- ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ
- ಯಾವ ಹಳ್ಳಿಗೆ ಹೋದ್ರೂ ನೀವು ಸಚಿವರಾಗ್ತಿರಾ ಅಂತ ಕೇಳ್ತಾರೆ
ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದ ಮಾಜಿ ಶಾಸಕ ಕೆ ಎಂ ಶಿವಲಿಂಗೇಗೌಡ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾದರು. ಈ ವೇಳೆ ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಮಗೆ ಸಚಿವ ಸ್ಥಾನ ನೀಡುವಂತೆ ವೇದಿಕೆ ಮೇಲೆಯೇ ಪರೋಕ್ಷವಾಗಿ ಬೇಡಿಕೆ ಇಟ್ಟಿದ್ದಾರೆ.
ಅರಸೀಕೆರೆಯಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೆ ಎಂ ಶಿವಲಿಂಗೇಗೌಡ, “ನಾನು ಕಾಂಗ್ರೆಸ್ ನಾಯಕರಾದ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಡಿ ಕೆ ಸುರೇಶ್ ಅವರನ್ನು ನಂಬಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ, ನೀವು ನೀರಲ್ಲಾದರೂ ಹಾಕಿ ಹಾಲಲ್ಲಾದರೂ ಹಾಕಿ” ಎಂದರು.
“ಕಾಂಗ್ರೆಸ್ ಸೇರಿರುವುದಕ್ಕೆ ರಾಥೋಡ್ ಒಬ್ಬರು ವೇದಿಕೆಯಲ್ಲಿ ಇದ್ದಾರೆ ಅವರೇ ಸಾಕ್ಷಿ, ನಾನು ಅರಸೀಕೆರೆಯ ಯಾವ ಹಳ್ಳಿಗೆ ಹೋದರೂ ಅಲ್ಲಿ ನೀವು ಸಚಿವರಾಗ್ತಿರಾ ಅಂತ ಕೇಳ್ತಾರೆ. ನೀವು ಅದೇನ್ ಮಾಡ್ತಿರೋ ಮಾಡಿ” ಎಂದು ಪರೋಕ್ಷವಾಗಿ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಹುಲಿ ಸಂರಕ್ಷಣಾ ಸಂಭ್ರಮ ದಿನ ವಿರೋಧಿಸಿ ಆದಿವಾಸಿಗಳಿಂದ ಶೋಕ ದಿನ ಆಚರಣೆ
ಬಳಿಕ ಮಾತನಾಡಿದ ಸಿದ್ದರಾಮಯ್ಯ, “ಶಿವಲಿಂಗೇಗೌಡ ಜನಪರ ಕಾಳಜಿಯ ಶಾಸಕ, ಇವರನ್ನು ಹಾಲಿಗೆ ಹಾಕುತ್ತೇವೆ. ನಂಬಿಕೆ ಇರಲಿ ಪಕ್ಷದಲ್ಲಿ ಅವರಿಗೆ ಯಾವುದೇ ತಾರತಮ್ಯ ಮಾಡುವುದಿಲ್ಲ” ಎಂದು ಭರವಸೆ ನೀಡಿದರು.