2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ ಒಳಗಿನ ಭಿನ್ನಮತಗಳು ಬಹಿರಂಗವಾಗಿರುವುದು, ಭಾರತದ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಸ್ವಾಯತ್ತತೆಯ ಮೇಲಿನ ಅನುಮಾನವನ್ನು ಇನ್ನಷ್ಟು ಗಾಢಗೊಳಿಸಿದೆ.
ಒಳಗಿನಿಂದಲೇ ಹೊರಬಿದ್ದಿರುವ ದಾಖಲೆಗಳು-ದಸ್ತಾವೇಜುಗಳು ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಹಿಂದೆಂದೂ ಕಾಣದಷ್ಟು ಗಂಭೀರ ಪ್ರಶ್ನೆಗಳನ್ನು ಎತ್ತಿವೆ. ಮಾತ್ರವಲ್ಲ, ಸ್ವಾಯತ್ತ ಸಂಸ್ಥೆಯಾಗಿದ್ದ ಆಯೋಗ, ಮೋದಿ-ಶಾ ಸೂತ್ರದ ಬೊಂಬೆಯಾಗಿ, ಪಾತಾಳಕ್ಕೆ ಕುಸಿದಿದೆ ಎಂಬ ಆರೋಪ- ಆತಂಕಕ್ಕೂ ಗುರಿಯಾಗಿದೆ. ಹಾಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಆಯೋಗದ ಅರ್ಥಾತ್ ಗ್ಯಾನೇಶ್ ಕುಮಾರ್ ನೀತಿ/ನಿರ್ಧಾರ/ಧೋರಣೆಗಳು ಮೋದಿ-ಶಾ ಅಣತಿಯಂತೆಯೇ ನಡೆಯುತ್ತಿವೆ ಎಂಬ ಕಟುವಾಸ್ತವವನ್ನು ಇತ್ತೀಚಿನ ತನಿಖಾ ವರದಿಗಳು ಸ್ಪಷ್ಟಪಡಿಸಿವೆ. ಇದೇ ಹೊತ್ತಿನಲ್ಲಿ, ‘ವೋಟ್ ಫಾರ್ ಡೆಮಾಕ್ರಸಿ’ (VFD) ಸಂಸ್ಥೆಯು ಎರಡೂವರೆ ವರ್ಷಗಳ ಹಿಂದೆ ಸಿದ್ಧಪಡಿಸಿದ್ದ ‘2024ರ ಲೋಕಸಭಾ ಚುನಾವಣೆ ನಿರ್ವಹಣೆ: ಮತ ತಿರುಚುವಿಕೆ ಮತ್ತು ಎಣಿಕೆ ಅಕ್ರಮಗಳ ವಿಶ್ಲೇಷಣೆ’ ಪುನಃ ಚರ್ಚೆ-ವಿವಾದಗಳ ಮುನ್ನೆಲೆಗೆ ಬಂದಿದೆ. ದೆಹಲಿ ಗದ್ದುಗೆಯನ್ನು ಅಲ್ಲಾಡಿಸುವಷ್ಟು ಮಟ್ಟಿಗೆ ಸಂದೇಹಗಳನ್ನು ಬಲಗೊಳಿಸಿದೆ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಕೂಟ ಸಾಧಿಸಿದ ಗೆಲುವು ನೈಜವಾಗಿ ಜನರಿಂದ ಗೆದ್ದದ್ದೋ ಅಥವಾ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡು ‘ಕದ್ದ ಗೆಲುವೋ’ ಎಂಬ ಗುಮಾನಿಯನ್ನು ಹುಟ್ಟುಹಾಕಿದೆ.
