ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್ ಹತ್ತಿರದ ಜೋಕಟ್ಟೆ ಪ್ರದೇಶದಲ್ಲಿರುವ ಎಂಆರ್‌ಪಿಎಲ್‌ನಲ್ಲಿ (Mangalore Refinery and Petrochemicals Limited) ಭೀಕರ ಸ್ಫೋಟ ಸಂಭವಿಸಿದ್ದು ಈ ಘಟನೆ ಬೆನ್ನಲ್ಲೇ ಎಂಆರ್‌ಪಿಎಲ್ ಮತ್ತು ಸ್ಥಳೀಯ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಸ್ಫೋಟವು ಕಂಪೆನಿಯ ನಿರ್ಲಕ್ಷ್ಯ, ದುರಹಂಕಾರ, ಜಿಲ್ಲಾಡಳಿತದ ಮೃದು ಧೋರಣೆ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿತನದ ಪ್ರತಿಫಲನ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) – ಸಿಪಿಐಎಂನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹೇಳಿದೆ.
ಈ ಬಗ್ಗೆ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪತ್ರಿಕಾ ಹೇಳಿಕೆ ನೀಡಿದ್ದಾರೆ. “ಎಂಆರ್‌ಪಿಎಲ್‌ನ ಮೂರನೇ ಹಂತದ ಘಟಕದಲ್ಲಿ ನಡೆದಿರುವ ಸ್ಫೋಟ ಮತ್ತು ಅದರಿಂದಾದ ಹಾನಿಯು ಕಂಪನಿ, ಜಿಲ್ಲಾಡಳಿತ ನೀಡುತ್ತಿರುವ ವಿವರಣೆಗಳಿಗಿಂತ ಹಲವು ಪಟ್ಟು ಗಂಭೀರವಾಗಿದೆ. ಕಂಪೆನಿಯು ಸ್ಪೋಟದ ತೀವ್ರತೆಯನ್ನು ಎಂದಿನಂತೆ ಲಘುಗೊಳಿಸಲು ಯತ್ನಿಸುತ್ತಿದೆ” ಎಂದು ದೂರಿದ್ದಾರೆ.
ಇದನ್ನೂ ಓದಿ: ಮಂಗಳೂರು | ಎಂಆರ್‌ಪಿಎಲ್‌ನಲ್ಲಿ ಭೀಕರ ಸ್ಫೋಟ: ಕಂಪಿಸಿದ ಜೋಕಟ್ಟೆ, ಹಲವು ಮನೆಗಳಿಗೆ ಹಾನಿ
“ಈ ಹಿಂದೆಯೂ ಎಂಆರ್‌ಪಿಎಲ್‌ನಲ್ಲಿ ಹಲವು ಅವಘಡಗಳು ನಡೆದಿವೆ, ಪ್ರಾಣ ಹಾನಿ ಸಂಭವಿಸಿವೆ. ಪರಿಸರ ನಿಯಮ, ಸುರಕ್ಷತಾ ನಿಯಮಗಳನ್ನು ಸತತವಾಗಿ ಉಲ್ಲಂಘಿಸಲಾಗಿದೆ. ಆದರೆ ಕಂಪೆನಿಯ ನಿರ್ಲಕ್ಷ್ಯ, ದುರಹಂಕಾರದ ನಡೆ, ಕಂಪೆನಿಯ ನಿಯಮ ಉಲ್ಲಂಘನೆ ಕುರಿತಾಗಿ ಜಿಲ್ಲಾಡಳಿತದ ಮೃದು ಧೋರಣೆ ತೋರುತ್ತಿದೆ. ಜನಪ್ರತಿನಿಧಿಗಳು ಬೇಜವಾಬ್ದಾರಿಯಿಂದ ನಡೆಯುತ್ತಿದ್ದಾರೆ. ಇವೆಲ್ಲವೂ ಇಂದಿನ ಭೀಕರ ಸ್ಪೋಟಕ್ಕೆ ಕಾರಣ” ಎಂದು ಸಿಪಿಐಎಂ ಆರೋಪಿಸಿದೆ.
