ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ಜಾಗೃತಿ ಮೂಡಿಸಿ, ಸಮಾಜದಿಂದಲೇ ಈ ಅನಿಷ್ಠ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಸಂಕಲ್ಪದೊಂದಿಗೆ ಬಂಜಾರ ಸಮಾಜದ ವತಿಯಿಂದ ಜು.12ರಂದು ಬೆಳಗ್ಗೆ 10 ಗಂಟೆಗೆ ನಗರದ ಚಿತ್ತಾಪುರ ರಸ್ತೆಯ ಬಂಜಾರ ಭವನದಲ್ಲಿ ವರದಕ್ಷಿಣೆ ನಿಷೇಧ ಮಹಾಸಭೆ ಹಾಗೂ ಜನಜಾಗೃತಿ ಮಹಾಸಮಾವೇಶ ಆಯೋಜಿಸಲಾಗಿದೆ ಎಂದು ಆಲ್ ಇಂಡಿಯಾ ಬಂಜಾರ ಸಂಘದ ರಾಜ್ಯಾಧ್ಯಕ್ಷ ದೇವರಾಜ್ ನಾಯಕ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವರದಕ್ಷಿಣೆ ಪದ್ಧತಿಯಿಂದ ಬಂಜಾರ ಸಮಾಜದ ಸಾವಿರಾರು ಕುಟುಂಬಗಳು ಸಾಲದ ಸುಳಿಯಲ್ಲಿ ಸಿಲುಕಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಕೆಲವರು ಆತ್ಮಹತ್ಯೆಯಂತಹ ದುರ್ಘಟನೆಗೂ ಶರಣಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ’ ಎಂದು ಹೇಳಿದರು.
‘ಈ ದುಷ್ಪರಿಣಾಮಗಳನ್ನು ತಡೆಯುವ ಉದ್ದೇಶದಿಂದ ಸಮಾಜದ ಮುಖಂಡರು, ಹಿರಿಯರು ಹಾಗೂ ಯುವಕರು ಒಗ್ಗೂಡಿ ವರದಕ್ಷಿಣೆ ನಿರ್ಮೂಲನೆಗೆ ಜನಜಾಗೃತಿ ಮೂಡಿಸಲು ಈ ಮಹಾಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
‘ಶಹಾಪುರ, ಯಾದಗಿರಿ, ವಡಗೇರಾ, ಸುರಪುರ, ಹುಣಸಗಿ ಹಾಗೂ ಗುರುಮಠಕಲ್ ಸೇರಿದಂತೆ ಜಿಲ್ಲೆಯ ಆರು ತಾಲೂಕುಗಳಿಂದ ನಾಯಕರು, ಡಾವ್, ಕಾರಬಾರಿ, ನಾಸಾಬಿ, ಹಸಾಬಿ ಸೇರಿದಂತೆ ಸಾವಿರಾರು ಸಮಾಜದ ಬಾಂಧವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ’ ಎಂದರು.
ಜಿಲ್ಲಾಧಿಕಾರಿ ರಾಹುಲ್ ಪಾಂಡೈ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರಿಗೆ ಸಮಾವೇಶದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ. ಇದೇ ವೇಳೆ ಕಾರಬಾರಿ, ನಾಯಕರು ಹಾಗೂ ಡಾವ್‌ಗಳಿಗೆ ವರದಕ್ಷಿಣೆ ನಿಷೇಧದ ಪ್ರತಿಜ್ಞೆ ಬೋಧಿಸಲಾಗುವುದು ಎಂದು ತಿಳಿಸಿದರು.
‘ಸಮಾವೇಶದಲ್ಲಿ ವರದಕ್ಷಿಣೆ ನಿರ್ಮೂಲನೆ, ಆತ್ಮಹತ್ಯೆ ತಡೆ, ಹೆಣ್ಣು ಭ್ರೂಣ ಹತ್ಯೆ ನಿರ್ಮೂಲನೆ ಹಾಗೂ ಹೆಣ್ಣು ಮಗುವನ್ನು ಮಹಾಲಕ್ಷ್ಮಿಯಾಗಿ ಗೌರವಿಸುವ ಕುರಿತು ಸಾಮೂಹಿಕ ಸಂಕಲ್ಪ ಕೈಗೊಳ್ಳಲಾಗುವುದು’ ಎಂದು ದೇವರಾಜ್ ನಾಯಕ ಹೇಳಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಕುರಿಹಾಳ ಚೆಕ್‌ಡ್ಯಾಂ ಕಾಮಗಾರಿಯಲ್ಲಿ ಅಕ್ರಮ ಆರೋಪ; ತನಿಖೆಗೆ ಛಲವಾದಿ ಮಹಾಸಭಾ ಆಗ್ರಹ
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಕಿಶನ ರಾಠೋಡ, ಬಂಗಾರು ರಾಠೋಡ, ವಿನೋದ ರಾಠೋಡ, ಆನಂದ, ಗೋವಿಂದ ರಾಠೋಡ, ವಿಜಯ ಜಾಧವ ಸೇರಿದಂತೆ ಹಲವರು ಉಪಸ್ಥಿತರಿದ್ದರು.




