ಪುರಾಣ ಪ್ರಸಿದ್ಧ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ಮಳೆಗಾಲದಲ್ಲಿ ಕೊಳಚೆ ನೀರು ನುಗ್ಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಬಂಧಿತ ಅಧಿಕಾರಿಗಳಿಗೆ ತುರ್ತು ನಿರ್ದೇಶನ ನೀಡಿದ್ದಾರೆ.
ಪರಿವರ್ತನ ಗೋಕರ್ಣ ಸಂಸ್ಥೆ ಸಲ್ಲಿಸಿದ್ದ ಮನವಿ ಹಾಗೂ ದೇವಾಲಯದೊಳಗೆ ನೀರು ನಿಂತಿರುವ ಚಿತ್ರಗಳನ್ನು ಪರಿಶೀಲಿಸಿದ ಬಳಿಕ, ಈ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವಂತೆ ಹಾಗೂ ದೇವಾಲಯದ ಅಭಿಷೇಕ ತೀರ್ಥ ಹೊರಹೋಗುವ ಸೋಮಸೂತ್ರವು ಸಂಗಮ ನಾಲೆಗೆ ಸೇರುವ ಸ್ಥಳದಲ್ಲಿ ಗೇಟ್ ವಾಲ್ವ್ ಅಳವಡಿಸಿ, ಮಳೆಗಾಲದ ವೇಳೆ ಹೊರಭಾಗದ ಕೊಳಚೆ ನೀರು ಗರ್ಭಗುಡಿಗೆ ಪ್ರವೇಶಿಸದಂತೆ ಶಾಶ್ವತ ವ್ಯವಸ್ಥೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಎರಡು ಬಾರಿ ದೇವಾಲಯದ ಗರ್ಭಗುಡಿಗೆ ಕೊಳಚೆ ನೀರು ನುಗ್ಗಿ ಭಕ್ತರು ಹಾಗೂ ದೇವಾಲಯದ ಆಡಳಿತ ಮಂಡಳಿಗೆ ತೊಂದರೆ ಉಂಟಾಗಿತ್ತು. ಈ ಘಟನೆ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಭೆ ನಡೆಸಿ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಸಂತೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅರಿವು ಅಭಿಯಾನ; ಜುಲೈ 29ರೊಳಗೆ ಗಣತಿ ನಮೂನೆ ಸಲ್ಲಿಸಲು ಕರೆ
ಸಭೆಯಲ್ಲಿ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ನಿವೇದಿತ್ ಆಳ್ವಾ ದೇವಾಲಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಇದೇ ವೇಳೆ ಮಾಜಿ ಸಚಿವ ಹಾಗೂ ಭಟ್ಕಳ ಶಾಸಕ ಮಂಕಾಳ ವೈದ್ಯ ಗೋಕರ್ಣದ ರಸ್ತೆ ಅಭಿವೃದ್ಧಿ ಮತ್ತು ಕೋಟಿತೀರ್ಥ ಅಭಿವೃದ್ಧಿ ಕಾಮಗಾರಿಗಳ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದರು.
ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ನಿವೇದಿತ್ ಆಳ್ವಾ, ಗೋಕರ್ಣ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದ್ದು, ಮೊದಲ ಹಂತದಲ್ಲಿ ದೇವಾಲಯದ ಕೊಳಚೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕಾರ್ಯ ಆರಂಭವಾಗಲಿದೆ ಎಂದು ಹೇಳಿದರು.
ಮಾಜಿ ಸಚಿವ ಹಾಗೂ ಭಟ್ಕಳ ಶಾಸಕ ಮಂಕಾಳ ವೈದ್ಯ ಮಾತನಾಡಿ, ಮುಖ್ಯಮಂತ್ರಿಗಳ ನಿರ್ದೇಶನದಂತೆ ಸಂಬಂಧಿತ ಅಧಿಕಾರಿಗಳು ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಿದ್ದು, ಗೋಕರ್ಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.




