ಸಾಹಿತ್ಯ ಕೇವಲ ಸಮಾಜದ ಪ್ರತಿಬಿಂಬವಾಗದೆ, ಸಾಮಾಜಿಕ ಬದಲಾವಣೆಗೆ ಪ್ರೇರಕ ಶಕ್ತಿಯಾಗಬೇಕು. ಶೋಷಿತರು, ದಮನಿತರು, ಮಹಿಳೆಯರು, ರೈತರು, ಕಾರ್ಮಿಕರು ಹಾಗೂ ಅಂಚಿನ ಸಮುದಾಯಗಳ ನೋವುಗಳಿಗೆ ಸಾಹಿತಿಗಳು ತಮ್ಮ ಬರಹಗಳ ಮೂಲಕ ಧ್ವನಿಯಾಗಬೇಕು ಎಂದು ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ. ಖಾಜಾವಲಿ ಈಚನಾಳ ಹೇಳಿದರು.
ಜೇವರ್ಗಿ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಹಿತ್ಯವು ಮಾನವೀಯ ಮೌಲ್ಯಗಳು, ಸಾಮಾಜಿಕ ನ್ಯಾಯ, ಸಮಾನತೆ, ಸಹಬಾಳ್ವೆ ಮತ್ತು ವೈಚಾರಿಕ ಪ್ರಜ್ಞೆಯನ್ನು ಬೆಳೆಸುವ ಶಕ್ತಿಯನ್ನು ಹೊಂದಿದೆ. ಹೀಗಾಗಿ ಸಾಹಿತಿಗಳು ವರ್ತಮಾನದ ಸಾಮಾಜಿಕ ತಲ್ಲಣಗಳಿಗೆ ಸ್ಪಂದಿಸುವ ಬರಹಗಳನ್ನು ರಚಿಸಬೇಕು ಎಂದರು.
ಕನ್ನಡಿಗರ ಸುದೀರ್ಘ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯ ಉದಯವಾಗಿದ್ದು, ಏಕೀಕರಣದ ಪ್ರಮುಖ ಆಶಯ ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಯ ಜತೆಗೆ ಪ್ರಾದೇಶಿಕ ಅಸಮಾನತೆ ನಿವಾರಣೆ ಹಾಗೂ ಸಮಗ್ರ ಅಭಿವೃದ್ಧಿಯಾಗಿತ್ತು. ಆದರೆ, ಇಂದಿಗೂ ಕಲ್ಯಾಣ ಕರ್ನಾಟಕ ಭಾಗ ಶಿಕ್ಷಣ, ಆರೋಗ್ಯ, ಉದ್ಯೋಗ, ಕೃಷಿ, ನೀರಾವರಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಈ ಅಸಮಾನತೆ ನಿವಾರಣೆಗೆ ಜಾರಿಗೊಳಿಸಲಾದ 371(ಜೆ) ವಿಧಿಯೂ ನಿರೀಕ್ಷಿತ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಡಾ. ಕಾವ್ಯಶ್ರೀ ಮಹಾಗಾಂವಕರ್ ಅವರು ಜೇವರ್ಗಿ ತಾಲೂಕಿನ ಸಾಹಿತ್ಯ, ವಿಜಯಕುಮಾರ್ ರೋಣದ ಅವರು ಕರ್ನಾಟಕ ಏಕೀಕರಣ ಹಾಗೂ ಡಾ. ಶ್ರೀನಿವಾಸ್ ವಸಂತ ಕುಷ್ಟಗಿ ಅವರು ಸಮ್ಮೇಳನದ ಸರ್ವಾಧ್ಯಕ್ಷ ಡಾ. ಗೋವಿಂದರಾಜ ಅಲ್ದಾಳ ಅವರ ‘ಬದುಕು ಬರಹ’ ಕುರಿತು ಉಪನ್ಯಾಸ ನೀಡಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಶಹಾಪುರ ಸಂಪೂರ್ಣ ಬಂದ್; ‘ನೀರು ಕೊಡಿ, ಇಲ್ಲ ವಿಷ ಕೊಡಿ’ ಎಂದು ರೈತರ ಆಕ್ರೋಶ!
ಶಿವನಗೌಡ ಪಾಟೀಲ ಹಂಗರಗಿ, ಷಣ್ಮುಖಗೌಡ ಮಾಲಿ ಪಾಟೀಲ, ಚಂದ್ರಶೇಖರ ಪಾಟೀಲ ಹರವಾಳ, ರವೀಂದ್ರ ಕೋಳಕೂರ, ಭಗವಂತರಾಯ ಬೆಣ್ಣೂರ, ಜಗದೀಶ ವಿಶ್ವಕರ್ಮ, ಅಮೃತ ದೊಡ್ಡಮನಿ, ಮಲ್ಲಶೆಟ್ಟೆಪ್ಪ ಹಿರೇಗೌಡ್ರು, ಈಶ್ವರ ಹಿಪ್ಪರಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಕೆ. ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಎ.ಸಿ. ತಾರಿವಾಳ ಮತ್ತು ಸುರೇಶ ಹಿರೇಮಠ ನಿರೂಪಿಸಿದರು. ರಾಜು ಮುದ್ದಡಗಿ ನಿರ್ವಹಿಸಿದರು. ಮಹೇಶ ಚಿಂತನಪಲ್ಲಿ ವಂದಿಸಿದರು.





