“ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಕುರಿತು ಉಡುಪಿ ಜಿಲ್ಲಾ ಬಿಜೆಪಿ ಶಾಸಕರ ಹೇಳಿಕೆ ಬಾಲಿಶತನದಿಂದ ಕೂಡಿದ್ದು, ಸರಕಾರದ ಯೋಜನೆಗಳು ಬಡವರ್ಗದ ಜನರನ್ನು ತಲುಪುವುದನ್ನು ಸಹಿಸಲಾಗದೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಕೆಪಿಸಿಸಿ ಕಾರ್ಯಧ್ಯಕ್ಷರು ಹಾಗೂ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಮಂಜುನಾಥ ಭಂಡಾರಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ ಮತ್ತು ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸುವ ನಿಟ್ಟಿನಲ್ಲಿ ನ.24ರಂದು ಜಿಲ್ಲಾ ‘ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮಾಹಿತಿ ಕಾರ್ಯಾಗಾರ ಹಾಗೂ ಫಲಾನುಭವಿಗಳ ಸಂಭ್ರಮೋತ್ಸವ’ ಉಡುಪಿಯಲ್ಲಿ ನಡೆಯಲಿದೆ. ಇದರಲ್ಲಿ ಫಲಾನುಭವಿಗಳು ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳಬೇಕು” ಎಂದು ಮಂಜುನಾಥ್ ಬಂಡಾರಿ ಕರೆ ನೀಡಿದ್ದಾರೆ.
“ರಾಜ್ಯ ಸರಕಾರದ ಐದು ಯೋಜನೆಗಳ ಫಲಾನುಭವಿಗಳನ್ನು ಒಂದೇ ವೇದಿಕೆಯಡಿ ಸೇರಿಸಿ, ಯೋಜನೆಗಳ ಮಾಹಿತಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಹೀಗಿರುವಾಗ ಇದಕ್ಕೆ ಗ್ರಾಮ ಪಂಚಾಯತ್ ಗಳ ತೆರಿಗೆಯ ಹಣ ಬಳಸಲಾಗುತ್ತಿದೆ ಎಂದು ಉಡುಪಿ ಜಿಲ್ಲೆಯ ಶಾಸಕರುಗಳು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವುದು ಅವರ ಅಲ್ಪಜ್ಞಾನಕ್ಕೆ ಉದಾಹರಣೆಯಾಗಿದೆ” ಎಂದರು.
“ಮತದಾರರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಹೇಳಿಕೆ ಕೊಡುತ್ತಿರುವ ಉಡುಪಿ ಜಿಲ್ಲಾ ಬಿಜೆಪಿ ನಾಯಕರುಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲವಾಗಿದೆ. ಗ್ಯಾರಂಟಿ ಸಮಾವೇಶದಿಂದ ಗ್ರಾಮ ಪಂಚಾಯತ್ ಗಳು ದಿವಾಳಿಯಾಗುತ್ತದೆ ಎನ್ನುವ ಮಾತು ಮೂರ್ಖತನದಿಂದ ಕೂಡಿದೆ ” ಎಂದು ಮಂಜುನಾಥ ಭಂಡಾರಿ ಅವರು ಆರೋಪಿಸಿದ್ದಾರೆ.




