ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಎನ್‌ಸಿಪಿಐ ಪಕ್ಷದೊಂದಿಗೆ ವಿಲೀನವಾಗಿರುವುದಾಗಿ ಹೇಳಿಕೊಳ್ಳುತ್ತಿರುವ 20 ಬಂಡಾಯ ಸಂಸದರಿಗೆ ಮತದಾನ ಮಾಡಲು ಅವಕಾಶ ನೀಡಬಾರದು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಿದೆ.
ಈ ಸಂಸದರ ವಿರುದ್ಧ ಸಲ್ಲಿಸಲಾಗಿರುವ ಅನರ್ಹತೆ ಅರ್ಜಿಗಳು ಇನ್ನೂ ವಿಚಾರಣೆಗೆ ಬಾಕಿ ಇರುವುದರಿಂದ, ವಿಶೇಷ ಅಧಿವೇಶನದಲ್ಲಿ ಅವರಿಗೆ ಮತ ಚಲಾಯಿಸಲು ಅನುಮತಿ ನೀಡಿದರೆ ಬಾಕಿ ಇರುವ ಪ್ರಕ್ರಿಯೆಗಳಿಗೆ ಧಕ್ಕೆಯಾಗುತ್ತದೆ ಎಂದು ಟಿಎಂಸಿ ಸಂಸದೀಯ ಪಕ್ಷದ ನಾಯಕ ಅಭಿಷೇಕ್ ಬ್ಯಾನರ್ಜಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಕಳೆದ ಜೂನ್ 19ರಂದು ಸಂವಿಧಾನದ 10ನೇ ಪರಿಚ್ಛೇದದ (ಪಕ್ಷಾಂತರ ನಿಷೇಧ ಕಾಯ್ದೆ) ಅಡಿಯಲ್ಲಿ ಈ ಎಲ್ಲಾ 20 ಸಂಸದರ ವಿರುದ್ಧ ಅನರ್ಹತೆ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅವು ಇನ್ನೂ ಇತ್ಯರ್ಥವಾಗಿಲ್ಲ ಎಂದು ಬ್ಯಾನರ್ಜಿ ಸ್ಪೀಕರ್ ಗಮನಕ್ಕೆ ತಂದಿದ್ದಾರೆ.
ಇದನ್ನೂ ಓದಿ: ವಿಶೇಷ ಅಧಿವೇಶನ: ಡಿಲಿಮಿಟೇಶನ್ ಮಸೂದೆ ವಿರುದ್ಧ ಮತ ಚಲಾಯಿಸಲು ಎಸ್‌ಪಿ ಸಂಸದರಿಗೆ ‘ತ್ರೀ-ಲೈನ್ ವಿಪ್’ ಜಾರಿ
ಮೂಲ ರಾಜಕೀಯ ಪಕ್ಷವು ಬೇರೊಂದು ಪಕ್ಷದೊಂದಿಗೆ ವಿಲೀನವಾದಾಗ ಮಾತ್ರ 10ನೇ ಪರಿಚ್ಛೇದದ ಪ್ಯಾರಾಗ್ರಾಫ್ 4ರ ಅಡಿಯಲ್ಲಿ ಅನರ್ಹತೆಯಿಂದ ವಿನಾಯಿತಿ ಸಿಗುತ್ತದೆ; ಆದರೆ ಟಿಎಂಸಿ ಎನ್‌ಸಿಪಿಐ ಜೊತೆ ಯಾವುದೇ ವಿಲೀನ ಮಾಡಿಕೊಂಡಿಲ್ಲ. ಅಲ್ಲದೆ, ಲೋಕಸಭೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈಗಲೂ ಈ 20 ಸಂಸದರನ್ನು ಒಳಗೊಂಡಂತೆ ಟಿಎಂಸಿಯ ಒಟ್ಟು ಸಂಖ್ಯಾಬಲ 28 ಎಂದೇ ತೋರಿಸುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಸಂವಿಧಾನ ತಿದ್ದುಪಡಿ ಮಸೂದೆ ಮತ್ತು ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಮಸೂದೆಗಳನ್ನು ಮಂಡಿಸುತ್ತಿದ್ದು, ಇವುಗಳ ಅಂಗೀಕಾರಕ್ಕೆ ಸರ್ಕಾರಕ್ಕೆ ಹಾಜರಿರುವ ಮತ್ತು ಮತ ಚಲಾಯಿಸುವ ಸದಸ್ಯರ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಇಂತಹ ನಿರ್ಣಾಯಕ ಸಂದರ್ಭದಲ್ಲಿ ಅನರ್ಹತೆ ಭೀತಿ ಎದುರಿಸುತ್ತಿರುವ 20 ಸಂಸದರ ಮತಗಳನ್ನು ಪರಿಗಣಿಸಿದರೆ ಅದು ಮಸೂದೆಯ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು ಎಂದು ಅಭಿಷೇಕ್ ಬ್ಯಾನರ್ಜಿ ಆತಂಕ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಸದನದಲ್ಲಿ ಈ ಬಂಡಾಯ ಸಂಸದರಿಗೆ ನೀಡಲಾಗಿರುವ ಪ್ರತ್ಯೇಕ ಆಸನ ವ್ಯವಸ್ಥೆಯನ್ನೂ ತಕ್ಷಣವೇ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಮತ್ತೊಂದೆಡೆ, ಸಂಸದರನ್ನು ಸ್ಪೀಕರ್ ಅವರು ಅಧಿಕೃತವಾಗಿ ಅನರ್ಹಗೊಳಿಸುವವರೆಗೂ ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಸಂವಿಧಾನ ತಜ್ಞರು ಅಭಿಪ್ರಾಯಪಟ್ಟಿದ್ದು, ಟಿಎಂಸಿಯ ಈ ನಡೆಯನ್ನು ರಾಜಕೀಯ ಒತ್ತಡ ತಂತ್ರ ಎಂದು ವಿಶ್ಲೇಷಿಸಿದ್ದಾರೆ.
ಇತ್ತ ಎನ್‌ಸಿಪಿಐ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್ ಪ್ರತಿಕ್ರಿಯಿಸಿ, “ಪ್ರತಿಯೊಬ್ಬ ಸದಸ್ಯರಿಗೂ ಮತ ಚಲಾಯಿಸುವ ಹಕ್ಕಿದೆ; ಆದರೆ ಅವರ ಮತಗಳನ್ನು ಹಳೆಯ ಪಕ್ಷದ ಜೊತೆ ಎಣಿಸಬೇಕೇ ಅಥವಾ ಹೊಸ ಪಕ್ಷದ ಜೊತೆ ಎಣಿಸಬೇಕೇ ಎಂಬುದನ್ನು ಸ್ಪೀಕರ್ ನಿರ್ಧರಿಸುತ್ತಾರೆ” ಎಂದಿದ್ದಾರೆ. ಇದೇ ವೇಳೆ ಟಿಎಂಸಿ ತನ್ನ ಎಲ್ಲಾ ಲೋಕಸಭಾ ಸಂಸದರಿಗೆ ನವೆಂಬರ್ 30ರಿಂದ ಡಿಸೆಂಬರ್ 4ರವರೆಗೆ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ತ್ರೀ-ಲೈನ್ ವಿಪ್ ಜಾರಿಗೊಳಿಸಿದೆ.



