ಚಿತ್ರದುರ್ಗ | ಬಿತ್ತನೆ ಬೀಜದ ಗುಣಮಟ್ಟ ಖಾತ್ರಿ ಪಡಿಸಿಕೊಂಡು ರೈತರಿಗೆ ವಿತರಿಸಲು ಜಿಲ್ಲಾಧಿಕಾರಿ ಸೂಚನೆ

Date:

ಮುಂಗಾರು ಬಿತ್ತನೆಗೆ ರೈತರು ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಬಿತ್ತನೆ ಬೀಜದ ಗುಣಮಟ್ಟ ಖಾತ್ರಿ ಪಡಿಸಿಕೊಂಡು ರೈತರಿಗೆ ವಿತರಿಸಬೇಕು. ಕಳಪೆ ಬೀಜ ಮತ್ತು ಗೊಬ್ಬರ ಮಾರಾಟವಾಗದಂತೆ ಕ್ರಮ ವಹಿಸಬೇಕು ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪ್ರಸಕ್ತ ಮುಂಗಾರು ಹಂಗಾಮು ಬಿತ್ತನೆ ಬೀಜ ಮತ್ತು ರಸಗೊಬ್ಬರ ಸರಬರಾಜು ಸಿದ್ಧತೆ ಕುರಿತು ಕೃಷಿ, ತೋಟಗಾರಿಕೆ, ಬೀಜ ನಿಗಮ, ಎಣ್ಣೆ ಕಾಳು ಅಭಿವೃದ್ಧಿ ನಿಗಮ, ರಸಗೊಬ್ಬರ ಪೂರೈಕೆದಾರರು ಹಾಗೂ ರೈತರೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

“ಚಿತ್ರದುರ್ಗ ಕೃಷಿ ಆಧಾರಿತ ಜಿಲ್ಲೆಯಾಗಿದೆ. ಸಣ್ಣ ಹಾಗೂ ಅತಿಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ರೈತರಿಗೆ ಸಮಯಕ್ಕೆ ತಕ್ಕಂತೆ ಬೀಜ, ಗೊಬ್ಬರ ಮತ್ತು ಕೀಟನಾಶಕ ಸೇರಿದಂತೆ ಇತರೆ ಕೃಷಿ ಸಾಮಗ್ರಿಗಳು ದೊರಕುವಂತೆ ವ್ಯವಸ್ಥೆ ಮಾಡಬೇಕು” ಎಂದು ಸೂಚಿಸಿದರು.

“ಕಳೆದ ಬಾರಿ ಕೆಒಎಫ್ (ಕರ್ನಾಟಕ ಎಣ್ಣೆಕಾಳು ಬೆಳಗಾರರ ಸಹಕಾರಿ ಒಕ್ಕೂಟ ನಿಯಮಿತ) ವಿತರಿಸಿದ ಬಿತ್ತನೆ ಶೇಂಗಾ ಬೀಜದಲ್ಲಿ ಕಳಪೆ ಕಂಡುಬಂದಿತ್ತು. ಈ ಬಾರಿ ಕೆಒಎಫ್ ಮಾರುಕಟ್ಟೆ ದರಕ್ಕಿಂತ ಅಧಿಕವಾಗಿ ಬಿತ್ತನೆ ಬೀಜದ ದರ ನಿಗದಿ ಪಡಿಸಿದೆ. ಮಾರುಕಟ್ಟೆಯಲ್ಲಿ ₹5,000 ದಿಂದ ₹6,000 ದೊರೆಯುವ ಬಿತ್ತನೆ ಶೇಂಗಾ ಬೀಜಕ್ಕೆ ಕೆಒಎಫ್ ₹9,000 ದರ ನಿಗದಿ ಮಾಡಿದೆ” ಎಂದು ಸಭೆಯಲ್ಲಿ ರೈತರು ಅಸಮಾಧಾನ ವ್ಯಕ್ತಪಡಿಸಿದರು

