ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ ಮೌಲ್ಯ) ಬದಲಾವಣೆಯಾಗುವ ಸಾಧ್ಯತೆ ಕಡಿಮೆ. ಯಾಕೆಂದರೆ ಅದು 'ಹೆಣ್ತನ'ವನ್ನು ಹೊಂದಿಲ್ಲ.
ತಮಿಳಿನ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರ ‘ಡೋರೊಥಿ’ (Dorothy)- ಈ ಹೊತ್ತು ಚರ್ಚೆಯಾಗಬೇಕಾದ ಸಿನಿಮಾಗಳಲ್ಲಿ ಒಂದು. ಈವರೆಗೆ ಕಾರ್ತಿಕ್ ನಿರ್ದೇಶಿಸಿದ ಸಿನಿಮಾಗಳಲ್ಲಿ ‘ಡೋರೊಥಿ’ ವಿಶಿಷ್ಟವಾದದ್ದು.
90ರ ದಶಕದ ಸಾಮಾಜಿಕ ಪರಿಸರದಲ್ಲಿ ಮೂಡಿಬರುವ ‘ಡೋರೊಥಿ’ಯ ಕಥೆ ವಾಸ್ತವದಲ್ಲಿ ಮಾತನಾಡುವುದು ಪ್ರಸ್ತುತ ಕಾಲಘಟ್ಟದ ಸ್ಥಿತ್ಯಂತರಗಳ ಕುರಿತು. ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳು, ತೀರಾ ನಗಣ್ಯವಾಗಿದ್ದ ಮತ್ತು ಅಪಹಾಸ್ಯದ ಸರಕಾಗಿದ್ದ ಕಾಲಾವಧಿಗೆ ಹೋಗಿ ಕಥೆ ಹೇಳುವುದು, ನಿರೂಪಣಾ ಸಾಧ್ಯತೆಯನ್ನು ನಿರ್ದೇಶಕ ವಿಸ್ತರಿಸಿಕೊಳ್ಳಲು ಇರುವ ಅವಕಾಶದ ಕಿಂಡಿಗಳಷ್ಟೇ. ಆದರೆ ಇಂತಹದೊಂದು ಕಥನವನ್ನು ಆಯ್ಕೆ ಮಾಡಿಕೊಳ್ಳಲು ‘ಕಾಲ’ದ ಒಪ್ಪಿಗೆ ಇದ್ದೇ ಇರುತ್ತದೆ.
ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ದಶಕಗಳ ಹೋರಾಟದ ಫಲವಾಗಿ, ಆ ಸಮುದಾಯದ ತಲ್ಲಣಗಳು ನಿಧಾನಕ್ಕೆ ಮುಖ್ಯವಾಹಿನಿ ಸಮಾಜದ ‘ಸ್ವಿಕೃತಿ ಅಥವಾ ಒಪ್ಪಿಗೆ’ಗೆ ಒಳಗಾಗುತ್ತಿರುವ ಕಾಲವಿದು. ಅದಕ್ಕೆ ಪೂರಕವಾಗಿ ಕಲೆಯೂ ಸ್ಪಂದಿಸುತ್ತಿದೆ. ಲಿಂಗತ್ವ ಅಲ್ಪಸಂಖ್ಯಾತರ ಬದುಕು ಮತ್ತು ಭಾವನೆಗಳನ್ನು ಈ ಸಮಾಜಕ್ಕೆ ಅರ್ಥ ಮಾಡಿಸುವ ಹಾಗೂ ಆ ಭಾವನೆಗಳಿಗೆ ಒಪ್ಪಿಗೆಯ ಮುದ್ರೆಯನ್ನು ಪಡೆಯುವ ಕಾಲಘಟ್ಟದಲ್ಲಿದ್ದೇವೆ. ಆದರೆ ಆ ಒಪ್ಪಿಗೆ ಪೂರ್ಣ ಪ್ರಮಾಣದಲ್ಲಿ ಇಲ್ಲ ಎಂಬುದೂ ಅಷ್ಟೇ ಸತ್ಯ. ಹಾಗೆಯೇ ಅವರು (ಲಿಂಗತ್ವ ಅಲ್ಪಸಂಖ್ಯಾತರು) ಕೂಡ ಎಲ್ಲರಂತೆ ಮನುಷ್ಯರು ಎಂಬುದನ್ನು ಸಮಾಜ ಗ್ರಹಿಸುತ್ತಿರುವ ಪರಿಯು, ಬೀಜವೊಂದು ಸಸಿಯಾಗಿರುವ ಹಂತದಲ್ಲಿದೆ ಎಂಬುದೂ ಅಷ್ಟೇ ಸತ್ಯ. ಆ ಸಮುದಾಯದ ಲೋಕವನ್ನು ಮುಖ್ಯವಾಹಿನಿ ಅರಿತುಕೊಳ್ಳಬೇಕಾದರೆ, ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪಠ್ಯಗಳು ‘Acceptance’ ಬಗ್ಗೆ ಮಾತನಾಡಬೇಕಿದೆ.
