ಸಂದರ್ಶನ | ಸಡಿಲಗೊಂಡ ಪಿಎಫ್ ನಿಯಮ: ಕಾರ್ಮಿಕರ ಕೈಹಿಡಿಯುವುದೇ ಅಥವಾ ಭವಿಷ್ಯದ ಬುಡಕ್ಕೆ ಕೊಡಲಿಯೇ?

Date:

ತುರ್ತು ಸಂದರ್ಭಗಳಲ್ಲಿ ಪಿಎಫ್ ಹಣವನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಇಪಿಎಫ್‌ಒ ಸರಳಗೊಳಿಸಿರುವುದು ಕಾರ್ಮಿಕರಿಗೆ ತಕ್ಷಣದ ಆರ್ಥಿಕ ನೆರವು ನೀಡುತ್ತಿದೆ. ಆದರೆ, ಈ ನಿಯಮ ಸಡಿಲಿಕೆಯಿಂದ ಕಾರ್ಮಿಕರ ನಿವೃತ್ತಿ ಬದುಕಿನ ಭದ್ರತಾ ನಿಧಿ ಕರಗುವ ಅಪಾಯವಿದೆ ಎಂಬ ಆತಂಕವೂ ವ್ಯಕ್ತವಾಗಿದೆ. ಈ ಕುರಿತು ಕಾರ್ಮಿಕ ನಾಯಕಿ ಜ್ಯೋತಿ ಅನಂತಸುಬ್ಬರಾವ್ ಅವರೊಂದಿಗೆ ಈದಿನ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಕಾರ್ಮಿಕರ ನಿವೃತ್ತಿ ನಂತರದ ಜೀವನಕ್ಕೆ ಸಾಮಾಜಿಕ ಭದ್ರತೆ ಒದಗಿಸುವ ಪ್ರಮುಖ ವ್ಯವಸ್ಥೆ. ದಿನಗೂಲಿ, ಕನಿಷ್ಠ ವೇತನ ಅಥವಾ ಅಸ್ಥಿರ ಉದ್ಯೋಗದ ನಡುವೆ ಬದುಕು ಕಟ್ಟಿಕೊಳ್ಳುವ ಲಕ್ಷಾಂತರ ಕಾರ್ಮಿಕರಿಗೆ ಇಪಿಎಫ್ ಕೇವಲ ಬ್ಯಾಂಕ್ ಖಾತೆಯೊಂದರ ಮೊತ್ತವಲ್ಲ; ಅದು ಅನಿಶ್ಚಿತತೆಯ ನಡುವೆ ಇರುವ ಏಕೈಕ ಉಳಿತಾಯದ ಕವಚ. ಆದರೆ ತಾವು ದುಡಿದ ಹಣ ತಮಗೆ ಬೇಕಾದ ಕೈಗೆ ಸಿಗದಿರುವುದು ಕಾರ್ಮಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ತೀವ್ರ ಹೋರಾಟ, ಒತ್ತಡದ ನಡುವೆ ಪಿಎಫ್ ನಿಯಮ ಸಡಿಲಗೊಳಿಸಲಾಗಿದೆ.

- Advertisement -

ನವೆಂಬರ್ 19ರಂದು ನಡೆದ ಇಪಿಎಫ್‌ಒ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ (ಸಿಬಿಟಿ) 240ನೇ ಸಭೆಯಲ್ಲಿ ಪಿಎಫ್ ಹಿಂಪಡೆಯುವ ನಿಯಮಗಳನ್ನು ಮಹತ್ವದ ರೀತಿಯಲ್ಲಿ ಸಡಿಲಿಸಲಾಗಿದೆ. ಈಗ ಭಾಗಶಃ ಹಿಂಪಡೆಯುವಿಕೆ ವೇಳೆ ಖಾತೆಯಲ್ಲಿ ಕಾಯ್ದುಕೊಳ್ಳಬೇಕಾದ ಕನಿಷ್ಠ ಬ್ಯಾಲೆನ್ಸ್ ಮಿತಿಯನ್ನು ಶೇ. 25 ರಿಂದ ಶೇ. 10 ಕ್ಕೆ ಇಳಿಸಲಾಗಿದೆ. ಇದರಿಂದ ಸದಸ್ಯರು ಶೇ. 90 ರಷ್ಟು ಅರ್ಹ ಪಿಎಫ್ ಮೊತ್ತವನ್ನು ಹಿಂಪಡೆಯಲು ಅವಕಾಶ ಸಿಗಲಿದೆ. ಕೆಲಸ ಕಳೆದುಕೊಂಡ ನಂತರ ಪಿಎಫ್ ಅಂತಿಮ ಇತ್ಯರ್ಥಕ್ಕೆ ಇದ್ದ 12 ತಿಂಗಳ ಕಾಯುವ ಅವಧಿಯನ್ನು ಮತ್ತೆ 2 ತಿಂಗಳಿಗೆ ಇಳಿಸಲಾಗಿದೆ. ಆದರೆ ಪಿಂಚಣಿ ಹಿಂಪಡೆಯುವಿಕೆಯ ಕನಿಷ್ಠ 36 ತಿಂಗಳ ಕಾಯುವ ಅವಧಿಯಲ್ಲಿ ಬದಲಾವಣೆ ಇಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಾರ್ಪೊರೇಟ್ ತೆರಿಗೆ ಇಳಿಸಿ ವರ್ಷಗಳ ನಂತರ ಉದ್ಯಮಿಗಳಿಗೆ ಪ್ರಶ್ನೆಯೇ;...

​ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ ಸರ್ಕಾರಗಳು ನೀಡುವ ತೆರಿಗೆ ವಿನಾಯಿತಿಗಳ ಲಾಭವು ತಳಮಟ್ಟದ ಕಾರ್ಮಿಕರ ವೇತನ ಹೆಚ್ಚಳವಾಗಿ ಪರಿವರ್ತನೆಯಾಗದಿರುವುದು ಆರ್ಥಿಕ ನೀತಿ ನಿರೂಪಕರ ಮುಂದಿರುವ ದೊಡ್ಡ ಸವಾಲಾಗಿದೆ. ಫಿಕ್ಕಿ ವೇದಿಕೆಯಲ್ಲಿ ಪ್ರಧಾನಿಯವರು ಎತ್ತಿರುವ ಪ್ರಶ್ನೆಗಳು...

ಬರಗಾಲ | ಮಳೆಯ ಕೊರತೆಗೆ ಬತ್ತಿದ ಕಾಡಿನ ಕೆರೆಗಳು:...

ಮಳೆ ನಿಂತರೆ ಕೆರೆಗಳು ಬತ್ತುತ್ತವೆ, ಕೆರೆಗಳು ಬತ್ತಿದರೆ ಅಂತರ್ಜಲ ಕುಸಿಯುತ್ತದೆ, ಅಂತರ್ಜಲ ಕುಸಿದರೆ ಅರಣ್ಯದ ಜೀವನಾಡಿಗಳೇ ದುರ್ಬಲವಾಗುತ್ತವೆ. ಇದರ ಪರಿಣಾಮ ಮನುಷ್ಯರಿಗಷ್ಟೇ ಸೀಮಿತವಾಗುವುದಿಲ್ಲ. ಕಾಡಿನಲ್ಲಿರುವ ಆನೆ, ಹುಲಿ, ಚಿರತೆ, ಕಾಡೆಮ್ಮೆ, ಜಿಂಕೆ ಸೇರಿದಂತೆ...

ಕಡಲಿಗೆ ಲಕ್ಷಾಂತರ ಬಂಡವಾಳ, ಗಡಿಯಲ್ಲಿ ದಂಡ: ಕೇಳುವವರಿಲ್ಲ ಕರಾವಳಿ...

ಸಮುದ್ರದ ಅಲೆಗಳ ನಡುವೆ ಜೀವದ ಹಂಗು ತೊರೆದು, ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಮೀನುಗಾರಿಕೆಗೆ ತೆರಳುವ ಮೀನುಗಾರರ ಬದುಕು ಈಗ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಒಂದು ಕಡೆ ಸಮುದ್ರದ ಅಪಾಯ, ಮತ್ತೊಂದು ಕಡೆ...

ಒಂದು ಕಡೆ ಸಂಕಷ್ಟದ ಸಮಯದಲ್ಲಿ ಕಾರ್ಮಿಕರಿಗೆ ತಮ್ಮದೇ ಉಳಿತಾಯದ ಹಣ ಸುಲಭವಾಗಿ ಮತ್ತು ತ್ವರಿತವಾಗಿ ಕೈಸೇರುತ್ತಿರುವುದು ತಕ್ಷಣದ ಆರ್ಥಿಕ ನೆರವಿಗೆ ದಾರಿಯಾಗಿದೆ ಎಂಬ ಅಭಿಪ್ರಾಯವಿದೆ. ಮತ್ತೊಂದೆಡೆ, ಹಣ ಹಿಂಪಡೆಯುವ ನಿಯಮಗಳು ಸಡಿಲಗೊಂಡಷ್ಟೂ ನಿವೃತ್ತಿ ಕಾಲದ ಭದ್ರತಾ ನಿಧಿಯ ಗಾತ್ರ ಕುಗ್ಗುವ ಅಪಾಯವಿದೆ ಎಂಬ ಆತಂಕ ಕಾರ್ಮಿಕ ಸಂಘಟನೆಗಳು ಮತ್ತು ಸಾಮಾಜಿಕ ಭದ್ರತಾ ತಜ್ಞರಲ್ಲಿ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್ ನಿಯಮಗಳು ಗಾರ್ಮೆಂಟ್ ಕಾರ್ಮಿಕರಿಗೆ ಯಾಕೆ ಮಾರಕ?

