ರಾಜ್ಯದ ಬದುಕಿಗಾಗಿ ಸರ್ಕಾರಿ ಜಮೀನು ಸಾಗುವಳಿದಾರರ ಮತ್ತು ವಸತಿಹೀನರ ಅಂತಿಮ ತೀರ್ಮಾನವಾಗಿದೆ. ಏಕೆಂದರೆ ಇಲ್ಲಿಯವರೆಗೂ ಹಲವು ಸರ್ಕಾರಗಳು ಸುಳ್ಳು ಭರವಸೆ ಬಿಟ್ಟರೆ ಏನನ್ನೂ ಕೊಟ್ಟಿಲ್ಲ, ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆ ಬಗರ್ ಹುಕುಂ ಸಾಗುವಳಿದಾರರು, ಅರಣ್ಯ ಭೂಮಿ ಹಕ್ಕು ಪ್ರತಿಪಾದಿಸುತ್ತಿರುವವರು, ಭೂಮಿಯ ಹಕ್ಕಿಗಾಗಿ ಐದು ದಶಕಗಳ ಕಾಲದಿಂದಲೂ ಹೋರಾಟ ಮಾಡುತ್ತಾ ಕಾಯುತ್ತಿದ್ದಾರೆ.

ಅದೇ ರೀತಿ ವಸತಿ ವಂಚಿತರು ಲಕ್ಷ ಲಕ್ಷ ಸಂಖ್ಯೆಯಲ್ಲಿ ನೆತ್ತಿಯ ಮೇಲೊಂದು ಸೂರಿಗಾಗಿ ಕಾಯುತ್ತಿದ್ದಾರೆ. ಕಾಯುವುದಕ್ಕೂ ಒಂದು ಮಿತಿ ಇಲ್ಲವೇ ಎಂದು ಆಳುವ ಸರ್ಕಾರಕ್ಕೆ ಭೂರಹಿತ ಬಡವರು, ವಸತಿ ಇಲ್ಲದ ಜನರು ಕೇಳುತ್ತಿದ್ದಾರೆ. ಸರ್ಕಾರಗಳು ಇಲ್ಲಿವರೆಗೂ ಕೊಟ್ಟಿರುವ ಭರವಸೆಗಳನ್ನು ಲೆಕ್ಕ ಹಾಕಿದರೆ ದೊಡ್ಡ ಗುಡ್ಡವೇ ಆಗಿ ಬಿಡುತಿತ್ತೇನೋ ಅನ್ನಿಸುತ್ತದೆ. ಚುನಾವಣೆಯಲ್ಲಿ ಗೆಲ್ಲುವ ತನಕ ‘ಅಣ್ಣ-ತಮ್ಮಾ ಎನ್ನುತ್ತಾರೆ. ಗೆದ್ದ ಮೇಲೆ ನನಗೂ ಅದಕ್ಕೂ ಸಂಬಂಧವಿಲ್ಲವೆಂದು ನಡೆಸಿಕೊಳ್ಳುತ್ತಾರೆ.

ಬಗರ್ ಹುಕುಂ ಸಾಗುವಳಿದಾರರ ಪರಿಸ್ಥಿತಿ ಅರಣ್ಯ, ಗೋಮಾಳ, ಸರ್ಕಾರದ ಅಧೀನದಲ್ಲಿರುವ ಲಕ್ಷಾಂತರ ಎಕರೆ ಭೂಮಿಗಳಲ್ಲಿ ಹಲವು ದಶಕಗಳ ಕಾಲದಿಂದಲೂ ಸಾಗುವಳಿ ಮಾಡುತ್ತಾ ಜೀವನ ಸಾಗಿಸುತ್ತಿರುವ ಭೂರಹಿತರು ಫಾರಂ ನಂ.50, 53 ಹಾಗೂ 57 ರಲ್ಲಿ ಅರ್ಜಿ ಸಲ್ಲಿಸಿದ್ದು, ಭೂಮಿ ಮಂಜೂರಾತಿ ಸಮಿತಿಯ ಬಳಿಗೆ, ಸ್ಥಳೀಯ ಶಾಸಕರು ಹಾಗೂ ತಹಸೀಲ್ದಾರರ ಕಛೇರಿಗಳಿಗೆ ಸುತ್ತಿ ಅಲೆದಲೆದು ದೇಹವೇ ಸವಕಳಿಯಾಗಿದೆ. ಅರ್ಜಿ ಸಲ್ಲಿಸಿದ ಅದೆಷ್ಟೋ ಸಂಖ್ಯೆಯ ಆತ್ಮಗಳು ಈಗಲೂ ಕೂಗಿ ಕೂಗಿ ಹೇಳುತ್ತಿದ್ದರೂ ಶಾಸಕರು-ಅಧಿಕಾರಿಗಳು ಕಿವಿಯಿದ್ದೂ ಕಿವುಡರಾಗಿ, ಕಣ್ಣಿದ್ದೂ ಕುರುಡರಾಗಿ ವರ್ತಿಸುತ್ತಿದ್ದಾರೆ ಎಂದು ಭೂಮಿ ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ಮುಖಂಡ ಗೌಸ್ ಮೋಹದ್ದಿನ್ ಈದಿನ.ಕಾಮ್ ಜೊತೆ ಮಾತಾಡಿದ್ದಾರೆ.

