ವಿದ್ಯಾರ್ಥಿಗಳಿಂದ ಶಾಲೆಯ ಶೌಚಾಲಯ ಸ್ವಚ್ಛಗೊಳಿಸಿದ್ದೂ ಅಲ್ಲದೆ ತಮ್ಮ ಮನೆಯ ಗಾರ್ಡನ್ಗೆ ನೀರು ಹಾಕುವ ಕೆಲಸಕ್ಕೆ ಬಳಸಿಕೊಂಡ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲೆ ವಿರುದ್ಧ ಕಲಬುರಗಿಯ ರೋಜಾ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದಾರೆ.
ಕಲಬುರಗಿಯ ಮಾಲಗತ್ತಿ ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಆಜಾದ್ ಮಾಡೆಲ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಝಹೊರಾ ಜಬೀನ್ ವಿರುದ್ದ ಪೋಷಕರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
“ಕಳೆದ ಹಲವು ತಿಂಗಳುಗಳಿಂದ ಶಾಲೆಯ ಪ್ರಾಂಶುಪಾಲೆ ಝಹೊರಾ ಜಬೀನ್ ಕೆಲವು ವಿದ್ಯಾರ್ಥಿಗಳನ್ನು ಶಾಲೆಯ ಶೌಚಾಲಯ ಸ್ವಚ್ಛಗೊಳಿಸಲು ಬಳಸಿದ್ದರೆ, ಇನ್ನು ಕೆಲವರನ್ನು ಅವರ ನಿವಾಸದಲ್ಲಿರುವ ಉದ್ಯಾನವನ್ನು ಸ್ವಚ್ಛಗೊಳಿಸಲು ಸಹ ಕರೆದೊಯ್ಯುತ್ತಿದ್ದರು. ಈ ಕುರಿತು ಕೇಳಿದರೆ ನಮ್ಮಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಅದಕ್ಕಾಗಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ ಎಂದು ಪ್ರಾಂಶುಪಾಲೆ ಸಮರ್ಥಿಸಿಕೊಂಡಿದ್ದಾರೆ” ಎಂದು ಪೋಷಕರು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನಂತಕುಮಾರ್ ಎಂಬ ಬೆಂಕಿ ಬಾಲಕನೂ, ಜನಿವಾರದಾಟವೂ
ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ರೋಜಾ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.