ಹಿಂದಿ ಹೇರಿಕೆಯ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತ ಕನ್ನಡ ವಿರೋಧಿ ಧೋರಣೆ ಅನುಸರಿಸುವ ರಾಜ್ಯಪಾಲ ಶ್ರೀ ತಾವರ್ ಚಂದ್ ಗೆಹ್ಲೋಟ ರನ್ನು ಕೇಂದ್ರ ಸರ್ಕಾರ ಕೂಡಲೇ ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ದಾವಣಗೆರೆ ಜಿಲ್ಲಾಧ್ಯಕ್ಷ ಎಂಎಸ್ ರಾಮೇಗೌಡ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ದಾವಣಗೆರೆ ಜಿಲ್ಲಾ ಘಟಕದ ಕಾರ್ಯಕರ್ತರು ಇಂದು ಉಪವಿಭಾಗಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿತು.
ಈ ವೇಳೆ ಮಾತನಾಡಿದ ಮುಖಂಡರು “ರಾಜ್ಯ ಸರ್ಕಾರವು ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಹಿಂದೆ ಕರ್ನಾಟಕದಲ್ಲಿ ಹಿಂದಿಹೇರಿಕೆಯನ್ನು ಶಾಶ್ವತವಾಗಿ ನಡೆಸುವ ಹುನ್ನಾರವಿದೆ. ರಾಜ್ಯಪಾಲರು ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಕನ್ನಡಿಗರ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಅವರು ಕರ್ನಾಟಕದಲ್ಲಿ ಒಂದೇ ಒಂದು ನಿಮಿಷವೂ ರಾಜ್ಯಪಾಲರಾಗಿ ಉಳಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಜ್ಯಪಾಲರು ರಾಜ್ಯದ ದಿನನಿತ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಆಕ್ಷೇಪಾರ್ಹ, ಕರ್ನಾಟಕದ ಜನರು ಆಯ್ಕೆ ಮಾಡಿದ ಸರ್ಕಾರವೇ ನಾಡಿನ ಅಗತ್ಯಗಳನ್ನು ತೀರ್ಮಾನಿಸುವ ಹಕ್ಕು ಹೊಂದಿದೆ. ಸರ್ಕಾರದ ನೀತಿಗಳಲ್ಲಿ ಬೆಂಬಲ ನೀಡುವುದು ರಾಜ್ಯಪಾಲರ ಕರ್ತವ್ಯವಾಗಿದ್ದರೂ, ಅವರು ಹಿಂದಿ ಪರವಾಗಿ ಕಾರ್ಯನಿರ್ವಹಿಸುತ್ತಿರುವಂತೆ ಕಾಣುತ್ತದೆ” ಎಂದು ಆರೋಪಿಸಿದರು.
“ಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘ”ದ ಮನವಿಗೆ ತುರ್ತಾಗಿ ಪ್ರತಿಕ್ರಿಯಿಸಿರುವುದು ಪತ್ರ ಬರೆದಿರುವುದು ಹಿಂದಿ ಪ್ರಭಾವ ಹೆಚ್ಚಿಸುವ ಯತ್ನದ ಭಾಗ” ಎಂದು ಟೀಕಿಸಿದರು.

“ಕರ್ನಾಟಕದ ಶಿಕ್ಷಣ ನೀತಿಯನ್ನು ನಿರ್ಧರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಸೇರಿದ್ದು, ಅದರಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡುವ ಹಕ್ಕಿಲ್ಲ. ತೃತೀಯ ಭಾಷೆ ಗ್ರೇಡಿಂಗ್ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಿದರೆ ತೀವ್ರ ವಿರೋಧ ವ್ಯಕ್ತವಾಗುತ್ತದೆ. ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನು ಉತ್ತೇಜಿಸಲು ಒತ್ತಡ ಹಾಕದೇ, ಕರ್ನಾಟಕದಲ್ಲಿ ಹಿಂದಿ ಹೇರಲು ಯತ್ನಿಸುವುದು ಕನ್ನಡ ವಿರೋಧಿ. ಕನ್ನಡದ ಅಸ್ಮಿತೆಯನ್ನು ಕಾಪಾಡಲು ಯಾವುದೇ ಮಟ್ಟಕ್ಕೂ ಹೋರಾಟ ಮಾಡಲಾಗುವುದು. ಇಂಥ ನಾಡದ್ರೋಹಿ ರಾಜ್ಯಪಾಲ ಕರ್ನಾಟಕದಲ್ಲಿ ಇರಲು ಯೋಗ್ಯರಲ್ಲ. ಅವರನ್ನು ಕೇಂದ್ರ ಸರ್ಕಾರ ಕೂಡಲೇ ಹಿಂದಕ್ಕೆ ಕರೆಯಿಸಿಕೊಳ್ಳಲಿ” ಎರಡು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? http://ದಾವಣಗೆರೆ ಚುನಾವಣಾ ಕಣದಲ್ಲಿ ಕಾಂಗ್ರೆಸಿನ ಪ್ರಮುಖ ವಾಲ್ಮೀಕಿ ನಾಯಕರ ಗೈರು? ನಿರ್ಲಕ್ಷ್ಯವೇ ಅಥವಾ ಬಣ ಬಡಿದಾಟವೇ?
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಗಿರೀಶ್ ಕುಮಾರ್, ಮಂಜುಶ್ರೀ ಗೌಡ, ರವಿಕುಮಾರ್, ಮಹೇಂದ್ರ, ನಾಗರಾಜ್, ಗಣೇಶ್, ಬಸವರಾಜ್, ಕರಿಬಸಣ್ಣ, ಬಸವರಾಜ್, ರವಿ ,ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜಬಿವುಲ್ಲಾ, ತಮನ್ನಾ ರಫೀಕ್, ಮಂಜುನಾಥ್, ಸಂಜು, ಪಾದಚಾರಿ ವ್ಯಾಪಾರಿ ಘಟಕ ಅಧ್ಯಕ್ಷ ಸುರೇಶ್ ,ರಮೇಶ್, ವಿನಯ್, ನಾಗಪ್ಪ, ಕಲಾ ಲಾಲ್ ಚೌದ್ರಿ, ಕರಬಸಪ್ಪ ,ನಾಗರಾಜ್, ಶ್ರೀನಿವಾಸ್, ಪರಮೇಶ್, ಹರೀಶ್, ವಾಗೀಶ್, ಮಹಿಳಾ ಘಟಕದ ಜಿಲ್ಲಾ ಪ್ರಧಾನ ಸಂಚಾಲಕಿ ಮಂಜುಳಾ ಗಣೇಶ್, ಶಾಂತಮ್ಮ, ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸುಧಾ, ಸುಮಾ, ಕವಿತಾ, ಶ್ರುತಿ, ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಂಜುಳಾ ಮಾಂತೇಶ್, ಲಕ್ಷ್ಮಿ, ಮತ್ತಿತರು ಉಪಸ್ಥಿತರಿದ್ದರು





