ದೇವನಹಳ್ಳಿ ಕೆಐಎಡಿಬಿ ಭೂಸ್ವಾಧೀನ: ರೈತರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವರೇ ಸಿದ್ದರಾಮಯ್ಯ?

Date:

Advertisements

ಸಾವಿರಾರು ಎಕರೆ ಕೃಷಿ ಭೂಮಿಯನ್ನು ತನ್ನ ಕೈವಶಪಡಿಸಿಕೊಳ್ಳಲು ಕೆಐಎಡಿಬಿ ಮಹಾ ಹುನ್ನಾರ ನಡೆಸಿದೆ. ಪ್ರಸ್ತುತ ಭೂಸ್ವಾಧೀನ ಕೈಬಿಟ್ಟರೆ ರಾಜ್ಯಾದ್ಯಂತ ಹೋರಾಟಗಳಾಗುವ ಭಯದಲ್ಲಿ ಸರಕಾರ ನೆಪ ಹೇಳಲು ಮುಂದಾಗಿದೆ. ಪ್ರಾಣ ಕೊಡುತ್ತೇವೆ, ಭೂಮಿ ಕೊಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿರುವ ರೈತರು 842 ದಿನ ಅಂದರೆ ಸುಮಾರು ಎರಡು ವರ್ಷಗಳಿಂದ ಅನ್ನ, ನೀರು ಲೆಕ್ಕಿಸದೆ ಧರಣಿ ಕುಳಿತಿದ್ದಾರೆ. ತರಹೇವಾರಿ ಹೋರಾಟಗಳನ್ನು ರೂಪಿಸಿದ್ದಾರೆ.

ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಹಳ್ಳಿಗಳ ವ್ಯಾಪ್ತಿಯಲ್ಲಿ ಸುಮಾರು 1777 ಎಕರೆ ಕೃಷಿ ಯೋಗ್ಯ ಭೂಮಿಯನ್ನು ಕೈಗಾರಿಕಾ ಪ್ರದೇಶ ವಿಸ್ತರಣೆ ನೆಪದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆ.ಐ.ಎ.ಡಿ.ಬಿ) ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಆ ಭಾಗದ ರೈತರು ಭೂಸ್ವಾಧೀನ ವಿರೋಧಿಸಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಭೂಸ್ವಾಧೀನವನ್ನು ಕೈಬಿಡುವಂತೆ ಪಟ್ಟುಹಿಡಿದಿದ್ದಾರೆ.

ದೇವನಹಳ್ಳಿ ಹೋರಾಟ 1

ದೇವನಹಳ್ಳಿ ತಾಲೂಕು ಬೆಂಗಳೂರು ನಗರಕ್ಕೆ ಹತ್ತಿರದಲ್ಲಿದ್ದು, ಕೆಂಪೇಗೌಡ ವಿಮಾನ ನಿಲ್ದಾಣವೂ ಇದೆ. ಈ ಭಾಗದ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ ಕಂಪನಿ ಮಾಲೀಕರಿಂದ ಅಧಿಕ ಮೊತ್ತದ ಕಮಿಷನ್‌ ಗಿಟ್ಟುವ ಮಹದಾಸೆಯಿಂದ ಭೂಸ್ವಾಧೀನಕ್ಕೆ ಮುಂದಾಗಿದೆ. ಅದಲ್ಲದೆ, ಈ ಭಾಗದ ರೈತರ ಹೋರಾಟಕ್ಕೆ ಮಣಿದರೆ ರಾಜ್ಯಾದ್ಯಂತ ಇದೇ ಪರಿಸ್ಥಿತಿ ನಿರ್ಮಾಣವಾಗುವ ಭಯದಿಂದ ಸರಕಾರ ಭೂಸ್ವಾಧೀನ ತೀರ್ಮಾನವನ್ನು ಕೈಬಿಡಲು ಹಿಂದೇಟು ಹಾಕುತ್ತಿದ್ದು, ಇಲ್ಲಸಲ್ಲದ ನೆಪ ಹೇಳುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

