ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ವಿಜಯಪುರ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಜಿಲ್ಲೆಯ ವಿವಿಧ ತಾಲೂಕುಗಳ ನೂರಾರು ಗ್ರಾಮಗಳಲ್ಲಿ ರೈತರು ಸ್ವಯಂಪ್ರೇರಿತವಾಗಿ ಬಂದ್ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತಪರವಾಗಿರುವುದಾಗಿ ಹೇಳಿಕೊಂಡು ರೈತರನ್ನು ಮೋಸ ಮಾಡುತ್ತಿವೆ. ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರಗಳಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ ಎಚ್ಚರಿಸಿದರು.
ವಿಜಯಪುರ ನಗರದ ಸಮೀಪದ ಜುಮನಾಳ–ದದಾಮಟ್ಟಿ ಕ್ರಾಸ್ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಜಿಲ್ಲೆಯ 13 ತಾಲೂಕುಗಳ ಅನೇಕ ಗ್ರಾಮಗಳಲ್ಲಿ ರೈತರು ಬಂದ್ ಆಚರಿಸಿ ಹೋರಾಟ ನಡೆಸುತ್ತಿದ್ದಾರೆ. ರೈತರ ಸಂಕಷ್ಟವನ್ನು ಅರ್ಥಮಾಡಿಕೊಂಡು ರಾಜ್ಯದ ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಹಾಗೂ ರಾಜ್ಯಾಧ್ಯಕ್ಷ ಚುನಪ್ಪಾ ಪೂಜೇರಿ ಅವರ ಆದೇಶದ ಮೇರೆಗೆ ರಾಜ್ಯದ 31 ಜಿಲ್ಲೆಗಳಲ್ಲಿ ಬಂದ್ ನಡೆಸಲಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿಯೂ ನೂರಾರು ಕಡೆಗಳಲ್ಲಿ ರೈತರು ಸ್ವಯಂಪ್ರೇರಿತವಾಗಿ ಬಂದ್ ಆಚರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು, ತಮ್ಮ ಸಂಕಷ್ಟಗಳನ್ನು ತೋಡಿಕೊಂಡರು.ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ಬಹಳ ಹೊತ್ತಿನವರೆಗೆ ವಾಗ್ವಾದ ನಡೆಯಿತು.ನಂತರ ಸ್ಥಳಕ್ಕೆ ಜಿಲ್ಲಾಧಿಕಾರಿ ಟಿ. ಬುಬಾಲನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಆಗಮಿಸಿ ರೈತರನ್ನು ಮನವೊಲಿಸಿದರು. ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಿಮ್ಮ ಹೋರಾಟದ ವಿಚಾರವನ್ನು ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿ ಹೋರಾಟಗಾರರನ್ನು ಸಮಾಧಾನಪಡಿಸಿದರು.
ಇಂಡಿ, ಸಿಂದಗಿ, ದೇವರಹಿಪ್ಪರಗಿ, ತಾಳಿಕೋಟಿ, ಮುದ್ದೇಬಿಹಾಳ, ಕೋಲಾರ, ನಿಡಗುಂದಿ, ಚಡಚಣ, ತಿಕೋಟಾ, ಬಬಲೇಶ್ವರ, ಅಲಮೇಲ, ಬಸವನಬಾಗೇವಾಡಿ, ವಿಜಯಪುರ, ಝಳಕಿ, ತಾಂಬಾ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಬಂದ್ ನಡೆಸಿ ರೈತರು ಪ್ರತಿಭಟನೆ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷರಾದ ಮಹಾದೇವ ಬನಸೋಡೆ, ಸಲೀಮ್ ಮಾಶ್ಯಳ, ಮಲ್ಲನಗೌಡ ಪಾಟೀಲ, ಮುಖಂಡರಾದ ಮಲ್ಲಿಕಾರ್ಜುನ ಕೆಂಗನಾಳ, ಶ್ರೀಶೈಲ ಮುಳಜಿ, ಸತೀಶ ದಾಸ್ಯಾಳ, ಗುರುಶಾಂತ, ನಿಂಗನಗೌಡ ಪಾಟೀಲ, ಧರೆಪ್ಪ ಬಿರಾದಾರ, ಅಶೋಕ ದೊಡ್ಡಮನಿ, ರಾಜೇಶ ಕೋಟಿ, ಸಿದ್ದು ಉಮ್ರಾಣಿ, ದಸಗೀರ ಮುಲ್ಲಾ, ಅಶೋಕ ಸಂಕಗೊಂಡ, ಶ್ರೀಶೈಲ ಮಮದಾಪುರ, ಬುಡ್ಡೆಸಾಬ ಮುಲ್ಲಾ, ಭೀಮು ತಳವಾರ, ಅಮೋಸಿದ್ದ ಕೋಲಕಾರ, ಅಪ್ಪು ನಾಟಿಕಾರ, ಸಿದ್ದು ಗೋಡೆಕಾರ, ಅಭಿಷೇಕ ಹೂಗಾರ, ಮಲ್ಲಿಕಾರ್ಜುನ ಘೋಡೇಕರ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.