“ಇಂದು ಸ್ಪೋಟ ಸಂಭವಿಸಿರುವ ಮೂರನೇ ಹಂತದ ಕೋಕ್ ಸಲ್ಪರ್ ಘಟಕವಂತೂ ನಿಯಮಗಳ ಉಲ್ಲಂಘನೆಗೆ ಕುಖ್ಯಾತವಾಗಿದೆ. ಕಡ್ಡಾಯ ಹಸಿರು ವಲಯ ಇಲ್ಲದೆ ಕಾರ್ಯಾಚರಿಸುತ್ತಿರುವ ದೇಶದ ಏಕೈಕ ಬೃಹತ್ ಕೈಗಾರಿಕಾ ಘಟಕ ಇದಾಗಿರಬಹುದು. ಈ ಘಟಕ ಕಾರ್ಯಾಚರಣೆ ಆರಂಭಿಸಿದ 2014ರಿಂದಲೂ ಸುತ್ತಲಿನ ಗ್ರಾಮಸ್ಥರ ಜೀವನದೊಂದಿಗೆ ಚೆಲ್ಲಾಟವಾಡುತ್ತಲೇ ಬಂದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
“ಜೋಕಟ್ಟೆ, ಕಳವಾರು ಗ್ರಾಮಗಳಂತೂ ಎಂಆರ್‌ಪಿಎಲ್‌ನ ಈ ಘಟಕದ ಮಾಲಿನ್ಯದಿಂದ ನರಕ ಸದೃಶ್ಯವಾಗಿದೆ, ಮಾರಕ ರೋಗಗಳ ಗೂಡಾಗಿದೆ. ಈ ಕುರಿತು 2016ರಲ್ಲಿ ಗ್ರಾಮಸ್ಥರ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಹೊರಡಿಸಿದ ಆರು ಅಂಶಗಳ ಆದೇಶವನ್ನು ಕಂಪೆನಿ ಜಾರಿಗೊಳಿಸದೆ ಸತಾಯಿಸುತ್ತಿದೆ. ಜಿಲ್ಲಾಡಳಿತವು ಸಂತ್ರಸ್ತ ಗ್ರಾಮಸ್ಥರ ಬದಲಿಗೆ ಕಂಪೆನಿಯ ಪರವಾಗಿ ಮೃದುಧೋರಣೆ ತಾಳುತ್ತಾ ಬಂದಿದೆ. ಕಂಪೆನಿಯ ಕುರಿತಾದ ದೂರುಗಳನ್ನು ನಿರ್ಲಕ್ಷಿಸುತ್ತಾ ಬಂದಿದೆ. ಇವೆಲ್ಲವುದರ ಪರಿಣಾಮ ಇಂದು ಸ್ಫೋಟ ಸಂಭವಿಸಿದೆ” ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಪಾದಿಸಿದೆ.
ಹಾಗೆಯೇ, ಈಗಿನ ತೀವ್ರತರದ ಸ್ಪೋಟದ ಕುರಿತು ಪಾರದರ್ಶಕ ತನಿಖೆ ನಡೆಸುವಂತೆ, ಸಾರ್ವಜನಿಕರ ಮನೆ, ಕಟ್ಟಡಗಳಿಗೆ ಆಗಿರುವ ಹಾನಿಗೆ ಕಂಪೆನಿಯಿಂದ ಸೂಕ್ತ ಪರಿಹಾರ ಒದಗಿಸುವಂತೆ ಸಿಪಿಐಎಂ ಆಗ್ರಹಿಸಿದೆ.
ಇನ್ನು ಈ ಸ್ಫೋಟದ ಬಳಿಕ ಸ್ಥಳದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆಯಾಗಿದೆ. ಮೃತರನ್ನು ಮುಲ್ಕಿ ಮೂಲದ ಮನೀಶ್ ಕರ್ಕೇರ ಎಂದು ಗುರುತಿಸಲಾಗಿದೆ. ಒಂಬತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಜೋಕಟ್ಟೆ ಪ್ರದೇಶ ಕಂಪಿಸಿದೆ. ಜೋಕಟ್ಟೆ ಪಂಚಾಯತ್ ಕಟ್ಟಡ ಸಹಿತ ಹಲವು ಮನೆಗಳಿಗೆ, ಶಾಲೆಗಳಿಗೆ ಹಾನಿಯಾಗಿವೆ. ಕಿಟಕಿ ಗಾಜುಗಳು ಒಡೆದುಹೋಗಿವೆ, ಗೋಡೆಗಳು ಬಿರುಕು ಬಿಟ್ಟಿವೆ.