Advertisements

ದೇಶದಲ್ಲೇ ಅತೀ ದೊಡ್ಡಮಟ್ಟದ ಸುದೀರ್ಘ ಹೋರಾಟ ಇದಾಗಿದ್ದು, ಹೋರಾಟದ ಸಂದರ್ಭಗಳಲ್ಲಿ ಭರವಸೆ ನೀಡುವ ಜನಪ್ರತಿನಿಧಿಗಳು ತಲೆಮರೆಸಿಕೊಂಡು ತಿರುಗಾಡುತ್ತಿದ್ದಾರೆ. ಹಾಲಿ ಸಿಎಂ ಸಿದ್ದರಾಮಯ್ಯ ಅವರಿಂದ ಹಿಡಿದು ಮಾಜಿ ಸಿಎಂ ಕುಮಾರಸ್ವಾಮಿ, ಸಚಿವ ಕೆ.ಎಚ್.ಮುನಿಯಪ್ಪ ಸಮೇತ ಗೊತ್ತಿದ್ದು, ಗೊತ್ತಿಲ್ಲದಂತೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂಬುದು ರೈತರ ಆರೋಪವಾಗಿದೆ.

ಲ್ಯಾಂಡ್‌ ಬ್ಯಾಂಕ್‌ ಹುನ್ನಾರ

ಮೇಲ್ನೋಟಕ್ಕೆ ಉದ್ಯೋಗ ಸೃಷ್ಟಿಯ ನೆಪ ಹೇಳುವ ಕೆಐಎಡಿಬಿ ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಸಾವಿರಾರು ಎಕರೆ ಭೂಮಿಯನ್ನು ಹಂಚಿಕೆ ಮಾಡದೆ ಬಾಕಿ ಉಳಿಸಿಕೊಂಡಿದೆ. ಹೀಗಿದ್ದರೂ ಸಹ ಲ್ಯಾಂಡ್‌ ಬ್ಯಾಂಕ್‌ ಮಾಡಿಕೊಳ್ಳುವ ಹುನ್ನಾರದಿಂದ ಈ ರೀತಿ ರೈತರ ಭೂಮಿ ಸ್ವಾಧೀನಕ್ಕೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.

ಸ್ಥಳೀಯರಿಗೆ ಡಿ-ದರ್ಜೆ ಕೆಲಸವಷ್ಟೇ

ಸ್ಥಳೀಯರಿಗೆ ಉದ್ಯೋಗದ ಭರವಸೆ ನೀಡುವ ಕೈಗಾರಿಕೆಗಳು ಸ್ಥಳೀಯರಿಗೆ ಕೊಡುವುದು ಕೇವಲ ಬಾತ್‌ ರೂಂ ಸ್ವಚ್ಛಗೊಳಿಸುವಂತ ಡಿ-ದರ್ಜೆ ಕೆಲಸಗಳನ್ನಷ್ಟೇ. ಯಾವುದೇ ಉನ್ನತ ಸ್ಥಾನದ ಹುದ್ದೆಗಳನ್ನು ಕೊಡುವುದಿಲ್ಲ.

ಕೈಗಾರಿಕೆಗಳು ಹೊರಸೂಸುವ ತ್ಯಾಜ್ಯ ಕೆರೆ, ಕಟ್ಟೆ, ಕಾಲುವೆಗಳ ಒಡಲು ಸೇರಲಿದೆ. ಈಗಾಗಲೇ ದೊಡ್ಡಬಳ್ಳಾಪುರ ಸುತ್ತಲಿನ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿಗಳು ಹೇಳುತ್ತಿವೆ. ಮಾಲಿನ್ಯ ನಿಯಂತ್ರಣ ಸತ್ತುಹೋಗಿದೆ. ಅವರಿಗೆ ದೂರು ಕೊಟ್ಟರೆ ಕಂಪನಿ ಮಾಲೀಕರಿಂದ ಕಮಿಷನ್‌ ಪಡೆದು ಹಣ ಮಾಡಿಕೊಳ್ಳುತ್ತಾರೆ. ಆದರೆ, ನಮ್ಮ ಗೋಳು ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.

