ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಚಿತ ಆಹಾರ ಧಾನ್ಯ ಯೋಜನೆಯಾದ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ಯ (ಪಿಎಂಜಿಕೆಎವೈ) ಫಲಾನುಭವಿಗಳ ಪಟ್ಟಿಯಲ್ಲಿ ಶೇ 13.2ರಷ್ಟು ಅನರ್ಹರು ಸೇರ್ಪಡೆಯಾಗಿದ್ದಾರೆ (ಇನ್‌ಕ್ಲೂಷನ್ ಎರರ್) ಎಂಬ ಆಘಾತಕಾರಿ ಅಂಶ ಕೇಂದ್ರ ಸರ್ಕಾರವೇ ನಡೆಸಿದ ಮೌಲ್ಯಮಾಪನ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ)–2013ರ ಅಡಿಯಲ್ಲಿ ಜಾರಿಯಲ್ಲಿರುವ ಈ ಯೋಜನೆಯ ಕುರಿತು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು (ಡಿಎಫ್‌ಪಿಡಿ) 2025–26ನೇ ಆರ್ಥಿಕ ವರ್ಷದಲ್ಲಿ ಅಧ್ಯಯನ ನಡೆಸಿತ್ತು. ದೇಶದ ಎಲ್ಲಾ 36 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಗ್ರಾಮೀಣ ಮತ್ತು ನಗರ ಪ್ರದೇಶಗಳ ಒಟ್ಟು 51,303 ಫಲಾನುಭವಿ ಕುಟುಂಬಗಳನ್ನು (ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಿಂದ ಕನಿಷ್ಠ 550 ಕುಟುಂಬಗಳು) ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಆಯಾ ರಾಜ್ಯಗಳು ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸದ ಅನೇಕ ಕುಟುಂಬಗಳು ಈಗಲೂ ಉಚಿತ ಆಹಾರ ಧಾನ್ಯ ಪಡೆಯುತ್ತಿರುವುದು ಅಧ್ಯಯನದಲ್ಲಿ ದೃಢಪಟ್ಟಿದೆ. ಮೂರು ಅಥವಾ ಅದಕ್ಕಿಂತ ಹೆಚ್ಚು ಕೊಠಡಿಗಳ ಪಕ್ಕಾ ಮನೆ, ಕಾರು ಸೇರಿದಂತೆ ಮೋಟಾರು ವಾಹನಗಳು, ಏರ್ ಕಂಡೀಷನರ್ (ಎಸಿ) ಹೊಂದಿರುವವರು ಹಾಗೂ ಕುಟುಂಬದ ಸದಸ್ಯರು ಸರ್ಕಾರಿ ನೌಕರಿಯಲ್ಲಿರುವವರು ಕೂಡ ಪಡಿತರ ಪಡೆಯುತ್ತಿರುವುದು ಪ್ರಮುಖ ಲೋಪವಾಗಿದೆ ಎಂದು ವರದಿ ಬೊಟ್ಟು ಮಾಡಿದೆ.
ಬಂಗಾಳಕ್ಕೆ ಅಗ್ರಸ್ಥಾನ; ಜಮ್ಮು–ಕಾಶ್ಮೀರದಲ್ಲಿ ಕನಿಷ್ಠ:
ಅನರ್ಹ ಫಲಾನುಭವಿಗಳ ಪ್ರಮಾಣವು ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅತಿ ಹೆಚ್ಚಾಗಿದೆ. ಪಶ್ಚಿಮ ಬಂಗಾಳ (ಶೇ 39.5) ಮೊದಲ ಸ್ಥಾನದಲ್ಲಿದ್ದು, ತ್ರಿಪುರಾ (ಶೇ 39.2), ತಮಿಳುನಾಡು (ಶೇ 38.7) ಮತ್ತು ಮೇಘಾಲಯ (ಶೇ 28.5) ನಂತರದ ಸ್ಥಾನಗಳಲ್ಲಿವೆ. ಬಿಹಾರ (ಶೇ 25.5), ಒಡಿಶಾ (ಶೇ 22.9), ಸಿಕ್ಕಿಂ (ಶೇ 21.9), ಪಂಜಾಬ್ (ಶೇ 20.6) ಮತ್ತು ಮಹಾರಾಷ್ಟ್ರದಲ್ಲಿ (ಶೇ 20.3) ಮಧ್ಯಮದಿಂದ ಅಧಿಕ ಪ್ರಮಾಣದ ಲೋಪ ಕಂಡುಬಂದಿದೆ.
