ಕಳೆದ ಒಂದು ವರ್ಷದಿಂದ ಬ್ಯಾರಿ ಸಮುದಾಯದ ಸುಮಾರು 20ಕ್ಕೂ ಹೆಚ್ಚು ಬರಹಗಾರರ ಮಾರ್ಗದರ್ಶನ, ಸಹಕಾರ ಪಡೆದು ರಚಿಸಲಾದ ಕನ್ನಡ-ಬ್ಯಾರಿ ನಿಘಂಟಿನ ಮುದ್ರಣ ಪೂರ್ವ ಪ್ರತಿಯನ್ನು ಬ್ಯಾರಿ ಭಾಷಾ ತಜ್ಞರಾದ ಷಂಶುದ್ದೀನ್ ಮಡಿಕೇರಿ ಮತ್ತು ಅಬ್ದುಲ್ ರಹಿಮಾನ್ ಕುತ್ತೆತ್ತೂರು ಅವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಉಮರ್ ಯು.ಹೆಚ್. ಅವರಿಗೆ ಹಸ್ತಾಂತರಿಸಿದರು.
ಬ್ಯಾರಿ ಭಾಷೆಯನ್ನು ಅಧ್ಯಯನ ಮಾಡುವ ಸಂಶೋಧಕರು ಹಾಗೂ ಬ್ಯಾರಿ ಭಾಷೆಯಲ್ಲಿ ಬರೆಯುತ್ತಿರುವ ಸಾಹಿತಿಗಳು, ಬರಹಗಾರರು ಮತ್ತು ಕವಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಕನ್ನಡ-ಬ್ಯಾರಿ ನಿಘಂಟನ್ನು ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ಕೆ ಹಿರಿಯ ಸಾಹಿತಿಗಳು ಮತ್ತು ಬ್ಯಾರಿ ಭಾಷಾ ತಜ್ಞ ಶಂಷುದ್ದೀನ್ ಮಡಿಕೇರಿ ಹಾಗೂ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಒಳಗೊಂಡ ನಿಘಂಟು ರಚನಾ ಸಮಿತಿಯನ್ನೂ ಅಕಾಡಮಿ ನೇಮಕ ಮಾಡಿತ್ತು.
ಸುಮಾರು 22 ಸಾವಿರಕ್ಕೂ ಹೆಚ್ಚು ಪದಗಳನ್ನು ಒಳಗೊಂಡಿರುವ ಈ ನಿಘಂಟು ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ನಿಘಂಟನ್ನು ಡಿಜಿಟಲೀಕರಿಸುವ ಮತ್ತು ಗೂಗಲ್ ಭಾಷಾಂತರಕ್ಕೆ ಪ್ರಯತ್ನಿಸುವ ಯೋಜನೆಯೂ ಚಾಲ್ತಿಯಲ್ಲಿದೆ ಎಂದು ಅಕಾಡಮಿಯ ಪ್ರಕಟಣೆ ತಿಳಿಸಿದೆ.




