ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡನೆಯಾಗಲಿರುವ ಕ್ಷೇತ್ರ ಮರುವಿಂಗಗಡಣೆ (ಡಿಲಿಮಿಟೇಶನ್) ಮಸೂದೆಯನ್ನು ವಿರೋಧಿಸುವಂತೆ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ಹಿರಿಯ ನಾಯಕರು ಮಾಡಿದ ಮನವಿಯನ್ನು ಡಿಎಂಕೆ ಮುಖ್ಯಸ್ಥ ಎಂ. ಕೆ. ಸ್ಟ್ಯಾಲಿನ್ ಭಾನುವಾರ (ನವೆಂಬರ್ 29) ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಒಂದು ವೇಳೆ ಈ ಮಸೂದೆಯನ್ನು ಸೋಲಿಸಿದರೆ, ಸಂಸತ್ತಿನಲ್ಲಿ ತಮಿಳುನಾಡಿನ ಪ್ರಾತಿನಿಧ್ಯಕ್ಕೆ ಸಿಗಬೇಕಾದ ಕನಿಷ್ಠ ರಕ್ಷಣೆಯೂ ಕೈತಪ್ಪಿ ಹೋಗಲಿದೆ ಎಂದು ಸ್ಟಾಲಿನ್ ಪ್ರತಿಪಾದಿಸಿದ್ದಾರೆ.
ಭಾನುವಾರ ಚೆನ್ನೈನ ತಮ್ಮ ನಿವಾಸದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮಮತಾ ಬ್ಯಾನರ್ಜಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೇರಿದಂತೆ ಒಕ್ಕೂಟದ ನಾಯಕರೊಂದಿಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಸಭೆ ನಡೆಸಿದ ಬಳಿಕ ಸ್ಟ್ಯಾಲಿನ್ ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಮಸೂದೆಯನ್ನು ಬೆಂಬಲಿಸುವುದನ್ನು ಬಿಟ್ಟು ತಮಗೆ ಬೇರೆ ಆಯ್ಕೆಯಿಲ್ಲ ಎಂದು ಹೇಳಿರುವ ಸ್ಟ್ಯಾಲಿನ್, ಈ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ಪಕ್ಷಗಳು ಯಾವುದೇ ಪರ್ಯಾಯ ಪ್ರಸ್ತಾವನೆಯನ್ನು ಮುಂದಿಟ್ಟಿಲ್ಲ ಎಂದು ತಿಳಿಸಿದ್ದಾರೆ.
ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ನಡೆದರೆ ತಮಿಳುನಾಡು ತನ್ನ ಸಂಸದೀಯ ಸ್ಥಾನಗಳನ್ನು ಕಳೆದುಕೊಳ್ಳುವ ಅಪಾಯವಿದೆ. ಇಂತಹ ಸಂದರ್ಭದಲ್ಲಿ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಥವಾ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸಭೆಯಲ್ಲಿ ವಿವರಿಸಿದ್ದಾರೆ. “ಅಂದೂ, ಇಂದೂ ಮತ್ತು ಎಂದೆಂದಿಗೂ ನಮಗೆ ತಮಿಳುನಾಡೇ ಮೊದಲು” ಎಂದು ಸ್ಟ್ಯಾಲಿನ್ ಸ್ಪಷ್ಟಪಡಿಸಿದ್ದಾರೆ.
ಪರಿಷ್ಕೃತ ಮಸೂದೆಯಲ್ಲಿ ತಮಿಳುನಾಡಿನ ಹಾಲಿ ಲೋಕಸಭಾ ಸ್ಥಾನಗಳ ಪಾಲಿಗೆ ಯಾವುದೇ ಧಕ್ಕೆಯಾಗದಂತೆ ಮುಂದಿನ 25 ವರ್ಷಗಳ ಕಾಲ (2051ರವರೆಗೆ) ರಕ್ಷಣೆ ನೀಡುವ ಅಂಶಗಳನ್ನು ಲಿಖಿತವಾಗಿ ಸೇರಿಸಲಾಗಿದೆ ಎಂದು ಡಿಎಂಕೆ ಹೇಳಿಕೊಂಡಿದೆ.
ಕಳೆದ ಏಪ್ರಿಲ್‌ನಲ್ಲಿ ತಾವು ವಿರೋಧಿಸಿದ್ದ ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಗ ಮಸೂದೆಯಲ್ಲಿ ಅಳವಡಿಸಿರುವುದರಿಂದ, ಇದು 2024ರಿಂದ ಡಿಎಂಕೆ ನಡೆಸಿದ ನಿರಂತರ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಸ್ಟ್ಯಾಲಿನ್ ಬಣ್ಣಿಸಿದ್ದಾರೆ. ಶನಿವಾರ ನಡೆದ ಡಿಎಂಕೆ ಸಂಸದರ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆಯೇ ಮಸೂದೆಯನ್ನು ಬೆಂಬಲಿಸಲು ಪಕ್ಷ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಜೂನ್‌ನಲ್ಲಿ ತಮಿಳುನಾಡಿನಲ್ಲಿ ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಸರ್ಕಾರ ರಚಿಸಲು ಕಾಂಗ್ರೆಸ್ ಬೆಂಬಲ ನೀಡಿದ ಬಳಿಕ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಮುರಿದುಬಿದ್ದಿತ್ತು. ಇದೀಗ ಸೋಮವಾರದಿಂದ (ನವೆಂಬರ್ 30) ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಲೋಕಸಭೆಯ ಸದಸ್ಯ ಬಲವನ್ನು 850ಕ್ಕೆ ಏರಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಕೇಂದ್ರ ಸರ್ಕಾರಕ್ಕೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಲೋಕಸಭೆಯಲ್ಲಿ 22 ಸಂಸದರನ್ನು ಹೊಂದಿರುವ ಡಿಎಂಕೆ ಮಸೂದೆಗೆ ಬೆಂಬಲ ನೀಡಿರುವುದು ವಿರೋಧ ಪಕ್ಷಗಳ ಒಕ್ಕೂಟಕ್ಕೆ ತೀವ್ರ ಹಿನ್ನಡೆಯನ್ನುಂಟುಮಾಡಿದೆ.



