ಕನಿಷ್ಠ ವೇತನದ ವೈಜ್ಞಾನಿಕ ಪುನರ್ ವಿಮರ್ಶೆ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವಂತೆ ಒತ್ತಾಯಿಸಿ ಕರಾವಳಿ ಭಾಗದಲ್ಲಿ ಸಹಿ ಸಂಗ್ರಹ ಚಳುವಳಿ ಮಂಗಳವಾರದಿಂದ ಆರಂಭಗೊಂಡಿದೆ. ಏಪ್ರಿಲ್ 14ರಿಂದ 30ರವರೆಗೆ ನಡೆಯಲಿರುವ ಈ ಅಭಿಯಾನಕ್ಕೆ ಸಿಐಟಿಯು ಕರೆ ನೀಡಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಜನಬೆಂಬಲ ಸಂಗ್ರಹಿಸಲಾಗುತ್ತಿದೆ.

ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಆರಂಭಗೊಂಡ ಈ ಚಳುವಳಿ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಐಟಿಯು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜರುಗಿತು. ಸಾರ್ವಜನಿಕರ ಮಧ್ಯೆ ಸಹಿ ಸಂಗ್ರಹಿಸುವ ಮೂಲಕ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಮಂಗಳೂರಿನಲ್ಲಿ ಚಳುವಳಿಗೆ ಚಾಲನೆ ನೀಡಿದ ಕಾರ್ಮಿಕ ಚಳುವಳಿಯ ಹಿರಿಯ ನಾಯಕ ಜೆ. ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ, ರಾಜ್ಯದಲ್ಲಿ ಕನಿಷ್ಠ ವೇತನವನ್ನು 2022ರಲ್ಲೇ ಪುನರ್ ವಿಮರ್ಶೆ ಮಾಡಬೇಕಾಗಿದ್ದರೂ ಅದು ವಿಳಂಬವಾಗಿದೆ ಎಂದು ಆರೋಪಿಸಿದರು. ಹಿಂದಿನ ಸರ್ಕಾರದ ಅವೈಜ್ಞಾನಿಕ ವೇತನ ಪರಿಷ್ಕರಣೆಯನ್ನು ನ್ಯಾಯಾಲಯ ರದ್ದುಗೊಳಿಸಿದ್ದು, ವೈಜ್ಞಾನಿಕವಾಗಿ ಪರಿಷ್ಕರಣೆ ಮಾಡುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಹೊಸ ಅಧಿಸೂಚನೆಯನ್ನು ತುರ್ತಾಗಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು, ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ಕುಂಠಿತಗೊಳಿಸುವ ಸಾಧ್ಯತೆ ಇದೆ ಎಂದು ಆರೋಪಿಸಿದರು. ದೀರ್ಘಕಾಲದ ಹೋರಾಟಗಳಿಂದ ಪಡೆದ ಹಕ್ಕುಗಳನ್ನು ಕಾಪಾಡುವುದು ಅಗತ್ಯ ಎಂದು ಅವರು ಹೇಳಿದರು.
ಈದಿನ.ಕಾಮ್ ಜೊತೆ ಮಾತನಾಡಿದ ಉಡುಪಿ ಆಟೋ ರಿಕ್ಷಾ ಯೂನಿಯನ್ ಉಪಾಧ್ಯಕ್ಷ ಸದಾಶಿವ ಪೂಜಾರಿ, ಬದುಕಲು ಅಗತ್ಯವಾದ ಕನಿಷ್ಠ ವೇತನವನ್ನು ಕಾರ್ಮಿಕರಿಗೆ ಒದಗಿಸುವುದು ಸರ್ಕಾರದ ಮೂಲಭೂತ ಜವಾಬ್ದಾರಿ ಎಂದು ಆಗ್ರಹಿಸಿದರು.
ಇಂದಿನ ಪರಿಸ್ಥಿತಿಯಲ್ಲಿ ನಿಯಂತ್ರಣ ತಪ್ಪಿದ ಬೆಲೆ ಏರಿಕೆ ಜನಸಾಮಾನ್ಯರ ಜೀವನವನ್ನು ಸಂಕಷ್ಟಕ್ಕೆ ತಳ್ಳಿದ್ದು, ದುಡಿಮೆ ಮಾಡುವ ಪ್ರತಿಯೊಬ್ಬರಿಗೂ ಗೌರವಯುತ ಜೀವನ ನಡೆಸಲು ಕನಿಷ್ಠ ವೇತನ ನೀಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಈ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಇನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಲೇಬರ್ ಕೋಡ್ ಕಾರ್ಮಿಕರನ್ನು ರಕ್ಷಿಸುವ ಬದಲು ಅವರನ್ನು ಗುಲಾಮಗಿರಿಯತ್ತ ತಳ್ಳುವಂತಿದೆ ಎಂದು ಆರೋಪಿಸಿದ ಅವರು, ಈ ನೀತಿಯ ವಿರುದ್ಧ ಈಗಾಗಲೇ ತೀವ್ರ ಪ್ರತಿಭಟನೆ ನಡೆಸಲಾಗಿದೆ ಎಂದರು. ಇದೇ ಕೋಡ್ ಅನ್ನು ರಾಜ್ಯ ಸರ್ಕಾರ ಜಾರಿಗೆ ತರಬಾರದು ಎಂದು ಅವರು ಮಾಧ್ಯಮದ ಮೂಲಕ ಆಗ್ರಹಿಸಿದರು.
ಪ್ರಮುಖ ಬೇಡಿಕೆಗಳು
- ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ತಕ್ಷಣ ಪ್ರಕಟಿಸುವುದು
- ಅಕುಶಲ ಕಾರ್ಮಿಕರಿಗೆ ರೂ.31,000 ಕನಿಷ್ಠ ವೇತನ ನಿಗದಿ
- ಎಲ್ಲಾ ವಲಯಗಳಲ್ಲಿ ಕನಿಷ್ಠ ವೇತನ ಕಟ್ಟುನಿಟ್ಟಾಗಿ ಜಾರಿ
- ಕಾರ್ಮಿಕ ಸಂಹಿತೆಗಳಿಗೆ ರಾಜ್ಯ ತಿದ್ದುಪಡಿ ಮಾಡಿ ಜಾರಿಗೆ ತರುವುದು
- ಗುತ್ತಿಗೆ ಪದ್ಧತಿ ರದ್ದುಪಡಿಸಿ ಖಾಯಂ ಉದ್ಯೋಗ ಸೃಷ್ಟಿ
- ಹಂಚು, ಗೇರು ಸಂಸ್ಕರಣಾ, ಬೀಡಿ ಸೇರಿದಂತೆ ಎಲ್ಲಾ ಕಾರ್ಮಿಕರಿಗೆ ಕನಿಷ್ಠ ಕೂಲಿ ಅನ್ವಯ
- ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ಭದ್ರತೆ




