ರೈತರು ನಿದ್ದೆ ಮಾಡುವ ಸಂದರ್ಭವನ್ನು ಬಳಸಿಕೊಂಡು ಬೆಳಗಿನ ಜಾವ ಪೊಲೀಸ್ ಬೆಂಗಾವಲಿನಲ್ಲಿ ತೋಟಗಳಿಗೆ ನುಗ್ಗಿ ಬೆಳೆ ಹಾಗೂ ಮರಗಳನ್ನು ಜೆಸಿಬಿ ಮೂಲಕ ನಾಶಪಡಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ರೈತರ ಹಕ್ಕುಗಳ ಅರಿವಿನಿಂದ ಅರಣ್ಯ ಅಧಿಕಾರಿಗಳಿಗೆ ನಡುಕ ಬಂದಿದೆ ಎಂದು ಭೂಸಂತ್ರಸ್ತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಆರ್. ಶ್ರೀನಿವಾಸನ್ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು ಹುತ್ತೂರು ಹೋಬಳಿಯ ಹರಟಿ ಗ್ರಾಮದ ವೆಂಕಟೇಶ್ ಗೌಡ ಅವರ ತೋಟಕ್ಕೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ನುಗ್ಗಿದ ಅಧಿಕಾರಿಗಳು ಬೆಳೆಗಳನ್ನು ನಾಶಪಡಿಸಿದ್ದಾರೆ. ಗ್ರಾಮೀಣ ಬ್ಯಾಂಕ್‌ನಲ್ಲಿ ₹15 ಲಕ್ಷ ಸಾಲ ಮಾಡಿಕೊಂಡಿರುವ ಅವರು ಇದೀಗ ಬೀದಿಗೆ ಬಿದ್ದಿದ್ದಾರೆ. ಇದೇ ರೀತಿ ಮೂರು ದಿನಗಳ ಕಾಲ ರೈತರು ಬೆಳೆದಿದ್ದ ಭತ್ತ, ರಾಗಿ, ಜೋಳ, ಟೊಮ್ಯಾಟೊ, ಬದನೆಕಾಯಿ, ಹುರುಳಿಕಾಯಿ ಸೇರಿದಂತೆ ವಿವಿಧ ಬೆಳೆಗಳು ಹಾಗೂ ಮಾವು, ತೆಂಗು, ಶ್ರೀಗಂಧ, ಹಲಸು, ತೇಗ ಸೇರಿದಂತೆ ಮರಗಳನ್ನು ನಾಶಪಡಿಸಲಾಗಿದೆ ಎಂದು ಆರೋಪಿಸಿದರು.
ಕೋಲಾರ ತಾಲ್ಲೂಕಿನ ಹುತ್ತೂರು ಹೋಬಳಿಯ ವಿವಿಧ ಗ್ರಾಮಗಳ ಸರ್ಕಾರಿ ಗೋಮಾಳದ ಒಟ್ಟು 1,313 ಎಕರೆ 22 ಗುಂಟೆ ಜಮೀನಿಗೆ ಸಂಬಂಧಿಸಿದ ಅರಣ್ಯ ಹಾಗೂ ಕಂದಾಯ ದಾಖಲೆಗಳ ಬಗ್ಗೆ ಸ್ಪಷ್ಟತೆ ಅಗತ್ಯವಿದೆ. ಅಂದಿನ ಅಧಿಕಾರಿಗಳ ನಿರ್ಣಯಗಳು, ಅರಣ್ಯ ಕಾಯ್ದೆಯ ವಿವಿಧ ಪ್ರಕ್ರಿಯೆಗಳು ಹಾಗೂ ಮೈಸೂರು ಗೆಜೆಟ್‌ನಲ್ಲಿ ಪ್ರಕಟಗೊಂಡ ದಾಖಲೆಗಳನ್ನು ಪರಿಗಣಿಸಬೇಕು ಎಂದು ಅವರು ಹೇಳಿದರು.
ರೈತರ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳು ಸರಿಯಾಗಿದ್ದರೆ ಅರಣ್ಯ ಅಧಿಕಾರಿಗಳು ಸಚಿವರು ಹಾಗೂ ಮೇಲಧಿಕಾರಿಗಳ ಮುಂದೆ ಮನವಿ ಸಲ್ಲಿಸುವ ಪರಿಸ್ಥಿತಿ ಏಕೆ ನಿರ್ಮಾಣವಾಗಿದೆ ಎಂದು ಪ್ರಶ್ನಿಸಿದ ಅವರು, ಅಧಿಕಾರಿಗಳು ಸರ್ಕಾರದ ದಾಖಲೆಗಳನ್ನು ಮರೆಮಾಚುವುದು ಅಥವಾ ತಿದ್ದುವುದು, ಸುತ್ತೋಲೆಗಳನ್ನು ಪಾಲಿಸದೆ ದೌರ್ಜನ್ಯ ನಡೆಸುವುದು ನಿಲ್ಲಬೇಕು ಎಂದರು.
This video cannot be played in your browser. Open the video directly
ಅರಣ್ಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ರೈತರಿಗೆ ಆಗಿರುವ ನಷ್ಟ ಹಾಗೂ ದೌರ್ಜನ್ಯದ ಕುರಿತು ಅರಣ್ಯ ಇಲಾಖೆಯ ಮೇಲಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆದು ತೀರ್ಮಾನಿಸುವುದಾಗಿ ತಿಳಿಸಿದ್ದಾರೆ. ರೈತರ ಸಂಕಷ್ಟವನ್ನು ಪರಿಗಣಿಸಿ ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ..?ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ರೈತರಿಗೆ ನ್ಯಾಯ ಓದಗಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ : ಹರಿನಾಥರೆಡ್ಡಿ
ರೈತರ ಬೆಳೆ ಮತ್ತು ಆಸ್ತಿಗೆ ಹಾನಿ ಮಾಡಿದ ಅಧಿಕಾರಿಗಳ ವಿರುದ್ಧ ಕಾನೂನುಬದ್ಧವಾಗಿ ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಯಾವುದೇ ತೊಂದರೆ ಆಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಶ್ರೀನಿವಾಸನ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದರು.





