಗಳಲ್ಲಿ ಯಾವ ರೀತಿಯ ವ್ಯತ್ಯಾಸವನ್ನು ಕಾಣುತ್ತೀರಿ?
ಉ: ಇಂದಿನ ಸಂಘಟನೆಗಳು ಮತ್ತು ಹೋರಾಟಗಳನ್ನು ಗಮನಿಸಿದಾಗ ಕೆಲವೊಮ್ಮೆ ತುಂಬಾ ನೋವಾಗುತ್ತದೆ. ಅಂದು ಚಳವಳಿಗಳು ನಿಸ್ವಾರ್ಥ ಮತ್ತು ಪ್ರಾಮಾಣಿಕತೆಯಿಂದ ನಡೆಯುತ್ತಿದ್ದವು. ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಾಜದ ಹಿತಕ್ಕಾಗಿ ಹೋರಾಟಗಾರರು ಬೀದಿಗಿಳಿಯುತ್ತಿದ್ದರು.
‘ನಮ್ಮಿಂದ ಸಮಾಜಕ್ಕೆ ಏನು ಲಾಭ? ನಾವು ಸಮಾಜಕ್ಕೆ ಏನು ಕೊಡುಗೆ ನೀಡಬಹುದು?’ ಎಂದು ಯೋಚಿಸಿ ಸಂಘಟನೆ ಕಟ್ಟಬೇಕೇ ಹೊರತು, ‘ಸಂಘಟನೆಯಿಂದ ನನಗೇನು ಲಾಭ?’ ಎಂಬ ಸ್ವಾರ್ಥದ ಮನೋಭಾವ ಇರಬಾರದು. ಇಂತಹ ಮನೋಭಾವದಿಂದ ಗಟ್ಟಿಯಾದ ಸಂಘಟನೆ ಕಟ್ಟಲು ಸಾಧ್ಯವಿಲ್ಲ. ಹೋರಾಟದ ವೇಳೆ ನನ್ನ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಆದರೂ ಯಾವುದಕ್ಕೂ ಹೆದರದೆ ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಧ್ವನಿ ಎತ್ತಿದ್ದೇವೆ. ಇಂದಿಗೂ ಆ ಹೋರಾಟ ಮುಂದುವರಿದಿದೆ. ಸಂಘಟನೆ ಎಂಬುದು ವ್ಯಕ್ತಿಗತ ಲಾಭಕ್ಕಲ್ಲ, ಸಮಾಜದ ಪರಿವರ್ತನೆಗಾಗಿ ಇರಬೇಕೆಂದು ನನ್ನ ಸದಾಶಯ.
ಪ್ರಶ್ನೆ: ಹೊಸ ತಲೆಮಾರಿನ ಹೋರಾಟಗಾರರಿಗೆ ನಿಮ್ಮ ಸಂದೇಶವೇನು?
ಉ: ಸಮಾಜದಲ್ಲಿ ತಮ್ಮ ಸ್ವಾರ್ಥಕ್ಕಾಗಿ ಆಸೆ, ಆಮಿಷಗಳನ್ನು ಒಡ್ಡಿ ಮತ್ತೊಬ್ಬರನ್ನು ಬಳಸಿಕೊಳ್ಳುವವರು ಸಾಕಷ್ಟು ಜನರಿದ್ದಾರೆ. ಅದರಲ್ಲೂ ರಾಜಕಾರಣದಲ್ಲಿ ಇದು ಹೆಚ್ಚಾಗಿದೆ. ಇಂತಹ ಉದ್ದೇಶಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡು ಯುವ ಜನಾಂಗ ಹೆಜ್ಜೆ ಇಡಬೇಕಾಗಿದ್ದು ಅಗತ್ಯವಿದೆ.
