ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಬ್ಬಳ್ಳಿ ಗೇಟ್ ಬಳಿ ಸಖರಾಯಪಟ್ಟಣ-ಬಾಣಾವರ ಸಂಪರ್ಕ ಕಲ್ಪಿಸುವ ಮಾರ್ಗಕ್ಕೆ ಕೆಎಸ್ಆರ್ಟಿಸಿ ಬಸ್ ಸೌಲಭ್ಯ ಕಲ್ಪಿಸುವಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಗ್ರಾಮಸ್ಥರು ಪ್ರಮುಖ ರಸ್ತೆಯನ್ನು ತಡೆದು ತೀವ್ರ ಪ್ರತಿಭಟನೆ ನಡೆಸಲಾಗಿದೆ.

ಕಬ್ಬಳ್ಳಿ, ಗುಣಸಾಗರ, ಮಂಗೇನಹಳ್ಳಿ, ಸಿದ್ದಾಪುರ ಹಾಗೂ ಗೊಲ್ಲರಹಟ್ಟಿ ಗ್ರಾಮಗಳಿಗೆ ನಿಗದಿತ ಬಸ್ ಸಂಚಾರವಿಲ್ಲದೆ ನಿತ್ಯ ನೂರಾರು ಮಂದಿ ಪರದಾಡುವಂತಾಗಿದೆ. ಕಡೂರು ಮತ್ತು ಚಿಕ್ಕಮಗಳೂರು ಪಟ್ಟಣಗಳಿಗೆ ವಿದ್ಯಾಭ್ಯಾಸಕ್ಕಾಗಿ ತೆರಳುವ ವಿದ್ಯಾರ್ಥಿಗಳು ಪ್ರತಿದಿನ ಬರೋಬ್ಬರಿ 6 ಕಿಲೋಮೀಟರ್ ನಡೆದುಕೊಂಡೇ ಹೋಗಬೇಕಾದ ದುಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಈದಿನ.ಕಾಮ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾರಿಗೆ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿ, ಗಡುವು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆಗಿಳಿದು ವಾಹನ ಸಂಚಾರ ಸ್ಥಗಿತಗೊಳಿಸಿ ತೀವ್ರವಾಗಿ ಪ್ರತಿಭಟಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸೈಬರ್ ಪ್ರಕರಣ; ಲಕ್ಷಾಂತರ ಹಣ ದೋಚಿದ ವಂಚಕರು
ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಕೆಎಸ್ಆರ್ಟಿಸಿ ಅಧಿಕಾರಿಗಳು ಮುಂಬರುವ ಸೋಮವಾರದಿಂದ ಬಸ್ ಓಡಿಸುವುದಾಗಿ ಭರವಸೆ ನೀಡಿದರಾದರೂ, ನಂತರ ಬಸ್ ಹಾಗೂ ಚಾಲಕ-ನಿರ್ವಾಹಕರ ಕೊರತೆ ಇದೆ ಎಂದು ಕಾರಣ ತಿಳಿಸಿದರು. ಈ ಕುರಿತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸ್ಪಷ್ಟ ಲಿಖಿತ ಭರವಸೆ ನೀಡುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಸಾರ್ವಜನಿಕರು ಪ್ರತಿಭತಿಸಿದ್ದಾರೆ.