ಇದನ್ನೂ ಓದಿರಿ: ಸ್ತಬ್ಧ ಚಿತ್ರ ಮಾತಾಡಿದಂತೆ, ಶಬ್ದ ಕಣ್ಣಿಗೆ ಕಾಣಿಸುವಂತೆ- ಸಿನೆಮಾದ ತೆರೆಮರೆಯ ತಾತ್ವಿಕತೆ
ಅಸ್ಪೃಶ್ಯತೆಯು ಮನುಷ್ಯ ವಿರೋಧಿ ಮತ್ತು ಸಂವಿಧಾನ ವಿರೋಧಿ ಎಂಬುದು ಯಾವಾಗ ಗಟ್ಟಿಯಾಗುತ್ತದೆ?- ಮನುಷ್ಯ ಪ್ರೇಮವು ತೆರೆದುಕೊಳ್ಳುವುದರಿಂದ, ಮೈತ್ರಿಯಿಂದ ಅಲ್ಲವೇ? ಡೋರೊಥಿ ಮಾತನಾಡುವುದು- ‘transition’ (ಪರಿವರ್ತನೆ) ಬಗ್ಗೆ. ಇಲ್ಲಿ ಪರಿವರ್ತನೆ ಎರಡು ಬಗೆಯದ್ದು ಮತ್ತು ಸಮ್ಮತಿಯೂ ಎರಡು ಬಗೆಯದ್ದು. ಒಂದು: ತನ್ನ ಅಸ್ಮಿತೆಯು ಯಾವುದೆಂದು ಗೊತ್ತಿದ್ದರೂ, ಐಡೆಂಟಿಟಿಯನ್ನು ಹೇಳಿಕೊಳ್ಳುವ ನಿಧಾನದ ಪರಿವರ್ತನೆ. ಎರಡು: ಹುಟ್ಟಿನಿಂದ ಬಂದ ಲಿಂಗತ್ವವು ಬೆಳೆದಂತೆ ಬದಲಾದ ವ್ಯಕ್ತಿಯನ್ನು- ಸಮಾಜವು ಒಪ್ಪಿಕೊಳ್ಳುವ ಪರಿವರ್ತನೆ. ಈ ಪರಿವರ್ತನೆಗೆ ಕೊಂಡಿಯಾಗಿರುವುದು- ಮೈತ್ರಿ ಅರ್ಥಾತ್ ಪ್ರೇಮ. ಈ ಪರಿವರ್ತನೆಯನ್ನು ಒಪ್ಪಿಕೊಳ್ಳಬೇಕಾದರೆ ಮತ್ತೊಂದು ಗುಣವೂ ಬೇಕಾಗುತ್ತದೆ; ಅದು- ತಾಯ್ತನ ಅಥವಾ ಹೆಣ್ತನ.