ಮೊದಲು ಅಧ್ಯಯನ ಮತ್ತು ಬರಹದ ಮೂಲಕ ಪ್ರಜ್ಞಾವಂತರಾಗಬೇಕು. ನಾವು ಜಾಗೃತರಾದಾಗ ಮಾತ್ರ ಸಮಾಜವನ್ನು ಜಾಗೃತಿಗೊಳಿಸಲು ಸಾಧ್ಯ. ವೈಯಕ್ತಿಕ ಸ್ವಾರ್ಥಕ್ಕಾಗಿ ಚಳವಳಿ ಕಟ್ಟುವುದು ಎಂದರೆ ಜಾಗೃತಿ ಸಮಾಜ ದುರ್ಬಲಗೊಳಿಸಿದಂತೆಯೇ ಸರಿ. ಯಾವುದೇ ಸಂಘಟನೆ ಇರಲಿ, ಅದರ ಉದ್ದೇಶ ಜನಪರ, ಜೀವಪರ ಆಗಿರಬೇಕು. ಜನರ ನೋವಿಗೆ ಸ್ಪಂದಿಸುವ ಮನೋಭಾವ, ಉತ್ತಮ ವ್ಯಕ್ತಿತ್ವ, ತಾಳ್ಮೆ, ಧೈರ್ಯ ಮತ್ತು ಮುಖ್ಯವಾಗಿ ಮಾನವೀಯ ಮೌಲ್ಯಗಳು ಬೆಳೆಸಿಕೊಳ್ಳಬೇಕು. ಇವು ಸಂಘಟನಾತ್ಮಕ ಶಕ್ತಿಯನ್ನು ಮತ್ತಷ್ಟು ಬಲಪಡಿಸುತ್ತವೆ.
ಪ್ರಶ್ನೆ: ಶೋಷಿತ ಸಮುದಾಯಗಳ ಮೇಲಿನ ದೌರ್ಜನ್ಯ, ದಬ್ಬಾಳಿಕೆಗಳಿಗೆ ಇನ್ನೂ ಕೊನೆ ಸಿಕ್ಕಿಲ್ಲವೇಕೆ?
ಉ: ಬಡವರು, ದಲಿತರು ಮತ್ತು ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹಾಗೂ ಕೊಲೆಗಳು ಮೊದಲಿನಿಂದಲೂ ನಡೆಯುತ್ತಿವೆ. ಇಂದಿಗೂ ಅವು ಮುಂದುವರಿದಿರುವುದು ದುರಂತದ ಸಂಗತಿ. ಜಿಲ್ಲೆಯ ಬಸವಕಲ್ಯಾಣ ಮತ್ತು ಭಾಲ್ಕಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ದಲಿತ ಸಮುದಾಯದ ಜನರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆಗಳೂ ನಡೆದಿವೆ.
1988ರಲ್ಲಿ ನಡೆದ ಒಂದು ಘಟನೆ ನನ್ನ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ದಲಿತ ಸಮುದಾಯದ ತಂದೆಯಿಲ್ಲದ ಬಾಲಕನೊಬ್ಬ ಊರಿನ ಮೇಲ್ವರ್ಗದ ಜಮೀನ್ದಾರರ ಮನೆಯಲ್ಲಿ ಜೀತಕ್ಕೆ ಇದ್ದ. ನಂತರ ಶಿಕ್ಷಣ ಕಲಿಯುವ ಆಸಕ್ತಿಯಿಂದ ಆತ ನೌಕರಿ ಮಾಡುವುದಿಲ್ಲ ಎಂದು ಹೇಳಿದ. ಈ ಕಾರಣಕ್ಕೆ ಆ ಬಾಲಕನನ್ನು ಮನೆಯಿಂದ ಹೊತ್ತೊಯ್ದು ಕೈಕಾಲು ಕಟ್ಟಿ ಬಾವಿಯಲ್ಲಿ ನೇತುಹಾಕಿದ ಅಮಾನವೀಯ ಘಟನೆ ನಡೆದಿತ್ತು. ಬಳಿಕ ಪೊಲೀಸರು ಬಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ಆತನ ಜೀವ ಉಳಿಯಿತು.
