ಅದೆಷ್ಟೋ ಚುನಾವಣೆ ನಡೆದು ಹೋದವು, ಆದರೆ ನಮ್ಮೂರಿಗೆ ಮೂಲಭೂತ ಸೌಕರ್ಯಗಳಿಲ್ಲ. ಕನಿಷ್ಠ ಸೌಲಭ್ಯವಾದ ಡಾಂಬರ್ ರಸ್ತೆ ಕಾಣದೆ ಅದೆಷ್ಟೋ ವರ್ಷ ಕಳೆದಿದೆ. ನಮ್ಮ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಯಾವ ರಾಜಕೀಯ ಪಕ್ಷಗಳು ನಮ್ಮ ಸಮಸ್ಯೆಯನ್ನು ಬಗೆಹರಿಸಲಿಲ್ಲ ಆದರಿಂದ, ಯಾವ ಪಕ್ಷಗಳು ಗ್ರಾಮದೊಳಗೆ ಕಾಲಿಡುವಂತಿಲ್ಲ ಎಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹೊನ್ನಗುಂಡಿ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವ ಸಂಕಲ್ಪ ತೊಟ್ಟಿದ್ದಾರೆ.
ಈ ಗ್ರಾಮಗಳಲ್ಲಿ ಸುಮಾರು 25 ಕುಟುಂಬವಿದ್ದು ಹೆಚ್ಚಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ವಾಸಿಸುತ್ತಿದ್ದಾರೆ. ಯಾವುದೇ ಆರ್ಥಿಕವಾಗಿ ಬಲವಿಲ್ಲದೆ, ಹಲವರು ಎಸ್ಟೇಟ್‌ಗಳಲ್ಲಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. “ಚುನಾವಣೆ ಬಂದಾಗಲಷ್ಟೇ ಬರುತ್ತಾರೆ ಗೆದ್ದ ಮೇಲೆ ಹೇಗಿದ್ದೇವೆ ಕೇಳುವುದಿಲ್ಲ. ಅವರ ಕೆಲಸವಿದ್ದರಷ್ಟೇ ಜನರ ಮುಂದೆ ಬರುತ್ತಾರೆ. ನಾವು ಬದುಕಲು ಅವಕಾಶ ಕಲ್ಪಿಸಿ ಮೂಲಭೂತ ಸೌಕರ್ಯ ಒದಗಿಸಿಕೊಡಿ ಎಂದರೆ ಹಿಂಜರಿಯುತ್ತಾರೆ” ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
“ಮುಂದಿನ ದಿನಗಳಲ್ಲಿ ನಡೆಯುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದೇವೆ. ರಸ್ತೆ ದುರಸ್ತಿ ಮಾಡಿದರೆ ಮಾತ್ರ ಮತ, ಇಲ್ಲದಿದ್ದರೆ ನಮ್ಮೂರಿಗೆ ಯಾವುದೇ ರಾಜಕೀಯ ಪಕ್ಷದ ಪ್ರವೇಶವಿಲ್ಲ” ಎಂಬ ಎಚ್ಚರಿಕೆಯ ಬ್ಯಾನರ್ ಪ್ರದರ್ಶಿಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕೊಪ್ಪ ತಾಲೂಕಿನ ಗಡಿ ಗ್ರಾಮವಾಗಿರುವ ನೇಫಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ಸುಮಾರು 25 ವರ್ಷಗಳಿಂದ ದುರಸ್ತಿ ಕಂಡಿಲ್ಲ. ಸಂಪೂರ್ಣ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಗ್ರಾಮಸ್ಥರು ಹಲವು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಅಭಿವೃದ್ಧಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಈ ಹಿಂದೆಯೂ ಗ್ರಾಮಸ್ಥರು ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವು. ಈ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು, ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅಧಿಕಾರಿಗಳ ಮಾತನ್ನು ನಂಬಿ ಗ್ರಾಮಸ್ಥರೆಲ್ಲರೂ ಚುನಾವಣೆ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿಯಲಾಯಿತು” ಎಂದು ನೇಘಾ ಗ್ರಾಮದವರು ಈದಿನ. ಕಾಮ್ʼಗೆ ತಿಳಿಸಿದ್ದಾರೆ.