ಪಿಎಫ್ ಖಾತೆಯಲ್ಲಿ ಹಣ ದೀರ್ಘಕಾಲ ಉಳಿಯುವುದರಿಂದ ಸಿಗುವ ಚಕ್ರಬಡ್ಡಿ ಲಾಭ ತಪ್ಪುವುದು, ಕಡಿಮೆ ವೇತನ ಪಡೆಯುವ ಗಾರ್ಮೆಂಟ್ಸ್ ಮತ್ತು ಅಸಂಘಟಿತ ವಲಯದ ಕಾರ್ಮಿಕರ ದೀರ್ಘಾವಧಿಯ ಉಳಿತಾಯ ಕರಗುವುದು ಹಾಗೂ ಕೆಲವು ಸಂದರ್ಭಗಳಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂಸ್ಥೆಗಳು ಕಾರ್ಮಿಕರ ಮೇಲೆ ಒತ್ತಡ ತರುವ ಸಾಧ್ಯತೆಗಳ ಬಗ್ಗೆಯೂ ಗಂಭೀರ ಪ್ರಶ್ನೆಗಳಿವೆ.

ಈ ಹಿನ್ನೆಲೆಯಲ್ಲಿ, ನಿಯಮಗಳ ಸಡಿಲಿಕೆಯಿಂದ ಕ್ಷೇತ್ರ ಮಟ್ಟದಲ್ಲಿ ಕಾರ್ಮಿಕರಿಗೆ ನಿಜವಾಗಿಯೂ ಎಷ್ಟು ಅನುಕೂಲವಾಗಿದೆ ಮತ್ತು ದೀರ್ಘಾವಧಿಯಲ್ಲಿ ಯಾವ ಬಗೆಯ ಅಪಾಯಗಳು ಎದುರಾಗಬಹುದು ಎಂಬುದರ ಬಗ್ಗೆ ಕಾರ್ಮಿಕ ನಾಯಕಿ, ಕೆಎಸ್ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷೆ ಜ್ಯೋತಿ ಅನಂತಸುಬ್ಬರಾವ್ ಅವರ ಜತೆ ಟೆಲಿಫೋನ್ ಸಂದರ್ಶನ ನಡೆಸಲಾಗಿದೆ. ಈ ಮೂಲಕ ಪಿಎಫ್ ನಿಯಮ ಸಡಿಲಿಕೆಯ ಪ್ರಾಯೋಗಿಕ ಪರಿಣಾಮ ಮತ್ತು ಕಾರ್ಮಿಕರ ಹಿತಾಸಕ್ತಿಯ ನಡುವಿನ ಸಮತೋಲನವನ್ನು ಓದುಗರಿಗೆ ಸ್ಪಷ್ಟವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.

