ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ವತಿಯಿಂದ ವಾರ್ಷಿಕ ಪವಿತ್ರ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವವು ಭಾನುವಾರ ಭಕ್ತಿಭಾವದಿಂದ ನಡೆಯಿತು.
ಕಲ್ಯಾಣಪುರದ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ನಡೆದ ವಿಶೇಷ ಬಲಿಪೂಜೆಯ ನೇತೃತ್ವವನ್ನು ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ವಹಿಸಿದ್ದರು. ಬಲಿಪೂಜೆಯ ಬಳಿಕ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಿಂದ ಸಂತೆಕಟ್ಟೆಯ ಮೌಂಟ್ ರೋಸರಿ ಚರ್ಚ್‌ವರೆಗೆ ಪವಿತ್ರ ಪರಮ ಪ್ರಸಾದವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಸಾರ್ವಜನಿಕ ಗೌರವ ಸಲ್ಲಿಸಲಾಯಿತು.
ಮೆರವಣಿಗೆಯಲ್ಲಿ ಮೂರು ಸಾವಿರಕ್ಕೂ ಅಧಿಕ ಕ್ರೈಸ್ತ ವಿಶ್ವಾಸಿಗಳು, 70ಕ್ಕೂ ಅಧಿಕ ಧರ್ಮಗುರುಗಳು ಹಾಗೂ 200ಕ್ಕೂ ಅಧಿಕ ಧರ್ಮಭಗಿನಿಯರು ಭಾಗವಹಿಸಿದ್ದರು. ವಿಶೇಷವಾಗಿ ಅಲಂಕರಿಸಲಾದ ವಾಹನದಲ್ಲಿ ಪವಿತ್ರ ಪರಮ ಪ್ರಸಾದವನ್ನು ಇರಿಸಿ, ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ಮೆರವಣಿಗೆಯಲ್ಲಿ ಸಾಗಿದರು.
ಈ ಸಂದರ್ಭದಲ್ಲಿ ಪ್ರವಚನ ನೀಡಿದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು, ಹಸಿದವರಿಗೆ ಅನ್ನ ನೀಡುವುದು, ನೊಂದವರಿಗೆ ಸಾಂತ್ವನ ಹೇಳುವುದು ಕೇವಲ ಸಹಾಯವಲ್ಲ; ಅದು ನೇರವಾಗಿ ದೇವರಿಗೆ ಸಲ್ಲಿಸುವ ಪೂಜೆಯಾಗಿದೆ. ಕಷ್ಟದಲ್ಲಿರುವವರಿಗೆ ದಯೆ ತೋರದಿದ್ದರೆ ನಾವು ಮಾಡುವ ಯಾವುದೇ ಪೂಜೆ, ಪುನಸ್ಕಾರಗಳಿಗೆ ಅರ್ಥವಿರುವುದಿಲ್ಲ. ಅಸಹಾಯಕರ ಕಣ್ಣೀರು ಒರೆಸುವುದರಿಂದ ದೊರೆಯುವ ಆತ್ಮತೃಪ್ತಿ ಮತ್ತು ದೇವರ ಆಶೀರ್ವಾದ ಶಾಶ್ವತವಾಗಿರುತ್ತದೆ ಎಂದರು.
ಪರಮ ಪವಿತ್ರ ಪ್ರಸಾದದ ಮೂಲಕ ಜಗತ್ತಿನ ಜ್ಯೋತಿಯಾಗಲು ಶಕ್ತಿ ದೊರೆಯುತ್ತದೆ. ಜೀವನದ ಪ್ರತಿಯೊಂದು ಹಂತದಲ್ಲೂ ಕ್ರಿಸ್ತನ ಪ್ರೀತಿಯನ್ನು ಪ್ರತಿಬಿಂಬಿಸಲು ಇದು ಪ್ರೇರಣೆ ನೀಡುತ್ತದೆ. ಪ್ರೀತಿ ಮತ್ತು ಸೇವೆ ಕ್ರೈಸ್ತ ಧರ್ಮದ ಮೂಲ ತತ್ವಗಳಾಗಿದ್ದು, ಅವುಗಳನ್ನು ನೆರೆಹೊರೆಯವರಲ್ಲಿ ತೋರ್ಪಡಿಸಲು ಹಿಂಜರಿಯಬಾರದು. ಕ್ಷಮೆ, ಪ್ರೀತಿ ಮತ್ತು ಸೇವೆಯ ಮೂಲಕ ದೈವ ಸಾಮ್ರಾಜ್ಯವನ್ನು ನಿರ್ಮಿಸಲು ಪ್ರತಿಯೊಬ್ಬರೂ ಪಣತೊಡಬೇಕು ಎಂದು ಕರೆ ನೀಡಿದರು.
