ಮಲೆನಾಡಿಗರ ಬಹುದಿನದ ಬೇಡಿಕೆ ಶಿವಮೊಗ್ಗ- ಶೃಂಗೇರಿ-ಮಂಗಳೂರು ರೈಲು ಮಾರ್ಗದ ಕನಸಿನ ಸಾಕಾರಕ್ಕೆ ಆರಂಭಿಕ ಮುನ್ನಡೆ ಸಿಕ್ಕಂತಿದೆ. ಮಲೆನಾಡನ್ನು ಕರಾವಳಿಗೆ ಸಂಪರ್ಕಿಸುವ ಈ ನೂತನ ರೈಲು ಮಾರ್ಗದ ಡಿಪಿಆರ್ ತಯಾರಿಕೆಗೆ ಟೆಂಡರ್ ಕರೆಯಲು ಸಿದ್ದತೆ ನಡೆಸಲಾಗಿದ್ದು, ಪ್ರಾಥಮಿಕ ಅಧ್ಯಯನ ಪೂರ್ಣಗೊಂಡು ಅಂತಿಮ ಸ್ಥಳ ಸಮೀಕ್ಷೆಗೆ ಅನುಮೋದನೆ ಸಿಕ್ಕಿದೆ.
ಈ ರೈಲು ಮಾರ್ಗವೂ ಮಧ್ಯ ಕರ್ನಾಟಕ, ಮಲೆನಾಡು ಮತ್ತು ಕರಾವಳಿಯನ್ನು ಜೋಡಿಸುವ ಶಿವಮೊಗ್ಗ – ಶೃಂಗೇರಿ – ಮಂಗಳೂರು ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲ ಒದಗಿಸಲಿದೆ. ಸುಮಾರು 332 ಕಿಲೋಮೀಟರ್ ಉದ್ದದ ಹಾಗೂ 3,300 ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಯೋಜನೆಯು ಪೂರ್ಣಗೊಂಡರೆ, ಮಂಗಳೂರಿಗೆ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ ಮತ್ತು ಚಿತ್ರದುರ್ಗ ಜಿಲ್ಲೆಗಳ ಜನರಿಗೆ ನೇರ ಸಂಪರ್ಕ ಸಿಗಲಿದೆ.
ಶಿವಮೊಗ್ಗ-ಸಾಗರ ನಡುವಿನ ಹೊಸನಗರ ತಾಲೂಕು ಅರಸಾಳು(ಮಾಲ್ಗುಡಿ) ರೈಲು ನಿಲ್ದಾಣದಿಂದ ರಿಪ್ಪನ್ಪೇಟೆ, ಕೋಣಂದೂರು, ತೀರ್ಥಹಳ್ಳಿ, ಶೃಂಗೇರಿ, ಕಾರ್ಕಳ ಮಾರ್ಗವಾಗಿ ಮಂಗಳೂರು ನಡುವೆ ನೂತನ ಮಾರ್ಗ ನಿರ್ಮಿಸುವ ಉದ್ದೇಶವಿದೆ. ಆದರೆ, ನೂತನ ಮಾರ್ಗವನ್ನು ಎಲ್ಲಿ ನಿರ್ಮಿಸಬೇಕೆಂಬ ಬಗ್ಗೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆ ಸ್ಥಳ ನಿಗದಿ ಚರ್ಚೆಯಲ್ಲಿದೆ.
ಈ ಹಿಂದೆ ಚಾಲ್ತಿಯಲ್ಲಿದ್ದ ಸದ್ಯ ನೆನೆಗುದಿಗೆ ಬಿದ್ದಿರುವ ಕುದುರೆಮುಖದಿಂದ ಕಬ್ಬಿಣ ಅದಿರು ಸಾಗಿಸಲು ನರಸಿಂಹರಾಜಪುರ ಮಾರ್ಗವಾಗಿ ಭದ್ರಾವತಿಗೆ ಟ್ರಾಂಬೆ ರೈಲು ಮಾರ್ಗವಿತ್ತು. ಭದ್ರಾ ಜಲಾಶಯದ ಹಿನ್ನೀರಲ್ಲಿ ರೈಲು ಮಾರ್ಗ ಮುಳುಗಡೆಯಾಯಿತು. ಈಗ ಭದ್ರವಾತಿ, ನರಸಿಂಹರಾಜಪುರ, ಕೊಪ್ಪ ಸಂಪರ್ಕಿಸುತ್ತಿದ್ದ ಹಳೆಯ ಮಾರ್ಗವನ್ನೇ ಯೋಜನೆಗೆ ಕೈಗೆತ್ತುಕೊಳ್ಳಬೇಕೆಂದು ಸುತ್ತಮುತ್ತಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶೃಂಗೇರಿ | ನೂತನ ರೈಲು ಮಾರ್ಗ ಸ್ಥಳ ಸಮೀಕ್ಷೆಗೆ ಅನುಮೋದನೆ
ಪೋಸ್ಟ್ ಹಂಚಿಕೊಳ್ಳಿ:






