ತೆಂಗಿನ ಕಾಂಡ ಸೋರುವ ರೋಗ; ಪ್ರಕೃತಿಯನ್ನು ಅನುಸರಿಸುವುದೊಂದೇ ಪರಿಹಾರ

Date:

ರಸ ಗೊಬ್ಬರ, ಕೀಟನಾಶಕಗಳ ಕಂಪನಿಗಳು, ವೈವಿಧ್ಯಮಯವಾದ ರೋಗನಾಶಕಗಳು ರೈತರ ವಿಭಿನ್ನ ಕೃಷಿ ಪದ್ಧತಿಗಳನ್ನು ಉಳಿಸಿಕೊಡಲಾರವು. ನಿಸರ್ಗವನ್ನು ಅನುಸರಿಸಿ ಅದರ ನಿರ್ದೇಶನದಂತೆ ಕೃಷಿ ಮಾಡಿದಾಗ ಮಾತ್ರ ನಮ್ಮ ಬೆಳೆಗಳು ಉಳಿಯಲು ಸಾಧ್ಯ ಎಂದು ಹೇಳುವ ಉಜ್ಜಜ್ಜಿ ರಾಜಣ್ಣ ಅವರ ವಿಶೇಷ ಬರಹ.

ತೆಂಗಿನ ಮರಗಳ ಕಾಂಡ ಸೋರುವ ರೋಗ ವ್ಯಾಪಕವಾಗುತ್ತಿದೆ. ಮನೆಗೊಬ್ಬರಿಗೆ ಶುಗರ್ ಕಾಯಿಲೆ ಇದೆ ಅನ್ನುವ ಹಾಗೆ ಬಹುತೇಕ ಎಲ್ಲ ತೋಟಗಳ ತೆಂಗಿನ ಮರಗಳು ಕಾಂಡ ಸೋರುವ ರೋಗಕ್ಕೆ ತುತ್ತಾಗಿ ಅವುಗಳು ಮುಖ ಇಳಿಬಿದ್ದು, ಅವು ಉಳಿಯಲು ಒದ್ದಾಡುತ್ತಿವೆ. ಕೊನೆಯ ತಳಿಯ ಬಡಕಲು ರಾಸುಗಳನ್ನು ಮನೆಯ ಮುಂದೆ ಕಟ್ಟಿಕೊಂಡಂತಾಗಿದೆ ತೆಂಗಿನ ಬೆಳೆಗಾರರ ಪರಿಸ್ಥಿತಿ.

ತೆಂಗಿನ ಮರಗಳು ಸಾಯುವ ಮೊದಲೇ ಕಾಂಡ ಸೋರುತ್ತವೆ. ಕಾಂಡ ಸೋರುವ ರೋಗಕ್ಕೆ ತುತ್ತಾದ ಮರಗಳಿಗೆ ಸರಿಯಾದ ಔಷಧೋಪಚಾರಗಳು ನಡೆಯದಂತಾಗಿದೆ. ಔಷಧೋಪಚಾರ ಕೈಗೊಂಡರೂ ಉಪಯೋಗವಾಗುತ್ತಿಲ್ಲ ಎಂದು ಬೆಳೆಗಾರರು ಹೇಳುತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತೆಂಗಿನ ಮರಗಳಿಗೆ ಕಾಂಡ ಸೋರುವ ರೋಗ ಸ್ವಾಭಾವಿಕವಾಗಿ ಬಂದಿದೆ; ಸ್ವಾಭಾವಿಕವಾಗಿಯೇ ಹೋಗಬೇಕಾಗಿದೆ. ಮರ ಉಸಿರು ಕಟ್ಟುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತೆಂಗಿನ ಮರಗಳ ಬೇರುಗಳು ನೀರು ಕುಡಿದು ಮರಗಳೇ ಸಾಯುವಂತಾಗಿವೆ ಎಂದೆಲ್ಲ ವಿಜ್ಞಾನಿಗಳು ಅಭಿಪ್ರಾಯ ಪಡುತ್ತಿದ್ದಾರೆ.

