ಅಕ್ಷರದಾಸೋಹ ಯೋಜನೆಯಡಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಿ ಬಡಿಸುತ್ತಿರುವ ಅಡುಗೆ ನೌಕರರ ಉದ್ಯೋಗಕ್ಕೆ ಧಕ್ಕೆ ಉಂಟುಮಾಡುವ ಕ್ಲಸ್ಟರ್ ಕಿಚನ್ ಸೆಂಟರ್ ಪ್ರಾರಂಭಿಸುವ ಕ್ರಮವನ್ನು ವಿರೋಧಿಸಿ ನವೆಂಬರ್ 25ರಿಂದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಅಕ್ಷರದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಹನುಮಮ್ಮ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಕ್ಷರದಾಸೋಹ ಯೋಜನೆ ಆರಂಭವಾದ ದಿನದಿಂದಲೂ ರಾಜ್ಯದ ಶಾಲೆಗಳಲ್ಲಿ ಅಡುಗೆ ನೌಕರರು ಮಕ್ಕಳಿಗೆ ಬಿಸಿಯೂಟ ತಯಾರಿಸಿ ನೀಡುವ ಮಹತ್ವದ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಶಿಕ್ಷಕರಿಗೆ ಬಿಸಿಯೂಟದ ನಿರ್ವಹಣೆ ಕೆಲಸದ ಹೊರೆಯಾಗುತ್ತಿದೆ ಎಂಬ ಕಾರಣ ಮುಂದಿಟ್ಟು, ಕ್ಲಸ್ಟರ್ ಮಟ್ಟದಲ್ಲಿ ಕಿಚನ್ ಸೆಂಟರ್ ಆರಂಭಿಸಿ ಸಂಘ-ಸಂಸ್ಥೆಗಳು, ಮಹಿಳಾ ಸಂಘಗಳು ಹಾಗೂ ಸ್ವಸಹಾಯ ಸಂಘಗಳಿಗೆ ಅಡುಗೆ ಕೆಲಸದ ಜವಾಬ್ದಾರಿ ನೀಡುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಿರುವುದು ಖಂಡನೀಯ” ಎಂದರು.
“ಈ ಕ್ರಮದಿಂದ ರಾಜ್ಯದ ಸಾವಿರಾರು ಬಡ ಮಹಿಳೆಯರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಅಕ್ಷರದಾಸೋಹ ಯೋಜನೆಯ ಉಳಿವಿಗಾಗಿ ಅತ್ಯಂತ ಕಡಿಮೆ ಗೌರವಧನದಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಬಡ, ವಿಧವಾ ಹಾಗೂ ವಿಚ್ಛೇದಿತ ಮಹಿಳೆಯರ ಜೀವನೋಪಾಯಕ್ಕೆ ಇದರಿಂದ ಹೊಡೆತ ಬೀಳಲಿದೆ. ತಿಂಗಳಿಗೆ ಕೇವಲ ₹300ರಿಂದ ₹650ರಷ್ಟು ಗೌರವಧನದೊಂದಿಗೆ ಮಹಿಳೆಯರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಉದ್ಯೋಗವನ್ನು ಕಸಿದುಕೊಳ್ಳುವ ಪ್ರಯತ್ನ ಅಮಾನವೀಯವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನವೆಂಬರ್ 25ರಿಂದ ಕೆಲಸ ಸ್ಥಗಿತಅಡುಗೆ ನೌಕರರ ಉದ್ಯೋಗದ ಉಳಿವು ಹಾಗೂ ಹಕ್ಕುಗಳ ರಕ್ಷಣೆಗಾಗಿ ನವೆಂಬರ್ 25ರಿಂದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಅಂದು ರಾಜ್ಯದ ಅಡುಗೆ ನೌಕರರು ತಮ್ಮ ಕೆಲಸ ಸ್ಥಗಿತಗೊಳಿಸಿ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರವು ಕ್ಲಸ್ಟರ್ ಕಿಚನ್ ಸೆಂಟರ್ ಪ್ರಾರಂಭಿಸುವ ನಿರ್ಧಾರವನ್ನು ಕೈಬಿಟ್ಟು ಅಡುಗೆ ನೌಕರರ ಉದ್ಯೋಗ ಭದ್ರತೆಗೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸರ್ವ ತಾಲೂಕು ಅಧ್ಯಕ್ಷರಾದ ಕೆ,ಎಂ ಗೀತಾ, ಜಿಲ್ಲಾ ಖಜಾಂಚಿ ಸೂರ್ಯಕಲಾ ಹಾಗೂ ಶಿಕಾರಿಪುರ ತಾಲ್ಲೂಕು ಗೌರವಾಧ್ಯಕ್ಷೆ ಗೌರಮ್ಮ ಉಪಸ್ಥಿತರಿದ್ದರು.