ಈ ಘಟನೆಯ ಕುರಿತು ಪ್ರಕರಣ ದಾಖಲಿಸಲು ಆ ಬಾಲಕ ತಾಯಿ ಪೊಲೀಸ್ ಠಾಣೆಗೆ ತೆರಳಿದಾಗ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಆ ಮಹಿಳೆ ಎಲ್ಲೇ ಹೋದರೂ ಕೇಸ್ ಆಗಲಿಲ್ಲ. ನಂತರ ನಮ್ಮಲ್ಲಿ ಬಂದು ವಿಷಯ ತಿಳಿಸಿದರು. ನಾವು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದ ಬಳಿಕ ಪ್ರಕರಣ ದಾಖಲಾಗುವಂತಾಯಿತು. ಇಂತಹ ಘಟನೆಗಳು ಸಮಾಜದಲ್ಲಿ ಇನ್ನೂ ಜಾತಿ ಆಧಾರಿತ ದಬ್ಬಾಳಿಕೆ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿ.
ಪ್ರಶ್ನೆ: ಜಾತಿ ವ್ಯವಸ್ಥೆ ಇಂದಿಗೂ ಮುಂದುವರಿದಿದೆಯೇ? ಅಂದಿನ ಮತ್ತು ಇಂದಿನ ಜಾತಿ ತಾರತಮ್ಯದಲ್ಲಿ ಏನು ಬದಲಾವಣೆಯಾಗಿದೆ?
ಉ: ಹೋರಾಟದ ಬದುಕಿನಲ್ಲಿ ಎಲ್ಲ ಸಮುದಾಯದ ಜನರೂ ನಮ್ಮೊಂದಿಗೆ ಇದ್ದರು. ನಾವು ಯಾರನ್ನೂ ಜಾತಿಯ ಆಧಾರದಲ್ಲಿ ಗುರುತಿಸುವ ಯೋಚನೆ ಮಾಡುತ್ತಿರಲಿಲ್ಲ. ಆದರೆ, ಅಂದು ದಲಿತರ ಮೇಲಿನ ದೌರ್ಜನ್ಯ ಮತ್ತು ದಬ್ಬಾಳಿಕೆಗಳು ಅತ್ಯಂತ ಕ್ರೂರವಾಗಿದ್ದವು.
ಇಂದಿಗೂ ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯ ಮತ್ತು ಜಾತಿ ತಾರತಮ್ಯ ಮುಂದುವರಿದಿದೆ. ಆದರೆ, ಅದರ ಸ್ವರೂಪ ಬದಲಾಗಿದೆ ಅಷ್ಟೇ. ಅಂದು ನೇರವಾಗಿ ಬಾವಿಗೆ ಮುಟ್ಟಬಾರದು, ನಮಗೆ ಮುಟ್ಟಿಸಿಕೊಳ್ಳಬೇಡಿ ಎಂದು ಹೇಳುತ್ತಿದ್ದರು. ಇಂದು ದೂರದಿಂದಲೇ ವ್ಯಕ್ತಿಯ ಜಾತಿಯ ಹಿನ್ನೆಲೆ ಗುರುತಿಸಿ ಅಂತರ ಕಾಯ್ದುಕೊಳ್ಳುವ ಮನೋಭಾವ ಕಂಡುಬರುತ್ತದೆ.
ಶಿಕ್ಷಣದ ಪ್ರಮಾಣ ಗಣನೀಯ ಏರಿಕೆ, ಸಮಾಜಮುಖಿ ಚಿಂತಕರ ಸಂಖ್ಯೆ ವೃದ್ಧಿಸಿರುವುದು ಹಾಗೂ ಜಾಗೃತಿ ಮೂಡಿರುವುದರಿಂದ ಜಾತಿ ವ್ಯವಸ್ಥೆಯ ಪ್ರಭಾವ ಒಂದಿಷ್ಟು ಕಡಿಮೆಯಾಗಿರಬಹುದು. ಆದರೆ, ಜಾತಿ ವ್ಯವಸ್ಥೆಯನ್ನು ಬೇರುಸಮೇತ ಕಿತ್ತೊಗೆಯುವ ಕೆಲಸ ಇನ್ನೂ ಆಗಿಲ್ಲ. ಸಮಾನತೆಯ ಸಮಾಜ ನಿರ್ಮಾಣವಾಗುವವರೆಗೂ ಜಾತಿವಿನಾಶ ಹೋರಾಟ ನಿಲ್ಲಬಾರದು.