ಬೆಳೆಗಾರರೂ ಮೂಲದಲ್ಲಿ ಎಡವಿದ್ದಾರೆ. ನೀರು ನಿರ್ವಹಣೆಯ ಅವರ ಅನುಭವಗಳೂ ಕೈಕೊಟ್ಟಿವೆ. ಬಿದ್ದ ನೀರು ದೀರ್ಘಕಾಲ ನಿಲ್ಲುವ ಗದ್ದೆ ಮಡಿಗಳಾಗಿವೆ ತೆಂಗಿನ ತೋಟಗಳು. ಬೇರು, ಕಾಂಡ ಕೊಳೆಯುತ್ತದೆ, ಮರ ಒಣಗುತ್ತದೆ. ಸುಳಿ ರೋಗವೂ ಬಂದು ಒಣಗುವಂತಾಗಿದೆ ತೆಂಗು. ನೀರಿನ ಅಂಶ ಹೆಚ್ಚಾಗಿ ಗುಂಬದ ಮೊಟ್ಟೆಗಳು ಇಳಿ ಬೀಳುತ್ತಿವೆ. ಗೊಬ್ಬರ ನೀರು ಮಿತಿಮೀರಿರುವುದರ ಪರಿಣಾಮವಾಗಿಯೂ ಇರಬಹುದು. ಪರಿಹಾರ ಕಂಡು ಹಿಡಿಯುವ ಕ್ರಮಗಳು ತಡವಾಗಿವೆ. ಮುಕ್ತ ಮನಸ್ಸಿನ ದೀರ್ಘಕಾಲದ ಪರಿಹಾರಗಳಿಗೆ ರೈತರೇ ಮುಂದಾಗದಿದ್ದರೆ ತೆಂಗು ಹಂತಹಂತವಾಗಿ ಜೀವ ಕಳೆದುಕೊಳ್ಳುತ್ತದೆ.

ತೋಟಗಾರಿಕಾ ಇಲಾಖೆ, ತೋಟಗಾರಿಕಾ ವಿಶ್ವವಿದ್ಯಾಲಯ, ರೈತರ ಕಡೆಯಿಂದಲೂ ಸುಧಾರಿತ ಕ್ರಮಗಳು ತಡವಾಗಿವೆ. ತೆಂಗು ಇಳುವರಿಯ ಕೊರತೆ ಎದ್ದು ಕಾಣುವಂತಾಗಿ, ಮರಗಳು ರೋಗಗ್ರಸ್ತವಾಗಿ ಬೆಳೆ, ಬೆಳಗಾರರು ಕಷ್ಟದ ಪರಿಸ್ಥಿತಿ ಅನುಭವಿಸಿದಂತಾಗಿರುವುದಕ್ಕೆ ಮುಖ್ಯ ಕಾರಣ ಸರಿಯಾಗಿ ನೀರು ಮತ್ತು ಮಣ್ಣಿನ ನಿರ್ವಹಣೆ ಮಾಡದೆಯೇ ತೆಂಗಿನ ತೋಟಗಾರಿಕೆಯನ್ನು ವಿಸ್ತರಣೆ ಮಾಡುತ್ತಿರುವುದು.

ಮರದ ಬುಡುವೇ ಕಿತ್ತು ಹೋಗುವಂತಹ ಟ್ರಾಕ್ಟರ್ ಬೇಸಾಯ. ನೆಲ ಬಿಗಿಯಾಗುವಷ್ಟು ಭಾರವಾದ ವಾಹನದ ತಿರುಗಾಟ. ಬ್ಯಾಡ್ಲಿ ಎಫೆಕ್ಟ್ ಎಂದರೆ ತೋಟದ ಸಾಲುಗಳಲ್ಲಿ ಸ್ವಾಭಾವಿಕವಾಗಿ ಹರಿಯುವ ಹಳ್ಳಗಳನ್ನು ಮುಚ್ಚಲಾಗಿರುವುದು. ನೀರು ನುಗ್ಗಿದರೆ ತೋಟ ಚೆನ್ನಾಗಿ ಆಗುತ್ತದೆ ಎನ್ನುವುದರ ಬದಲಾಗಿ, ನೀರು ಕಟ್ಟಿದರೆ ತೋಟ ಹಾಳಾಗುತ್ತದೆ ಎನ್ನುವಷ್ಟರ ಮಟ್ಟಿಗೆ ನೀರು ನಿರ್ವಹಣೆ ಮಾಡಲಾಗುತ್ತಿದೆ. ತೆಂಗಿನ ಬಗ್ಗೆ ಅತಿ ವ್ಯಾಮೋಹವನ್ನು ಬೆಳೆಸಿಕೊಂಡು ಹಳ್ಳಗಳನ್ನು, ಇಳಿಜಾರಿನ ತಗ್ಗುಪ್ರದೇಶಗಳನ್ನು, ನೀರು ಹರಿಯುವ ಜಾಗಗಳನ್ನು ಹಾಳು ಮಾಡಿ ಬೆಳೆಯನ್ನು ಬೆಳೆಯಲು ಹೊರಟುದುದರ ಪರಿಣಾಮವೇ ಇಂದಿನ ದುಃಸ್ಥಿತಿ.