“ರೈತರ ಭೂಮಿ ಕಿತ್ತುಕೊಂಡರೆ ರೈತರು ಎಲ್ಲಿಗೆ ಹೋಗಬೇಕು? ಭೂಸ್ವಾಧೀನವಾದರೆ ಅಲ್ಲಿ ನೋಡಲು ಊರುಗಳು ಸಹ ಇರುವುದಿಲ್ಲ. ಪೋಲನಹಳ್ಳಿಯಿಂದ ಚಿಮಾಚನಹಳ್ಳಿ ಸಂಪರ್ಕಿಸುವ ರಸ್ತೆಗೆ ಕಾಂಪೌಂಡ್‌ ಹಾಕಲಾಗಿದೆ. ರೈತರು ತಿರುಗಾಡಲು ರಸ್ತೆ ಸಹ ಇಲ್ಲ. ಇಂತಹವರಿಗೆ ಭೂಮಿ ಕೊಟ್ಟು ರೈತರು ಎಲ್ಲಿಗೆ ಹೋಗಬೇಕು. ಕೈಗಾರಿಕೆಗಳು ಯುವಜನರಿಗೆ ಮಾತ್ರ ಉದ್ಯೋಗ ಕೊಡಬಹುದು. ಆದರೆ, ಭೂಮಿ ಇಡೀ ಕುಟುಂಬಕ್ಕೆ ಉದ್ಯೋಗ ಕೊಡುತ್ತದೆ” ಎನ್ನುತ್ತಾರೆ ದೊಡ್ಡಬಳ್ಳಾಪುರದ ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ್.‌

ಜೀವಸಂಕುಲಕ್ಕೆ ಹಾನಿ

ನಿತ್ಯ ತರಕಾರಿ, ಹಾಲು ಪೂರೈಸುವ ಜಿಲ್ಲೆಗಳ ಸಾಕಷ್ಟು ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕೆ ಮೀಸಲಿಡಲಾಗುತ್ತಿದೆ. ಅಭಿವೃದ್ಧಿ ನಿಟ್ಟಿನಲ್ಲಿ ಕೈಗಾರಿಕೆಗಳು ಅನಿವಾರ್ಯವಾದರೂ, ಕೈಗಾರಿಕೆಗಳು ನಿರ್ಮಾಣವಾದರೆ ಕೃಷಿ ಚಟುವಟಿಕೆಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಸುತ್ತಮುತ್ತಲಿನ ಜೀವಸಂಕುಲಕ್ಕೆ ಹಾನಿಯಾಗಲಿದೆ. ಉಸಿರಾಡುವ ಗಾಳಿ, ಕುಡಿಯುವ ನೀರು ವಿಷವಾಗಲಿದೆ ಎಂಬುದು ರೈತರ ಆತಂಕವಾಗಿದೆ.

ಭೂಸ್ವಾಧೀನ ವಿರೋಧಿಸಿ ಸಿಎಂ ಮನೆಗೆ ಮಂಗಳವಾರ ಜಾಥಾ ಹೊರಟಿದ್ದ ರೈತರನ್ನು ಪೊಲೀಸರು ತಡೆದಿದ್ದಾರೆ. ಸರಕಾರ ಬಲವಂತವಾಗಿ ಭೂಸ್ವಾಧೀನಕ್ಕೆ ಮುಂದಾಗಿದೆ. ಬಲವಂತದ ಭೂಸ್ವಾಧೀನದ ವಿರುದ್ಧ ರಾಜ್ಯದ ಎಲ್ಲಾ ದಲಿತಪರ, ಕನ್ನಡಪರ, ರೈತಪರ ಸಂಘಟನೆಗಳು ಒಗ್ಗೂಡಿ ಬೃಹತ್‌ ಹೋರಾಟ ರೂಪಿಸುತ್ತೇವೆ ಎನ್ನುತ್ತಾರೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.‌ಆಂಜನೇಯ ರೆಡ್ಡಿ.

