ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮತ್ತು ಆಧಾರರಹಿತ ರಾಜಕೀಯ ಪ್ರಚೋದನಾತ್ಮಕ ಲೇಖನಗಳನ್ನು ಹರಡಲಾಗಿದೆ ಎಂದು ಆರೋಪಿಸಲಾಗಿದೆ. ಇದೇ ಆರೋಪದ ಮೇಲೆ ಎರಡು ಫೇಸ್ಬುಕ್ ಖಾತೆಗಳ ವಿರುದ್ಧ ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಚಿವ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಶಾಸಕರ ಸಹಿ ಸಂಗ್ರಹಿಸುತ್ತಿದ್ದಾರೆ ಎಂಬ ಸುಳ್ಳು ಪೋಸ್ಟ್ಗಳನ್ನು ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾಗಿತ್ತು. ಈ ವದಂತಿಯನ್ನು ಹರಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿಪ್ಪಾಣಿ ಮೂಲದ ರಾಜಶೇಖರ ತಳವಾರ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
‘ಕರುನಾಡ ಕುರಬಗೌಡ್ರು’ ಎಂಬ ಫೇಸ್ಬುಕ್ ಪುಟದಲ್ಲಿ, ‘ಬೆಳಗಾವಿ ಕುರುಬ ಕುಲವನ್ನೇ ಹೈಜಾಕ್ ಮಾಡಿಕೊಂಡು ಆಪ್ತನ ಸೋಗಿನಲ್ಲಿದ್ದ ಸತೀಶ್ ಜಾರಕಿಹೊಳಿಯಿಂದ ಸಿದ್ದರಾಮಯ್ಯ ಬೆನ್ನಿಗೆ ಚೂರಿ?’ ಎಂಬ ಶೀರ್ಷಿಕೆಯಡಿ ಲೇಖನವೊಂದನ್ನು ಪ್ರಕಟಿಸಲಾಗಿತ್ತು. ಸಿದ್ದರಾಮಯ್ಯ ವಿರುದ್ಧ ಸತೀಶ್ ಜಾರಕಿಹೊಳಿ ಅವರು 32 ಶಾಸಕರ ಸಹಿ ಸಂಗ್ರಹಿಸಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಮತ್ತು ಸಿದ್ದರಾಮಯ್ಯರ ಫೋಟೋ ಜೊತೆಗೆ ಹಂಚಿಕೊಳ್ಳಲಾಗಿದೆ. ಈ ಬರಹವು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಯತ್ನಿಸಲಾಗಿದೆ ಎಂದು ದೂರಿನಲ್ಲಿ ರಾಜಶೇಖರ್ ಆತಂಖ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಫೇಸ್ಬುಕ್ ಖಾತೆ, ‘ಬಂಡಾಯದ ಧ್ವನಿ’ ಎಂಬುದರಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ಅವರು ಜೊತೆಯಾಗಿ ಕುಳಿತಿರುವ ಫೋಟೋವನ್ನು ಎಡಿಟ್ ಮಾಡಿ ಪ್ರಕಟಿಸಲಾಗಿದೆ. ‘ಸಿದ್ದರಾಮಯ್ಯಗೆ ದ್ರೋಹ ಬಗೆದ ಸಚಿವ ಸತೀಶ್ ಜಾರಕಿಹೊಳಿ’, ‘ಸಿದ್ದರಾಮಯ್ಯ ವಿರುದ್ಧ 37 ಶಾಸಕರ ಸಹಿ ಸಂಗ್ರಹಿಸಿದ್ದ ಸಚಿವ’ ಹಾಗೂ ‘ಆ ಶಾಸಕರ ಪಟ್ಟಿಯನ್ನು ಡಿ.ಕೆ.ಶಿ ಕೈಗೆ ಕೊಟ್ಟಿದ್ದಾರೆಯೇ ಜಾರಕಿಹೊಳಿ?’ ಎಂಬ ಆಧಾರರಹಿತ ಮತ್ತು ಕಲ್ಪಿತ ಲೇಖನಗಳನ್ನು ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಲೇಖನ ಓದಿದ್ದೀರಾ?: ವರದಕ್ಷಿಣೆ ಎಂಬ ಬಲಿಪೀಠದಿಂದ ಹೆಣ್ಣುಮಕ್ಕಳ ರಕ್ಷಣೆ ಯಾವಾಗ?
“ಈ ವಿವಾದಾತ್ಮಕ ನಕಲಿ ಪೋಸ್ಟ್ಗಳ ಮೂಲಕ ಸತೀಶ್ ಜಾರಕಿಹೊಳಿ ಅವರ ತೇಜೋವಧೆ ಮಾಡಲು ಯತ್ನಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರಭಾವಿ ಸಮುದಾಯಗಳಾದ ಕುರುಬ ಮತ್ತು ವಾಲ್ಮೀಕಿ ಸಮಾಜಗಳ ನಡುವೆ ಅನಗತ್ಯ ಭಿನ್ನಾಭಿಪ್ರಾಯ, ವೈಷಮ್ಯ ಹಾಗೂ ಉದ್ವಿಗ್ನತೆಯನ್ನು ಸೃಷ್ಟಿಸಿ ಸಾರ್ವಜನಿಕ ಶಾಂತಿ ಭಂಗ ಉಂಟುಮಾಡುವ ದುರುದ್ದೇಶ ಇದರ ಹಿಂದೆ ಅಡಗಿದೆ” ಎಂದು ದೂರುದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಸಿಇಎನ್ ಸೈಬರ್ ಕ್ರೈಮ್ ಪೊಲೀಸರು, ಈ ನಕಲಿ ಮತ್ತು ದ್ವೇಷಪೂರಿತ ಖಾತೆಗಳನ್ನು ನಿರ್ವಹಿಸುತ್ತಿರುವ ಅನಾಮಧೇಯರನ್ನು ಪತ್ತೆಹಚ್ಚಲು ತನಿಖೆಯನ್ನು ಚುರುಕುಗೊಳಿಸಿದ್ದಾರೆ.