ಅಂದಹಾಗೆ, ಚುನಾವಣಾ ಆಯೋಗವು ಮೋದಿ-ಶಾ ಜೋಡಿಯ ಪದತಲದಲ್ಲಿ ಮಂಡಿಯೂರಿ ಕುಳಿತಿದೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಅಂತಹ ಪರಿಸ್ಥಿತಿ ಸೃಷ್ಟಿಯಾದದ್ದು ನಿನ್ನೆ-ಮೊನ್ನೆಯಲ್ಲ. ಚುನಾವಣಾ ಆಯುಕ್ತರ ನೇಮಕಾತಿಯ ನಿಯಮಗಳನ್ನು ಕೇಂದ್ರ ಸರ್ಕಾರ ತನಗೆ ಬೇಕಾದಂತೆ ತಿದ್ದುಪಡಿ ಮಾಡಿದಾಗಲೇ, ಆಯೋಗವು ಆಳುವವರ ಸುಪರ್ದಿಗೆ ಸರಿದಿತ್ತು. ಈಗ, ಇಬ್ಬರು ಸಹ-ಆಯುಕ್ತರನ್ನು ಬದಿಗೆ ತಳ್ಳಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ತಾವೇ ಏಕಚಕ್ರಾಧಿಪತಿಯಂತೆ ವರ್ತಿಸುತ್ತಿದ್ದಾರೆ ಎಂಬುದು ದಾಖಲೆಗಳೊಂದಿಗೆ ಬಹಿರಂಗವಾಗಿದೆ. ಆಯೋಗದ ಇಬ್ಬರು ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಮತದಾರರ ಪಟ್ಟಿ ನಿರ್ವಹಣೆ, ಡೇಟಾಗಳ ದೆಹಲಿ ಕೇಂದ್ರೀಕರಣ ಹಾಗೂ ಫಾರ್ಮ್-6ನಲ್ಲಿ ಕಾನೂನುಬಾಹಿರ ತಿದ್ದುಪಡಿಗಳ ವಿರುದ್ಧ ಕಳೆದ 10 ತಿಂಗಳಲ್ಲಿ ಬರೋಬ್ಬರಿ 14ಕ್ಕೂ ಹೆಚ್ಚು ಬಾರಿ ಅಧಿಕೃತವಾಗಿ ಲಿಖಿತ ಆಕ್ಷೇಪ ಎತ್ತಿದ್ದಾರೆ. ಇದು, ಮೋದಿ-ಶಾ ಜೋಡಿಯ ರಾಜಕೀಯ ಇಂಗಿತವನ್ನು ಈಡೇರಿಸಲು, ಆಂತರಿಕ ಆಕ್ಷೇಪ/ವಿರೋಧವನ್ನೂ ತುಳಿದು ಗ್ಯಾನೇಶ್ ಕುಮಾರ್ ಏಕಪಕ್ಷೀಯವಾಗಿ ನಿರ್ಧಾರಗಳನ್ನು ದೇಶದ ಮೇಲೆ ಹೇರಿದ್ದಾರೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯೂ ಆಗಿದೆ.
ಈ ಸಂದರ್ಭದಲ್ಲಿ, ವಿಎಫ್‌ಡಿ ಸಂಸ್ಥೆಯು 2024ರ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವೇ ನೀಡಿದ್ದ ಅಧಿಕೃತ ಅಂಕಿಅಂಶಗಳನ್ನು ವಿಶ್ಲೇಷಿಸಿ ಹೊರತಂದಿದ್ದ ಬೆಚ್ಚಿಬೀಳಿಸುವ ಅಂಶಗಳನ್ನು ನಾವು ಮತ್ತೆ ನೋಡಬೇಕಾದ ಅಗತ್ಯವಿದೆ. 2024ರ ಲೋಕಸಭಾ ಚುನಾವಣೆಯು ದೇಶಾದ್ಯಂತ 7 ಹಂತಗಳಲ್ಲಿ ನಡೆದಿತ್ತು. ಆ ಪ್ರತಿಯೊಂದು ಹಂತದ ಮತದಾನ ಮುಕ್ತಾಯಗೊಂಡಾಗ ಸಂಜೆ 7 ಗಂಟೆಯಿಂದ 8:45ರ ಅವಧಿಯಲ್ಲಿ ಆಯೋಗವು ನೀಡಿದ ಆರಂಭಿಕ ಅಂದಾಜು ಮತದಾನಕ್ಕೂ, ದಿನಗಳ ನಂತರ ಅದು ಪ್ರಕಟಿಸಿದ ಅಂತಿಮ ಮತದಾನದ ಲೆಕ್ಕಕ್ಕೂ ನಡುವೆ ಬರೋಬ್ಬರಿ 4.65 ಕೋಟಿ ಮತಗಳು ವ್ಯತ್ಯಾಸವಾಗಿದ್ದವು. ಅಂದರೆ, ಈ ಪ್ರಮಾಣದ ಮತಗಳು ಹಠಾತ್ತನೆ ನಿಗೂಢವಾಗಿ ಸೇರ್ಪಡೆಯಾಗಿದ್ದವು! ಇಡೀ ಚುನಾವಣೆಯಲ್ಲಿ ಸರಾಸರಿ 3.2%ನಿಂದ 6.32%ರಷ್ಟು ಅಸಹಜ ಮತಗಳ ಜಿಗಿತ ಕಂಡುಬಂದರೆ, ಆಂಧ್ರಪ್ರದೇಶದಲ್ಲಿ 12.45 ಮತ್ತು ಒಡಿಶಾದಲ್ಲಿ 12.48%ರಷ್ಟು ಮತಗಳು ಮತದಾನ ಮುಗಿದ ನಂತರ ಹಠಾತ್ತನೆ ಬಂದು ಬಿದ್ದಿದ್ದವು. ಐತಿಹಾಸಿಕವಾಗಿ ಭಾರತದ ಚುನಾವಣೆಗಳಲ್ಲಿ ಆರಂಭಿಕ ಮತ್ತು ಅಂತಿಮ ಲೆಕ್ಕದ ನಡುವೆ ಕೇವಲ 1%ರಷ್ಟು ವ್ಯತ್ಯಾಸವಿರುತ್ತಿತ್ತು. ಆದರೆ, ಈ ಬಾರಿ ಮಾತ್ರ ಕೋಟ್ಯಂತರ ಮತಗಳು ಹೀಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೆ ಸೇರ್ಪಡೆಯಾಗಿದ್ದವು. ಆದರೂ, ಈ ಬಗ್ಗೆ ಆಯೋಗವು ಈವರೆಗೂ ತುಟಿ-ಪಿಟಕ್ ಎಂದಿಲ್ಲ.
ಈ ಮತಗಳ ನಿಗೂಢ ಜಿಗಿತವು ಪ್ರತಿಯೊಂದು ಹಂತದಲ್ಲೂ ನಿರಂತರವಾಗಿ ನಡೆದಿತ್ತು. ಮೊದಲ ಹಂತದ 102 ಕ್ಷೇತ್ರಗಳಲ್ಲಿ ಆರಂಭಿಕ 62.87%ರಷ್ಟಿದ್ದ ಮತದಾನವು ಅಂತಿಮವಾಗಿ 66.14% ಕ್ಕೆ ತಲುಪಿ 54,45,009 ಮತಗಳು ಹೆಚ್ಚಾದವು. ಎರಡನೇ ಹಂತದ 88 ಕ್ಷೇತ್ರಗಳಲ್ಲಿ 60.96%ರಿಂದ 66.71%ಕ್ಕೆ ಏರಿಕೆಯಾಗಿ 91,20,285 ಮತಗಳು ಸೇರ್ಪಡೆಯಾದವು. ಮೂರನೇ ಹಂತದ 93 ಕ್ಷೇತ್ರಗಳಲ್ಲಿ 61.45%ರಿಂದ 65.68%ಕ್ಕೆ ಜಿಗಿದು 72,91,861 ಮತಗಳು ಅಧಿಕವಾದವು. ನಾಲ್ಕನೇ ಹಂತದ 96 ಕ್ಷೇತ್ರಗಳಲ್ಲಂತೂ ಅತಿ ಹೆಚ್ಚು ಅಂದರೆ 62.84%ರಿಂದ 69.16%ಕ್ಕೆ ಏರಿಕೆಯಾಗಿ ಭಾರಿ ಪ್ರಮಾಣದ 1,11,94,994 ಮತಗಳು ಪ್ರತ್ಯಕ್ಷವಾದವು. ಐದನೇ ಹಂತದ 49 ಕ್ಷೇತ್ರಗಳಲ್ಲಿ 57.47%ರಿಂದ 62.20%ಕ್ಕೆ ಜಿಗಿದು 42,35,904 ಮತಗಳು ಸೇರ್ಪಡೆಗೊಂಡರೆ, ಆರನೇ ಹಂತದ 58 ಕ್ಷೇತ್ರಗಳಲ್ಲಿ 59.06% ರಿಂದ 63.37%ಕ್ಕೆ ಏರಿಕೆಯಾಗಿ 48,01,345 ಮತಗಳು ಹೆಚ್ಚಾದವು. ಇನ್ನು ಕಡೆಯ, ಏಳನೇ ಹಂತದ 57 ಕ್ಷೇತ್ರಗಳಲ್ಲಿ 59.45%ರಿಂದ 63.88%ಕ್ಕೆ ಏರಿಕೆಯಾಗಿ 44,57,487 ಮತಗಳು ನಿಗೂಢವಾಗಿ ಸೇರಿಕೊಂಡವು.

