ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್

Date:

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ ಸಲೀಸಾಗಿ ನುಣುಚಿಕೊಳ್ಳಬಹುದಾದ ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ.

ಭಾರತೀಯ ಸಾಂವಿಧಾನಿಕ ಇತಿಹಾಸದಲ್ಲೇ ಇದೊಂದು ತೀರಾ ಅಪರೂಪದ ನಿದರ್ಶನ. ದೇಶದ ಎರಡು ಅತ್ಯುನ್ನತ ಸಂಸ್ಥೆಗಳಾದ ಭಾರತದ ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗಗಳು ತಮ್ಮ ಸಾಂವಿಧಾನಿಕ ಹೊಣೆಗಾರಿಕೆಯನ್ನು ಸಂಪೂರ್ಣ ನಿರ್ಲಕ್ಷಿಸಿ ಪರಸ್ಪರ ಒಂದನೊಂದು ಬೆಂಬಲಿಸಿಕೊಂಡು ನಿಂತಿವೆ. ನಾಗರಿಕರ ಮೇಲೆ ಆಡಳಿತಾತ್ಮಕ ಕ್ರೌರ್ಯವನ್ನು ಹೇರುತ್ತಾ ಅವರ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಪ್ರಕ್ರಿಯೆಯಲ್ಲಿ ಪರಸ್ಪರ ಕೈಜೋಡಿಸಿವೆ. ಈಗ ಚುನಾವಣಾ ಆಯೋಗ ಜಾರಿಗೊಳಿಸುತ್ತಿರುವ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರೂಪಿಸಿದ ಮತ್ತು ಜಾರಿಗೆ ತಂದ ರೀತಿ ಎಷ್ಟೊಂದು ಕಳಪೆಯಾಗಿತ್ತೆಂದರೆ, ಜನಸಾಮಾನ್ಯರು ಕಂಗಾಲಾಗಿ ಹೋಗಿದ್ದಾರೆ. ಇದಕ್ಕಿಂತ ಆಘಾತಕಾರಿ ಸಂಗತಿಯೆಂದರೆ, ತಪ್ಪನ್ನು ಸರಿಪಡಿಸಿಕೊಳ್ಳಲು ಅವಕಾಶಗಳಿದ್ದಾಗಲೆಲ್ಲ ಈ ಸಂಸ್ಥೆಗಳು ಪ್ರಾಮಾಣಿಕವಾಗಿ ನಡೆದುಕೊಳ್ಳದೆ, ಸುಳ್ಳು ಸಮರ್ಥನೆಗಳ ಮೂಲಕ ಜನರನ್ನು ದಾರಿತಪ್ಪಿಸಿವೆ. ಪ್ರಕ್ರಿಯೆಯ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯ ಬಗ್ಗೆ ವ್ಯಕ್ತವಾದ ಮೂಲಭೂತ ಕಾಳಜಿಗಳನ್ನು ಪರಿಹರಿಸುವ ಗೋಜಿಗೆ ಅವು ಹೋಗಲೇ ಇಲ್ಲ. ಪತ್ರಕರ್ತರಾದ ರಿತಿಕಾ ಚೋಪ್ರಾ ಮತ್ತು ದಾಮಿನಿ ನಾಥ್ ಅವರು ಪತ್ರಿಕೆಯಲ್ಲಿ ಬರೆದ ತನಿಖಾ ವರದಿಗಳು ಆಯೋಗದ ಕಾರ್ಯವೈಖರಿಯ ಬಗ್ಗೆ ಮಹತ್ವದ ಪ್ರಶ್ನೆಗಳನ್ನು ಎತ್ತಿದವು. ಅವು ಕೇವಲ ನಿಯಮಾವಳಿಗಳ ಪ್ರಶ್ನೆಯಾಗಿರಲಿಲ್ಲ. ಅತ್ಯಂತ ಗಂಭೀರವಾದ ಸಾಂವಿಧಾನಿಕ ವಿಷಯಗಳಾಗಿದ್ದವು. ಸಾಫ್ಟ್‌ವೇರ್ ನಿಯಮಾವಳಿಗಳು ಸೇರಿದಂತೆ ಇಡೀ ಪ್ರಕ್ರಿಯೆ ಸ್ವಲ್ಪವೂ ಪಾರದರ್ಶಕವಾಗಿರಲಿಲ್ಲ. ತಾನು ಅರ್ಹ ಮತದಾರ ಎಂದು ಸಾಬೀತುಪಡಿಸುವ ಸಂಪೂರ್ಣ ಹೊರೆಯನ್ನು ಅಸಹಾಯಕ ನಾಗರಿಕರ ಹೆಗಲಿಗೇ ಹೊರಿಸಲಾಗಿದೆ. ಇತ್ತೀಚಿನ ವಿದ್ಯಮಾನಗಳನ್ನು ನೋಡಿದರೆ ಯಾವುದೇ ಸಂಗತಿಯೂ ನಮಗೆ ಆಶ್ಚರ್ಯವಾಗುವುದಿಲ್ಲ. ಆದಾಗ್ಯೂ, ಪಟ್ಟಿಗೆ ಸೇರ್ಪಡೆಗೊಳ್ಳಲು ಎಲ್ಲ ಅರ್ಹತೆಯೂ ಇದ್ದ ಬಂಗಾಳದ 16 ಲಕ್ಷ ಮತದಾರರ ಹೆಸರನ್ನು ಕೈಬಿಡಲು ಸಾಕ್ಷಾತ್ ಚುನಾವಣಾ ಆಯೋಗವೇ ಸಾರಾಸಗಟಾಗಿ ಕೋರ್ಟ್ ಮೆಟ್ಟಿಲೇರಿತು ಎಂಬುದು ಅಕ್ಷರಶಃ ದಿಗ್ಭ್ರಮೆ ಮೂಡಿಸುವ ಸಂಗತಿ.

- Advertisement -

ಈ ಎಸ್ಐಆರ್ ಅವಾಂತರಕ್ಕೆ ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗಗಳೆರಡೂ ಜಂಟಿಯಾಗಿ ಹೊಣೆಯಾಗಿವೆ. ಮತದಾರರ ಪಟ್ಟಿಯ ಪಾವಿತ್ರ್ಯತೆಯನ್ನು ಕಾಪಾಡುವ ಸಂಪೂರ್ಣ ಅಧಿಕಾರ ಚುನಾವಣಾ ಆಯೋಗಕ್ಕಿದೆ. ಚುನಾವಣಾ ಆಯುಕ್ತರನ್ನು ನೇರವಾಗಿ ಕೆಲಸದಿಂದ ತೆಗೆದುಹಾಕಲು ಸಾಧ್ಯವಿಲ್ಲ. ಅದಕ್ಕಾಗಿ ಸಂಸತ್ತಿನಲ್ಲಿ ವಿಶೇಷ ನಿರ್ಣಯ ತೆಗೆದುಕೊಂಡು ಅವರನ್ನು ಪದಚ್ಯುತಿಗೊಳಿಸಬಹುದು. ಅಂತಹ ಬಲವಾದ ರಕ್ಷಣೆಯನ್ನು ಅವರಿಗೆ ಸಂವಿಧಾನ ನೀಡಿದೆ. ಹೀಗಾಗಿ, ಆಯೋಗವನ್ನು ಪ್ರಶ್ನಿಸಿ ನಿಯಂತ್ರಣದಲ್ಲಿಡಲು ಉಳಿದಿರುವ ಏಕೈಕ ದಾರಿ ಸುಪ್ರೀಂ ಕೋರ್ಟ್ ಮಾತ್ರ. ಆಯೋಗದ ಅಧಿಕಾರವನ್ನು ಕಸಿದುಕೊಳ್ಳದೆ, ಆ ಅಧಿಕಾರ ದುರುಪಯೋಗವಾಗದಂತೆ ಬಲವಾದ ನಿಯಮಗಳು ಹಾಗೂ ರಕ್ಷಣಾತ್ಮಕ ಕವಚಗಳನ್ನು ನ್ಯಾಯಾಲಯ ರೂಪಿಸಬೇಕಿತ್ತು. ಆದರೆ ಕೋರ್ಟ್ ಮಧ್ಯಪ್ರವೇಶದಿಂದಲೂ ಈಗ ಜನರಿಗೆ ಯಾವುದೇ ನಿಜವಾದ ರಕ್ಷಣೆ ಸಿಗಲಿಲ್ಲ; ಬದಲಿಗೆ, ಆ ಗೊಂದಲದ ಪ್ರಕ್ರಿಯೆ ಸರಿಯಾಗಿದೆ ಎಂದು ನ್ಯಾಯಾಲಯವೇ ಒಪ್ಪಿಗೆ ಕೊಟ್ಟು ಊರ್ಜಿತಗೊಳಿಸಿದಂತಾಯಿತು. ಇದಕ್ಕಿಂತ ಕೆಟ್ಟ ಸಂಗತಿಯೆಂದರೆ, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರು ಪಟ್ಟಿಯಿಂದ ಹೊರಗುಳಿದವರು ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸಿದರಾಯಿತು ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದರು. ಪಶ್ಚಿಮ ಬಂಗಾಳದ ರೆಜಿನಗರ ಮತ್ತು ನಂದಿಗ್ರಾಮ ಉಪಚುನಾವಣೆಗಳಿಗೆ ಮುನ್ನ ಬಾಕಿ ಉಳಿದಿರುವ ಮೇಲ್ಮನವಿಗಳ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿಗಳ ನಿಲುವಿನಲ್ಲೂ ಇದೇ ಉಡಾಫೆಯ ಧೋರಣೆಯೇ ಇತ್ತು. ಮತದಾನದ ಹಕ್ಕನ್ನು ಎಷ್ಟು ಹಗುರವಾಗಿ ಪರಿಗಣಿಸಬಹುದು ಎಂಬ ಆಘಾತಕಾರಿ ಸಂದೇಶವನ್ನು ಇಬ್ಬರೂ ರವಾನಿಸಿದರು. ಕೊನೆಗೆ, ನ್ಯಾಯಾಧೀಶರುಗಳು ಮತ್ತು ಆಯೋಗ ತಮಗೆ ತೋಚಿದಂತೆ ರೂಪಿಸಿಕೊಂಡ ನಿಯಮಗಳೇ ಜನರ ಮತದಾನದ ಹಕ್ಕನ್ನು ನಿರ್ಧರಿಸುವಂತಾಯಿತು. ಇಲ್ಲಿ ಎಸ್ಐಆರ್‌ನ ತಾಂತ್ರಿಕ ವಿವರಗಳಿಗಿಂತ ದೊಡ್ಡ ದುರಂತವೆಂದರೆ, ‘ನಮ್ಮನ್ನು ಯಾರೂ ಪ್ರಶ್ನಿಸಲಾರರು’ ಎಂಬ ಹೊಣೆಗೇಡಿತನ ಮತ್ತು ದುರಹಂಕಾರವೇ ಈ ಸಂಸ್ಥೆಗಳ ಕಾಯಂ ಸ್ವಭಾವವಾಗಿಬಿಟ್ಟಿರುವುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಜಕೀಯದಲ್ಲಿ ಮಹಿಳೆಯರ ಮೇಲೆ ಗಂಡಾಳ್ವಿಕೆಯ ಸಾಂಸ್ಕೃತಿಕ ರಾಜಕಾರಣ

ರಾಜಕೀಯದ ಮೇಲೆ ಪುರುಷ ಪ್ರಧಾನ ಹಿಡಿತ ಹೇಗೆ ನಿರ್ಮಾಣವಾಯಿತು? ರಾಜಕೀಯವೆಂದರೆ, ಜನರ ಬದುಕಿನ ಮೇಲೆ ನಿರ್ಧಾರ ತೆಗೆದುಕೊಳ್ಳುವ ಸಾರ್ವಜನಿಕ ಕ್ಷೇತ್ರ. ಆದರೆ ಶತಮಾನಗಳ ಕಾಲ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆ ಅದನ್ನು...

ಸಾಫ್ಟ್‌ವೇರ್ ಕೈಗೊಂಬೆಯಾದ ಚುನಾವಣಾ ವ್ಯವಸ್ಥೆ: ದೆಹಲಿಯಿಂದಲೇ ಇಡೀ ದೇಶದ...

