ಜಮೀನು ವ್ಯಾಜ್ಯ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ಉಂಟಾಗಿದ್ದು, ಈ ವೇಳೆ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಅಂಗರಕ್ಷಕರು ಯುವಕನೊಬ್ಬನ ಕಾಲಿಗೆ ಗುಂಡು ಹೊಡೆದ ಘಟನೆ ಧಾರವಾಡ ಹೊರವಲಯದ ತಡಸಿಕೊಪ್ಪದ ಬಳಿ ಮಂಗಳವಾರ ನಡೆದಿದೆ.
ಗಾಯಾಳು ವಿಠಲ ಅವರನ್ನು ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದ್ರಪಾಲ್ ಸಿಂಗ್ ಸಹಿತ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾಗಿರಿ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ.
“ತಡಸಿನಕೊಪ್ಪ ಭಾಗದ ಮೂರು ಎಕರೆ ಜಾಗದ ವಿಚಾರದಲ್ಲಿ ವ್ಯಾಜ್ಯ ನಡೆದಿದೆ. ಡೆವಲಪರ್ ಜಾಗ ಅಭಿವೃದ್ಧಿಪಡಿಸುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಜಾಗದ ಸುಪರ್ದಿದಾರ ವಿಠಲ ಮತ್ತು ಡೆವಲಪರ್ ನಡುವೆ ಸಂಘರ್ಷ ನಡೆದಿದೆ. ವಿಷಯ ಗೊತ್ತಾಗಿ ವಿಠಲ ಅವರ ಕುಟುಂಬದವರು, ಗ್ರಾಮಸ್ಥರು ಅಲ್ಲಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಡೆವಲಪರ್‌ನ ಖಾಸಗಿ ಗನ್ ಮ್ಯಾನ್ ಇಂದ್ರಪಾಲ್ ಸಿಂಗ್ ಗುಂಡು ಹಾರಿಸಿದ್ದಾರೆ. ವಿಠಲ ಅವರು ಎಡಗಾಲಿನ ಕಿರುಬೆರಳಿನ ಭಾಗಕ್ಕೆ ಗುಂಡು ತಗುಲಿದೆ’ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು.
ಕೃತ್ಯಕ್ಕೆ ಸಂಬಂಧಿಸಿದಂತೆ ಈವರೆಗೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುವುದು. ಕೃತ್ಯದ ಕಾರಣ ಪತ್ತೆ ಹಚ್ಚಲಾಗುವುದು’ ಎಂದರು.