ಸ್ವಾತಂತ್ರ್ಯ ಸೇನಾನಿ ದಿವಂಗತ ಎಚ್.ಎಸ್. ದೊರೆಸ್ವಾಮಿಯವರ ನೇತೃತ್ವದಲ್ಲಿ ಆರಂಭವಾದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ಹತ್ತಾರು ಹೋರಾಟಗಳನ್ನು ನಡೆಸಲಾಗಿದೆ. ಹಾಗೆಯೇ ದಲಿತ, ರೈತ, ಇನ್ನಿತರೆ ಸಂಘಟನೆಗಳ ನೇತೃತ್ವದಲ್ಲೂ ಹೋರಾಟಗಳು ನಡೆದಿದ್ದರೂ ಸರ್ಕಾರಗಳು ಯಾವುದನ್ನೂ ಜಾರಿ ಮಾಡದೆ ನಿರ್ಲಕ್ಷ್ಯ ಹಾಗೂ ಜಡ್ಡುಗಟ್ಟಿದ ವ್ಯವಸ್ಥೆಯ ಪ್ರತೀಕವಾಗಿದೆ. ಭೂರಹಿತರು ಸಾಗುವಳಿ ಮಾಡುವ ಭೂಮಿಗಳನ್ನೇ ಕಂಪನಿಗಳಿಗೆ ಕೊಡಲಾಗುತ್ತಿದೆ. ಅರಣ್ಯ-ಕಂದಾಯ ಇಲಾಖೆಯವರ ತೀರ್ಮಾನಗಳಿಂದ ಬಡವರು ನೆಮ್ಮದಿಯಿಂದ ಬದುಕುವಂತಿಲ್ಲ, ಇರುವ ತುಂಡು ಭೂಮಿಯಲ್ಲೇ ಬದುಕು ಕಟ್ಟಿಕೊಂಡು ಬದುಕಲಾರದ ವಾತಾರಣ ನಿರ್ಮಾಣವಾಗುತ್ತಿದೆ. ಅನಾದಿ ಕಾಲದಿಂದಲೂ ಇದೇ ಭೂಮಿಯನ್ನು ನಂಬಿ ಬದುಕುತ್ತಿರುವ ಲಕ್ಷಾಂತರ ಭೂರಹಿತರ ಮೇಲೆ ಎತ್ತಂಗಡಿಯ ತೂಗುಕತ್ತಿ ಯಾವಾಗಲೂ ನೇತಾಡುತ್ತಲೇ ಇದೆ. ಕಾರ್ಪೋರೇಟ್ ಕಂಪನಿಗಳಿಗೆ, ಶ್ರೀಮಂತರಿಗೆ ಭೂಮಿ ನೀಡಲು ಸಿಂಗಲ್ ವಿಂಡೋ ಸ್ಥಾಪಿಸುವ ಸರ್ಕಾರಗಳು ಬಡವರ ಭೂಮಿ ಹಕ್ಕಿನ ಬಗ್ಗೆ ಹತ್ತಾರು ಕಾನೂನುಗಳ ನೆಪ ಹೇಳುತ್ತಿವೆ. ಈ ಮೂಲಕ ಭೂಮಿ ಮಂಜೂರಾತಿಯ ಹಕ್ಕನ್ನು ನಿರಾಕರಿಸಲಾಗುತ್ತಿದೆ ಎಂದು ಭೂಮಿ,ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ಮುಖಂಡರಾದ ಗೌಸ್ ಮೋಹದ್ದಿನ್ ತಿಳಿಸಿದರು.

ಬಡವರ ವಿರೋಧಿಯಾದ ಮನಸ್ಥಿತಿಯೇ ಆಗಿದೆ. ಸರ್ಕಾರಗಳು, ಶಾಸಕರು, ಇನ್ನಿತರೆ ಜನ ಪ್ರತಿನಿಧಿಗಳು ನೀವು ಯಾರ ಪರವಾಗಿದ್ದೀರಿ? ಎಂಬ ಪ್ರಶ್ನೆಯನ್ನು ಕೇಳುತ್ತಿದ್ದೇವೆ. ಓಟು ಹಾಕಿ ಗೆಲ್ಲಿಸುವಾಗ ಇದೇ ಬಡವರು ಬೇಕು, ಆದರೆ ಅವರು ಬದುಕಿನ ಹಕ್ಕು ಕೇಳುವಾಗ ನಿರ್ಲಕ್ಷಿಸಿದರೆ ಹೇಗೆ? ಅವರಿಗೂ ಬದುಕಬೇಕೆಂಬ ಆಸೆ ಇಲ್ಲವೇ? ಈ ಭೂಮಿಯ ಮೇಲೆ ಬಡವರು ನೆಮ್ಮದಿಯಾಗಿ ಬದುಕಬಾರದೇ? ಎಂಬ ಹೋರಾಟಗಾರ ಪ್ರಶ್ನೆಯಾಗಿದೆ.
