ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ಅವರ ಸಹೋದರಿ, ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ (APCC) ಅಧ್ಯಕ್ಷೆ ವೈ.ಎಸ್. ಶರ್ಮಿಳಾ ನಡುವಿನ ಆಸ್ತಿ ವಿವಾದ ಮತ್ತೊಮ್ಮೆ ಬೀದಿಗೆ ಬಂದಿದೆ. ಬೆಂಗಳೂರಿನ ಯಲಹಂಕದಲ್ಲಿರುವ ಕುಟುಂಬದ ಐಷಾರಾಮಿ ಬಂಗಲೆ ‘ಯಲಹಂಕ ಪ್ಯಾಲೇಸ್’ಗೆ ಭೇಟಿ ನೀಡಲು ಮುಂದಾದ ಶರ್ಮಿಳಾ ಮತ್ತು ಅವರ ತಾಯಿ ವೈ.ಎಸ್. ವಿಜಯಮ್ಮ ಅವರನ್ನು ಕರ್ನಾಟಕ ಪೊಲೀಸರು ಭಾನುವಾರ ಸಂಜೆ ತಡೆದಿದ್ದು, ಸ್ಥಳದಲ್ಲಿ ಕೆಲಕಾಲ ಹೈಡ್ರಾಮಾ ಸೃಷ್ಟಿಯಾಯಿತು.
ಭಾನುವಾರ ಸಂಜೆ ಹೈದರಾಬಾದ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಶರ್ಮಿಳಾ, ತಾಯಿ ವಿಜಯಮ್ಮ, ಪುತ್ರ ರಾಜಾ ರೆಡ್ಡಿ ಹಾಗೂ ಸೊಸೆ ಪ್ರಿಯಾ ಅಟ್ಲೂರಿ ಅವರೊಂದಿಗೆ ಯಲಹಂಕ ಬಂಗಲೆಯತ್ತ ಪ್ರಯಾಣ ಬೆಳೆಸಿದ್ದರು. ಆದರೆ, ಯಲಹಂಕದ ಏರ್ ಫೋರ್ಸ್ ಸ್ಟೇಷನ್ ಕ್ರಾಸ್ ಬಳಿ ಅವರ ಬೆಂಗಾವಲು ವಾಹನಗಳನ್ನು ತಡೆದ ಪೊಲೀಸರು, ಬಂಗಲೆಯೊಳಗೆ ಪ್ರವೇಶಿಸಲು ಅನುಮತಿ ನಿರಾಕರಿಸಿದರು.
ಇದರಿಂದ ಕೆರಳಿದ ಶರ್ಮಿಳಾ, ಸುಮಾರು 20 ನಿಮಿಷಗಳ ಕಾಲ ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆಸಿದರು. “ಇದು ನಮ್ಮ ಕುಟುಂಬದ ಆಸ್ತಿ. ನಮ್ಮದೇ ಮನೆಗೆ ನಾವು ಹೋಗುವುದರಲ್ಲಿ ತಪ್ಪೇನಿದೆ? ನನ್ನನ್ನು ಏಕೆ ತಡೆಯುತ್ತಿದ್ದೀರಿ?” ಎಂದು ಅವರು ಪೊಲೀಸರನ್ನು ಪ್ರಶ್ನಿಸಿದರು. ಈ ವಾಗ್ವಾದದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
BENGALURU POLICE STOP YS SHARMILA FROM HEADING TO FAMILY HOME
Police stopped Andhra Pradesh Congress chief YS Sharmila and her mother from proceeding to her family home in Yelahanka, citing a court order restricting her entry
Sharmila claims the bungalow is ancestral property… pic.twitter.com/ZyuZtkODyi— Nabila Jamal (@nabilajamal_) November 22, 2026
ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ. ಮಿಥುನ್ ಕುಮಾರ್, “ವಿವಾದಿತ ಆಸ್ತಿಗೆ ಶರ್ಮಿಳಾ ಅವರು ಭೇಟಿ ನೀಡದಂತೆ ನ್ಯಾಯಾಲಯದ ತಡೆಯಾಜ್ಞೆ ಇದೆ. ಆ ಆದೇಶದ ಪ್ರತಿಯನ್ನು ಅವರಿಗೆ ತೋರಿಸಿದ ಬಳಿಕ ಅವರು ಸ್ಥಳದಿಂದ ತೆರಳಿದರು” ಎಂದು ಸ್ಪಷ್ಟಪಡಿಸಿದ್ದಾರೆ.
ದೇವನಹಳ್ಳಿಯ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು ನವೆಂಬರ್ 21ರಂದು ಈ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸದರಿ ಆಸ್ತಿಯು ಲೀಸ್ ಒಪ್ಪಂದದ ಅಡಿಯಲ್ಲಿ ತಮ್ಮ ಕಾನೂನುಬದ್ಧ ಸ್ವಾಧೀನದಲ್ಲಿದೆ ಎಂದು ‘ಸಿಲಿಕಾನ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಶರ್ಮಿಳಾ, ಅವರ ಕುಟುಂಬಸ್ಥರು ಅಥವಾ ಪ್ರತಿನಿಧಿಗಳು ಆಸ್ತಿಯ ಸ್ವಾಧೀನಕ್ಕೆ ಅಡ್ಡಿಪಡಿಸದಂತೆ ನಿರ್ಬಂಧ ಹೇರಿದೆ.