ತಂತ್ರಜ್ಞಾನವು ಚುನಾವಣಾ ಪ್ರಕ್ರಿಯೆಯನ್ನು ಸುಲಭ ಮತ್ತು ಪಾರದರ್ಶಕಗೊಳಿಸಲು ಇರಬೇಕೇ ವಿನಃ, ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸಲು ಅಲ್ಲ. ಒಬ್ಬ ಐಟಿ ಅಧಿಕಾರಿಯ ವಿವೇಚನಾರಹಿತ ನಿರ್ಧಾರಗಳು ಹಾಗೂ ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ಸಾಂಸ್ಥಿಕ ಮೌನವು ಇಡೀ ಚುನಾವಣಾ...

ಈ ದಿನ ಕವಿತೆ | ಏನೂ ಇಲ್ಲ- ನಾಸೆರ್...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಇರಾನಿನ ಕವಿ ನಾಸೆರ್ ಫಯ್ಜ್ ಅವರ ಕವನವೊಂದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಹೆಚ್‌ ಭಾಗ್ಯ ಅಳುವ ಮಗವೊಂದನು ಸುಟ್ಟು ಬೂದಿ ಮಾಡಿದರು. ಅವನು ಏನೂ ಇಲ್ಲವೆಂದ. ತನ್ನೆಲ್ಲಾ...

ಇದನ್ನು ಓದಿದ್ದೀರಾ?: ಅನ್ಯಾಯದ ವಿರುದ್ಧ ಹೋರಾಟಕ್ಕೆ ಹೊಸ ರೂಪು: ‘ಸತ್ಯಾಗ್ರಹ’ ಪೋರ್ಟಲ್ ಪರಿಚಯಿಸಿದ ರಾಹುಲ್ ಗಾಂಧಿ

ಈ ಸಾಂವಿಧಾನಿಕ ಸಂಸ್ಥೆಗಳಿಗೆ ತಮ್ಮ ಸ್ವಂತ ಹೊಣೆಗಾರಿಕೆಯ ಅರಿವೇ ಇಲ್ಲದಿರುವುದು ಗಾಬರಿಹುಟ್ಟಿಸುತ್ತದೆ. ʻಜಿರಳೆಗಳುʼ ಎಂಬ ತಮ್ಮ ಹೇಳಿಕೆಯಿಂದ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಮುಖ್ಯ ನ್ಯಾಯಮೂರ್ತಿಗಳಿಗೆ, ಪ್ರಜೆಗಳನ್ನು ಸ್ವತಂತ್ರ ಮತ್ತು ಸಮಾನ ನಾಗರಿಕರೆಂದು ಕಾಣುವುದು ಎಂದರೆ ಏನೆಂಬ ಕನಿಷ್ಠ ಪ್ರಜ್ಞೆಯಾದರೂ ಇರಬೇಕಿತ್ತಲ್ಲವೇ? ಜನ ಪ್ರಶ್ನಿಸಿದಾಗ ಅದನ್ನು ತನ್ನ ಅಧಿಕಾರದ ಮೇಲಿನ ಹಲ್ಲೆಯಾಗಿ ಭಾವಿಸುವ ಸರ್ಕಾರದ ಧೋರಣೆಯನ್ನು ನಾವು ಅರ್ಥಮಾಡಿಕೊಳ್ಳಬಹುದು; ಏಕೆಂದರೆ ಸರ್ಕಾರಗಳು ನಡೆದುಕೊಳ್ಳುವುದೇ ಹಾಗೆ. ಆ ಸರ್ಕಾರವು ಕನಿಷ್ಠ ಪಕ್ಷ ಮುಂದೊಂದು ದಿನ ಚುನಾವಣೆಯಲ್ಲಿ ಜನರ ತೀರ್ಪನ್ನು ಎದುರಿಸಬೇಕಾಗುತ್ತದೆ. ಆದರೆ ನಿರಂಕುಶ ಅಧಿಕಾರ ಮತ್ತು ಹಕ್ಕುಚ್ಯುತಿಯಿಂದ ನಾಗರಿಕರನ್ನು ರಕ್ಷಿಸುವ ಜವಾಬ್ದಾರಿ ಹೊತ್ತ ಸಾಂವಿಧಾನಿಕ ಅಧಿಕಾರಿಗಳೇ ವ್ಯವಸ್ಥಿತವಾಗಿ ಹೀಗೆ ವರ್ತಿಸುವುದು ಅತ್ಯಂತ ಕೆಟ್ಟ ವಿವೇಕಹೀನತೆಯ ಸಂಕೇತವಾಗಿದೆ. ಇಂತಹ ವ್ಯವಸ್ಥೆಯಿಂದ ರೂಪುಗೊಳ್ಳುವ ಸಾಂವಿಧಾನಿಕ ಸುವ್ಯವಸ್ಥೆಯನ್ನು ನಾವು ಏನೆಂದು ಕರೆಯಬೇಕು? ನಾಚಿಕೆಯಿಲ್ಲದ ಸಂವಿಧಾನ ಎನ್ನಬೇಕೇ ಅಥವಾ ಯಾರೂ ಶಿಕ್ಷಿಸಲಾಗದ ಹೊಣೆಗೇಡಿತನದ ಸಂವಿಧಾನ ಎನ್ನಬೇಕೇ? ಈ ಪರಿಸ್ಥಿತಿ ಪ್ರಾಚೀನ ರೋಮ್‌ನ ಇತಿಹಾಸಕಾರರಿಗೆ ಚಿರಪರಿಚಿತವಾಗಿತ್ತು. ಸಾಂವಿಧಾನಿಕ ಹುದ್ದೆಗಳನ್ನು ಅಧಿಕೃತವಾಗಿ ರದ್ದುಗೊಳಿಸದೆಯೇ, ಅವುಗಳನ್ನು ಹಾಗೇ ಉಳಿಸಿಕೊಂಡು ಅದರ ಚೌಕಟ್ಟಿನಲ್ಲೇ ಸ್ವೇಚ್ಛಾಚಾರದ ಸರ್ವಾಧಿಕಾರಿ ಶಕ್ತಿಗಳು ಹೇಗೆ ಬೇರೂರಬಲ್ಲವು ಎಂಬುದಕ್ಕೆ ಇದು ಪ್ರತ್ಯಕ್ಷ ನಿದರ್ಶನ.