ಇದನ್ನೂ ಓದಿ: ಜೋಕಟ್ಟೆ ಸಂತ್ರಸ್ತರ 12 ವರ್ಷಗಳ ಹೋರಾಟ, ಮಾಲಿನ್ಯ ಸಂಕಷ್ಟಕ್ಕೆ ಸಿಗಲಿದೆಯೇ ಪರಿಹಾರ?
ಜೋಕಟ್ಟೆ ಅಂಜುಮನ್ ಶಾಲೆ ಸೇರಿದಂತೆ ಹಲವು ಶಾಲೆಗಳ ಕಟ್ಟಡಗಳಲ್ಲಿ ಬಿರುಕು ಕಂಡುಬಂದಿವೆ. ಈ ನಿಟ್ಟಿನಲ್ಲಿ ಎಂಆರ್‌ಪಿಲ್ ಡೆಲ್ಲಿ ಪಬ್ಲಿಕ್ ಸ್ಕೂಲ್ ಸೇರಿದಂತೆ ಹಲವು ಸ್ಥಳೀಯ ಶಾಲೆಗಳಿಗೆ ದಿಢೀರ್ ರಜೆ ಘೋಷಿಸಿ, ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗುತ್ತಿದೆ.
ಈ ಹಿಂದೆ 2025ರ ಜುಲೈನಲ್ಲಿ ಎಂಆರ್‌ಪಿಎಲ್‌ನ ಆಯಿಲ್ ಮೂವ್‌ಮೆಂಟ್ ಏರಿಯಾ (OMS) ಟ್ಯಾಂಕ್ ಪರಿಶೀಲನೆ ನಡೆಸುತ್ತಿದ್ದಾಗ ಹೈಡ್ರೋಜನ್ ಸಲ್ಫೈಡ್ (H2S) ವಿಷಾನಿಲ ಸೋರಿಕೆಯಾಗಿ ಇಬ್ಬರು ಹಿರಿಯ ಆಪರೇಟರ್‌ಗಳು ಸಾವನ್ನಪ್ಪಿದ್ದರು. ಮೃತರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ದೀಪ್ ಚಂದ್ರ (33) ಮತ್ತು ಕೇರಳದ ಬಿಜಿಲ್ ಪ್ರಸಾದ್ (33) ಎಂದು ಗುರುತಿಸಲಾಗಿತ್ತು. ಇವರನ್ನು ರಕ್ಷಿಸಲು ಹೋದ ವಿನಾಯಕ್ ಮ್ಯಾಗೇರಿ ಎಂಬ ಮತ್ತೊಬ್ಬ ಕಾರ್ಮಿಕ ಗಂಭೀರ ಅಸ್ವಸ್ಥರಾಗಿದ್ದರು.
ಈ ಘಟನೆಯಿಂದಾಗಿ ಎಂಆರ್‌ಪಿಎಲ್‌ನಲ್ಲಿರುವ ಭಾರಿ ನಿರ್ಲಕ್ಷ್ಯ ಎದ್ದು ಕಂಡಿತ್ತು. ಗ್ಯಾಸ್ ಸೋರಿಕೆಯಾದಾಗ ಯಾವುದೇ ಎಚ್ಚರಿಕೆ ಅಲಾರಾಂ ಮೊಳಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಸ್‌ಡಿಟಿಯುನಂತಹ ಕಾರ್ಮಿಕ ಸಂಘಟನೆಗಳು, ಎಂಆರ್‌ಪಿಎಲ್ ಅವ್ಯವಸ್ಥೆ ವಿರುದ್ಧ ಹೋರಾಡುತ್ತಿರುವ ಜೋಕಟ್ಟೆ ಹೋರಾಟ ಸಮಿತಿ ಉನ್ನತ ಮಟ್ಟದ ತನಿಖೆ ಮತ್ತು ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡುವಂತೆ ಹೋರಾಟ ನಡೆಸಿದ್ದವು. ನಿರ್ಲಕ್ಷ್ಯದ ಆರೋಪದ ಮೇಲೆ ಫ್ಯಾಕ್ಟರಿ ಮ್ಯಾನೇಜರ್ ಸೇರಿದಂತೆ ಆರು ಎಂಆರ್‌ಪಿಎಲ್ ಅಧಿಕಾರಿಗಳ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿತ್ತು.