ಪ್ರಶ್ನೆ 1: ಕೋವಿಡ್ ನಂತರದ ದಿನಗಳಲ್ಲಿ ಅಥವಾ ವೈದ್ಯಕೀಯ, ಶಿಕ್ಷಣ ಮತ್ತು ಮದುವೆಯಂತಹ ತುರ್ತು ಸಂದರ್ಭಗಳಲ್ಲಿ ಕಾರ್ಮಿಕರು ತಮ್ಮದೇ ಹಣವನ್ನು ಪಡೆಯಲು ಈ ಹಿಂದೆ ಸಾಕಷ್ಟು ಅಲೆದಾಡಬೇಕಿತ್ತು. ಈಗ ನಿಯಮಗಳನ್ನು ಸಡಿಲಿಸಿರುವುದರಿಂದ ಮತ್ತು ಆನ್‌ಲೈನ್ ಪ್ರಕ್ರಿಯೆ ಸರಳಗೊಳಿಸಿರುವುದರಿಂದ ಕಾರ್ಮಿಕರಿಗೆ ತಕ್ಷಣದ ಆರ್ಥಿಕ ಸಂಕಷ್ಟದಿಂದ ಪಾರಾಗಲು ಅನುಕೂಲ ಆಗಲಿದೆ ಅಲ್ವ? ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉತ್ತರ: ಇದು ಭ್ರಮೆಯಷ್ಟೇ. ಶಿಕ್ಷಣ, ಆರೋಗ್ಯ, ವಸತಿ ಹಾಗೂ ಜೀವನಾವಶ್ಯಕ ವಸ್ತುಗಳ ಮತ್ತು ಸೇವೆಗಳ ಖರ್ಚುವೆಚ್ಚಗಳು ದಿನೇದಿನೇ ಮುಗಿಲು ಮುಟ್ಟುತ್ತಿರುವಾಗ, ಕೇಂದ್ರ ಸರ್ಕಾರ ಜನಪರ ಕೆಲಸಗಳನ್ನು ಮಾಡುವ ಬದಲು ಕಾರ್ಮಿಕ ಕಾಯ್ದೆಗಳನ್ನು ಬದಲಾಯಿಸಿ, ಕಾರ್ಮಿಕ ವಿರೋಧಿ ಪಿಎಫ್ ಯೋಜನೆ ಜಾರಿಗೆ ತಂದಿದೆ. ಜನರ ಕೈಯಲ್ಲಿ ಎಷ್ಟು ಹಣವಿದ್ದರೂ ಸಾಲದೆಂಬ ಪರಿಸ್ಥಿತಿ ನಿರ್ಮಿಸಿದೆ. ಹೀಗಿರುವಾಗ ಕಾರ್ಮಿಕರ “ಭವಿಷ್ಯದ ನಿಧಿ”ಯಾದ ಪಿಎಫ್ ಹಣವನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಹೊಸ ನಿಯಮಗಳ ಮೂಲಕ ಅವರನ್ನು ಪ್ರಚೋದಿಸುತ್ತಿದೆ. ಕಾರ್ಮಿಕರಿಗೆ ಇದು ತಕ್ಷಣದಲ್ಲಿ ಅನುಕೂಲ ಎನಿಸಿದರೂ ನಿವೃತ್ತಿಯಾದಾಗ ಖಾಲಿ ಚೊಂಬೇ ಗತಿ!

ಪ್ರಶ್ನೆ 2: ದಾಖಲೆಗಳ ಪರಿಶೀಲನೆ ಮತ್ತು ಮಾಲೀಕರ ಅನುಮೋದನೆಯಂತಹ ತೊಡಕುಗಳನ್ನು ಕಡಿಮೆ ಮಾಡಿರುವುದರಿಂದ, ಕಚೇರಿಗಳಿಗೆ ಅಲೆಯುವುದು ಮತ್ತು ಮಧ್ಯವರ್ತಿಗಳ ಕಮಿಷನ್ ಹಾವಳಿಗೆ ಕಡಿವಾಣ ಬಿದ್ದಿದೆ ಎಂದು ನೀವು ಭಾವಿಸುತ್ತೀರಾ?

ಉತ್ತರ: ಇಂದಿನ ಸರ್ಕಾರಗಳೇ ಕಾರ್ಪೊರೇಟ್ ಕಂಪನಿಗಳ ಮತ್ತು ಬೃಹತ್ ಬಹುರಾಷ್ಟ್ರೀಯ ಕಂಪನಿಗಳ ಬೃಹತ್ ಕಮಿಷನ್ ಏಜೆಂಟ್ ರೀತಿಯಲ್ಲಿ ನಡೆದುಕೊಳ್ಳುತ್ತಿರುವಾಗ ಹಾಗೂ ಅವುಗಳ ಮಧ್ಯವರ್ತಿಗಳಾಗಿ ದುಡಿಯುವ ಜನತೆಯನ್ನು (ರೈತ-ಕಾರ್ಮಿಕರನ್ನು) ಸುಲಿಗೆ ಮಾಡುತ್ತಿರುವಾಗ, ಕಾರ್ಮಿಕರ ಬವಣೆಗಳಿಗಾಗಲೀ ಜನಸಾಮಾನ್ಯರ ಸಂಕಷ್ಟಗಳಿಗಾಗಲೀ ಯಾವುದೇ ಬಗೆಯ ಕಡಿವಾಣ ಬಿದ್ದಿಲ್ಲ. “ಗರಿಷ್ಟ ಆಡಳಿತ, ಕನಿಷ್ಟ ಸರ್ಕಾರ” ಎಂದು ತಮ್ಮ ಸರ್ಕಾರವನ್ನು ಬಣ್ಣಿಸಿಕೊಂಡು, “ನ ಖಾವೂಂಗಾ, ನ ಖಾನೆ ದೂಂಗಾ” ಎಂದು ಘೋಷಿಸಿದ್ದ ಪ್ರಧಾನಿ ಮೋದಿಯವರ ಆಡಳಿತದಲ್ಲಿ ಈಗ ಬ್ರಹ್ಮಾಂಡ ಭ್ರಷ್ಟಾಚಾರದ ಜೊತೆ ಆಧಾರ್ ಲಿಂಕ್ ಆಗದೆ ಸೌಲಭ್ಯದಿಂದ ವಂಚಿತರಾಗುತ್ತಿರುವುದನ್ನೂ ಕಾಣಬಹುದು.