ಈ ಸುದ್ದಿ ಓದಿದ್ದೀರಾ: ಒಡಿಶಾ ರೈಲು ದುರಂತ : ಘಟನಾ ಸ್ಥಳದ ಪಕ್ಕದಲ್ಲಿರುವುದು ಮಸೀದಿಯಲ್ಲ, ಮಂದಿರ

ಬರೀ ನೀರು ಕುಡಿದು ಉಳಿಯಲು ತೆಂಗೇನು ದೇವಲೋಕದ ಬೆಳೆಯೇ? ಅದು ಮನುಷ್ಯ ಕಂಡುಕೊಂಡಿರುವ ಬೆಳೆ. ಅನುಗಾಲವೂ ಕಂಡು ಕೇಳರಿಯದಂತಹ ರೋಗಗಳಿಗೆ ತುತ್ತಾಗಿ ಕ್ರಮೇಣ ಮರ ಬುಡ ಸಮೇತ ಬಿದ್ದು ಹೋಗುವುದನ್ನು ಕಾಣುತ್ತಿದ್ದೇವೆ. ಸದ್ಯಕ್ಕೆ ಪರ್ಯಾಯ ಮಾರ್ಗವಾಗಿ ಕಾಣುತ್ತಿರುವುದು ನೀರು ನಿಲ್ಲದಂತೆ ಹರಿಯಲು ಮಳೆ ನೀರಿನ ದಾರಿ ಬಿಡಬೇಕಾಗಿರುವುದು. ಬೆಳೆಗಾರರು ನೀರಿನ ನಿರ್ವಹಣೆಯ ಬಗ್ಗೆ ಗಮನ ಹರಿಸಬೇಕಾಗಿರುವುದು.

ಸಾಲಳ್ಳಿ ಕೆರೆಗಳ ಸಾಲಳ್ಳಗಳು ಕಣ್ಣು ಮುಚ್ಚಿವೆ. ರೈತರು ತೋಟ ಮಾಡಲು ಶುರುವಾಗಿ, ರಾಜ್ಯ ವ್ಯಾಪಿ ತಂಗಿಗೆ ಅಣಬೆ ರೋಗ, ಕಾಂಡ ಸೋರುವ ರೋಗ ಹೆಚ್ಚಾಗಿದೆ. ರೈತರ ಅಹವಾಲುಗಳು ಹೆಚ್ಚಾಗಿವೆ. ಅರಸೀಕೆರೆ, ಕಾಸರಗೋಡು, ತಿಪಟೂರು, ತುಮಕೂರು ಈ ಭಾಗಗಳಿಂದ ರೈತರ ತೆಂಗಿನ ತೋಟಗಳಿಗೆ ಭೇಟಿ ನೀಡಿದ್ದ ವಿಜ್ಞಾನಿಗಳು ರೋಗ ನಿಯಂತ್ರಿಸಲು ಔಷಧೋಪಚಾರವನ್ನು ಮಾಡುವಂತೆ ತೆಂಗಿನ ಬೆಳೆಗಾರರಿಗೆ ಸಲಹೆ ಮಾಡಿದರಾದರೂ, ಅಂತಿಮವಾಗಿ ಪ್ರಕೃತಿಯನ್ನು ಅನುಸರಿಸಿಯೇ ಬೇಸಾಯ ಮಾಡಿ ಎಂಬುವುನ್ನು ಸೂಚಿಸುತ್ತವೆ ಅವರ ಸಲಹೆಗಳು.