“ಬಿತ್ತನೆ ಶೇಂಗಾ ಬೀಜದ ದರವನ್ನು ಕೃಷಿ ಇಲಾಖೆಯ ಆಯುಕ್ತಾಲಯದಲ್ಲಿ ರಾಜ್ಯಮಟ್ಟಕ್ಕೆ ಅನ್ವಯಿಸುವಂತೆ ದರ ನಿಗದಿ ಮಾಡಿ ಟೆಂಡರ್ ಕರೆಯಲಾಗುತ್ತದೆ. ಈ ಬಾರಿ ಪ್ರತಿ ಕೆಜಿಗೆ ₹84ನ್ನು ಇಲಾಖೆ ನಿಗದಿ ಮಾಡಿದೆ. ಇದರಂತೆ 100 ಕೆಜಿ ಬಿತ್ತನೆ ಶೇಂಗಾ ಬೀಜದ ದರ ₹8400 ಆಗಿದೆ. ಇದರಲ್ಲಿ ಕೆಒಎಫ್, ಕರ್ನಾಟಕ ರಾಜ್ಯ ಬೀಜ ನಿಗಮ ಹಾಗೂ ಖಾಸಗಿ ಕಂಪನಿಗಳು ಬಿತ್ತನೆ ಶೇಂಗಾ ಬೀಜದ ವಿತರಣೆಗೆ ಟೆಂಡರ್ ಪಡೆದುಕೊಂಡಿವೆ. ಇದರಲ್ಲಿ ಜಿಲ್ಲೆಗೆ ಅಗತ್ಯ ಇರುವ ಶೇ.70 ಹೆಚ್ಚಿನ ಶೇಂಗಾ ಬಿತ್ತನೆ ಬೀಜವನ್ನು ಕೆಒಎಫ್ ಸರಬರಾಜು ಮಾಡುತ್ತದೆ. ರಾಜ್ಯ ಸರ್ಕಾರದಿಂದ ಪ್ರತಿ ಕ್ವಿಂಟಾಲ್ ಬಿತ್ತನೆ ಶೇಂಗಾ ಬೀಜ ಖರೀದಿಗೆ ಸಾಮಾನ್ಯ ರೈತರಿಗೆ ₹1400 ಹಾಗೂ ಎಸ್‌ಸಿ/ಎಸ್‌ಟಿ ರೈತರಿಗೆ ₹2000 ಸಬ್ಸಿಡಿ ನೀಡಲಾಗುತ್ತದೆ” ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಪಿ.ರಮೇಶ್‌ಕುಮಾರ್ ಸಭೆಗೆ ಮಾಹಿತಿ ನೀಡಿದರು.

“ಕೆಒಎಫ್ ಸಂಸ್ಥೆಯ ಬಿತ್ತನೆ ಶೇಂಗಾ ಬೀಜದ ಗುಣಮಟ್ಟದ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಬೇಕು. ಕೃಷಿ ಇಲಾಖೆಯಿಂದ ಕೆಒಎಫ್ ಸಂಸ್ಥೆಯ ಬೀಜ ಸಂಸ್ಕರಣ ಘಟಕಕ್ಕೆ ಮೇಲ್ವಿಚಾರಕರನ್ನು ನೇಮಿಸಬೇಕು. ಗುಣಮಟ್ಟವಲ್ಲದ ಬೀಜಗಳು ಕಂಡು ಬಂದರೆ ತಕ್ಷಣ ಕ್ರಮ ಕೈಗೊಳ್ಳಬೇಕು. ರೈತರ ಅಭಿಪ್ರಾಯದಂತೆ ಮಾರುಕಟ್ಟೆಯಲ್ಲಿ ₹5000ದಿಂದ ₹5500 ದರಕ್ಕೆ ಉತ್ತಮ ಗುಣಮಟ್ಟದ ಶೇಂಗಾ ಬೀಜಗಳು ದೊರೆಯುತ್ತಿವೆ. ಆದ್ದರಿಂದ ಕೆಒಎಫ್ ಬಿತ್ತನೆ ಬೀಜ ದರವನ್ನು ₹6500 ನಿಗದಿ ಮಾಡಿ, ಸಬ್ಸಿಡಿ ಸೌಲಭ್ಯ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ನಕಲಿ ಹಾಗೂ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡುವುದು ಕಂಡುಬಂದರೆ ಶಿಸ್ತು ಕ್ರಮ ಕೈಗೊಳ್ಳಬೇಕು. ರೈತರು ಕೇಳುವ ಗೊಬ್ಬರಗಳನ್ನು ಮಾತ್ರ ನೀಡಿ. ಯಾವುದೇ ರೀತಿಯಲ್ಲಿ ಇತರೆ ಗೊಬ್ಬರನ್ನು ಕೊಳ್ಳುವಂತೆ ಒತ್ತಾಯ ಮಾಡಬಾರದು. ಜಿಲ್ಲೆಯಲ್ಲಿ ಇರುವ ರೈತ ಉತ್ಪಾದಕ ಸಂಘಗಳು, ವ್ಯವಸಾಯೋತ್ಪನ್ನ ಸಹಕಾರಿ ಸಂಘಗಳ ಮೂಲಕ ಗೊಬ್ಬರಗಳ ವಿತರಣೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಕಪ್ಪು ತಲೆ ಹುಳಿವಿನ ತಡೆಗೆ ಕಾರ್ಯಗಾರ:

