ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರಜಾಪ್ರಭುತ್ವದ ಯಶಸ್ಸಿಗೆ ಯುವಜನರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಸಂವಿಧಾನದ ಆಶಯ ತಿಳಿದುಕೊಂಡು, ತಮ್ಮ ಹಕ್ಕುಗಳ ಜತೆಗೆ ಕರ್ತವ್ಯಗಳನ್ನು ಅರಿತುಕೊಳ್ಳಬೇಕು. ದೇಶದ ಆಡಳಿತ ವ್ಯವಸ್ಥೆ, ಸಂಸತ್ತಿನ ಕಾರ್ಯವೈಖರಿ ಹಾಗೂ ಪ್ರಜಾಪ್ರಭುತ್ವದ ಪ್ರಕ್ರಿಯೆಗಳ ಬಗ್ಗೆ ಅಸಕ್ತಿ ಬೆಳೆಸಲು ಯುವ ಸಂಸತ್ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ತಹಶಿಲ್ದಾರ್ ಮನೀಷಾ ಎನ್ ಪತ್ರಿ ತಿಳಿಸಿದರು.
ಗುರುವಾರ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ “ಯುವ ಸಂಸತ್ತು ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಮೂರು ತಾಲೂಕುಗಳ 60 ಪ್ರೌಢ ಶಾಲಾ ವಿದ್ಯಾರ್ಥಿಗಳು ಪದವಿ ಪೂರ್ವ ವಿದ್ಯಾರ್ಥಿಗಳು, ಪದವಿ ವಿದ್ಯಾರ್ಥಿಗಳು ಯುವ ಸಂಸತ್ ಸ್ಪರ್ಧೆಯಲ್ಲಿ ಭಾವಹಿಸಿದ್ದರು. ಯುವ ಸಂಸತ್‌ನಲ್ಲಿ ಸಭಾಧ್ಯಕ್ಷ ರು, ಆಡಳಿತ ಪಕ್ಷ , ವಿರೋಧ ಪಕ್ಷ ಗಳಾಗಿ ವಿದ್ಯಾರ್ಥಿಗಳು ಹಲವು ಮಹತ್ವದ ವಿಚಾರಗಳ ಕುರಿತು ಕಲಾಪ ನಡೆಸಿದ್ದು ಆಕರ್ಷಣೀಯವಾಗಿತ್ತು.
ಯುವ ಸಂಸತ್‌ನಲ್ಲಿ ವಿದ್ಯಾರ್ಥಿಗಳು ಶೂನ್ಯ ವೇಳೆ ಚುಕ್ಕೆ ಗುರುತಿನ ಪ್ರಶ್ನೆ, ಚುಕ್ಕೆ ಗುರುತ್ತಿಲ್ಲದ ಪ್ರಶ್ನೆ ಹೀಗೆ ಹತ್ತು ಹಲವು ಶಾಸನ ಸಭೆಯ ನಿಯಮಗಳಂತೆ ಚರ್ಚೆ ನಡೆಸಿದ್ದು ವಿಶೇಷವಾಗಿತ್ತು.
ಬಿಇಓ ಎನ್. ವೆಂಕಟೇಶಪ್ಪ ಮಾತನಾಡಿ ಪ್ರಜಾಪ್ರಭುತ್ವ ತತ್ವದ ಅನುಸರಣೆಯಲ್ಲಿ ರಾಜ್ಯವು ದೇಶಕ್ಕೆ ಮಾದರಿ ಯಾಗಿದೆ. ಐತಿಹಾಸಿಕ ಪ್ರಜಾಪ್ರಭುತ್ವ ಚಲನಶೀಲತೆಯನ್ನು ಮತ್ತಷ್ಟು ವಿಸ್ತರಿಸುವ ಹಾಗೂ ಯುವ ಸಮುದಾಯಕ್ಕೆ ದೇಶದ ಸಂಸದೀಯ ವ್ಯವಸ್ಥೆಯನ್ನು ಪರಿಚಯಿಸುವ ಉದ್ದೇಶದಿಂದ ತಾಲ್ಲೂಕು ಶಾಲಾ ಹಾಗೂ ಕಾಲೇಜು ಮಕ್ಕಳಿಗೆ ಯುವ ಸಂಸತ್ತು ಸಭೆಯನ್ನು ತಾಲೂಕು ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ ಎಂದರು.
