ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್ ಮೂಲಕ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸದಸ್ಯರು ಮತ್ತು ಅಕ್ರಮ ಶಸ್ತ್ರಾಸ್ತ್ರಗಳ ಕಳ್ಳಸಾಗಣೆದಾರರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಡಿ ಭಾಲ್ಕಿ ತಾಲ್ಲೂಕಿನ ಏಣಕೂರ ಗ್ರಾಮದ ವಿಶಾಲಕುಮಾರ್ ಮೇತ್ರೆ (24) ಎಂಬಾತನನ್ನು ಎನ್ಐಎ ತಂಡದವರು ಬಂಧಿಸಿದ್ದಾರೆ ಎನ್ನಲಾಗಿದೆ.
ವಿಶಾಲಕುಮಾರ್ ಮೇತ್ರೆ ಪಾಕಿಸ್ತಾನ ಮೂಲದ ನಿಷೇಧಿತ ಸಂಘಟನೆಗಳ ಸದಸ್ಯರೆಂದು ಹೇಳಲಾಗಿರುವ ಶಹಜಾದ್ ಭಟ್ಟಿ, ರಾಣಾ ಹುನೈನಿ ಹಾಗೂ ನೋಮಿ ಖಾನ್ ಅವರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕದಲ್ಲಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಅಶು ಶರ್ಮಾ ಹಾಗೂ ಮಧ್ಯಪ್ರದೇಶದ ರಾಜು ಭಾಯ್ ಎಂಬುವರಿಂದ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ, ಅವುಗಳನ್ನು ಕಳ್ಳಸಾಗಣೆ ಮೂಲಕ ಮಾರಾಟ ಮಾಡುತ್ತಿದ್ದ ಆರೋಪವೂ ಇದೆ. ದೇಶದ ಐಕ್ಯತೆ ಹಾಗೂ ಸಮಗ್ರತೆಗೆ ಧಕ್ಕೆ ಉಂಟುಮಾಡುವ ಸಂಘಟನೆಗಳ ಸದಸ್ಯರೊಂದಿಗೆ ಸಂಪರ್ಕ ಹೊಂದಿ, ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಬೀದರ್ | ಪಿಸ್ತೂಲ್ ಮಾರಾಟ ಜಾಲ ಪತ್ತೆ ಹಚ್ಚಿದ ಪೊಲೀಸರು: ಮುಖ್ಯ ಆರೋಪಿ ಸೇರಿ ನಾಲ್ವರ ಬಂಧನ
This video cannot be played in your browser. Open the video directly
ವಿಶಾಲಕುಮಾರ್‌ನ ಚಲನವಲನದ ಮೇಲೆ ಗುಪ್ತಚರ ಇಲಾಖೆ ಹಲವು ತಿಂಗಳಿಂದ ನಿಗಾ ಇರಿಸಿತ್ತು ಎನ್ನಲಾಗಿದೆ. ಬಳಿಕ ಮಾಹಿತಿ ಆಧರಿಸಿ ಪೊಲೀಸರು ಆತನನ್ನು ಬಂಧಿಸಿದ್ದು, ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ಮುಂದುವರಿದಿದ್ದು, ವಿಶಾಲಕುಮಾರ್‌ಗೆ ಸಂಪರ್ಕ ಹೊಂದಿರುವ ಇತರ ವ್ಯಕ್ತಿಗಳು ಹಾಗೂ ಅಕ್ರಮ ಶಸ್ತ್ರಾಸ್ತ್ರಗಳ ಜಾಲದ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.