ಪ್ರಶ್ನೆ: ನಿಮ್ಮ ಹೋರಾಟದ ಬದುಕಿನಲ್ಲಿ ಅತ್ಯಂತ ಸಂತೋಷ ನೀಡಿದ ಕ್ಷಣಗಳು ಯಾವುವು?
ಉ: 1989ರಲ್ಲಿ ಬೀದರ್ ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಅದಕ್ಕೆ ನರ್ಮದಾ ಬಚಾವೋ ಆಂದೋಲನದ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ಆಹ್ವಾನಿಸಲಾಗಿತ್ತು. ಆ ಕಾರ್ಯಕ್ರಮ ನಮ್ಮ ಪಾಲಿಗೆ ಮಹತ್ವದ್ದಾಗಿತ್ತು.
1992ರಲ್ಲಿ ಬೀದರ್ನ ನೆಹರು ಕ್ರೀಡಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ, ಗೊಂಡ ಸಂಘರ್ಷ ಸಮಿತಿ ಹಾಗೂ ಮುಸ್ಲಿಂ ಸಂಘಟನೆಗಳ ನೇತ್ರತ್ವದಲ್ಲಿ ‘ದಲಿತ, ಹಿಂದೂ, ಅಲ್ಪಸಂಖ್ಯಾತ ಸಮಾನತಾ ಸಮಾವೇಶ’ ಆಯೋಜಿಸಿದ್ದೆವು. ಆ ಸಮಾವೇಶ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಶರದ್ ಯಾದವ್ ಅವರು ಮೆರವಣಿಗೆಗೆ ಚಾಲನೆ ನೀಡಿದ್ದರು. ಸುಮಾರು ಒಂದು ಲಕ್ಷ ಜನರು ಆ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ರಾಜ್ಯದಲ್ಲಿ ಮೊದಲು ʼಅಹಿಂದʼ ಚಳವಳಿ ಆರಂಭವಾಗಿದ್ದು, ಈ ನೆಲದಿಂದ ಎಂಬುದು ಹೆಮ್ಮೆಯಿಂದ ಹೇಳಬಹುದು.
ಇನ್ನೊಂದು ಪ್ರಮುಖ ಸಂತೋಷವೆಂದರೆ ಬೀದರ್ನಲ್ಲಿ ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯ ಆರಂಭವಾಗಿದ್ದು. ಆಗ ಜಿಲ್ಲೆಯಲ್ಲಿ ಒಂದೇ ಒಂದು ಸರ್ಕಾರಿ ಹಾಸ್ಟೆಲ್ ಇತ್ತು. ನಮ್ಮ ಹೋರಾಟಕ್ಕೆ ಸ್ಪಂದಿಸಿದ ಅಂದಿನ ಸಮಾಜ ಕಲ್ಯಾಣ ಇಲಾಖೆ ಸಚಿವ ಧರ್ಮಸಿಂಗ್ ಅವರು ಸರ್ಕಾರಿ ಹಾಸ್ಟೆಲ್ ಮಂಜೂರು ಮಾಡಿ, ಆರಂಭದಲ್ಲಿ ಖಾಸಗಿ ಕಟ್ಟಡದಲ್ಲಿ ನಡೆಸಲು ಆದೇಶಿಸಿದ್ದರು. ನಮ್ಮ ಹೋರಾಟದ ಫಲವಾಗಿ ಬೀದರ್ನಲ್ಲಿ ಸರ್ಕಾರಿ ಹಾಸ್ಟೆಲ್ಗಳು ಆರಂಭವಾದವು ಎಂಬುದೇ ನನಗೆ ಅತ್ಯಂತ ದೊಡ್ಡ ಗೆಲುವು ಮತ್ತು ಸಂತೋಷದ ಸಂಗತಿ.