ತೆಂಗಿಗೆ ರೋಗಬೇರಿನ ಮೂಲಕ, ಕಾಂಡದ ಮೂಲಕ ಕೀಟನಾಶಕ, ರೋಗನಾಶಕ, ಔಷಧಿಗಳನ್ನು ಉಣಿಸಿ ಲಕ್ಷಾಂತರ ತೆಂಗಿನ ಮರಗಳನ್ನು ಉಳಿಸಿಕೊಳ್ಳಲು ರೋಗ ಮತ್ತು ಕೀಟಬಾಧೆಯಿಂದ ಗುಣಪಡಿಸಿಕೊಳ್ಳಲು ರೈತರಿಗೆ ಸಾಧ್ಯವಾಗಬಹುದೇ? ರಸ ಗೊಬ್ಬರಗಳ ಕಂಪನಿಗಳು, ಕೃಷಿ ಯಂತ್ರೋಪಕರಣಗಳ ಕಂಪನಿಗಳು, ಕೀಟನಾಶಕಗಳ ಕಂಪನಿಗಳು, ವೈವಿಧ್ಯಮಯವಾದ ರೋಗನಾಶಕಗಳು ರೈತರ ಅಗಾಧ ಪ್ರಮಾಣದ ಕೃಷಿ ಪದ್ಧತಿಗಳನ್ನು ಉಳಿಸಿಕೊಡಲಾರವು. ನಿಸರ್ಗವನ್ನು ಅನುಸರಿಸಿ ಅದರ ನಿರ್ದೇಶನದಂತೆ ಕೃಷಿ ಮಾಡಿದಾಗ ಮಾತ್ರ ನಮ್ಮ ಆಹಾರ ಬೆಳೆಗಳನ್ನು ತೋಟಗಾರಿಕಾ ಬೆಳೆಗಳನ್ನು ಉಳಿಸಿಕೊಳ್ಳಬಹುದಾಗಿದೆ ಎಂಬುದನ್ನು ಅರಿಯುವುದು ಬಹಳ ಮುಖ್ಯ.

ತೆಂಗಿನ ಬೆಳೆಗೆ ಕಾಣಿಸಿಕೊಂಡಿರುವ ಅಣಬೆ ರೋಗ, ಕಾಂಡ ಸೋರುವ ರೋಗ ಇವು ಹೊಸ ರೋಗಗಳೇನಲ್ಲ ಮೊದಲಿನಿಂದಲೂ ಇವೆ. ಮಳೆಗಾಲ ಕಡಿಮೆಯಾಗಿದ್ದ ಕಾಲದಲ್ಲಿ ಓಡುವ ನೀರು ಹಿಡಿಯುತ್ತಿದ್ದರು. ಹರಿಯುವ ನೀರನ್ನು ನಿಲ್ಲಿಸುತ್ತಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಒಂದು ತಿಂಗಳ ಕಾಲಾವಧಿಯಲ್ಲಿ ಬೀಳುವ ಮಳೆ, ಇತ್ತೀಚಿನ ವರ್ಷಗಳಲ್ಲಿ ಒಂದೇ ದಿನಕ್ಕೆ ಸುರಿಯುತ್ತಿದೆ. ಈಗ ತೆಂಗಿನ ತೋಟ ಹೊಲಗದ್ದೆಗಳಿಗೆ ಆಯಕಟ್ಟಿನ ಭಾಗಗಳಲ್ಲಿ ಬಸಿಗಾಲವೆಗಳ ಅವಶ್ಯಕತೆ ಇದೆ. ನೀರು ಒಲ್ಡೊಯ್ಯುವ ವ್ಯವಸ್ಥೆಗಳು ಈಗ ಬೇಕಾಗಿವೆ. ಅವೈಜ್ಞಾನಿಕವಾಗಿ ಗೊಬ್ಬರ ಸುರಿಯುವ ಬದಲು ಕಾಲಕಾಲಕ್ಕೆ ತಿಪ್ಪೆ ಗೊಬ್ಬರ, ಹಸಿರೆಲೆ ಗೊಬ್ಬರ ಮಾಡುವಂತಹ ಹಳೆಯ ಪದ್ಧತಿಯ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ನಿಸರ್ಗವೇ ನಿರ್ದೇಶನ ಮಾಡತೊಡಗಿದೆ.