ಈ ಅಸಹಜವಾಗಿ ಪ್ರತ್ಯಕ್ಷವಾದ ‘ಹೆಚ್ಚುವರಿ ಮತಗಳ’ ಪರಿಣಾಮವು ಅಂತಿಮವಾಗಿ ಪ್ರಜಾಪ್ರಭುತ್ವದ ಆಶಯವನ್ನೇ ಬುಡಮೇಲು ಮಾಡಿದೆ. ದೇಶಾದ್ಯಂತ ಒಟ್ಟು 15 ರಾಜ್ಯಗಳ 79 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಥವಾ ಎನ್‌ಡಿಎ ಅಭ್ಯರ್ಥಿಗಳು ಗೆದ್ದಿರುವ ‘ಗೆಲುವಿನ ಅಂತರಕ್ಕಿಂತ’, ಆಯಾ ಕ್ಷೇತ್ರಗಳಲ್ಲಿ ಅಸಹಜವಾಗಿ ಹೆಚ್ಚಳವಾದ ಅಂತಿಮ ಮತಗಳ ಸಂಖ್ಯೆಯೇ ಹೆಚ್ಚಾಗಿತ್ತು! ಅಂದರೆ, ಈ ಹೆಚ್ಚುವರಿ ಮತಗಳ ಸೇರ್ಪಡೆಯಾಗದಿದ್ದರೆ ಆ 79 ಕ್ಷೇತ್ರಗಳಲ್ಲಿ ಎನ್‌ಡಿಎ ಸೋಲನುಭವಿಸುತ್ತಿತ್ತು ಎಂಬುದು ಸ್ಪಷ್ಟ.
ರಾಜ್ಯವಾರು ಲೆಕ್ಕಾಚಾರವನ್ನು ನೋಡಿದರೆ, ಒಡಿಶಾದಲ್ಲಿ 12.48%ರಷ್ಟು ಜಿಗಿತವಾಗಿ 42.01 ಲಕ್ಷ ಮತಗಳು ಹೆಚ್ಚಾದವು; ಇದರ ಲಾಭ ಪಡೆದು ಜಾಜ್‌ಪುರ (1,587 ಮತಗಳ ಅಂತರ), ಕಂಧಮಾಲ್, ಭುವನೇಶ್ವರ, ಜಗತ್‌ಸಿಂಗ್‌ಪುರ, ಕಟಕ್, ಕೇಂದ್ರಾಪಾರ ಸೇರಿದಂತೆ 18 ಕ್ಷೇತ್ರಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿತು. ಮಹಾರಾಷ್ಟ್ರದಲ್ಲಿ 82.63 ಲಕ್ಷ ಮತಗಳ ಜಿಗಿತವಾಗಿ ಅಕೋಲಾ, ಸತಾರಾ, ರತ್ನಗಿರಿ-ಸಿಂಧುದುರ್ಗ, ಬುಲ್ಧಾನ, ಮಲ್ವಣ್, ಹತ್ಕಣಂಗಲೆ ಮತ್ತು ಮುಂಬೈ ನಾರ್ತ್ ವೆಸ್ಟ್ (ಕೇವಲ 48 ಮತಗಳ ಅಂತರ) ಸೇರಿದಂತೆ 11 ಕ್ಷೇತ್ರಗಳಲ್ಲಿ ಮಹಾಯುತಿ/ಬಿಜೆಪಿ ಗೆದ್ದಿತು. ಪಶ್ಚಿಮ ಬಂಗಾಳದಲ್ಲಿ 36.71 ಲಕ್ಷ ಮತ ಹೆಚ್ಚಳವಾಗಿ ಬಿಷ್ಣುಪುರ (ಕೇವಲ 5,567 ಮತಗಳ ಅಂತರ), ಬಾಲುರ್‌ಘಾಟ್, ಪುರುಲಿಯಾ, ಕಂತಿ, ರಾಯ್‌ಗಂಜ್ ಮತ್ತು ಬಂಗಾವ್ ಸೇರಿದಂತೆ 10 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿತು. ಆಂಧ್ರಪ್ರದೇಶದಲ್ಲಿ 49 ಲಕ್ಷ ಮತಗಳು ಹೆಚ್ಚಾಗಿ ಒಂಗೋಲ್, ಕರ್ನೂಲ್, ನಂದ್ಯಾಲ್, ಹಿಂದೂಪುರ ಸೇರಿದಂತೆ 7 ಕ್ಷೇತ್ರಗಳಲ್ಲಿ ಎನ್‌ಡಿಎ (ಟಿಡಿಪಿ) ಅಭ್ಯರ್ಥಿಗಳು ಗೆದ್ದರು.