ಪರಮ ಪ್ರಸಾದದ ಮೆರವಣಿಗೆಯು ಸಂತೆಕಟ್ಟೆಯ ಮೌಂಟ್ ರೋಸರಿ ಚರ್ಚ್‌ಗೆ ತಲುಪಿದ ಬಳಿಕ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಪವಿತ್ರ ಬೈಬಲ್ ವಾಚನದ ಬಳಿಕ ಪ್ರವಚನ ನೀಡಿದ ಪಾಂಬೂರು ಹೋಲಿ ಕ್ರಾಸ್ ಚರ್ಚಿನ ಧರ್ಮಗುರು ವಂ. ಡಾ. ರೋಶನ್ ಡಿಸೋಜಾ ಅವರು, ಮೆರವಣಿಗೆಯ ಧ್ಯೇಯವಾಕ್ಯವಾದ ‘ಪರಮ ಪ್ರಸಾದ ಬಲಿಪೂಜೆ ಅರ್ಪಿಸೋಣ, ಕ್ರಿಸ್ತರಂತೆ ಆಗೋಣ’ ಎಂಬ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನಾವು ಕ್ರಿಸ್ತರಂತೆ ಬದುಕಿದಾಗ ಮಾತ್ರ ಅರ್ಪಿಸುವ ಪರಮ ಪ್ರಸಾದದ ಬಲಿಪೂಜೆಗೆ ನಿಜವಾದ ಅರ್ಥ ಬರುತ್ತದೆ. ಇತರರಿಗೆ ಸಹಾಯ ಮಾಡುವುದು, ಅವರ ಅಗತ್ಯಗಳಿಗೆ ಸ್ಪಂದಿಸುವುದು, ಎಲ್ಲರೊಂದಿಗೆ ಶಾಂತಿ ಮತ್ತು ಸಮಾಧಾನದಿಂದ ಬದುಕುವುದು ಹಾಗೂ ಪರರನ್ನು ಕ್ಷಮಿಸುವ ಗುಣಗಳನ್ನು ಬೆಳೆಸಿಕೊಂಡಾಗ ದೇವರ ಕೃಪಾವರಗಳು ನಮ್ಮ ಮೇಲೆ ಇರಲು ಸಾಧ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನ ರೆಕ್ಟರ್ ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಲೂವಿಸ್, ಸಹಾಯಕ ಧರ್ಮಗುರು ವಂ. ಕೆವಿನ್ ಡಿಸೋಜಾ, ಕುಲಪತಿ ವಂ. ಸ್ಟೀವನ್ ಡಿಸೋಜಾ, ಶಿರ್ವ, ಕಾರ್ಕಳ ಹಾಗೂ ಉಡುಪಿ ವಲಯಗಳ ಪ್ರಧಾನ ಧರ್ಮಗುರುಗಳಾದ ವಂ. ಚಾರ್ಲ್ಸ್ ಮಿನೇಜಸ್, ವಂ. ಆಲ್ಬನ್ ಡಿಸೋಜಾ, ವಂ. ಡೆನಿಸ್ ಡೆಸಾ, ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ. ರೋಕ್ ಡೇಸಾ, ಸಹಾಯಕ ಧರ್ಮಗುರು ವಂ. ರೋಹನ್ ಮಸ್ಕರೇನ್ಹಸ್ ಹಾಗೂ ಧಾರ್ಮಿಕ ಸಭೆಗಳ ಎಪಿಸ್ಕೋಪಲ್ ವಿಕಾರ್ ವಂ. ಜ್ಯೋ ತಾವ್ರೊ ಉಪಸ್ಥಿತರಿದ್ದರು.
ವಂ. ವಿಲ್ಸನ್ ಡಿಸೋಜಾ ಧಾರ್ಮಿಕ ವಿಧಿವಿಧಾನಗಳ ಕಾರ್ಯಕ್ರಮ ನಿರೂಪಿಸಿದರು. ವಂ. ಶೋನ್ ಸಾವಿಯೊ ಅಂದ್ರಾದೆ ಜಪಸರ ಪ್ರಾರ್ಥನೆ ನೆರವೇರಿಸಿದರು.