ಆರಂಭದಲ್ಲಿ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಆಸಕ್ತಿ ತೋರಲಿಲ್ಲ. ನಾವು ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದ ಬಳಿಕ ಕೇವಲ ಮೂವರು ವಿದ್ಯಾರ್ಥಿಗಳಿಂದ ಹಾಸ್ಟೆಲ್ ಆರಂಭವಾಯಿತು. ನಂತರ ಖಾಸಗಿ ಹಾಸ್ಟೆಲ್ಗಳಲ್ಲಿ ಉಳಿಯುವ ವಿದ್ಯಾರ್ಥಿಗಳಿಗೆ ₹300 ಆರ್ಥಿಕ ನೆರವು ನೀಡುವ ಆದೇಶ ಜಾರಿಯಾದ ಬಳಿಕ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದರು.
ಪ್ರಶ್ನೆ: ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಹಲವು ಬಣಗಳಾಗಿ ಒಡೆಯಲು ಕಾರಣವೇನು?
ಉ: 1996ರವರೆಗೆ ರಾಜ್ಯದಲ್ಲಿ ಬಿ. ಕೃಷ್ಣಪ್ಪ ಮತ್ತು ಮಾವಳ್ಳಿ ಶಂಕರ ಅವರ ನೇತೃತ್ವದಲ್ಲಿ ಒಂದೇ ದಲಿತ ಸಂಘರ್ಷ ಸಮಿತಿ ಇತ್ತು. ಬೀದರ್ ಜಿಲ್ಲೆಯಲ್ಲಿಯೂ ಒಂದೇ ಸಂಘಟನೆ ಕಾರ್ಯನಿರ್ವಹಿಸುತ್ತಿತ್ತು. ನಂತರದ ದಿನಗಳಲ್ಲಿ ವಿವಿಧ ಕಾರಣಗಳಿಂದ ಹಲವು ಬಣಗಳಾಗಿ ವಿಭಜನೆಯಾಯಿತು.
ನಾವು ಜಿಲ್ಲೆಯಲ್ಲಿ ಊರೂರು ಸುತ್ತಾಡಿ ದಸಂಸದ ಶಾಖೆಗಳನ್ನು ಕಟ್ಟಿದ್ದೇವೆ. ಜಿಲ್ಲೆಯ ಕನಿಷ್ಠ 400 ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಹೊಟ್ಟೆಗೆ ಅನ್ನವಿಲ್ಲದಿದ್ದರೂ, ಕಾಲಿಗೆ ಚಪ್ಪಲಿ ಇಲ್ಲದಿದ್ದರೂ ಸೈಕಲ್ ಮೇಲೆ ಉಪವಾಸದಲ್ಲಿಯೇ ಹಳ್ಳಿಗಳಿಗೆ ತೆರಳಿ ಸಂಘಟನೆ ಮಾಡುತ್ತಿದ್ದ ದಿನಗಳಿದ್ದವು. ಅಂದಿನ ಹೋರಾಟಗಾರರ ಸಮರ್ಪಣಾ ಭಾವ ಮತ್ತು ಬದ್ಧತೆ ವಿಭಿನ್ನವಾಗಿತ್ತು. ದಸಂಸಗೆ ಸ್ವಂತ ರಾಜಕೀಯ ಪಕ್ಷ ಕಟ್ಟುವ ಸಾಮರ್ಥ್ಯ ಇಲ್ಲದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ತತ್ವಸಿದ್ಧಾಂತಗಳನ್ನು ಪ್ರತಿಪಾದಿಸುವ ಬಹುಜನ ಸಮಾಜ ಪಕ್ಷವನ್ನು (ಬಿಎಸ್ಪಿ) ಬೆಂಬಲಿಸುವ ಕುರಿತು ರಾಜ್ಯ ಸಮಿತಿ ನಿರ್ಧಾರ ಕೈಗೊಂಡಿತ್ತು. ಅದಕ್ಕಾಗಿ ಕಾನ್ಶಿರಾಂ ಅವರೊಂದಿಗೆ ಮಾತುಕತೆ ನಡೆದಿತ್ತು.