ಅಷ್ಟೇ ಏಕೆ? ನಮ್ಮ ಕರ್ನಾಟಕದಲ್ಲೂ 4.08%ರಷ್ಟು ಮತ ಜಿಗಿತವಾಗಿ 22.33 ಲಕ್ಷ ಮತಗಳು ಹೆಚ್ಚಾದವು; ಈ ಹೆಚ್ಚುವರಿ ಮತಗಳ ಸಂಖ್ಯೆಯು ಆರು ಕ್ಷೇತ್ರಗಳಲ್ಲಿ ಜೆಪಿ/ಎನ್‌ಡಿಎ ಗೆಲುವಿನ ಅಂತರಕ್ಕಿಂತ ಹೆಚ್ಚಾಗಿತ್ತು. ಇದರ ಫಲವಾಗಿ ಬೆಂಗಳೂರು ಸೆಂಟ್ರಲ್ (32,707 ಮತಗಳ ಅಂತರ), ಹಾವೇರಿ, ಚಿತ್ರದುರ್ಗ, ಬಾಗಲಕೋಟೆ, ಕೋಲಾರ ಮತ್ತು ಬಿಜಾಪುರ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿತು.
ಈ ಲೇಖನ ಓದಿದ್ದೀರಾ?: SIR ಅಕ್ರಮ | ಗ್ಯಾನೇಶ್ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್ ಶಾ ಏನು?
ಇವುಗಳ ಜೊತೆಗೆ ಛತ್ತೀಸ್‌ಗಢದ ಕಾಂಕೇರ್ (ಕೇವಲ 1,884 ಮತಗಳ ಅಂತರ), ರಾಜನಂದಗಾಂವ್, ಬಸ್ತಾರ್ ಸೇರಿದಂತೆ 5 ಕ್ಷೇತ್ರಗಳು; ರಾಜಸ್ಥಾನದ ಜೈಪುರ ರೂರಲ್ (ಕೇವಲ 1,615 ಮತಗಳ ಅಂತರ), ಕೋಟಾ, ಆಲ್ವಾರ್ ಸೇರಿದಂತೆ 5 ಕ್ಷೇತ್ರಗಳು; ಬಿಹಾರದ ಸಾರಣ್, ಅರಾರಿಯಾ, ಶಿಯೋಹರ್ ಕ್ಷೇತ್ರಗಳು; ಹರಿಯಾಣದ ಕುರುಕ್ಷೇತ್ರ, ಭಿವಾನಿ, ಗುರ್‌ಗಾಂವ್ ಕ್ಷೇತ್ರಗಳು; ಮಧ್ಯಪ್ರದೇಶದ ಮುರೈನಾ, ಭಿಂಡ್, ಗ್ವಾಲಿಯರ್ ಕ್ಷೇತ್ರಗಳು; ತೆಲಂಗಾಣದ ಮಹಬೂಬ್‌ನಗರ (4,500 ಮತಗಳ ಅಂತರ), ಮೆದಕ್, ಸಿಕಂದರಾಬಾದ್ ಕ್ಷೇತ್ರಗಳು; ಅಸ್ಸಾಂನ ಕರೀಮ್‌ಗಂಜ್ ಹಾಗೂ ಕೊಕ್ರಜಾರ್ (2 ಕ್ಷೇತ್ರಗಳು); ಅರುಣಾಚಲ ಪ್ರದೇಶದ ಅರುಣಾಚಲ ಈಸ್ಟ್ (1 ಕ್ಷೇತ್ರ); ಗುಜರಾತ್‌ನ ಪಟಾನ್ (1 ಕ್ಷೇತ್ರ) ಮತ್ತು ಕೇರಳದ ತ್ರಿಶೂರ್ (1 ಕ್ಷೇತ್ರ) – ಹೀಗೆ ಒಟ್ಟು 79 ಕ್ಷೇತ್ರಗಳ ಫಲಿತಾಂಶ ಸಂಪೂರ್ಣವಾಗಿ ಈ ನಿಗೂಢ ಮತಗಳಿಂದಲೇ ಬದಲಾಗಿದೆ.

