ಬರಗಾಲದಲ್ಲಿ ನೆಪ ಹೇಳುವುದು ಬಿಟ್ಟು ಕೆಲಸ ಮಾಡಲು ಹೇಳುವಲ್ಲಿ ತಾಲೂಕು ಪಂಚಾಯತಿ ಮನರೇಗಾ ವಿಭಾಗದವರು ವಿಫಲರಾಗಿದ್ದಾರೆ ಎಂದು ಗ್ರಾಕೂಸ್ (ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಚಿತ್ರದುರ್ಗಾ) ಸಂಘಟನೆಯ ಜಿಲ್ಲಾ ಸಂಚಾಲಕಿ ತೇಜೇಶ್ವರಿ ಆರೋಪಿಸಿದರು.
ಚಿತ್ರದುರ್ಗ ಗ್ರಾಮೀಣ ಕೂಲಿ ಕಾರ್ಮಿಕರು ಸಂಘಟನೆಯ ವತಿಯಿಂದ, ಮನರೇಗಾ ಯೋಜನೆಯಡಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಬಡವರಿಗೆ ಕೂಲಿ ಕೆಲಸ ನೀಡುವಲ್ಲಿ ವಿಫಲವಾಗಿರುವ ಗ್ರಾಮ ಪಂಚಾಯಿತಿ ಮತ್ತು ಇಲಾಖೆಗೆ ಕೆಲಸ ನೀಡಲು ಆದೇಶಿಸಲು ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾ ಅಧಿಕಾರಿಗಳಿಗೆ ಮನವಿ ನೀಡಿ ಮಾತನಾಡಿದರು.
ಕಳೆದ 4 ತಿಂಗಳಿಂದ ದುಡಿಯುವ ಕೈಗಳಿಗೆ ಕೆಲಸ ಸಿಗದೇ ಕಾರ್ಮಿಕ ಕುಟುಂಬಗಳು ಗುಳೆ ಹೋಗಿದ್ದು, ನರೇಗಾ ಯೋಜನೆ ಇದ್ದು ಗ್ರಾಮೀಣ ಕಾರ್ಮಿಕರಿಗೆ ಮಾಹಿತಿಲ್ಲದೇ ಸರಿಯಾಗಿ ಅನುಷ್ಠಾನವಾಗದೆ ಮರೀಚಿಕೆ ಆಗಿದೆ. 5 ತಿಂಗಳಿಂದಲೂ ಹಳ್ಳಿ ಹಳ್ಳಿಗೆ ಹೋಗಿ ಕಾರ್ಮಿಕರ ಗುಂಪುಗಳನ್ನು ಮಾಡಿ ಧೈರ್ಯ ತುಂಬಿ ಕೆಲಸ ಕೇಳಿದರೆ ಪಿಡಿಪಿಗಳೂ ನಿರ್ಲಕ್ಷ ಮಾಡಿ ಕೆಲಸ ಕೊಡುತ್ತಿಲ್ಲ ಜಾಬ್ ಕಾರ್ಡ್ ಮಾಡಿಕೊಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ ಎಂದರು.
ಕೆಲವು ಪಂಚಾಯತಿಗಳು ಮಾತ್ರ ಕಡಿಮೆ ಜನರಿಗೆ ಕೆಲಸ ಕೊಟ್ಟು ಕೈತೋಳೆದುಕೊಳ್ಳುತ್ತಿದ್ದೂ ಬೇಸರ ತಂದಿದೆ. ಕೆಲವು ತಾಂತ್ರಿಕ ಸಹಾಯಕರು ಕೆಲಸ ಮಾಡಿದ ಕಾರ್ಮಿಕರಿಗೆ ಕಡಿಮೆ ಕೂಲಿ ಹಾಕುವುದು, ಕೆಲಸ ಮಾಡಲು ಸಾಧ್ಯವಿಲ್ಲದ ಸ್ಥಳದಲ್ಲಿ ಕೆಲಸ ಕೊಟ್ಟು ಸಮಸ್ಯೆ ಮಾಡುತ್ತಿದ್ದಾರೆ. ಒಟ್ಟಾರೆ ನರೇಗಾ ಯೋಜನೆ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ ಎಂದರು.
ಕೊಳಾಳು, ಯಳಗೋಡು, ಚಿಕ್ಕಗೊಂಡನಹಳ್ಳಿ, ಗುಡ್ಡದರಂಗವ್ವನಹಳ್ಳಿ, ಐನಹಳ್ಳಿ-ಕುರುಬರಹಳ್ಳಿ ಹಾಗೂ ಇತರ ಗ್ರಾಮ ಪಂಚಾಯಿತಿಗಳಲ್ಲಿ ಕೆಲವು ಕಡೆ ಕೆಲಸ ಕೊಟ್ಟಿಲ್ಲ, ಕೆಲವೆಡೆ ನಮೂನೆ-6 ಕೊಟ್ಟರೂ ಕೆಲಸ ನೀಡಿಲ್ಲ, ಇದರಿಂದ ದುಡಿದು ತಿನ್ನುವ ಕೂಲಿ ಕಾರ್ಮಿಕರ ಜೀವನ ನಿರ್ವಹಣೆ ಕಷ್ಟವಾಗಿದೆ. ಇದನ್ನು ನಿವಾರಿಸಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ ನರೇಗದಡಿ ಕೆಲಸ ನೀಡಲು ಮನವಿ ಎಂದು ಮನವಿ ಮಾಡಿದರು.
ಶೀಘ್ರ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದಿನ ಸೋಮವಾರ ನೂರಾರು ಮನರೇಗಾ ಕಾರ್ಮಿಕರು ತಾಲೂಕು ಪಂಚಾಯತ್ ಮುಂದೆ ಅನಿರ್ದಿಷ್ಟ ಹೋರಾಟ ಮಾಡಲಿದ್ದಾರೆ ಎಂದು ಎಚ್ಚರಿಸಿದರು.
ಈ ವೇಳೆ ಗ್ರಾಕೂಸ ಸಂಘಟನೆಯ ರಾಮಪ್ಪ, ನಾಗರತ್ನಮ್ಮ, ರೇಖಾ, ಶಾಮರಾಜು, ಮಲ್ಲೇಶ್ ಇತರ ಕಾರ್ಮಿಕರು ಹಾಜರಿದ್ದರು.