1994ರಲ್ಲಿ ಬೀದರ್ನಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿ ಜುಲ್ಫಿಕರ್ ಹಾಸ್ಮಿ ರಾಜ್ಯದಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದು ಮಹತ್ವದ ರಾಜಕೀಯ ಬೆಳವಣಿಗೆಯಾಗಿತ್ತು. ಆದರೆ, 1996ರಲ್ಲಿ ದಸಂಸ ಎರಡು ಬಣಗಳಾಗಿ ವಿಭಜನೆಯಾಯಿತು. ಅಲ್ಲಿಂದ ರಾಜ್ಯದಲ್ಲಿ ದಸಂಸ ಚಳವಳಿ ಹಲವು ಏಳುಬೀಳುಗಳನ್ನು ಕಾಣುತ್ತಾ ಸಾಗುತ್ತಾ ಇಲ್ಲಿಯವರೆಗೆ ಬಂದಿದೆ.
ಪ್ರಶ್ನೆ: ಸಾಮಾಜಿಕ ಸಂಘಟನೆಗಳಿಗೆ ರಾಜಕೀಯ ಪಕ್ಷಗಳೊಂದಿಗೆ ನಂಟು ಇರಬೇಕೇ?
ಉ: ಯಾವುದೇ ಸಾಮಾಜಿಕ ಸಂಘಟನೆಗಳು ರಾಜಕೀಯ ಪಕ್ಷಗಳೊಂದಿಗೆ ಅಂತರ ಕಾಯ್ದುಕೊಳ್ಳಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸಂವಿಧಾನ ಎಲ್ಲರಿಗೂ ಮತದಾನದ ಹಕ್ಕು ನೀಡಿದೆ. ಹೀಗಾಗಿ ತಮ್ಮ ಸೈದ್ಧಾಂತಿಕ ಬದ್ಧತೆ ಮತ್ತು ಸಮಾಜದ ಹಿತದೃಷ್ಟಿಯಿಂದ ಚುನಾವಣೆಯ ಸಂದರ್ಭದಲ್ಲಿ ಸಮಾಜಮುಖಿ ಪಕ್ಷಗಳನ್ನು ಬೆಂಬಲಿಸಬಹುದು. ಒಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡು ಸಂಘಟನೆ ಕಟ್ಟುವುದು ಸರಿಯಲ್ಲ.
ನಾನು ವೈಯಕ್ತಿಕವಾಗಿ ಇಂದಿನವರೆಗೂ ಯಾವುದೇ ರಾಜಕೀಯ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆದಿಲ್ಲ. 1992ರ ಸಂದರ್ಭದಲ್ಲಿ ದಸಂಸಕ್ಕೆ ರಾಜಕೀಯ ಪಕ್ಷವೆಂದರೆ ಬಿಎಸ್ಪಿಯಾಗಿತ್ತು. ಬಿ.ಕೃಷ್ಣಪ್ಪ ಅವರು ಬಿಎಸ್ಪಿ ಸೇರಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದರು. ದಸಂಸ ರಾಜ್ಯದಲ್ಲಿ ಎರಡು ಬಣಗಳಾಗಿ ವಿಭಜನೆಯಾದ ಬಳಿಕ ಬಿಎಸ್ಪಿ ಜೊತೆಗಿನ ಸಂಬಂಧವೂ ದೂರವಾಯಿತು.
ಬಡತನದ ಬೇಗೆಯಿಂದ ಹೋರಾಟದ ಹಾದಿಗೆ
ಹಿರಿಯ ಹೋರಾಟಗಾರ ಮಾರುತಿ ಬೌದ್ಧೆ ಅವರು 1966ರ ಮೇ 15ರಂದು ಬೀದರ್ ನಗರದ ಭೀಮನಗರದಲ್ಲಿ ಜನಿಸಿದರು. ತಂದೆ ಬಸಪ್ಪ, ತಾಯಿ ಕಲ್ಲಮ್ಮ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಕಾರಣ ಕುಟುಂಬದ ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಿತು. ಬಡತನದ ನಡುವೆಯೇ ಬೆಳೆದ ಅವರು, ಕುಟುಂಬದ ಜವಾಬ್ದಾರಿ ನಿಭಾಯಿಸಲು ಕಾಲೇಜಿನ ರಜಾ ದಿನಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.