ಈ 79 ಕ್ಷೇತ್ರಗಳ ಮಸಲತ್ತಿನ ಮಹತ್ವ ಅಷ್ಟಿಷ್ಟಲ್ಲ. ಒಂದು ವೇಳೆ, ಈ ಕ್ಷೇತ್ರಗಳಲ್ಲಿ ಮತಗಳ ವ್ಯತ್ಯಾಸವಾಗದಿದ್ದರೆ, ಪ್ರಧಾನಿ ಮೋದಿ ಅವರು ಮತ್ತೆ ಎನ್‌ಡಿಎ ಸರ್ಕಾರವನ್ನೇ ರಚಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ವಿಎಫ್‌ಡಿ ಹೇಳಿದೆ. ಯಾಕೆಂದರೆ, ಕೇಂದ್ರದಲ್ಲಿ ಸರ್ಕಾರ ರಚನೆಗೆ ಬೇಕಾದ ಸರಳ ಬಹುಮತದ ಸಂಖ್ಯಾಬಲ 272. 2024ರಲ್ಲಿ ಎನ್‌ಡಿಎ ಮೈತ್ರಿಕೂಟ ಪಡೆದಿದ್ದು ಕೇವಲ 293 ಸೀಟುಗಳು. ಒಂದು ವೇಳೆ ಈ 79 ಕ್ಷೇತ್ರಗಳಲ್ಲಿ ಅಸಹಜವಾಗಿ ಪ್ರತ್ಯಕ್ಷವಾದ ‘ಹೆಚ್ಚುವರಿ ಮತಗಳನ್ನು’ ತೆಗೆದುಹಾಕಿದ್ದರೆ, ಎನ್‌ಡಿಎ ಬಲವು 293ರಿಂದ ನೇರವಾಗಿ 214ಕ್ಕೆ ಕುಸಿಯುತ್ತಿತ್ತು. ಅಂದರೆ, ಸರಳ ಬಹುಮತದ 272ಕ್ಕ ಹೋಲಿಸಿದರೆ, ತೀರಾತಿ ತೀರಾ ಕಡಿಮೆ. ಇದರಿಂದ, ನರೇಂದ್ರ ಮೋದಿ ಅವರ ಸರ್ಕಾರವು ಬಹುಮತದ ಹತ್ತಿರಕ್ಕೂ ಹೋಗಲು ಸಾಧ್ಯವಾಗದೆ, ಅವರು ಅಧಿಕಾರದಿಂದಲೇ ಹೊರಬೀಳುತ್ತಿದ್ದರು!