WhatsApp Image 2026 10 03 at 17.31.40

ಇಲ್ಲಿ ಸಂಸ್ಥೆಗಳ ಒಳಗೆ ನಡೆಯುತ್ತಿರುವ ಇನ್ನೊಂದು ಆತಂಕಕಾರಿ ಸಂಗತಿಯಿದೆ. ಚುನಾವಣಾ ಆಯೋಗದ ಆಂತರಿಕ ಬೆಳವಣಿಗೆಗಳು ಸರ್ಕಾರಕ್ಕೆ ಎಷ್ಟರಮಟ್ಟಿಗೆ ತಿಳಿದಿದ್ದವು ಎಂಬ ಪ್ರಶ್ನೆ ಖಂಡಿತ ನ್ಯಾಯಸಮ್ಮತವಾದದ್ದು. ಇವೆಲ್ಲ ಕಾನೂನಿನ ಪ್ರಕಾರವೇ ನಡೆಯುತ್ತಿವೆ ಎಂದು ಸರ್ಕಾರ ನಂಬಿತ್ತೇ ಎಂಬ ಸಂಶಯವೂ ಮೂಡುತ್ತದೆ. ಆದರೆ ಸ್ವತಃ ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗಗಳೇ ಇಷ್ಟು ಬೇಜವಾಬ್ದಾರಿಯಾಗಿ ನಡೆದುಕೊಂಡಿವೆ. ಅವುಗಳಿಗೆ ಸಂವಿಧಾನದ ಕನಿಷ್ಠ ಅರಿವೂ ಇದ್ದಂತೆ ತೋರುತ್ತಿಲ್ಲ. ಹೀಗಿರುವಾಗ, ಎಲ್ಲ ತಪ್ಪುಗಳ ಜವಾಬ್ದಾರಿಯನ್ನು ಸರ್ಕಾರದ ಮೇಲೆ ಮಾತ್ರ ಹೊರಿಸುವುದಕ್ಕೆ ಸಾಧ್ಯವೇ?

ಆಯೋಗದ ನಡೆಗಳು ಸರ್ಕಾರದ ಆಣತಿಯಂತೆಯೇ ನಡೆಯುತ್ತಿವೆ ಎಂದು ವಾದಿಸಬಹುದು. ವಿಪರ್ಯಾಸವೆಂದರೆ, ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ ‘ಸ್ವತಂತ್ರತೆ’ ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ ಸಲೀಸಾಗಿ ನುಣುಚಿಕೊಳ್ಳಬಹುದಾದ ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ.

