“ಗ್ರಾಮೀಣ ಪ್ರದೇಶದ ಸರ್ಕಾರಿ ಕಾಲೇಜುಗಳು ಸಧೃಡ ಸಮಾಜ ನಿರ್ಮಾಣಕ್ಕೆ ಮಹತ್ವದ ಪಾತ್ರ ವಹಿಸುತ್ತವೆ. ಇಲ್ಲಿ ಕಲಿಯುವ ರೈತರ, ಬಡವರ ಹಾಗೂ ಆರ್ಥಿಕವಾಗಿ ಹಿಂದುಳಿದವರ ಮಕ್ಕಳು ಬದುಕು ಕಟ್ಟಿಕೊಂಡಾಗ ಸಿಗುವ ಸಂತೋಷಕ್ಕೆ ಬೆಲೆಕಟ್ಟಲು ಆಗುವುದಿಲ್ಲ” ಎಂದು ಸೇವಾನಿವೃತ್ತಿ ಹೊಂದಿದ ಪ್ರಾಂಶುಪಾಲ ಎಸ್. ಎಲ್. ಗುಳೇದಗುಡ್ಡ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಸೇವಾನಿವೃತ್ತಿ ಹಾಗೂ ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
“ಗೌರಯುತ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆಯುತ್ತಿರುವುದು ನನ್ನ ಸ್ಮರಣೀಯ ದಿನಗಳಾಗಿವೆ. ಸೇವಾ ದಿನಗಳಲ್ಲಿ ಮಾಡಿದ ಕೆಲಸ ಆತ್ಮತೃಪ್ತಿ ನೀಡಿದೆ” ಎಂದು ಹೇಳಿ ತಮ್ಮ ಸೇವೆಯ ದಿನಗಳನ್ನು ಸ್ಮರಿಸಿಕೊಂಡರು.
ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಪ್ರಕಾಶ ಹೊಸಮನಿ ಮಾತನಾಡಿ, “ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಚೆನ್ನಾಗಿ ಕಲಿಯಬೇಕು ಎನ್ನುವ ಉದ್ದೇಶದೊಂದಿಗೆ ನಿರಂತರ ಬೋಧನೆ ಮಾಡಿ ಅವರ ಪ್ರಗತಿಗೆ, ಕಾಲೇಜಿನ ಅಭಿವೃದ್ದಿಗೆ ಶ್ರಮಿಸಿದ್ದಾರೆ” ಎಂದರು.
ಗದಗನ ನಿವೃತ್ತ ಪ್ರಾಂಶುಪಾಲ ಎಫ್. ಎಸ್. ಸಿದ್ನೇಕೊಪ್ಪ ಮಾತನಾಡಿ, “ಕಾಲೇಜು ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಕಾಲೇಜಿಗೆ ನಾವು ಏನು ಕೊಟ್ಟಿದ್ದೇವೆ ಎಂಬುದನ್ನು ಅರಿತು ಜೀವನ ಸಾಗಿಸಬೇಕು. ಹಾಗೆ ಕೊಡುಗೆಗಳನ್ನು ನೀಡುತ್ತಾ ಬಂದ ಗುಳೇದಗುಡ್ಡ ಅವರ ನಿವೃತ್ತ ಜೀವನ ಸುಖಕರವಾಗಿರಲಿ” ಎಂದರು.
ನರೇಗಲ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇವಾ ನಿವೃತ್ತಿ ಹೊಂದಿದ ಪ್ರಾಂಶುಪಾಲ ಎಸ್. ಎಲ್. ಗುಳೇದಗುಡ್ಡ ದಂಪತಿಗಳನ್ನು ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಹಿರಿಯ ಪ್ರಾಧ್ಯಾಪಕಿ ಜಯಶ್ರೀ ಮುತಗಾರ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡರು. ಈ ವೇಳೆ ಈ. ಆರ್. ಲಗಳೂರ, ಶೋಭಾ ಮೆರವಾಡೆ, ಎಸ್. ಎಸ್. ಸೂಡಿ, ಸುನಂದಾ ಮುಂಜಿ, ಕಾಂಚನಮಾಲಾ ಪಾಟೀಲ, ನಸರೀನಾಬಾನು ಜಮಾದರ, ಶಿವಮೂರ್ತಿ ಕುರೇರ, ಅನಿಲಕುಮಾರ, ಶಶಿಕಲಾ ವಿ. ಎಸ್, ವಿರೂಪಾಕ್ಷ ದೇಶನೂರ, ವಿ. ಸಿ. ಇಲ್ಲೂರ, ಎಂ. ಎಫ್. ತಹಶೀಲ್ದಾರ, ಕೆ. ಎನ್. ಕಟ್ಟಿಮನಿ, ವಿ. ಕೆ. ಸಂಗನಾಳ, ಎನ್. ಎಸ್. ಹೊನ್ನೂರ, ಬಸವರಾಜ ಎಸ್. ಮಡಿವಾಳರ, ಲಕ್ಷ್ಮಣ ಹುಲ್ಲೂರು ಇದ್ದರು.




