ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆಸುತ್ತಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್, ರಾಜ್ಯದ ಒಬಿಸಿ (ಇತರೆ ಹಿಂದುಳಿದ ವರ್ಗಗಳ) ಮತಗಳನ್ನು ಕ್ರೋಢೀಕರಿಸಲು ಪಿಡಿಎ ತಂತ್ರ ರೂಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಣ್ಣ ಪ್ರಾದೇಶಿಕ ಮತ್ತು ಜಾತಿ ಆಧಾರಿತ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಗಂಭೀರ ಚಿಂತನೆ ನಡೆಸಿದ್ದಾರೆ. ಆದರೆ ಈ ಬಾರಿ ಮೈತ್ರಿ ವಿಷಯದಲ್ಲಿ ಅಖಿಲೇಶ್ ಅವರು ಬಹಳ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ತಂದುಕೊಟ್ಟ ‘ಪಿಡಿಎ’ (ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರು) ಸೂತ್ರವನ್ನೇ 2027ರ ವಿಧಾನಸಭಾ ಚುನಾವಣೆಯಲ್ಲೂ ವಿಸ್ತರಿಸಲು ಅಖಿಲೇಶ್ ಮುಂದಾಗಿದ್ದಾರೆ. ವಿಶೇಷವಾಗಿ ಬಿಜೆಪಿಯ ಭದ್ರಕೋಟೆಯಾಗಿರುವ ‘ಯಾದವೇತರ ಒಬಿಸಿ’ಮತಗಳನ್ನು ಸೆಳೆಯಲು ಆಯಾ ಸಮುದಾಯಗಳಲ್ಲಿ ಪ್ರಭಾವ ಹೊಂದಿರುವ ಸಣ್ಣ ಪಕ್ಷಗಳ ಸಹಕಾರ ಪಡೆಯುವ ತಂತ್ರಗಾರಿಕೆ ಇದಾಗಿದೆ.
ಇದನ್ನೂ ಓದಿ: 2027ರ ಯುಪಿ ಚುನಾವಣೆಗೆ ಅಖಿಲೇಶ್ ಯಾದವ್ ಸಜ್ಜು; ಎಸ್‌ಪಿ ‘ಪಿಡಿಎ ರಥಯಾತ್ರೆ’ ಶುರು
ಇದೇ ವೇಳೆ, ಯುವ ಮತದಾರರು ಮತ್ತು ದಲಿತ ಸಮುದಾಯವನ್ನು ಸೆಳೆಯಲು ಎಸ್‌ಪಿ ವಿದ್ಯಾರ್ಥಿ ಘಟಕಕ್ಕೆ ನೀಲಿ ಬಣ್ಣದ ಡ್ರೆಸ್ ಕೋಡ್ ಜಾರಿಗೊಳಿಸುವ ಮೂಲಕ ಬಹುಜನ ರಾಜಕಾರಣಕ್ಕೂ ಅಖಿಲೇಶ್ ಕೈಹಾಕಿದ್ದಾರೆ.
2022ರ ವಿಧಾನಸಭಾ ಚುನಾವಣೆಯಲ್ಲಿ ಹಲವು ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಅಖಿಲೇಶ್ ಯಾದವ್, ಈ ಬಾರಿ ಹೆಚ್ಚು ಸೀಟುಗಳನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕೇವಲ ಸ್ಥಳೀಯವಾಗಿ ಮತಗಳನ್ನು ವರ್ಗಾಯಿಸುವ ಶಕ್ತಿ ಹೊಂದಿರುವ ಪಕ್ಷಗಳಿಗೆ ಮಾತ್ರ ಮಣೆ ಹಾಕಲು ಎಸ್‌ಪಿ ನಿರ್ಧರಿಸಿದೆ.
ಮತ್ತೊಂದೆಡೆ, ಅಖಿಲೇಶ್ ಅವರ ಈ ಕಠಿಣ ನಿಲುವಿನಿಂದಾಗಿ ಸ್ವಾಮಿ ಪ್ರಸಾದ್ ಮೌರ್ಯ ಅವರ ಪಕ್ಷ, ಸಂಜಯ್ ಚೌಹಾಣ್ ಅವರ ಜನವಾದಿ ಪಕ್ಷ (ಸೋಷಿಯಲಿಸ್ಟ್) ಮತ್ತು ಅಪ್ನಾ ದಳ (ಕಾಮೆರಾವಾಡಿ) ಮುಂತಾದ ಸಣ್ಣ ಪಕ್ಷಗಳು ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ಪಕ್ಷದತ್ತ ಮುಖಮಾಡಿವೆ. ಕಾಂಗ್ರೆಸ್ ಕೂಡ ತನ್ನ ಪಾಲಿನ ಸೀಟುಗಳಲ್ಲೇ ಈ ಸಣ್ಣ ಒಬಿಸಿ ಪಕ್ಷಗಳಿಗೆ ಅವಕಾಶ ನೀಡುವ ಮೂಲಕ ರಾಜ್ಯದಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳಲು ಮುಂದಾಗಿದೆ.
ಇದರ ಜತೆಗೆ, ಅಸಾದುದ್ದೀನ್ ಓವೈಸಿ (AIMIM) ಮತ್ತು ಚಂದ್ರಶೇಖರ್ ಆಜಾದ್ (ಆಜಾದ್ ಸಮಾಜ್ ಪಾರ್ಟಿ) ನೇತೃತ್ವದ ಹೊಸ ಮೈತ್ರಿಕೂಟವು ಎಸ್‌ಪಿ-ಕಾಂಗ್ರೆಸ್ ಮತಬ್ಯಾಂಕ್‌ಗೆ ಸವಾಲೊಡ್ಡುವ ಸಾಧ್ಯತೆಯಿರುವುದರಿಂದ, ಒಬಿಸಿ ಮತಗಳನ್ನು ಒಗ್ಗೂಡಿಸುವುದು ಅಖಿಲೇಶ್ ಅವರಿಗೆ ಅನಿವಾರ್ಯವಾಗಿದೆ.