ಇದನ್ನು ಓದಿದ್ದೀರಾ?: ಕರ್ನಾಟಕ SIR | ಮತ ಹಕ್ಕಿಗೇ ಕನ್ನ: ಪರಿಶೋಧನಾ ವರದಿ ಬಿಚ್ಚಿಟ್ಟ ಮತದಾರರ ಕಣ್ಣೀರ ಕಥನ

ಈ ಸಾಂಸ್ಥಿಕ ಅವನತಿಯ ಒಳಾರ್ಥವನ್ನು ಸೂಕ್ಷ್ಮವಾಗಿ ಗಮನಿಸಬೇಕು. ವ್ಯವಸ್ಥೆಯ ಕೀವು ಕೇವಲ ರಾಜಕಾರಣದಲ್ಲಷ್ಟೇ ಶುರುವಾಗಿ ಅಲ್ಲಿಗೇ ಮುಗಿಯುವುದಿಲ್ಲ; ಅದು ಬಹುಶಃ ಒಂದು ಇಡೀ ತಲೆಮಾರಿನ ಮತದಾರರಲ್ಲೂ ಹಾಗೂ ಸರ್ಕಾರಿ ಅಧಿಕಾರಿ ವರ್ಗದಲ್ಲೂ ಆಳವಾಗಿ ಬೇರೂರಿದೆ ಎಂಬುದನ್ನು ಇದು ತೋರಿಸುತ್ತದೆ. ಚುನಾವಣಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಕಾರ್ಯಾಂಗಕ್ಕೆ ಅತಿಯಾದ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಈಗ ತಡವಾಗಿ ಮತ್ತೆ ಆಕ್ಷೇಪವೆತ್ತಿದೆ. ಆದರೆ ಕೇವಲ ಕಾಗದದ ಮೇಲಿನ ನೇಮಕಾತಿ ನಿಯಮಗಳು ಆ ಹುದ್ದೆಗೆ ಬರುವ ವ್ಯಕ್ತಿಗಳ ಗುಣಮಟ್ಟವನ್ನಾಗಲಿ ಅಥವಾ ಆ ಉನ್ನತ ಸ್ಥಾನದಲ್ಲಿ ಅವರ ನಡತೆಯನ್ನಾಗಲಿ ಖಾತರಿಪಡಿಸುವುದಿಲ್ಲ. ಇದಕ್ಕೆ ಸ್ವತಃ ಸುಪ್ರೀಂ ಕೋರ್ಟ್‌ನ ವರ್ತನೆಯೇ ಜೀವಂತ ನಿದರ್ಶನವಾಗಿದೆ. ನೀತಿ ನಿಯಮಗಳು ಎಂದಿಗೂ ಸದಾಚಾರಕ್ಕೆ ಪರ್ಯಾಯವಾಗಲಾರವು, ಅಥವಾ ನೀತಿನಿಯಮಗಳಿಗೆ ಸದಾಚಾರವನ್ನು ಕೃತಕವಾಗಿ ಸೃಷ್ಟಿಸುವುದಕ್ಕೂ ಸಾಧ್ಯವಿಲ್ಲ.

ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಜನರಲ್ಲಿ ಅಪನಂಬಿಕೆ ಹುಟ್ಟಿಸುವುದೇ ಬಿಜೆಪಿಯ ದೀರ್ಘಕಾಲೀನ ರಾಜಕೀಯ ಕಾರ್ಯತಂತ್ರವಾಗಿದೆ. ಸಾಂವಿಧಾನಿಕ ಅಧಿಕಾರಿಗಳ ಮೇಲಿನ ಅನುಮಾನಗಳನ್ನೇ ಬಂಡವಾಳ ಮಾಡಿಕೊಂಡು ಅದು ರಾಜಕೀಯವಾಗಿ ಬೆಳೆಯುತ್ತದೆ. ಆದರೆ ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್ ತಮ್ಮ ನಡವಳಿಕೆಯ ಮೂಲಕ ಬಿಜೆಪಿಯ ಈ ತಂತ್ರಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತಿದೆ. ಒಟ್ಟಾರೆಯಾಗಿ ಸ್ವತಂತ್ರ ಸಂಸ್ಥೆಗಳನ್ನು ನಂಬುವುದಕ್ಕೆ ಸಾಧ್ಯವಿಲ್ಲ ಎನ್ನುವಂತಹ ವಾತಾವರಣ ಸೃಷ್ಟಿಸಲಾಗಿದೆ. ಈ ದುಸ್ಥಿತಿಯನ್ನು ಬದಲಾಯಿಸಲು ಈಗ ಭಗೀರಥ ಪ್ರಯತ್ನವೇ ಬೇಕಿದೆ. ತಮ್ಮ ನಡವಳಿಕೆಯ ಬಗ್ಗೆ ಸಾರ್ವಜನಿಕವಾಗಿ ಅನುಮಾನಗಳು ವ್ಯಕ್ತವಾದಾಗ ಚುನಾವಣಾ ಆಯೋಗ ಹೊರಡಿಸಿದ ಪತ್ರಿಕಾ ಪ್ರಕಟಣೆಗಳು ಕಾಟಾಚಾರದ ಉತ್ತರಗಳಾಗಿದ್ದವು. ಅವುಗಳಲ್ಲಿ ಪ್ರಕ್ರಿಯೆಯ ಲೋಪಗಳ ಅರೆಬರೆ ಒಪ್ಪಿಗೆಯೂ ಇತ್ತು, ತೊಂದರೆಗೊಳಗಾದ ಮತದಾರರಿಗೆ ನೆರವಾಗುವ ಆಶ್ವಾಸನೆಯೂ ಅದರಲ್ಲಿತ್ತು. ಮಾಧ್ಯಮಗಳು ಹಾಗೂ ವಿಪಕ್ಷಗಳು ಎಷ್ಟೇ ಕೂಗಿಕೊಂಡರೂ, ಮುಖ್ಯವಾಗಿ ಹಕ್ಕಿನಿಂದ ವಂಚಿತರಾದ ಮತದಾರರ ಸಂಘಟಿತ ಆಕ್ರೋಶ ಕಾಣಿಸುತ್ತಿಲ್ಲ. ಅದು ತೀರಾ ನಿರ್ಣಾಯಕವಾದ ಧ್ವನಿ. ಬಹುಷಃ ಪರಿಷ್ಕರಣೆಯ ಕಸರತ್ತು ಇನ್ನೂ ಪೂರ್ಣವಾಗದಿರುವುದು ಮತ್ತು ಕಾನೂನು ಪ್ರಕ್ರಿಯೆಗಳು ಮುಂದುವರಿಯುತ್ತಿರುವುದು ಇದಕ್ಕೆ ಭಾಗಶಃ ಕಾರಣವಿರಬಹುದು.

ಇದನ್ನು ಓದಿದ್ದೀರಾ?: SIR ಅಕ್ರಮ: ಲೋಕಸಭೆ, ವಿಧಾನಸಭೆಗಳ ವಿಸರ್ಜನೆಗೆ ಖರ್ಗೆ ಒತ್ತಾಯ; ತಕ್ಷಣ ಹೊಸ ಚುನಾವಣೆಗೆ ಆಗ್ರಹ

ಆದರೆ ಮತದಾನದ ಹಕ್ಕಿನಿಂದ ವಂಚಿತರಾದ ಕೋಟ್ಯಂತರ ಜನ ಸಾರ್ವಜನಿಕ ಚರ್ಚೆಯ ಮುಂಚೂಣಿಗೆ ಬಂದು ಧ್ವನಿ ಎತ್ತಬೇಕು. ಅವರು ಹಿಂದೆಯೇ ಉಳಿದಿದ್ದಾರೆ. ಈ ಲಕ್ಷಾಂತರ ಮತದಾರರನ್ನು ಕೇವಲ ಅಂಕಿಅಂಶವಾಗಿ ನೋಡದೆ ಒಂದು ಪ್ರಬಲ ರಾಜಕೀಯ ಶಕ್ತಿಯನ್ನಾಗಿ ಒಗ್ಗೂಡಿಸಬೇಕು. ಅದು ಸುಲಭದ ವಿಷಯವಲ್ಲ. ಅದರಿಂದಾಗಿಯೇ, ಈ ಮಹಾದ್ರೋಹದ ವಿರುದ್ಧ ಸಿಡಿಯಬೇಕಿದ್ದ ಜನಾಕ್ರೋಶಕ್ಕೆ ಬರಬೇಕಾದ ಮೊಣಚು ಬಂದಿಲ್ಲ.

ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡುವುದು ಬಹುಶಃ ಉತ್ತರದಾಯಿತ್ವದ ಒಂದು ಸಾಂಕೇತಿಕ ಸಂದೇಶವಾಗಬಹುದು. ಸುಪ್ರೀಂ ಕೋರ್ಟ್ ತಡವಾಗಿಯಾದರೂ ಈ ಪರಿಷ್ಕರಣಾ ಪ್ರಕ್ರಿಯೆಯ ಘನತೆಯನ್ನು ಮರುಸ್ಥಾಪಿಸುವುದು ಮತ್ತೊಂದು ಹೆಜ್ಜೆಯಾಗಬಹುದು. ಆದರೆ ಇದೆಲ್ಲದರ ನಡುವೆ ಅತ್ಯಂತ ಮುಖ್ಯವಾದದ್ದೊಂದು ಈಗಾಗಲೇ ನಾಶವಾಗಿಹೋಗಿದೆ; ಸಾಂವಿಧಾನಿಕ ಸಂಸ್ಥೆಗಳನ್ನು ಮತ್ತು ಅಲ್ಲಿ ಪ್ರಮುಖ ಸ್ಥಾನದಲ್ಲಿ ಕುಳಿತಿರುವ ಕೆಲವೇ ಹಿರಿಯ ಅಧಿಕಾರಿಗಳನ್ನು ನಂಬಬಹುದು ಎಂದು ಜನಸಾಮಾನ್ಯರಿಗಿದ್ದ ವಿಶ್ವಾಸವೇ ಕಮರಿಹೋಗಿದೆ.

(ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್, ಲೇಖಕರು: ಪ್ರತಾಪ್ ಭಾನು ಮೆಹ್ತಾ, ಕಂಟ್ರಿಬ್ಯೂಟಿಂಗ್ ಎಡಿಟರ್, ಅನುವಾದ: ಟಿ.ಎಸ್.‌ ವೇಣುಗೋಪಾಲ್)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ SIR | ಮತ ಹಕ್ಕಿಗೇ ಕನ್ನ: ಪರಿಶೋಧನಾ ವರದಿ ಬಿಚ್ಚಿಟ್ಟ ಮತದಾರರ ಕಣ್ಣೀರ ಕಥನ

ಪ್ರಜಾಪ್ರಭುತ್ವದ ಅಡಿಪಾಯವೇ ಮತದಾರ ಮತ್ತು ಮತದಾನ. ಆದರೆ, ಈ ಅಡಿಪಾಯವನ್ನೇ ಕೆಡವುವ...

ಔರಾದ್ | ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾಗಿ ರವಿ ಡೋಳೆ ಆಯ್ಕೆ

ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ‌ (6ರಿಂದ 8ನೇ) ಸಂಘದ ಔರಾದ್...

ಅವಳ ಕಣ್ಣೋಟ | ಲಿಪ್‌ಸ್ಟಿಕ್‌ನ ಬಣ್ಣದ ಕೆಳಗೆ ಹುದುಗಿದ ಕನಸುಗಳು

ಭಾರತೀಯ ಚಿತ್ರರಂಗಕ್ಕೆ ಮಹಿಳೆಯ ಆಸೆ, ಲೈಂಗಿಕತೆ, ದಾಂಪತ್ಯದೊಳಗಿನ ಅಸಮಾನತೆ ಮತ್ತು ಸ್ವಾತಂತ್ರ್ಯದ...

SIR ಅಕ್ರಮ: ಲೋಕಸಭೆ, ವಿಧಾನಸಭೆಗಳ ವಿಸರ್ಜನೆಗೆ ಖರ್ಗೆ ಒತ್ತಾಯ; ತಕ್ಷಣ ಹೊಸ ಚುನಾವಣೆಗೆ ಆಗ್ರಹ

ಪ್ರಸ್ತುತ ದೇಶಾದ್ಯಂತ ನಡೆದಿರುವ ಹಾಗೂ ಮುಗಿದಿರುವ ಚುನಾವಣೆಗಳ ಸಿಂಧುತ್ವವನ್ನೇ ಪ್ರಶ್ನಿಸಿರುವ ಕಾಂಗ್ರೆಸ್...