ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಗೆ ಬಲಿಯಾದ ಆನೆ ‘ಅರ್ಜುನ’ನ ಸಾವಿಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ಪ್ರಮಾದವೂ ಕಾರಣವೆಂದು ಆರೋಪಿಸಲಾಗಿದೆ.
ಆರೋಪಕ್ಕೆ ಸಂಬಂಧಿಸಿದಂತೆ ಮಾವುತರೊಬ್ಬರ ಜೊತೆ ಸ್ಥಳೀಯರೊಬ್ಬರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲಲ್ಲಿ, “ಕಾರ್ಯಾಚರಣೆಯ ವೇಳೆ ಮದದಲ್ಲಿದ್ದ ಒಂಟಿ ಸಲಗ ನಮ್ಮೆಡೆಗೆ ದಾಳಿ ಮಾಡಿ ಬಂದಿತ್ತು. ಇದರಿಂದ ತಪ್ಪಿಸಿಕೊಳ್ಳಲು ಅರಣ್ಯ ಇಲಾಖೆಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ, ಅಚಾನಕ್ಕಾಗಿ ಗುಂಡು ಅರ್ಜುನನ ಕಾಲಿಗೆ ತಗುಲಿತ್ತು” ಎಂದು ಮಾವುತ ಹೇಳಿದ್ದಾರೆ.
“ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಲು ಇಂಜೆಕ್ಷನ್ ಶೂಟ್ ಮಾಡಲಾಗಿತ್ತು. ಅದು ಗುರಿ ತಪ್ಪಿ ಪ್ರಶಾಂತ್ ಎಂಬ ಸಾಕಾನೆ ಮೇಲೆ ಬಿತ್ತು. ನಂತರ, ಬೇರೊಂದು ಇಂಜೆಕ್ಷನ್ ನೀಡಿ ಅದನ್ನು ಸುಧಾರಿಸಲಾಯಿತು. ಆ ವೇಳೆಗೆ, ಕಾಡಾನೆ ಮೇಲೆ ಅರ್ಜುನ ದಾಳಿ ಮಾಡಿತು. ಆಗ ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದರು. ಆ ಗುಂಡು ಅಚಾನಕ್ಕಾಗಿ ಅರ್ಜುನನ ಕಾಲಿಗೆ ಬಿದ್ದಿತು” ಎಂದು ಅವರು ಹೇಳಿದ್ದಾರೆ.
“ಗುಂಡು ತಗುಲಿದ್ದರಿಂದ ಅರ್ಜುನ ಸುತ್ತಮುತ್ತಲಿದ್ದ ಮರಗಳನ್ನು ಬೀಳಿಸಿತು. ಅರ್ಜುನ ಆನೆಗೆ ನಡೆಯಲಾಗದ ಪರಿಸ್ಥಿತಿಯಲ್ಲಿತ್ತು. ಈ ವೇಳೆ, ಕಾಡಾನೆ ಅರ್ಜುನನ ಮೇಲೆ ದಾಳಿ ಮಾಡಿತು” ಎಂದು ಮಾವುತ ವಿವರಿಸಿದ್ದಾರೆ.