ವಿಜ್ಞಾನದ ಜೊತೆಗೆ ಪರಂಪರೆಯ ಜ್ಞಾನವನ್ನು, ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಬೇಸಾಯದ ಕ್ರಮಗಳನ್ನು ಕೃಷಿ ಮತ್ತು ತೋಟಗಾರಿಕೆ ಬೆಳೆಗಾರರು ಸದ್ಯದ ಪರಿಸ್ಥಿತಿಯಲ್ಲಿ ಅಳವಡಿಸಿಕೊಳ್ಳಬೇಕಾಗಿ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಳೆ ಬಂದಾಗ ಬಿದ್ದ ನೀರು ಸ್ವತಂತ್ರವಾಗಿ ಹರಿಯುವಂತಹ ಹಳ್ಳದ ಒತ್ತುವರಿಯನ್ನು ಎಲ್ಲರೂ ಸೇರಿ ಮುಕ್ತಗೊಳಿಸಬೇಕಾಗಿರುವುದು ಅನಿವಾರ್ಯ. ದುರದೃಷ್ಟಕರ ಸಂಗತಿ ಎಂದರೆ ಸರ್ಕಾರಿ ಹಳ್ಳಗಳು ಖಾತೆದಾರರ ಖಾತೆಗಳಲ್ಲಿ ಸೇರಿ ಹೋಗಿವೆ. ಈ ಪರಿಸ್ಥಿತಿಯಲ್ಲಿ ಹಳ್ಳಗಳನ್ನು ಮುಕ್ತಗೊಳಿಸುವುದು, ಅವುಗಳನ್ನು ಸ್ವತಂತ್ರಗೊಳಿಸುವುದು ಅವುಗಳು ಮುಕ್ತವಾಗಿ ಸಾಲು ಕೆರೆಗಳಿಗೆ ಹರಿಯುವಂತೆ ಅನುವು ಮಾಡಿಕೊಡುವುದು ಅಧಿಕಾರಿಗಳಿಗೂ ಕಷ್ಟಕರವಾದ ಪರಿಸ್ಥಿತಿ. ಆದರೂ ರೈತರೇ ಅರಿತುಕೊಂಡು ಕ್ರಮಕ್ಕೆ ಮುಂದಾಗುವುದು ವಾಸಿ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೋಡ್ಸೆಯನ್ನು ಉಳಿಸಿಕೊಳ್ಳಲು ಆತನ ಪೋಷಕರು ಆತನಿಗೆ ಹೆಣ್ಣುಡುಗೆ ತೊಡಿಸಿ ಹೆಣ್ಣಾಗಿ ಬೆಳೆಸಿದ್ದರಂತೆ

ಸತತ ಮೂರು ಗಂಡುಮಕ್ಕಳನ್ನು ಕಳೆದುಕೊಂಡು ಶಾಪಗ್ರಸ್ತರು ಎಂದು ತಿಳಿದಿದ್ದ ತಂದೆ ತಾಯಿಗೆ...

ಗದಗ | ಡೊನೇಷನ್ ಹಾವಳಿ ತಡೆಗಟ್ಟುವಂತೆ ಡಿವಿಪಿ ಆಗ್ರಹ

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದೆ. ಅಂತಹ ಸಂಸ್ಥೆಗಳ ವಿರುದ್ಧ...

ದಾವಣಗೆರೆ | ಅಂಜಲಿ ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಅಗ್ರಹ

ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿ ಅಂಬಿಗೇರಳನ್ನು ಮನೆಗೆ ನುಗ್ಗಿ ಕೊಲೆಮಾಡಿದ ಆರೋಪಿಗೆ ಗಲ್ಲು ಶಿಕ್ಷೆ...