ನ್ಯಾಯಾಲಯದ ಆದೇಶದ ಕುರಿತು ಪ್ರತಿಕ್ರಿಯಿಸಿರುವ ಶರ್ಮಿಳಾ, “ಪೊಲೀಸರು ಯಾವುದೋ ಕೋರ್ಟ್ ಆದೇಶದ ಬಗ್ಗೆ ಹೇಳುತ್ತಿದ್ದಾರೆ. ಆದರೆ ಆ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ, ನನಗೂ ಆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅರ್ಜಿ ಸಲ್ಲಿಸಿದವರು ಯಾರು ಮತ್ತು ಅವರಿಗೂ ಯಲಹಂಕದ ಮನೆಗೂ ಏನು ಸಂಬಂಧ ಎಂಬುದೇ ನನಗೆ ತಿಳಿದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಮುಂದೆ ಹೋಗಲು ಬಿಡದ ಕಾರಣ, ಶರ್ಮಿಳಾ ಮತ್ತು ಅವರ ತಾಯಿ ನಗರದ ಖಾಸಗಿ ಹೋಟೆಲ್‌ವೊಂದಕ್ಕೆ ತೆರಳಿದರು.
ಅಕ್ಟೋಬರ್ 25ರಂದು ನಿಶ್ಚಿತಾರ್ಥ ಮಾಡಿಕೊಂಡಿರುವ ತಮ್ಮ ಪುತ್ರಿ ಅಂಜಲಿ ಅವರ ವಿವಾಹ ಮತ್ತು ಆರತಕ್ಷತೆಯನ್ನು ಯಲಹಂಕ ಬಂಗಲೆಯಲ್ಲಿ ನಡೆಸಲು ಅನುಮತಿ ನೀಡುವಂತೆ ಶರ್ಮಿಳಾ ಕಳೆದ ತಿಂಗಳು ಸಹೋದರ ಜಗನ್ ಅವರಿಗೆ ಪತ್ರ ಬರೆದಿದ್ದರು. ಆದರೆ, ಭದ್ರತೆ ಮತ್ತು ಖಾಸಗಿತನದ ಕಾರಣ ನೀಡಿ ಜಗನ್ ಅನುಮತಿ ನಿರಾಕರಿಸಿದ್ದರು. “ನನ್ನ ಸ್ವಂತ ಹೆಣ್ಣುಮಕ್ಕಳ ಮದುವೆಯನ್ನೂ ನಾನು ಅಲ್ಲಿ ಮಾಡುವುದಿಲ್ಲ. ನಾನು ಇಲ್ಲದ ಸಮಯದಲ್ಲಿ ಅಲ್ಲಿ ಹೆಚ್ಚಿನ ಭದ್ರತೆ ಇರುವುದಿಲ್ಲ, ಹೊರಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರೆ ಕುಟುಂಬದ ಭದ್ರತೆಗೆ ಧಕ್ಕೆಯಾಗುತ್ತದೆ” ಎಂದು ಜಗನ್ ಉತ್ತರಿಸಿದ್ದರು.
2021ರಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ (YSRCP) ದೂರ ಸರಿದು, ನಂತರ ಕಾಂಗ್ರೆಸ್ ಸೇರಿದಾಗಿನಿಂದಲೂ ಜಗನ್ ಮತ್ತು ಶರ್ಮಿಳಾ ನಡುವೆ ರಾಜಕೀಯ ಹಾಗೂ ಆಸ್ತಿ ಹಂಚಿಕೆ ವಿಚಾರದಲ್ಲಿ ಸಂಘರ್ಷ ನಡೆಯುತ್ತಿದೆ. ಸರಸ್ವತಿ ಪವರ್ ಅಂಡ್ ಇಂಡಸ್ಟ್ರೀಸ್ ಸೇರಿದಂತೆ ತಂದೆ ವೈ.ಎಸ್. ರಾಜಶೇಖರ ರೆಡ್ಡಿ ಅವರ ಪಿತ್ರಾರ್ಜಿತ ಆಸ್ತಿಗಳನ್ನು ಜಗನ್ ಏಕಪಕ್ಷೀಯವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ ಎಂಬುದು ಶರ್ಮಿಳಾ ಅವರ ಆರೋಪವಾಗಿದೆ. ಯಲಹಂಕ ಬಂಗಲೆ ತಮ್ಮ ಅತ್ತೆಯ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಜಗನ್ ಹೇಳುತ್ತಿದ್ದರೆ, ಅದು ಕುಟುಂಬದ ಪಿತ್ರಾರ್ಜಿತ ಆಸ್ತಿಯಾಗಿದ್ದು ತಮಗೂ ಅದರಲ್ಲಿ ಪಾಲಿದೆ ಎಂದು ಶರ್ಮಿಳಾ ಪ್ರತಿಪಾದಿಸುತ್ತಿದ್ದಾರೆ.