ಪ್ರಮೋದ್
ಯುವ ಹೋರಾಟಗಾರ ಪ್ರಮೋದ್‌

ಈ ಕುರಿತು ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿದ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಯುವ ಹೋರಾಟಗಾರ ಪ್ರಮೋದ್‌, “ಚನ್ನರಾಯಪಟ್ಟಣ ಭೂಸ್ವಾಧೀನಕ್ಕೆ 13 ಹಳ್ಳಿಗಳ ಸುಮಾರು 600 ಕುಟುಂಬಗಳು ಒಳಗೊಳ್ಳುತ್ತವೆ. 400 ಕುಟುಂಬಗಳು ಸಂಪೂರ್ಣ ಭೂರಹಿತವಾಗುತ್ತವೆ” ಎಂದು ತಿಳಿಸಿದ್ದಾರೆ.

“2022ರರ ಜನವರಿಯಲ್ಲಿ ನಮಗೆ ನೋಟೀಸ್‌ ಬಂತು. ನೋಟಿಸ್‌ ಸುಡುವ ಮೂಲಕ ಮೊದಲಿಗೆ ಪ್ರತಿಭಟನೆ ಮಾಡಿದ್ದೆವು. ಆನಂತರ 2022ರ ಏಪ್ರಿಲ್‌ನಿಂದ ಅನಿರ್ದಿಷ್ಟಾವಧಿ ಧರಣಿ ಆರಂಭವಾಯಿತು. ಆಗಿನ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದರು. ಅಂದು ಫ್ರೀಡಂಪಾರ್ಕ್‌ ಹೋರಾಟದ ಸ್ಥಳಕ್ಕೆ ಬಂದಿದ್ದ ಸಿದ್ದರಾಮಯ್ಯ ಸಹ ನಮ್ಮ ಸರಕಾರ ಬಂದರೆ ಭೂಸ್ವಾಧೀನ ಹಿಂಪಡೆಯುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಈಗ ಉಲ್ಟಾ ಮಾತನಾಡುತ್ತಿದ್ದಾರೆ” ಎಂದು ತಿಳಿಸಿದರು.

“ಶೇ.72ರಷ್ಟು ರೈತರು ಭೂಮಿ ಕೊಡುವುದಿಲ್ಲ ಎಂಬುದಕ್ಕೆ ದಾಖಲೆ ಕೊಟ್ಟಿದ್ದೇವೆ. ಆದರೂ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ರೈತರಿಗೆ ಧಮ್ಕಿ ಹಾಕುತ್ತಿದ್ದಾರೆ. ಕೆಲ ರೈತರಿಗೆ ಹಣ ನೀಡಿ ಒಪ್ಪಿಸುವ ಹುನ್ನಾರವೂ ನಡೆಯುತ್ತಿದೆ. ಈ ಹೋರಾಟದಲ್ಲಿ ನನ್ನ ಕಣ್ಣು ಕಳೆದುಕೊಂಡಿದ್ದೇನೆ. ಏನೇ ಆಗಲಿ ನಮ್ಮ ಭೂಮಿ ಬಿಟ್ಟುಕೊಡುವುದಿಲ್ಲ. ನ್ಯಾಯ ಪಡೆದುಕೊಂಡೇ ಹೋಗುತ್ತೇವೆ” ಎಂದು ಹೋರಾಟಗಾರ ಪ್ರಮೋದ್‌ ತಿಳಿಸಿದ್ದಾರೆ.