“25 ವರ್ಷಗಳಿಂದ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಬದಲಾವಣೆ ಆಗಿದೆ. ಆದರೇ ಜೀವರಾಜ್ ಇದ್ದ ಕಾಲದಲ್ಲೂ ರಸ್ತೆ ಆಗಲಿಲ್ಲ, ಈಗ ಕಾಂಗ್ರೆಸ್ ಪಕ್ಷ ಆದರೂ ನಮಗೆ ವ್ಯವಸ್ಥೆ ಕಲ್ಪಿಸಬಹುದು ಎಂದು ಭಾವಿಸಿ ನಮ್ಮ ಗ್ರಾಮದ ಮತ ಹಾಕಿದ್ದೇವು ಏನು ಪ್ರಯೋಜನ ಆಗಲಿಲ್ಲ. ಒಂದು ಮನೆ ಇರುವ ಬಲಾಡ್ಯಾರಿಗೆ ಸೇತುವೆಯಾಗಲಿ, ರಸ್ತೆಯಾಗಲಿ ಮಾಡಿ ಕೊಟ್ಟಿದ್ದಾರೆ. ಎರಡು ದಿನ ಹಿಂದೇ ಇದೇ ಕ್ಷೇತ್ರದ ಶಾಸಕರು ನಮ್ಮ ಪಕ್ಕದ ಗ್ರಾಮಕ್ಕೆ ಬಂದು ಸೇತುವೆ ನಿರ್ಮಿಸಲು ಗುದ್ದಲಿ ಪೂಜೆ ಮಾಡಿದರು ಆ ವೇಳೆ ನಾವೆಲ್ಲರೂ ನಮ್ಮ ಗ್ರಾಮಕ್ಕೆ ರಸ್ತೆ ಮಾಡಿ ಕೊಡಿ ಎಂದಾಗ ಅನುದಾನ ಇಲ್ಲವೆಂದು ಹೇಳುತ್ತಾರೆ” ಎಂದು ಗ್ರಾಮದ ಚೇತನ್ ಪರಿಸ್ಥಿತಿಯನ್ನು ವಿವರಿಸಿದರು.
“ಚುನಾವಣೆ ಮುಗಿದು ವರ್ಷಗಳು ಕಳೆದರೂ ರಸ್ತೆ ಮಾತ್ರ ಅಭಿವೃದ್ಧಿಯಾಗಿಲ್ಲ. ಅಂದು ಭರವಸೆ ನೀಡಿದ್ದ ಅಧಿಕಾರಿಗಳು ಇದೀಗ ವರ್ಗಾವಣೆಗೊಂಡಿದ್ದು, ಗ್ರಾಮಸ್ಥರ ಸಮಸ್ಯೆ ಹಾಗೆಯೇ ಉಳಿದಿದೆ. ಈ ಬಾರಿ ಯಾವುದೇ ಭರವಸೆಗಳಿಗೆ ಮಣಿಯುವುದಿಲ್ಲ, ನಮ್ಮೂರಿನ ರಸ್ತೆ ಅಭಿವೃದ್ಧಿಯಾಗುವುದೇ ನಮಗೆ ಮುಖ್ಯ. ರಸ್ತೆ ದುರಸ್ತಿ ಕಾರ್ಯ ಆರಂಭವಾಗುವವರೆಗೂ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ, ಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ” ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕಾಡಾನೆ ದಾಳಿ: ಕುಟುಂಬಕ್ಕೆ 25 ಲಕ್ಷ ಪರಿಹಾರ
“ಮಲೆನಾಡಿನ ಕೆಲವು ಕ್ಷೇತ್ರಗಳಿಗೆ ನಕ್ಸಲ್ ಅನುದಾನ ಬಂದರು ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ” ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಹಾಳಾಗಿರುವ ರಸ್ತೆ, ಮೂಲಭೂತ ಸೌಕರ್ಯದ ಕೊರತೆಯಿಂದ ಜನರು ಚುನಾವಣೆ ಬಹಿಷ್ಕರಿಯುವಷ್ಟು ಬೇಸತ್ತು ಹೋಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಕೊಂಚ ಇತ್ತಲೂ ಗಮನಹರಿಸಬೇಕಿದೆ.