ತನ್ನ ಲಿಂಗತ್ವ ಸಂವೇದನೆಯನ್ನು ಹೇಳಿಕೊಳ್ಳಲಾಗದ ‘ಆತ/ಆಕೆ’- ತನ್ನ ಬದುಕಿನುದ್ದಕ್ಕೂ ಹೆಣ್ಣಿನ ಅಪ್ಪುಗೆಯನ್ನು ಬಯಸುತ್ತಾನೆ/ಬಯಸುತ್ತಾಳೆ. ತನ್ನ ‘ಪರಿವರ್ತನೆ’ಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಮತ್ತು ಸ್ವೀಕರಿಸುವುದಕ್ಕೆ ಹೆಣ್ತನದಿಂದ ಮಾತ್ರ ಸಾಧ್ಯ ಎಂಬ ಸಂವೇದನೆಯನ್ನು ಡೋರೊಥಿ ಕಟ್ಟಿಕೊಡುತ್ತದೆ. ಹೆಣ್ಣಿನ ಸಾಂಗತ್ಯವಿಲ್ಲದ, ಪರಿವರ್ತಿತ ಟ್ರಾನ್ಸ್ ದೇಹವು, ತನಗೊಂದು ಹೆಣ್ಣಿನ ಸಾಂಗತ್ಯ ಬೇಕೆಂದು ಬಯಸುತ್ತದೆ, ಆ ತುಡಿತಕ್ಕೆ ಆಸರೆ ಸಿಕ್ಕಾಗ, ತನ್ನೊಳಗಿನ ಎಲ್ಲಾ ಸಂವೇದನೆಗಳನ್ನು, ತೊಳಲಾಟಗಳನ್ನು ಹೊರಹಾಕಿ ಹಗುರವಾಗುತ್ತದೆ. ಆ ದೇಹಕ್ಕೆ ರೆಕ್ಕೆಗಳು ಮೂಡುತ್ತವೆ, ಬಿಡುಗಡೆಯ ಬಾಗಿಲುಗಳು ಕಾಣಿಸಿಕೊಳ್ಳುತ್ತವೆ. ಆದರೆ ಆ ಸಾಂಗತ್ಯ ಧುತ್ತೆಂದು ಕೊನೆಯಾದಾಗ, ಈ ದೇಹವು ಛಿದ್ರವಾಗುತ್ತದೆ. ಈವರೆಗೆ ಮುಚ್ಚಿಟ್ಟ ಲಿಂಗತ್ವವು- ಪ್ರತಿರೋಧವನ್ನು ಬೆಳೆಸಿಕೊಂಡು, ಸಿಡಿದೆದ್ದು ತನ್ನತನವನ್ನು ನಿರ್ಭಿಡೆಯಿಂದ ಸ್ಥಾಪಿಸಿಕೊಳ್ಳುವ ಅಂತಿಮ ಆಯ್ಕೆಯತ್ತ ಹೊರಳುತ್ತದೆ. ಹಾಗೆ ದುತ್ತೆಂದು ಸಿಡಿಯುವ ಪ್ರಕ್ರಿಯೆ, ಗಂಡು ಜಗತ್ತಿಗೆ ‘ಪರಮಾಣು’ವೊಂದು ಸ್ಫೋಟಿಸಿದಂತೆ! ಆ ಐಡೆಂಟಿಟಿಯನ್ನು ಗಂಡಾಳ್ವಿಕೆಯ ಸಮಾಜ ಹೇಗೆ ನೋಡುತ್ತದೆ?- ನಿಜಕ್ಕೂ ಈ ಪರಿವರ್ತನೆಯನ್ನು ಗಂಡು ಮನಸ್ಸು ಸ್ವೀಕರಿಸುತ್ತದೆಯೇ?- ಈ ಪ್ರಶ್ನೆಗಳನ್ನು ಹುಡುಕುವುದೇ ಡೋರೊಥಿಯ ಮುಖ್ಯ ಉದ್ದೇಶ.