ಮತ್ತೊಂದೆಡೆ, ಉತ್ತರ ಮತ್ತು ಪಶ್ಚಿಮ ಭಾರತದ ರಾಜ್ಯಗಳಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಹೆಚ್ಚು ಸಮರ್ಪಕವಾಗಿದೆ. ಜಮ್ಮು ಮತ್ತು ಕಾಶ್ಮೀರ (ಶೇ 0.3), ಮಧ್ಯಪ್ರದೇಶ (ಶೇ 0.5), ಹರಿಯಾಣ (ಶೇ 1.0), ದೆಹಲಿ (ಶೇ 1.0) ಮತ್ತು ರಾಜಸ್ಥಾನದಲ್ಲಿ (ಶೇ 1.8) ಅನರ್ಹರ ಪ್ರಮಾಣ ಅತ್ಯಂತ ಕಡಿಮೆಯಿದ್ದು, ಗುಜರಾತ್ ಸಹ ಉತ್ತಮ ಸಾಧನೆ ತೋರಿದೆ.
ಗ್ರಾಮೀಣ–ನಗರ ಹಾಗೂ ವರ್ಗವಾರು ವಿವರ:
ಗ್ರಾಮೀಣ ಪ್ರದೇಶಗಳಲ್ಲಿ ಅನರ್ಹರ ಪ್ರಮಾಣ ಶೇ 12.5 ಇದ್ದರೆ, ನಗರ ಪ್ರದೇಶಗಳಲ್ಲಿ ಅದು ಶೇ 15.6ರಷ್ಟಿದೆ. ಕಡುಬಡವರಿಗಾಗಿ ಇರುವ ಅಂತ್ಯೋದಯ ಅನ್ನ ಯೋಜನೆ (ಎಎವೈ – ಕುಟುಂಬಕ್ಕೆ ತಿಂಗಳಿಗೆ 35 ಕೆ.ಜಿ ಧಾನ್ಯ) ಅಡಿ ಶೇ 12.2 ಹಾಗೂ ಆದ್ಯತಾ ಕುಟುಂಬಗಳ (ಪಿಎಚ್‌ಎಚ್ – ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆ.ಜಿ ಧಾನ್ಯ) ವಿಭಾಗದಲ್ಲಿ ಶೇ 13.4ರಷ್ಟು ಸೇರ್ಪಡೆ ದೋಷ ಕಂಡುಬಂದಿದೆ. ನಗರ ಪ್ರದೇಶದ ಪಿಎಚ್‌ಎಚ್ ಕುಟುಂಬಗಳಲ್ಲಿ ಈ ಪ್ರಮಾಣ ಶೇ 15.7ರಷ್ಟಿದೆ.
ಸಬ್ಸಿಡಿ ಹೊರೆ ಮತ್ತು ಕಾಯ್ದೆಯ ಹೊಣೆಗಾರಿಕೆ:
2025–26ನೇ ಆರ್ಥಿಕ ವರ್ಷದಲ್ಲಿ ಕೇಂದ್ರದ ಒಟ್ಟು ಸಬ್ಸಿಡಿ ವೆಚ್ಚ ₹4.69 ಲಕ್ಷ ಕೋಟಿ ಆಗಿದ್ದು, ಅದರಲ್ಲಿ ಆಹಾರ ಸಬ್ಸಿಡಿಯ ಪಾಲೇ ಸುಮಾರು ಅರ್ಧದಷ್ಟು ಅಂದರೆ ₹2.28 ಲಕ್ಷ ಕೋಟಿ ಇರುವುದರಿಂದ ಈ ವರದಿ ಮಹತ್ವ ಪಡೆದುಕೊಂಡಿದೆ. ಎನ್‌ಎಫ್‌ಎಸ್‌ಎ ಅಡಿ ಗ್ರಾಮೀಣ ಭಾಗದ ಶೇ 75 ಹಾಗೂ ನಗರದ ಶೇ 50ರಷ್ಟು (ಒಟ್ಟಾರೆ ಶೇ 67) ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸಲಾಗುತ್ತದೆ. ಕಾಯ್ದೆಯಡಿ ಗರಿಷ್ಠ 81.35 ಕೋಟಿ ಜನರನ್ನು ಒಳಗೊಳ್ಳಲು ಅವಕಾಶವಿದ್ದು, ಅಕ್ಟೋಬರ್ 2026ರ ವೇಳೆಗೆ 78.63 ಕೋಟಿ ಮಂದಿ ಇದರ ವ್ಯಾಪ್ತಿಯಲ್ಲಿದ್ದಾರೆ.