ರಾಜ್ಯದ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರಾತಿ ನೀಡಲು ಕಾನೂನಿಗಿಂತ ಮುಖ್ಯವಾಗಿ ಇಚ್ಚಾಶಕ್ತಿ ಬೇಕಾಗಿದೆ. ಸಾಮಾಜಿಕ ನ್ಯಾಯವಾಗಿ ನೋಡಬೇಕಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸರ್ಕಾರವನ್ನು ಆಗ್ರಹಿಸುತ್ತದೆ. ಸರ್ಕಾರ ಈಗಾಗಲೇ ಸರ್ಕಾರಿ, ಗೋಮಾಳ, ಇನ್ನಿತರೆ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಾ ಅರ್ಜಿ ಸಲ್ಲಿಸಿರುವವರಿಗೆ ರಾಜ್ಯದ ಕೆಲವು ಭಾಗಗಳಲ್ಲಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಲು ನೋಟೀಸ್ ನೀಡಲಾಗಿದೆ. ಈ ನೋಟೀಸನ್ನು ಹಿಂಪಡೆಯಬೇಕು ಮತ್ತು ಯಾವ ಬಗರ್ ಹುಕುಂ ಸಾಗುವಳಿದಾರರಿಗೂ ನೋಟೀಸ್ ನೀಡಬಾರದೆಂದು ಸಮಿತಿಯು ಸರ್ಕಾರವನ್ನು ಆಗ್ರಹಿಸುತ್ತದೆ. ಅರ್ಜಿ ಸಲ್ಲಿಸಿ, ಭೂ ರಹಿತರಾಗಿದ್ದು, ಸಾಗುವಳಿ ಮಾಡುವ ಎಲ್ಲಾ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರಾತಿ ನೀಡಬೇಕು. ಭೂಮಿ ಮಂಜೂರಾತಿ ನೀಡಲು ಅಡ್ಡಿಯಾಗಿರುವ ಕಾನೂನುಗಳನ್ನು ತಿದ್ದುಪಡಿ ಅಥವಾ ಸಡಿಲಿಸುವ ಮೂಲಕ ವಸತಿ ರಹಿತರಿಗೆ ನಿವೇಶನ, ಮನೆಗಳನ್ನು ನೀಡಲು ತುರ್ತು ಕ್ರಮಗಳನ್ನು ಜರುಗಿಸಬೇಕು. “ಸ್ವಾವಲಂಬಿ ಜೀವನ, ಗೌರವಯುತ ಬಾಳು” ಎಲ್ಲರದೂ ಆಗಬೇಕೆಂದು ಸ್ವಾತಂತ್ರ್ಯ ಸೇನಾನಿ ಎಚ್.ಎಸ್. ದೊರೆಸ್ವಾಮಿಯವರು ಪ್ರತಿಪಾದಿಸುತ್ತಿದ್ದರು, ಇಂದು ದೊರೆಸ್ವಾಮಿಯವರ 109ನೇ ಹುಟ್ಟು ಹಬ್ಬ ಸರ್ಕಾರ ಮಾತು ಕೊಟ್ಟಂತೆ “ಬಡವರಿಗೆ ಭೂಮಿ, ನೆತ್ತಿಯ ಮೇಲೊಂದು ಸೂರು” ಜಾರಿ ಮಾಡುವ ಮೂಲಕ ಅವರ ಆಶಯಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ. ಇಲ್ಲದಿದ್ದರೆ ಮಾತು ತಪ್ಪಿದ ಸರ್ಕಾರ ಎಂದು ಹೇಳಬೇಕಾಗುತ್ತದೆ. ಹಾಗೆಯೇ, ಭೂಮಿ-ವಸತಿ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ನಿರ್ಲಕ್ಷ್ಯ ಮಾಡಿದ್ದೇ ಆದರೆ ರಾಜ್ಯಾದ್ಯಂತ ಮೇ 1 ರಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಚಿಕ್ಕಮಗಳೂರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಮೂಲಕ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿದ್ದೀರಾ?ಹಾಸನ | ಕಾಡಾನೆ ದಾಳಿ; ರೈತ ಸಾವು
ಸುಮಾರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಭೂಮಿ, ವಸತಿಯಿಂದ ವಂಚಿತರಾಗಿರುವ ಜನರಿಗೆ ಸರ್ಕಾರ ಗಮನವಹಿಸಿ ಸಮಸ್ಯೆಯನ್ನು ಬಗೆ ಹರಿಸಬೇಕಿದೆ.