ಮುನಿಯಪ್ಪರದ್ದು ಜಾಣ ಕಿವುಡು; ಭರವಸೆ ನೀಡಿದ್ದ ಸಿದ್ದರಾಮಯ್ಯ

ಮುನಿಯಪ್ಪ 2

ಕಳೆದ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ 13 ಹಳ್ಳಿಗಳ 1777 ಎಕರೆ ಭೂಮಿಯನ್ನು ಉಳಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತು ನೀಡಿದ್ದರು. ಈಗ ಜಾಣ ಕಿವುಡು ಪ್ರದರ್ಶನ ಮಾಡುತ್ತಿದ್ದಾರೆ ಎನ್ನುವುದು ರೈತ ಹೋರಾಟಗಾರರ ಅಸಮಾಧಾನ. ಒಂದು ವರ್ಷದಲ್ಲಿ ಐದಾರು ಬಾರಿ ರೈತ ಹೋರಾಟಗಾರರು ಸಚಿವರ ಮನೆ ಹತ್ತಿರ ಹೋಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ರೈತರು.

ಇದನ್ನು ಓದಿದ್ದೀರಾ? ದೇವನಹಳ್ಳಿ | ಕೆಐಎಡಿಬಿ ಭೂಸ್ವಾಧೀನಕ್ಕೆ ವಿರೋಧ: ‘ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಲ್ಲ’ ಎಂದ ರೈತ ಮುಖಂಡರು

ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಧರಣಿ ಸ್ಥಳಕ್ಕೆ ಭೇಟಿ ನೀಡಿ, “ನಮ್ಮ ಸರ್ಕಾರ ಬಂದರೆ, ನಿಮ್ಮ ಭೂಮಿಯನ್ನು ಉಳಿಸುತ್ತೇವೆ, ಭೂ ಸ್ವಾಧೀನದ ಆದೇಶ ಹಿಂಪಡೆಯುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ಬಳಿಕ ಮರೆತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಹೋರಾಟಗಾರರು. ಬೇಡಿಕೆ ಈಡೇರುವವರೆಗೂ ರೈತರ ಹೋರಾಟ ನಿಲ್ಲಲ್ಲ.  ಎನ್ನುತ್ತಿದ್ದಾರೆ. ಹೀಗಾಗಿ, ರೈತರಿಗೆ ಕೊಟ್ಟ ಮಾತು ಸಿದ್ದರಾಮಯ್ಯ ಉಳಿಸಿಕೊಳ್ಳುವರೇ ಎಂದು ಕಾದುನೋಡಬೇಕಿದೆ.

ವಿಜಯಕುಮಾರ್
ವಿಜಯ ಕುಮಾರ್ ಗಜ್ಜರಹಳ್ಳಿ
+ posts

ಪತ್ರಕರ್ತ, ಚಿಕ್ಕಬಳ್ಳಾಪುರ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿಜಯ ಕುಮಾರ್ ಗಜ್ಜರಹಳ್ಳಿ
ವಿಜಯ ಕುಮಾರ್ ಗಜ್ಜರಹಳ್ಳಿ
ಪತ್ರಕರ್ತ, ಚಿಕ್ಕಬಳ್ಳಾಪುರ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ...

ಮಂಗಳೂರು | ಆ. 23: ಅಲ್ ವಫಾ ಚಾರಿಟೇಬಲ್ ಟ್ರಸ್ಟ್‌ನಿಂದ 15 ಜೋಡಿಗಳ ಸರಳ ಸಾಮೂಹಿಕ ವಿವಾಹ

ಮಂಗಳೂರು ಭಾಗದಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಅಲ್ ವಫಾ ಚಾರಿಟೆಬಲ್ ಟ್ರಸ್ಟ್...

ಗುಬ್ಬಿ | ಎಂ.ಎನ್.ಕೋಟೆ ಗ್ರಾಪಂ ಉಪಾಧ್ಯಕ್ಷರಾಗಿ ಸಿದ್ದಗಂಗಮ್ಮ ಅವಿರೋಧ ಆಯ್ಕೆ

ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಎಂ.ಎನ್.ಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ...

ಕೋಲಾರ | ಐಎಎಸ್, ಐಪಿಎಸ್ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ; ಅ.ಮು ಲಕ್ಷ್ಮೀನಾರಾಯಣ ಭರವಸೆ

ಕೆಎಎಸ್, ಐಎಎಸ್ ಮತ್ತು ಐಪಿಎಸ್ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತ...

Download Eedina App Android / iOS

X