ಕಾಯ್ದೆಯ ಸೆಕ್ಷನ್ 9ರ ಪ್ರಕಾರ ಒಟ್ಟು ಫಲಾನುಭವಿಗಳ ಸಂಖ್ಯೆಯನ್ನು ಕೇಂದ್ರ ನಿರ್ಧರಿಸಿದರೆ, ಸೆಕ್ಷನ್ 10ರ ಅಡಿ ಅರ್ಹ ಕುಟುಂಬಗಳನ್ನು ಗುರುತಿಸುವುದು ಹಾಗೂ ಆದಾಯ, ಆಸ್ತಿ, ಜಮೀನು, ಉದ್ಯೋಗ ಮತ್ತು ತೆರಿಗೆ ಸ್ಥಿತಿಗತಿ ಆಧರಿಸಿ ಮಾರ್ಗಸೂಚಿ ರೂಪಿಸುವ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದಾಗಿದೆ. ರಾಜ್ಯಗಳ ಮಾನದಂಡಗಳ ವಿನ್ಯಾಸ ಮತ್ತು ಕಾಲಕಾಲಕ್ಕೆ ಪಟ್ಟಿ ಪರಿಷ್ಕರಿಸದಿರುವುದೇ ಈ ಲೋಪಕ್ಕೆ ಕಾರಣ ಎಂದು ವರದಿ ವಿಶ್ಲೇಷಿಸಿದೆ. ಅರ್ಹರ ಗುರುತಿಸುವಿಕೆ ವ್ಯವಸ್ಥೆಯನ್ನು ಬಲಪಡಿಸುವುದು, ಆಧಾರ್ ಜೋಡಣೆ ಹಾಗೂ ಫಲಾನುಭವಿಗಳ ದತ್ತಾಂಶವನ್ನು ನಿಯಮಿತವಾಗಿ ಪರಿಶೀಲಿಸಿ ಪರಿಷ್ಕರಿಸುವ ಅಗತ್ಯವಿದೆ ಎಂದು ವರದಿ ಶಿಫಾರಸು ಮಾಡಿದೆ.
ಹಿನ್ನೆಲೆ:
ಜುಲೈ 2013ರಲ್ಲಿ ಅಂದಿನ ಯುಪಿಎ ಸರ್ಕಾರವು ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ (ಟಿಪಿಡಿಎಸ್) ಕೆ.ಜಿಗೆ ₹3 ದರದಲ್ಲಿ ಅಕ್ಕಿ ಮತ್ತು ₹2 ದರದಲ್ಲಿ ಗೋಧಿ ನೀಡುವ ಎನ್‌ಎಫ್‌ಎಸ್‌ಎ ಕಾಯ್ದೆ ಜಾರಿಗೊಳಿಸಿತ್ತು. ನಂತರ ಎನ್‌ಡಿಎ ಸರ್ಕಾರವು ಪಿಎಂಜಿಕೆಎವೈ ಅಡಿ ಈ ದರವನ್ನು ಮನ್ನಾ ಮಾಡಿ ಸಂಪೂರ್ಣ ಉಚಿತ ಆಹಾರ ಧಾನ್ಯ ವಿತರಿಸುತ್ತಿದೆ. ಆದಾಯ ತೆರಿಗೆ ಪಾವತಿದಾರರು, ಕಾರು ಮಾಲೀಕರು ಮತ್ತು ಕಂಪನಿಗಳ ನಿರ್ದೇಶಕರಾಗಿದ್ದುಕೊಂಡು ಉಚಿತ ಪಡಿತರ ಪಡೆಯುತ್ತಿರುವವರನ್ನು ಗುರುತಿಸುವ ಅಭಿಯಾನವನ್ನು ಕೇಂದ್ರ ಸರ್ಕಾರ ಕಳೆದ ವರ್ಷ ಆರಂಭಿಸಿತ್ತು. ಈ ಅಧ್ಯಯನದ ಅಂಶಗಳ ಕುರಿತು ಪ್ರತಿಕ್ರಿಯೆ ಕೋರಿ ಕಳುಹಿಸಿದ ಪ್ರಶ್ನೆಗಳಿಗೆ ಆಹಾರ ಇಲಾಖೆ ಉತ್ತರಿಸಿಲ್ಲ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.