ಬಾಲ್ಯದ ಸಂಕಷ್ಟಗಳು, ಸಮಾಜದಲ್ಲಿ ಕಂಡ ಜಾತಿ ತಾರತಮ್ಯ ಹಾಗೂ ಶೋಷಿತರ ನೋವುಗಳು ಅವರಲ್ಲಿ ಸಾಮಾಜಿಕ ಕಾಳಜಿಯ ಬೀಜ ಬಿತ್ತಿದವು. ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಬುದ್ಧ, ಬಸವಣ್ಣ, ಮಹಾತ್ಮಾ ಜ್ಯೋತಿಭಾ ಫುಲೆ ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಹಾಗೂ ಮಾನವೀಯ ಮೌಲ್ಯಗಳನ್ನು ಬದುಕಿನ ದಾರಿದೀಪವಾಗಿಸಿಕೊಂಡು ಸಾಮಾಜಿಕ ಚಳವಳಿಯ ಹಾದಿ ತುಳಿದವರು.
ಕಳೆದ ನಾಲ್ಕು ದಶಕಗಳಿಂದ ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಸದ್ಯ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾಗಿದ್ದಾರೆ. ಬೀದರ್ ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿ ಬೆಳೆಸಿದ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ. ದಲಿತರು, ಬಡವರು, ನಿರ್ಗತಿಕರು ಮತ್ತು ಶೋಷಿತ ಸಮುದಾಯಗಳ ಮೇಲೆ ನಡೆಯುವ ಅನ್ಯಾಯಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ.
ಜನರ ಸಮಸ್ಯೆಗಳಿಗೆ ಸ್ಪಂದಿಸಲು ಬೀದರ್ನಲ್ಲಿ ಕರಾದಸಂಸ ಕಚೇರಿ ಆರಂಭಿಸಿ ಇಂದಿಗೂ ಹೋರಾಟದ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ. ಹೋರಾಟದ ಹಾದಿಯಲ್ಲಿ ಅನೇಕ ಸಂಕಷ್ಟ, ನೋವು, ಅವಮಾನ ಮತ್ತು ಪ್ರಕರಣಗಳನ್ನು ಎದುರಿಸಿದರೂ ತಮ್ಮ ಸಾಮಾಜಿಕ ಬದ್ಧತೆಯಿಂದ ಹಿಂದೆ ಸರಿದಿಲ್ಲ. ಇವರ ಸೇವೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಗೌರವಿಸಿವೆ. ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಕರ್ನಾಟಕ ರಾಜೋತ್ಸವ ಪ್ರಶಸ್ತಿಗೆ 2025ನೇ ವರ್ಷದ ಆಯ್ಕೆ ಸಮಿತಿ ಸದಸ್ಯರನ್ನಾಗಿ ನೇಮಿಸಿತು.
ಜಿಲ್ಲೆಯಲ್ಲಿ ಅಸಂಖ್ಯಾತ ಅಭಿಮಾನಿಗಳು, ಹಿತೈಷಿಗಳು ಹಾಗೂ ಹೋರಾಟದ ಒಡನಾಡಿಗಳನ್ನು ಹೊಂದಿರುವ ಮಾರುತಿ ಬೌದ್ಧೆ, ಹೊಸ ತಲೆಮಾರಿನ ಹೋರಾಟಗಾರರನ್ನು ರೂಪಿಸುವುದರಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅವರ ನಾಲ್ಕು ದಶಕಗಳ ಹೋರಾಟದ ಬದುಕು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸ್ವಾಭಿಮಾನದ ಆಶಯಗಳನ್ನು ಹೊತ್ತ ಹೊಸ ತಲೆಮಾರಿಗೆ ಸ್ಫೂರ್ತಿದಾಯಕವಾಗಿದೆ.
ಇದನ್ನೂ ಓದಿ : ಬೀದರ್ | ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ 24 ಗಂಟೆಯೊಳಗೆ ಪರಿಹಾರ ಕಲ್ಪಿಸಿ: ಈಶ್ವರ ಖಂಡ್ರೆ


ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