ಸ್ವೀಕೃತಿಯತ್ತ…
ಗಂಡಾಳ್ವಿಕೆಯು ಈ ಲಿಂಗ ಪರಿವರ್ತನೆಯನ್ನು ಒಪ್ಪಿಕೊಳ್ಳುವ ಬಗೆ ಯಾವುದು? ಅದು ‘ಒಡನಾಟ’ದ ಮೇಲೆ ನಿಂತಿದೆ. ಜೊತೆಯಲ್ಲಿ ಬದುಕಿದ, ಒಬ್ಬರಿಗೊಬ್ಬರು ನೆರವಾದ ಆ ಒಡನಾಟವು, ಒಪ್ಪಿಗೆಗೆ ಕಾರಣವಾಗುತ್ತದೆಯೇ? ನಮ್ಮಲ್ಲಿರುವ ಪುರುಷ ಪ್ರಧಾನ ಮನಸ್ಥಿತಿಯು ಪರಿವರ್ತಿತ ಲಿಂಗತ್ವವನ್ನು ಅರಿತುಕೊಳ್ಳದೆ ಇರುವುದಕ್ಕೆ ‘ಒಡನಾಟ’ದ ಅಭಾವವೂ ಕಾರಣ. ಪೂರ್ವಗ್ರಹ ಪೀಡಿತ ಮನಸ್ಸುಗಳು- ಲಿಂಗತ್ವ ಸಮುದಾಯವನ್ನು ಹೊರಗಿನಿಂದ ಗ್ರಹಿಸುತ್ತಿದೆಯೇ ಹೊರತು, ಒಡನಾಟದಿಂದಲ್ಲ. ಯಾವಾಗ ಅಂತರಂಗದ ಒಡನಾಟ ಸಾಧ್ಯವಾಗುತ್ತದೆಯೋ, ಆಗ- ಲಿಂಗತ್ವ ಪರಿವರ್ತನೆಯನ್ನು ಒಪ್ಪಿಕೊಳ್ಳುವುದಕ್ಕೆ, ತನ್ನೊಳಗೂ ಪ್ರೇಮವನ್ನು ಆವಾಹಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇಂತಹದೊಂದು ‘ಸಾಧ್ಯತೆ’ಯ ಕುರಿತು ಕಾರ್ತಿಕ್ ಸುಬ್ಬರಾಜ್ ಮಾತನಾಡಿದ್ದಾರೆ.
ಗಂಡಾಳ್ವಿಕೆಯ ಮನಸ್ಥಿತಿಯೇ ಜಾತಿ ಅಸಮಾನತೆ, ಅಸ್ಪೃಶ್ಯತೆಯನ್ನು ಒಪ್ಪಿಕೊಂಡು ಬಂದಿದೆ. ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು ‘ಅಸ್ಪೃಶ್ಯತೆ’ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; ‘ಲಿಂಗ ಸಂಕರ’ ಸ್ಥಿತಿಯನ್ನು, ‘ಜಾತಿ ಸಂಕರ’ದಷ್ಟೇ ‘ಮರ್ಯಾದಾಗೇಡು’ ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ ‘ಸನಾತನ’ (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ ಮೌಲ್ಯ) ಬದಲಾವಣೆಯಾಗುವ ಸಾಧ್ಯತೆ ಕಡಿಮೆ. ಯಾಕೆಂದರೆ ಅದು ‘ಹೆಣ್ತನ’ವನ್ನು ಹೊಂದಿಲ್ಲ; ಜಾತಿ ಸಂಕರ, ಲಿಂಗ ಸಂಕರವನ್ನು ಸಾಮಾಜಿಕ ಅಧಃಪತನ ಎಂಬಂತೆ ಭಾವಿಸುವ ಈ ‘ಸನಾತನ’ವು ‘ಪರಿವರ್ತನೆ’ಗಳನ್ನು ಒಪ್ಪಿಕೊಳ್ಳುವುದಿಲ್ಲ. ಅಲ್ಲಿ ಮನುಷ್ಯ ಸಂಬಂಧಗಳಿಗಿಂತ, ಕಲ್ಪಿತ ಮರ್ಯಾದೆಯೇ ಮುಖ್ಯವಾಗಿ ‘ಸನಾತನ ಮನಸ್ಥಿತಿ’ಗೆ ಕಾಣಿಸುತ್ತದೆ. ಈ ಮನಸ್ಥಿತಿಯು ಸುರಿಸುವ ಕಣ್ಣೀರು ‘ಪರಿವರ್ತನೆ’ಯ ಮೂಲದಿಂದ ಬರುವುದಿಲ್ಲ; ಸಾಂಪ್ರದಾಯಿಕ ಸ್ಥಿತಿಗೆ ಬದಲಾದ ಕಾಲಘಟ್ಟವು ಸವಾಲಾಗಿದ್ದರಿಂದ ‘ಕಂಬನಿ’ ಹುಟ್ಟುತ್ತದೆ. ಅಂತಹ ಹೆಣ್ತನದ ಅಭಾವವಿರುವ ‘ಸನಾತನ’ದಿಂದ ನಿಧಾನಕ್ಕೆ ಹೊರಬರುವ ಸಾಧ್ಯತೆ, ಹೊಸ ತಲೆಮಾರಿಗೆ ಇದೆ. ಆದರೆ ಹೊಸ ತಲೆಮಾರು- ಒಡನಾಟವನ್ನು ನಿಜರ್ಥದಲ್ಲಿ ಆವಾಹಿಸಿಕೊಳ್ಳಬೇಕು. ‘ಟ್ರಾನ್ಸ್ ಜೆಂಡರ್’ ಸ್ಥಿತಿಯನ್ನು ಒಳಗಣ್ಣಿನಿಂದ ನೋಡಬೇಕು. ಈ ‘ಸ್ವಿಕೃತಿ’ಯಲ್ಲಿ ಇನ್ನೊಂದು ಸೂಕ್ಷ್ಮವೂ ಇದೆ. ಜಾತಿ ಅಸಮಾನತೆಯನ್ನು ಎದುರಿಸಿದ ಮನಸ್ಸಿಗೆ, ಈ ಲಿಂಗತ್ವ ಪರಿವರ್ತನೆಯ ತಲ್ಲಣಗಳು ಮೊದಲು ಅರಿವಾಗಿ, ‘ಸ್ವಿಕೃತಿ’ ಆರಂಭವಾಗುತ್ತದೆ ಎಂಬ ಸೂಚನೆಯೂ ಇಲ್ಲಿದೆ. ಪರಿವರ್ತನೆಯ ಅಗತ್ಯತೆಯನ್ನು ಮನಗಾಣಬೇಕು- ಎಂಬ ತಾತ್ವಿಕತೆಯನ್ನು ‘ಡೋರೊಥಿ’ ಚರ್ಚಿಸುತ್ತದೆ.
ಇದನ್ನೂ ಓದಿರಿ: ಪುರುಷರಿಗೂ ‘ಪೀರಿಯಡ್ಸ್’ ಬರಬೇಕು; ಗಂಡಸರಿಗೆ ‘ಮುಟ್ಟಾಗಿದ್ದರೆ’ ಕೆಲಸದ ನಿಯಮಗಳೇ ಬದಲಾಗುತ್ತಿದ್ದವು: ನಟಿ ಶೃತಿ ಹಾಸನ್
ಈ ಲಿಂಗ ಅಸಮಾನತೆಯನ್ನು ಜಾತಿ, ಅಸ್ಪೃಶ್ಯತೆಗೆ ಸಮನಾಗಿ ಇಟ್ಟು ನೋಡುವುದರಿಂದಾಗಿ, ಡೋರೊಥಿ- ವಿಭಿನ್ನ ಪ್ರಯೋಗ. ಈಗಾಗಲೇ ನಮ್ಮಲ್ಲಿ ಸಾಕಷ್ಟು ಲಿಂಗ ಸೂಕ್ಷ್ಮತೆಯನ್ನು ಮಾತನಾಡುವ ಸಿನಿಮಾಗಳು ಬಂದಿವೆ. ಆದರೆ ಡೋರೊಥಿ- ಈ ವಿಚಾರವನ್ನು ಚರ್ಚಿಸಿರುವ ರೀತಿ ತೀರಾ ಹೊಸದು. ಇಳಯರಾಜ ಅವರ ಸಂಗೀತ, ಲಿಂಗತ್ವ ಭಾವನೆಗಳಿಗೆ ಮುಖ್ಯವಾಹಿನಿ ಸಮಾಜದ ‘Acceptance’ ತಂದುಕೊಡುತ್ತದೆ. ‘ಡೋರೊಥಿ’ ಬಗ್ಗೆ ಹೇಳಬೇಕಾದದ್ದು ಬಹಳಷ್ಟಿದೆ. ಸದ್ಯಕ್ಕೆ ಇಷ್ಟು ಸಾಕೆನಿಸುತ್ತದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.