“ಜಿಲ್ಲೆಯ ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ ತೆಂಗು ಬೆಳೆಯಲ್ಲಿ ಕಂಡುಬಂದಿರುವ ಕಪ್ಪು ತಲೆಯ ಕಂಬಳಿ ಹುಳುವಿನ ಬಾದೆಯಿಂದಾಗಿ ತೆಂಗು ಬೆಳೆ ನಶಿಸಿಹೊಗುತ್ತಿದೆ. ಈ ಹುಳುವಿನ ಬಾದೆ ತಡೆಯಲು ರೈತರು ಸಾಮೂಹಿಕವಾಗಿ ಪ್ರಯತ್ನಿಸಬೇಕು. ಆದ್ದರಿಂದ ಈ ಹುಳುವಿನ ಬಾಧೆ ಹೆಚ್ಚಿರುವ ಪ್ರದೇಶಗಳಲ್ಲಿ ಕೃಷಿ ಹಾಗೂ ಕೀಟ ವಿಜ್ಞಾನಿಗಳ ಕಾರ್ಯಗಾರವನ್ನು ನಡೆಸಿ, ರೈತರಲ್ಲಿ ಜಾಗೃತಿ ಮೂಡಿಸಬೇಕು. ಈ ಕಾರ್ಯಗಾರಗಳ ಪಟ್ಟಿಯನ್ನು ದಿನಪತ್ರಿಕೆ ಹಾಗೂ ಮಾಧ್ಯಮಗಳ ಮೂಲಕ ಹೆಚ್ಚು ಪ್ರಚಾರ ನಡೆಸಿ, ಹೆಚ್ಚು ರೈತರಿಗೆ ತಲುಪುವಂತೆ ಮಾಡಬೇಕು” ಎಂದು ಜಿಲ್ಲಾಧಿಕಾರಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಪಿ.ರಮೇಶ್ ಕುಮಾರ್ ಮಾತನಾಡಿ, “ಮೇ ತಿಂಗಳಿನಲ್ಲಿ ಜಿಲ್ಲೆಯ ವಾಡಿಕೆ ಮಳೆ 118 ಮಿ.ಮೀ ಆಗಿದೆ. ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.56 ರಷ್ಟು ಮಳೆ ಕೊರತೆಯಾಗಿದೆ. ಪೂರ್ವ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಎಳ್ಳು, ಹೆಸರು, ಉದ್ದು ಬೆಳೆ ನಾಶವಾಗಿದೆ. ಕಳೆವ ವರ್ಷ ಮೇ ತಿಂಗಳ ವೇಳೆಗೆ 19 ಸಾವಿರ ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ 8 ಸಾವಿರ ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂಬರುವ ದಿನಗಳಲ್ಲಿ ವಾಡಿಕೆ ಮಳೆಯಾಗಲಿದೆ. ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಂಗ್ರಹ ಮಾಡಿಕೊಳ್ಳಲಾಗಿದೆ. ಜಿಲ್ಲೆಗೆ 40 ಸಾವಿರ ಮೆಟ್ರಿಕ್ ಟನ್‌ನಷ್ಟು ಗೊಬ್ಬರ ಅಗತ್ಯವಿದ್ದು ಈಗಾಗಲೇ 20 ಸಾವಿರ ಮೆಟ್ರಿಕ್ ಟನ್ ಸಂಗ್ರಹ ಮಾಡಿಕೊಳ್ಳಲಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಮನೆ ಬಾಗಿಲಿಗೆ ಇ-ಸ್ವತ್ತು ‘ಜನಸ್ನೇಹಿ ಕಾರ್ಯಕ್ರಮ’ಕ್ಕೆ ಮತ್ತೆ ಚಾಲನೆ ನೀಡಿದ ಸಿಇಒ ದಿವಾಕರ್

ಕೃಷಿ ಇಲಾಖೆ ಸಾಮಾಜಿಕ ಅರಣ್ಯ ಯೋಜನೆಯಡಿ ಹಾಗೂ ನರೇಗಾ ಕಾಮಗಾರಿಯಡಿ ರೈತರು ತೇಗ, ಹುಣಸೆ, ಸಿಲ್ವರ್, ಮಹಾಗೋನಿ ಮರಗಳನ್ನು ಬೆಳೆಸಲು ಉಚಿತವಾಗಿ ಗಿಡಗಳನ್ನು ನೀಡಲಾಗುವುದು ರೈತರು ಇದರ ಲಾಭ ಪಡೆದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕ ಪಿ. ರಮೇಶ್ ಕುಮಾರ್ ತಿಳಿಸಿದರು.

ಆಯಾ ತಾಲೂಕಿನ ವಿವಿಧ ಬೆಳೆಗಳ ಸಮಸ್ಯೆಗಳ ಕುರಿತು ಸವಿಸ್ತಾರವಾಗಿ ಚರ್ಚಿಸಿ ತಮ್ಮ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿಗೆ ರೈತ ಮುಖಂಡರು ಮನವಿ ಮಾಡಿದರು.

ಸಭೆಯಲ್ಲಿ ರೈತ ಮುಂಖಡರು, ಕೃಷಿ, ತೋಟಗಾರಿಕೆ, ಸಹಕಾ ಇಲಾಖೆ, ಕೆಒಎಫ್ ಬೀಜ ನಿಗಮದ ಅಧಿಕಾರಿಗಳು ಇದ್ದರು

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯನಗರ | ತಮ್ಮ ಹಕ್ಕುಗಳಿಗಾಗಿ ಲಿಂಗತ್ವ ಅಲ್ಪಸಂಖ್ಯಾತರ ಹೋರಾಟ

ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವು ಗೌರವಯುತ ಜೀವನ ನಡೆಸಲು ತಮಗೆ ಲಿಂಗತ್ವ ಅಲ್ಪಸಂಖ್ಯಾತರ...

ಕಲಬುರಗಿ | ಅಕ್ರಮ ಸಾಗಾಟ; 9 ಲೀಟರ್ ಮದ್ಯ, 45 ಲಕ್ಷ ರೂ. ಮೌಲ್ಯದ ಬಸ್ ವಶ

ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬಸ್‌ ತಡೆದು ಅಬಕಾರಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ...

ಯಾದಗಿರಿ | ವಸತಿ ಶಾಲೆಯಲ್ಲಿ ಕಲುಷಿತ ನೀರು ಕುಡಿದು ವಿದ್ಯಾರ್ಥಿಗಳು ಅಸ್ವಸ್ಥ

ವಸತಿ ಶಾಲೆಯಲ್ಲಿ ಕಲುಷಿತ ನೀರು ಕುಡಿದು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಯಾದಗಿರಿ...

ಗದಗ | ಜನತಾದರ್ಶನ: ವೃದ್ಧೆಗೆ ಆಧಾರ್ ಕಾರ್ಡ್, ಮಾಸಾಶನ ಆದೇಶ ಪತ್ರ ವಿತರಣೆ

ಶತಾಯುಷಿ ವೃದ್ಧೆಯೊಬ್ಬರು ಆಧಾರ್ ಕಾರ್ಡ್‌ ಇಲ್ಲದ ಕಾರಣ, ಮಾಸಾಶನ ಪಡೆಯಲು ಸಾಧ್ಯವಾಗಿರಲಿಲ್ಲ....