ಕನ್ನಡ ಭಾಷೆ ಹಳೆಗನ್ನಡ, ನಡುಗನ್ನಡ, ಆಧುನಿಕ ಸಾಹಿತ್ಯ ಸೇರಿದಂತೆ ಶರಣರು, ದಾಸರು, ನವೋದಯ ಹಾಗೂ ನವ್ಯ ಸಾಹಿತ್ಯದ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ಕನ್ನಡದ ಭಾಷಾ ಅಸ್ಮಿತೆ ಎಲ್ಲರನ್ನೂ ಆಕರ್ಷಿಸುತ್ತಿದೆ ಎಂದು ಧಾರವಾಡ ಕೆಲಗೇರಿಯ ಜೆ.ಎಸ್.ಎಸ್. ಪಬ್ಲಿಕ್ ಸ್ಕೂಲ್ ಆಡಳಿತಾಧಿಕಾರಿ ಎಸ್.ಜಿ. ಬಿರಾದಾರ ಹೇಳಿದರು.
ಧಾರವಾಡ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಪಾಟೀಲ ಗುರುಕುಲ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ತಿಂಗಳ ನಾಡಹಬ್ಬದ ಅಂಗವಾಗಿ ಆಯೋಜಿಸಿದ್ದ ‘ಹಚ್ಚೇವು ಕನ್ನಡದ ದೀಪ’ ಹಾಡು, ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕ ಏಕೀಕರಣದ ಹೋರಾಟಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ಕೊಡುಗೆ ಮಹತ್ವದ್ದಾಗಿದೆ.
ವಿವಿಧ ಆಡಳಿತ ಪ್ರದೇಶಗಳಾಗಿ ವಿಭಜಿತವಾಗಿದ್ದ ಕನ್ನಡನಾಡು ಒಂದಾಗುವಲ್ಲಿ ಸಂಘದ ಪಾತ್ರ ಸಿಂಹಪಾಲಾಗಿದೆ. ಇದು ಕನ್ನಡಿಗರೆಲ್ಲರ ಹೆಮ್ಮೆಯ ಸಂಗತಿ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಸಹ ಕಾರ್ಯದರ್ಶಿ ಶಂಕರ ಕುಂಬಿ, ಕನ್ನಡ ಶಾಲೆಗಳು ಅವನತಿಯ ಅಂಚಿನಲ್ಲಿದ್ದು, ಅವುಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ. ಸಂಘದ ಸದಸ್ಯರು ಬೆಳಗಾವಿ ಜಿಲ್ಲೆಯ ಹಲವು ಶಾಲೆಗಳಿಗೆ ನೆರವು ನೀಡಿ ಉಳಿಸಿಕೊಂಡಿರುವ ಉದಾಹರಣೆಗಳಿವೆ ಎಂದರು.
ಜಾನಪದ ಕಲಾವಿದ ಶಂಭಯ್ಯ ಹಿರೇಮಠ ಮಾತನಾಡಿ, ಕನ್ನಡನಾಡು ಕಲೆ, ಸಾಹಿತ್ಯ ಮತ್ತು ಪರಂಪರೆಯ ಶ್ರೀಮಂತ ನೆಲವಾಗಿದೆ. ರನ್ನ, ಜನ್ನ, ಪಂಪ, ಪೊನ್ನ, ಕುವೆಂಪು, ಬೇಂದ್ರೆ, ಚನ್ನವೀರ ಕಣವಿ, ಚಂದ್ರಶೇಖರ ಪಾಟೀಲ ಹಾಗೂ ಡಾ. ಪಾಟೀಲ ಪುಟ್ಟಪ್ಪ ಅವರ ಸಾಹಿತ್ಯ ಸೇವೆ ಕನ್ನಡದ ಹೆಮ್ಮೆಯಾಗಿದೆ. ನವೆಂಬರ್ ತಿಂಗಳನ್ನು ನಾಡಹಬ್ಬವಾಗಿ ಆಚರಿಸುವ ಮೂಲಕ ಕನ್ನಡದ ಕಂಪನ್ನು ಹರಡಬೇಕು ಎಂದರು.