ಇದನ್ನೂ ಓದಿ: ‘ವಂದೇ ಮಾತರಂ’ ವಿರೋಧಿಸಿದ ನಾಗಾ ಪಕ್ಷ ‘ದೇಶದ್ರೋಹಿ’ ಆಗಲ್ವಾ ಮೋದಿಯವರೇ, ಸುಮ್ಮನಿದ್ದೀರಲ್ಲಾ?

ಪ್ರಶ್ನೆ 3: ಪಿಎಫ್ ಎಂಬುದು ಕಾರ್ಮಿಕರ ಇಳಿ ವಯಸ್ಸಿನ ಆಸರೆಗಾಗಿ ಇರುವ ಸಾಮಾಜಿಕ ಭದ್ರತಾ ನಿಧಿ. ಹಣ ಹಿಂಪಡೆಯುವ ನಿಯಮಗಳನ್ನು ಸಡಿಲಗೊಳಿಸಿದರೆ, ಸಣ್ಣಪುಟ್ಟ ಕಾರಣಗಳಿಗೂ ಕಾರ್ಮಿಕರು ಪಿಎಫ್ ಹಣವನ್ನು ಖಾಲಿ ಮಾಡಿಕೊಳ್ಳುವ ಅಪಾಯವಿದೆ. ಇದರಿಂದ ಅವರ ನಿವೃತ್ತಿ ಜೀವನ ಅಭದ್ರವಾಗುವುದಿಲ್ಲವೇ?

ಉತ್ತರ: ಖಂಡಿತವಾಗಿಯೂ ಹೌದು. ಸಾಮಾಜಿಕ ಭದ್ರತೆಯಾದ ಪಿಂಚಣಿಯೂ ಇಲ್ಲದ ಕಾರ್ಮಿಕರಿಗೆ ಪಿಎಫ್ ಯೋಜನೆಯ ಹೊಸ ನಿಯಮಗಳು ಮಾರಕವೇ ಹೌದು. ಬದುಕಿನುದ್ದಕ್ಕೂ ಬೆವರು ಬಸಿದು ದುಡಿದು ಜೀವನದ ಸಂಧ್ಯಾಕಾಲದಲ್ಲಿ ನೆಮ್ಮದಿಯಿಂದ ಸ್ವಾವಲಂಬಿಗಳಾಗಿರಲು ಪಿಎಫ್ ಇಡುಗಂಟು ಅನುಕೂಲವಾಗುತ್ತಿತ್ತು. ಪಿಎಫ್, ಇಎಸ್ಐ, ಗ್ರಾಚ್ಯುಟಿ, ಮೊದಲಾದವು ಕಾರ್ಮಿಕರ ಸಂಘಟಿತ ಹೋರಾಟದ ಫಲವಾಗಿ ಲಭಿಸಿದ ಹಕ್ಕುಗಳು ಮತ್ತು ಸೌಲಭ್ಯಗಳಾಗಿವೆ. ಆದರೆ ಕೇಂದ್ರ ಸರ್ಕಾರ ತನ್ನ ಕಾರ್ಪೊರೇಟ್ ಮಿತ್ರರ ಬಂಡವಾಳದ ಬೆಳವಣಿಗೆಗೋಸ್ಕರ ಕಾರ್ಮಿಕರ ಹಕ್ಕುಗಳನ್ನು, ದುಡಿಯುವ ಜನರ ಬದುಕನ್ನು ಪಣಕ್ಕಿಟ್ಟಿದೆ.

ಪ್ರಶ್ನೆ 4: ಪಿಎಫ್ ಖಾತೆಯಲ್ಲಿ ಹಣ ದೀರ್ಘಕಾಲ ಉಳಿದರೆ ಮಾತ್ರ ಬಡ್ಡಿಯ ಲಾಭ ಸಿಗುತ್ತದೆ. ಈಗ ಸುಲಭವಾಗಿ ಹಣ ತೆಗೆಯಲು ಅವಕಾಶ ನೀಡಿರುವುದರಿಂದ, ಕಾರ್ಮಿಕರು ದೀರ್ಘಾವಧಿಯ ದೊಡ್ಡ ಮೊತ್ತದ ಉಳಿತಾಯದಿಂದ ವಂಚಿತರಾಗುತ್ತಿದ್ದಾರೆ ಎನಿಸುವುದಿಲ್ಲವೇ?