ಇಓ ನಾಗಮಣಿ ಮಾತನಾಡಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮಂತ್ರಿ ಮಂಡಲ, ವಿಧಾನಸಭಾಧ್ಯಕ್ಷ, ಉಪಸಭಾಧ್ಯಕ್ಷ, ವಿರೋಧ ಪಕ್ಷದ ನಾಯಕ, ಮುಖ್ಯ ಸಚೇತಕ ಪಾತ್ರಗಳೊಂದಿಗೆ ಯುವ ಸಂಸತ್ತು ರಚಿಸಿ ಕಾರ್ಯ ಕಲಾಪ ನಡೆಸಬೇಕು. ಸದನದ ಪ್ರಕ್ರಿಯೆಗಳಾದ ಪ್ರಶ್ನೋತ್ತರ ಅವಧಿ, ಶೂನ್ಯ ವೇಳೆ, ನಿಯಮ 330/343 ಮೇಲಿನ ತುರ್ತು ವಿಷಯದ ಚರ್ಚೆ, ನಿಯಮ 60ರಡಿ ಗಮನ ಸೆಳೆಯುವ ಸೂಚನೆ, ಗೊತ್ತುವಳಿ ಮಂಡನೆ, ವಿಧೇಯಕಗಳ ಮಂಡನೆ, ವಿಧೇಯಕಗಳ ಮೇಲಿನ ಚರ್ಚೆ, ವಿಧೇಯಕಗಳ ಅಂಗೀಕಾರ, ಸಮಾಪ್ತಿ ಸೂಚನೆ ಮೊದಲಾದ ಸದನ ನಡವಳಿ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ಶಾಸಕಾಂಗ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕೆಲಸ ಮಾಡಲಾಯಿತು ಎಂದು ಹೇಳಿದರು.
ಸಂಸತ್‍ನಲ್ಲಿ ಪಾಲ್ಗೊಂಡಿದ್ದ ತಾಲ್ಲೂಕಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಕರ್ನಾಟಕ ವಿಧಾನಸಭೆಯ ಕಾರ್ಯ ವಿಧಾನ ನಡವಳಿ ನಿಯಮ 12ರ ಕಾರ್ಯ ಕಲಾಪಗಳ ಅನುಸಾರ ರೈತರ ಸಮಸ್ಯೆ ಮತ್ತು ಪರಿಹಾರ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣದ,ಮಾದಕ ವಸ್ತುಗಳ (ಡ್ರಗ್ಸ್) ಜಾಲ,
ಹಾಗೂ ಬಾಗೇಪಲ್ಲಿ ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಗಮನ ಸೆಳೆದರು.
ಯುವ ಸಂಸತ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ 5 ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಇದನ್ನು ಓದಿದ್ದೀರಾ..?ಕೋಲಾರ | ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶರೈತರ ಹಕ್ಕುಗಳ ಅರಿವಿನಿಂದ ಅರಣ್ಯ ಅಧಿಕಾರಿಗಳಿಗೆ ನಡುಕ: ಆರ್. ಶ್ರೀನಿವಾಸನ್
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕಿ ಜಿ.ಎನ್. ಮಂಜುಳಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ, ಬಿ.ಆರ್.ಸಿ. ವೆಂಕಟರಾಮ್,ಶಿವಪ್ಪ, ವಕೀಲರ ಸಂಘದ ಅಧ್ಯಕ್ಷ ಮಂಜುನಾಥ, ನಾಗಭೂಷಣ, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ನಾಗರಾಜ್, ಶಿವಪ್ಪ ಸೇರಿದಂತೆ ಹಲವಾರು ಅಧಿಕಾರಿಗಳು ಹಾಗೂ ಶಾಲಾ ಕಾಲೇಜು ಮಕ್ಕಳು ಹಾಜರಿದ್ದರು.