ಈ ಇಡೀ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ನಡೆದುಕೊಂಡ ರೀತಿ ಪ್ರಜಾಪ್ರಭುತ್ವಕ್ಕೆ ಮಾರಕವಾದ ರೀತಿಯಲ್ಲಿದೆ. ಮೊದಲ ಹಂತದ ಅಂತಿಮ ಮತದಾನದ ದತ್ತಾಂಶ ನೀಡಲು ಆಯೋಗ ಬರೋಬ್ಬರಿ 11 ದಿನಗಳ ಕಾಲ ವಿಳಂಬ ಮಾಡಿತು. ಇಡೀ 2277 ದಿನಗಳ ಚುನಾವಣಾ ಅವಧಿಯಲ್ಲಿ ಆಯೋಗ ನಡೆಸಿದ್ದು ಕೇವಲ ಎರಡು ಸುದ್ದಿಗೋಷ್ಠಿಗಳನ್ನು ಮಾತ್ರ! ಪ್ರತಿಯೊಂದು ಬೂತ್‌ನ ನಿಖರ ಲೆಕ್ಕವಿಡುವ ‘ಫಾರ್ಮ್ 17C’ ಯನ್ನು ನೀಡಲು ನಿರಾಕರಿಸಿದ ಆಯೋಗವು, ಆಡಳಿತ ಪಕ್ಷದ ಉನ್ನತ ನಾಯಕರು ನಡೆಸಿದ ನಗ್ನ ದ್ವೇಷಪೂರಿತ ಭಾಷಣಗಳ ವಿರುದ್ಧ ಕಣ್ಣು ಮುಚ್ಚಿ ಕುಳಿತ್ತಿತ್ತು. ಅಂದರೆ, ಆಳುವವರಿಗೆ ಸಂಪೂರ್ಣ ಶರಣಾಗಿತ್ತು.
ಸ್ಥಳೀಯ ಮಟ್ಟದಲ್ಲಿ ನಡೆದ ಅಕ್ರಮಗಳಂತೂ ಸಾಕ್ಷಿ ಸಮೇತ ಸಿಕ್ಕಿಬಿದ್ದಿವು. ಮುಂಬೈ ನಾರ್ತ್ ವೆಸ್ಟ್ ಕ್ಷೇತ್ರದಲ್ಲಿ ಶಿವಸೇನಾ (ಶಿಂಧೆ) ಅಭ್ಯರ್ಥಿ ರವೀಂದ್ರ ವೈಕರ್ ಸೋಲಿನ ಸಾಧ್ಯತೆಗಳು ದಟ್ಟವಾಗಿದ್ದಾಗ, ಮತ ಎಣಿಕೆಯ 19ರಿಂದ 26ನೇ ಸುತ್ತಿನ ಪ್ರಕಟಣೆಯನ್ನು ತಡೆದು ಪೋಸ್ಟಲ್ ಬ್ಯಾಲೆಟ್‌ಗಳನ್ನು ಮರುಎಣಿಕೆ ಮಾಡಲಾಯಿತು. ಅಂತಿಮವಾಗಿ, ರವೀಂದ್ರ ಅವರು ಕೇವಲ 48 ಮತಗಳಿಂದ ಗೆದ್ದರು.
ಇನ್ನು, ಉತ್ತರ ಪ್ರದೇಶದ ಫಾರೂಖಾಬಾದ್‌ನಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರನ್ನು ಬೆದರಿಸಿ, ಒಂದೇ ವ್ಯಕ್ತಿ ಬಿಜೆಪಿಗೆ 8 ಬಾರಿ ಮತ ಹಾಕುವ ವಿಡಿಯೋ ವೈರಲ್ ಆದರೂ ಆಯೋಗ ಸುಮ್ಮನಿತ್ತು. ರಾಜಸ್ಥಾನದ ಜೈಪುರ ರೂರಲ್‌ನಲ್ಲಿ ನಿಯಮಬಾಹಿರವಾಗಿ 2,490 ಪೋಸ್ಟಲ್ ಬ್ಯಾಲೆಟ್‌ಗಳನ್ನು ತಿರಸ್ಕರಿಸಲಾಯಿತು. ಪರಿಣಾಮ, ಕಾಂಗ್ರೆಸ್ ಅಭ್ಯರ್ಥಿ ಕೇವಲ 1,615 ಮತಗಳಿಂದ ಸೋಲುಂಡರು.
ಅಂತೆಯೇ, ಅಸ್ಸಾಂನ ಕರೀಮ್‌ಗಂಜ್‌ನಲ್ಲಿ ಚಲಾವಣೆಯಾದ EVM ಮತಗಳಿಗಿಂತ (11,37,538) ಎಣಿಕೆಯಾದ ಮತಗಳ ಸಂಖ್ಯೆಯೇ (11,40,349) ಬರೋಬ್ಬರಿ 3,811 ಮತಗಳಷ್ಟು ಹೆಚ್ಚಿತ್ತು! ಅಷ್ಟೇ ಏಕೆ, ಮತದಾರರ ಗೌಪ್ಯತೆ ಕಾಯುವ ‘ಟೋಟಲೈಸರ್’ ತಂತ್ರಜ್ಞಾನವನ್ನು ಮೋದಿ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಿರೋಧಿಸಿತು.
ಪ್ರಜಾಪ್ರಭುತ್ವದ ಮುಖವಾಡ ಧರಿಸಿದ ಸರ್ಕಾರ ಮತ್ತು ಅದರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಚುನಾವಣಾ ಆಯೋಗ ಸೇರಿ ದೇಶದ ಜನಾದೇಶವನ್ನೇ ಹೈಜಾಕ್ ಮಾಡಿವೆ ಎಂಬುದು ಈ ಪ್ರತಿಯೊಂದು ದತ್ತಾಂಶದಿಂದ ಸ್ಪಷ್ಟವಾಗುತ್ತದೆ. ಆದಾಗ್ಯೂ ಇದೇ ಸಂದರ್ಭದಲ್ಲಿ ಅಥವಾ 2024ರ ನಂತರ ಕೆಲವು ವಿಧಾನಸಭಾ ಚುನಾವಣೆಗಳಲ್ಲಿ ವಿಪಕ್ಷಗಳು ಗೆದ್ದಿವೆಯಲ್ಲ ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ, ರಾಜಕೀಯ ವಿಶ್ಲೇಷಕರು ಕ್ರಿಕೆಟ್ ಆಟವನ್ನು ಉದಾಹರಿಸುತ್ತಾರೆ. ಕ್ರಿಕೆಟ್ ಟೂರ್ನಿಯಲ್ಲಿ ಪ್ರತಿ ಆಟವನ್ನು ಅಥವಾ ಪ್ರತಿ ಬಾಲ್‌ಅನ್ನೂ ಫಿಕ್ಸ್ ಮಾಡಿಕೊಂಡಿರುವುದಿಲ್ಲ. ನಿರ್ದಿಷ್ಟ ಆಟ ಅಥವಾ ಬಾಲ್‌ಅನ್ನು ಫಿಕ್ಸ್ ಮಾಡಿಕೊಳ್ಳಲಾಗುತ್ತದೆ. ಉಳಿದವು ತಂತಾನೆ ನಡೆಯುವಂತೆ ನೋಡಿಕೊಳ್ಳಲಾಗುತ್ತದೆ. ಅಂತೆಯೇ, ಕೆಲವು ಚುನಾವಣೆಗಳನ್ನು ಬಿಜೆಪಿ ಬಿಟ್ಟುಕೊಟ್ಟು ಆಟ ಆಡುತ್ತಿದೆ. ಆದ್ದರಿಂದಲೇ, ಪಂಜಾಬ್, ಕೇರಳದಂತಹ ಕೆಲವು ರಾಜ್ಯಗಳಲ್ಲಿ ವಿಪಕ್ಷಗಳು ಗೆದ್ದಿವೆ.
ಹೀಗಿರುವ ಸಂದರ್ಭದಲ್ಲಿ, ಲೋಕಸಭಾ ಚುನಾವಣೆಯಲ್ಲಿ 5 ಕೋಟಿ ಅಸಹಜ ಮತಗಳ ಸೇರ್ಪಡೆ, 79 ಕ್ಷೇತ್ರಗಳ ಅಸಹಜ ಫಲಿತಾಂಶ ಹಾಗೂ ಆಯೋಗದ ನಿರಂಕುಶ ನಡವಳಿಕೆಯನ್ನು ಸ್ವತಂತ್ರ ತನಿಖೆಗೆ ಒಳಪಡಿಸಬೇಕು. ಇಲ್ಲದಿದ್ದರೆ, ಭಾರತದಲ್ಲಿ ಮತದಾನ ಎಂಬ ಪ್ರಕ್ರಿಯೆಗೆ ಯಾವುದೇ ಮೌಲ್ಯ ಉಳಿಯುವುದಿಲ್ಲ, ಪ್ರಜಾಪ್ರಭುತ್ವ ಎಂಬುದು ಕೇವಲ ಕಾಗದದ ಮೇಲಿನ ಶಬ್ದವಾಗಿ ಉಳಿಯುತ್ತದೆ. ಸರ್ವಾಧಿಕಾರಿಗಳು ದೇಶ ಆಳಲು ಮುಂದಾಗುತ್ತಾರೆ!