ಉತ್ತರ: ಹೌದು, ಕಾರ್ಮಿಕರ ವೇತನದಿಂದ ಅವರ ಪಾಲನ್ನು ಕಡಿತಗೊಳಿಸಿ, ಅದಕ್ಕೆ ಮಾಲೀಕರು ತಮ್ಮ ಪಾಲಿನ ಮೊತ್ತವನ್ನು ಸೇರಿಸಿ ಇಪಿಎಫ್ಒ ದಲ್ಲಿರುವ ಕಾರ್ಮಿಕರ ಪಿಎಫ್ ಖಾತೆಗೆ ಪಾವತಿಸಬೇಕು. ಒಟ್ಟುಗೂಡಿದ ಈ ಮೊತ್ತದ ಮೇಲೆ ಪ್ರತಿ ವರ್ಷ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಪಿಎಫ್ಒ ಧರ್ಮದರ್ಶಿಗಳ ಮಂಡಳಿ ತಾನು ಘೋಷಿಸುವ ಬಡ್ಡಿ ದರವನ್ನು ಪಾವತಿಸಲಾಗುವುದು. ಇದು ಕಾರ್ಮಿಕರ ಪಿಎಫ್ ಖಾತೆಗಳಲ್ಲಿ ಉಳಿದಿರುವ ಮೊತ್ತದ ಮೇಲೆ ಚಕ್ರ ಬಡ್ಡಿಯಾಗಿ ವರ್ಷಕ್ಕೊಮ್ಮೆ ಜಮೆ ಮಾಡಲಾಗುವುದು. ಖಾತೆಯಲ್ಲಿ ಹಣವಿಲ್ಲದಿದ್ದರೆ ಬಡ್ಡಿ ಜಮೆಯಾಗುವುದು ಕಡಿಮೆಯಾಗುತ್ತದೆ. ಹಾಗಾಗಿ ಪಿಎಫ್ ಖಾತೆಯಲ್ಲಿ ದೀರ್ಘಕಾಲ ಹಣ ಉಳಿಸಿಕೊಂಡರೆ ಕಾರ್ಮಿಕರಿಗೆ ಹೆಚ್ಚು ಲಾಭ ದೊರಕುತ್ತದೆ. ಅವರ ನಿವೃತ್ತಿ ಜೀವನ ಅಥವಾ ಅಕಾಲಿಕ ಮರಣದ ಸಂದರ್ಭದಲ್ಲಿ ಪಿಎಫ್ ಹಣ ನೆರವಿಗೆ ಬರುತ್ತದೆ. ಕಾರ್ಮಿಕರು ತೀರಾ ಅನಿವಾರ್ಯವಾದಾಗ ಮಾತ್ರ ಕಷ್ಟಕಾಲದಲ್ಲಿ ಸಾಲ ಪಡೆಯುವುದು ಸೂಕ್ತ. ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾದ ಇಪಿಎಫ್ಒ ಕೂಡಾ ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಅಪಾಯದಲ್ಲಿದೆ. ಆದರೆ ಈಗ ಇಪಿಎಫ್ ಯೋಜನೆ – 2026 ರನ್ವಯ ಉದ್ಯೋಗಿ ಮತ್ತು ಉದ್ಯೋಗದಾತರ ವಂತಿಕೆ ಸೇರಿ ಕಾರ್ಮಿಕ ತನ್ನ ಪಿಎಫ್ ಖಾತೆಯಲ್ಲಿರುವ ಹಣದ ಶೇ.75 ರವರೆಗೆ ಮುಂಗಡವಾಗಿ ಪಡೆಯಬಹುದು. ಹಾಗೂ ಹಿಂದಿರುಗಿಸುವ ಮುಂಗಡ ಸೌಲಭ್ಯವನ್ನು (Refundable Advance) ರದ್ದುಪಡಿಸಲಾಗಿದೆ. ಇದರಿಂದಾಗಿ ಕಾರ್ಮಿಕರ ಪಿಎಫ್ ಹಣ ನಿವೃತ್ತಿಯ ಮೊದಲೇ ಖಾಲಿಯಾಗುವುದು ಖಂಡಿತ.

ಪ್ರಶ್ನೆ 5: ಕೆಲವು ಖಾಸಗಿ ವಲಯಗಳಲ್ಲಿ, ವಿಶೇಷವಾಗಿ ಗಾರ್ಮೆಂಟ್ಸ್ ಮತ್ತು ಅಸಂಘಟಿತ ವಲಯದ ಕಂಪನಿಗಳಲ್ಲಿ ಆರ್ಥಿಕ ಮುಗ್ಗಟ್ಟು ಎದುರಾದಾಗ, ಮಾಲೀಕರೇ ಕಾರ್ಮಿಕರ ಮೇಲೆ ಒತ್ತಡ ಹೇರಿ ಪಿಎಫ್ ಹಣ ತೆಗೆಸುವ ಅಥವಾ ವೇತನದ ಬದಲು ಪಿಎಫ್ ಬಳಸಿಕೊಳ್ಳುವಂತಹ ದುರುಪಯೋಗ ನಡೆಯುವ ಸಾಧ್ಯತೆಗಳಿವೆ ಅನಿಸುತ್ತದೆಯೇ?

ಉತ್ತರ: ಹೌದು, ಹೆಸರೇ ಹೇಳುವಂತೆ ಅಸಂಘಟಿತ ವಲಯ ಎಂದ ಮೇಲೆ ಅಲ್ಲಿ ದುಡಿಯುವ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಇಲ್ಲದಿರುವ ಕಾರಣ ಅವರಿಗೆ ಈ ವ್ಯವಸ್ಥೆಯಲ್ಲಿ ಅನ್ಯಾಯದ ವಿರುದ್ಧ ದನಿ ಎತ್ತುವುದು ಕಷ್ಟವೇ. ಮಾಲೀಕರಿಗೆ ಕಾರ್ಮಿಕರ ಪಿಎಫ್ ಹಣವನ್ನು ದುರ್ಬಳಕೆ ಮಾಡಿಕೊಳ್ಳಲು ಅಥವಾ ಕಾರ್ಮಿಕರ ವೇತನದಿಂದ ಕಡಿತಗೊಳಿಸಿರುವ ವಂತಿಕೆಯನ್ನು ಇಪಿಎಫ್ಒ ಗೆ ಕಟ್ಟದೇ ಅವರನ್ನು ವಂಚಿಸಲು ಆರ್ಥಿಕ ಮುಗ್ಗಟ್ಟು ಎದುರಾಗಬೇಕು ಎಂದೇ ಇಲ್ಲ. ಕಾರ್ಮಿಕರ ಅಸಹಾಯಕತೆ, ಮುಗ್ಧತೆ, ಭಯ, ಕೆಲಸದ ಒತ್ತಡ, ಸಂಬಂಧಪಟ್ಟ ಅಧಿಕಾರಿಗಳ ಅಲಕ್ಷ್ಯ ಮತ್ತು ಭ್ರಷ್ಟಾಚಾರ – ಇವೆಲ್ಲವೂ ಕಾರ್ಮಿಕರು ನ್ಯಾಯಯುತವಾಗಿ ಪಡೆಯಬೇಕಾದ ಪಿಎಫ್ ಹಣದಿಂದ ವಂಚಿತರಾಗಲು ಕಾರಣವಾಗುತ್ತಿವೆ. ಇದು ಕೆಲವು ಖಾಸಗಿ ವಲಯಗಳಿಗೂ ಅನ್ವಯವಾಗುತ್ತದೆ.

ಪ್ರಶ್ನೆ 6: ಪದೇ ಪದೇ ಪಿಎಫ್ ಹಣವನ್ನು ಭಾಗಶಃ ಹಿಂಪಡೆಯುವುದರಿಂದ ಅಥವಾ ನಿಯಮ ಸಡಿಲಿಕೆಯಿಂದ, ಮುಂದೆ ಕಾರ್ಮಿಕರಿಗೆ ಸಿಗಬೇಕಾದ ಮಾಸಿಕ ಪಿಂಚಣಿ (EPS) ಮೊತ್ತದ ಮೇಲೆ ಯಾವ ರೀತಿಯ ವ್ಯತಿರಿಕ್ತ ಪರಿಣಾಮ ಬೀರಬಹುದು?

ಉತ್ತರ: ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಅಧಿಸೂಚನೆಯಂತೆ ಕಾರ್ಮಿಕರ ಕುಟುಂಬ ಪಿಂಚಣಿ ವೇತನದ ಗರಿಷ್ಠ ಮಿತಿಯನ್ನು (ಮೂಲವೇತನ ಮತ್ತು ತುಟ್ಟಿಭತ್ಯೆ ಸೇರಿದಂತೆ) ರೂ. 15,000/- ಗಳಿಂದ ರೂ. 25,000/-ಗಳಿಗೆ ಏರಿಸಲಾಗಿದೆ. ಅಂದರೆ ಈಗ ರೂ. 25,000/- ದ ವರೆಗೆ ವೇತನ ಗಳಿಸುವ ಕಾರ್ಮಿಕರೂ ಸಹ ಇಪಿಎಸ್ ಯೋಜನೆಯಡಿ ಸೇರುತ್ತಾರೆ. ಮಾಲೀಕರ ಪಿಎಫ್ ವಂತಿಕೆ ಶೇ.12 ರಲ್ಲಿ ಶೇ. 8.33 ರಷ್ಟು ಪಾಲು ಕುಟುಂಬ ಪಿಂಚಣಿಗೆ ಪಾವತಿಯಾಗುತ್ತದೆ. ಉದ್ಯೋಗದಾತರ ಪಾಲಿನಲ್ಲಿ ಉಳಿದ ಶೇ. 3.67 ರಷ್ಟು ಪಿಎಫ್ ಪಿಂಚಣಿ ಖಾತೆಗೆ ಜಮಾ ಮಾಡಲಾಗುವುದು. ಹಾಗೂ ಕಾರ್ಮಿಕರ ಮೂಲ ವೇತನ ಮತ್ತು ತುಟ್ಟಿ ಭತ್ಯೆ ಸೇರಿಸಿದ ಶೇ. 1.6 ರಷ್ಟು ಕೇಂದ್ರ ಸರ್ಕಾರ ನೀಡಬೇಕು. ಆದ್ದರಿಂದ ಪಿಎಫ್ ಉಳಿತಾಯದ ಹಣಕ್ಕೂ ಮಾಸಿಕ ಪಿಂಚಣಿಗೂ ನೇರವಾದ ಸಂಬಂಧವಿಲ್ಲ. ಪಿಎಫ್ ಸಂಬಂಧಿತ ಪಿಂಚಣಿ ಪಡೆಯುವಾಗ ಕಾರ್ಮಿಕರ ಸೇವಾವಧಿ ಮತ್ತು ತುಟ್ಟಿ ಭತ್ಯೆ ಸೇರಿದ ಮೂಲ ವೇತನ ಹೆಚ್ಚಿನ ಪರಿಣಾಮ ಬೀರುತ್ತದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿರಿಯೂರು ಕ್ಷೇತ್ರದ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ. ಹೆಚ್ಚಿನ ಅನುದಾನ: ಸಿಎಂ ಡಿ ಕೆ ಶಿವಕುಮಾರ್

"ಹಿರಿಯೂರು ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ 2 ಸಾವಿರ ಕೋಟಿಗೂ ಹೆಚ್ಚಿನ ಅನುದಾನವನ್ನ...

ಕಾರ್ಪೊರೇಟ್ ತೆರಿಗೆ ಇಳಿಸಿ ವರ್ಷಗಳ ನಂತರ ಉದ್ಯಮಿಗಳಿಗೆ ಪ್ರಶ್ನೆಯೇ; ಸರ್ಕಾರದ ನೀತಿಯ ಲಾಭ ಶ್ರಮಿಕರಿಗೆ ತಲುಪಿದ್ದೆಷ್ಟು ಮೋದಿಜಿ?

​ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ ಸರ್ಕಾರಗಳು ನೀಡುವ ತೆರಿಗೆ ವಿನಾಯಿತಿಗಳ ಲಾಭವು ತಳಮಟ್ಟದ...

ವಿಜಯಪುರ | ಅಂತರಶಾಲಾ ಕ್ರೀಡಾಕೂಟ ಸಮಾರೋಪ: ವಿಜೇತ ತಂಡಗಳ ಪಟ್ಟಿ ಪ್ರಕಟ

ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ.ಎಂ ಪಾಟೀಲ ಪಬ್ಲಿಕ್(ಸಿ.ಬಿ.ಎಸ್.ಇ) ಶಾಲೆಯಲ್ಲಿ...

ST ಪಟ್ಟಿಗೆ ಕಾಡುಗೊಲ್ಲ ಸಮುದಾಯ: CMDR ಮೂಲಕ ಹೊಸ ಕುಲಶಾಸ್ತ್ರೀಯ ಅಧ್ಯಯನಕ್ಕೆ ಸಂಪುಟ ಅಸ್ತು!

ಕಾಡುಗೊಲ್ಲ ಮತ್ತು ಹಟ್ಟಿಗೊಲ್ಲ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂಬ...