ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಮೈಸೂರಿನಲ್ಲಿ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ನಗರದ ಕುವೆಂಪು ಪಾರ್ಕ್ ಸಮೀಪ ಜಮಾಯಿಸಿದ ಸಂಘದ ಪದಾಧಿಕಾರಿಗಳು ಮತ್ತು ಕಬ್ಬು ಬೆಳೆಗಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೇಂದ್ರ ಸರ್ಕಾರ ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಬೇಕು. ರಾಜ್ಯ ಸರ್ಕಾರ ಕಬ್ಬಿಗೆ ನ್ಯಾಯಯುತ ಎಫ್‌ಆರ್‌ಪಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ದೇಶದಲ್ಲಿ ಆರು ಕೋಟಿಗೂ ಹೆಚ್ಚು ಕಬ್ಬು ಬೆಳೆಗಾರರಿದ್ದು, ದೇಶದ ಆರ್ಥಿಕ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ರಾಜ್ಯದ ಆರ್ಥಿಕತೆಯಲ್ಲೂ ಕಬ್ಬು ಬೆಳೆಗಾರರ ಪಾತ್ರ ದೊಡ್ಡದಿದೆ. ಹೀಗಿದ್ದರೂ ರೈತರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರಿಂದ ರಾಜ್ಯ ಸರ್ಕಾರಕ್ಕೆ ಸುಮಾರು 50 ಸಾವಿರ ಕೋಟಿ ರೂ.ಗೂ ಅಧಿಕ ಆದಾಯ ದೊರೆಯುತ್ತಿದೆ. ಆದರೆ, ರೈತರಿಗೆ ನ್ಯಾಯಯುತ ಬೆಲೆ ನೀಡುವ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ನೆರೆಯ ತಮಿಳುನಾಡಿನಲ್ಲಿ ಪ್ರತಿ ಟನ್ ಕಬ್ಬಿಗೆ 700 ರೂ., ಗುಜರಾತ್‌ನಲ್ಲಿ 800 ರೂ. ಹಾಗೂ ಉತ್ತರ ಪ್ರದೇಶದಲ್ಲಿ 650 ರೂ. ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ 1,000 ರೂ. ಹೆಚ್ಚುವರಿ ಎಫ್‌ಆರ್‌ಪಿ ನೀಡಬೇಕು ಎಂದು ಆಗ್ರಹಿಸಿದರು.
ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರೊಂದಿಗೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಎರಡು ದಿನಗಳ ಕಾಲಾವಕಾಶ ಪಡೆದುಕೊಂಡಿದ್ದರೂ ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ಘೋಷಿಸುವ ಕುರಿತು ಯಾವುದೇ ತೀರ್ಮಾನ ಪ್ರಕಟಿಸಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪರಸ್ಪರ ಪತ್ರ ವ್ಯವಹಾರದಲ್ಲೇ ಕಾಲ ಕಳೆಯುತ್ತಿದ್ದು, ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ಟೀಕಿಸಿದರು. ಸಕ್ಕರೆ ಕಾರ್ಖಾನೆಗಳಿಂದ ಸಕ್ಕರೆ ಮಾರಾಟ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಪ್ರಸಕ್ತ ಸಾಲಿಗೆ ಕೇಂದ್ರ ಸರ್ಕಾರ ಸಕ್ಕರೆಯ ಎಂಎಸ್‌ಪಿಯನ್ನು ಪ್ರತಿ ಟನ್ ಗೆ 6,000 ರೂ. ನಿಗದಿಪಡಿಸಬೇಕು. ಎಫ್‌ಆರ್‌ಪಿ ನಿಗದಿಗೆ ಬಳಸುವ ಇಳುವರಿ ಮಾನದಂಡವನ್ನು ಶೇ. 9.25ಕ್ಕೆ ಇಳಿಸಿ, ಅದಕ್ಕೆ ಅನುಗುಣವಾಗಿ ದರ ನಿಗದಿಪಡಿಸಬೇಕು. ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವ ಸಕ್ಕರೆಯ ಬೆಲೆಯನ್ನು ಹೆಚ್ಚಿಸಬೇಕು. ಸಕ್ಕರೆ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುವ ಎಥೆನಾಲ್ ಅನ್ನು ಇತರ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಸಂಪೂರ್ಣವಾಗಿ ಖರೀದಿಸಬೇಕು. ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರ ಜತೆಗೆ ರೈತರಿಗೂ ಎಥೆನಾಲ್ ಉತ್ಪಾದನೆಯಲ್ಲಿ ಅವಕಾಶ ಕಲ್ಪಿಸಿ, ಉತ್ಪಾದಿತ ಎಥೆನಾಲ್ ಖರೀದಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಬ್ಬಿನ ಕಟಾವು ಮತ್ತು ಸಾಗಣೆ ವೆಚ್ಚವನ್ನು ಕಾರ್ಖಾನೆ ಮಾಲೀಕರೇ ಭರಿಸಬೇಕು. ಉತ್ತರ ಮತ್ತು ದಕ್ಷಿಣ ಕರ್ನಾಟಕ ಎಂಬ ಪ್ರತ್ಯೇಕ ನಿಯಮ ಕೈಬಿಟ್ಟು, ರಾಜ್ಯಾದ್ಯಂತ ಇಳುವರಿ ಆಧಾರದ ಮೇಲೆ ಕಬ್ಬಿನ ದರ ನಿಗದಿಪಡಿಸಬೇಕು. ಕಾರ್ಖಾನೆ ಮತ್ತು ರೈತರ ನಡುವೆ ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿಗೆ ತರಬೇಕು. ಕಬ್ಬು ಖರೀದಿಸಿದ 14 ದಿನಗಳೊಳಗೆ ರೈತರಿಗೆ ಹಣ ಪಾವತಿಸುವುದನ್ನು ಕಡ್ಡಾಯಗೊಳಿಸಬೇಕು. ವಿಳಂಬವಾದರೆ ಹೆಚ್ಚುವರಿ ಬಡ್ಡಿ ಪಾವತಿಸುವಂತೆ ಸರ್ಕಾರ ಆದೇಶಿಸಬೇಕು ಎಂದು ಆಗ್ರಹಿಸಿದರು.
ಕೆಲವು ಕಾರ್ಖಾನೆಗಳು 15 ತಿಂಗಳಾದರೂ ಕಬ್ಬು ಕಟಾವು ಮಾಡದಿರುವುದರಿಂದ ರೈತರಿಗೆ ಇಳುವರಿ ನಷ್ಟವಾಗುವುದರ ಜತೆಗೆ ಬ್ಯಾಂಕ್ ಸಾಲ ಮರುಪಾವತಿಯಲ್ಲೂ ತೊಂದರೆಯಾಗುತ್ತಿದೆ. ಈ ಸಮಸ್ಯೆ ನಿವಾರಿಸಲು ಒಪ್ಪಂದದ ಅವಧಿ ಹಾಗೂ ಹಣ ಪಾವತಿಯ ಷರತ್ತುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕಬ್ಬಿನ ಬಾಕಿ ಹಣ ಅಥವಾ ಲಾಭಾಂಶ ಹಂಚಿಕೆಯಡಿ ಪಾವತಿಸಬೇಕಾದ ಹಣವನ್ನು ನೀಡದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಎಲ್ಲ ಸಕ್ಕರೆ ಕಾರ್ಖಾನೆಗಳ ಮುಂದೆ ಸರ್ಕಾರದ ವತಿಯಿಂದ ತೂಕದ ಯಂತ್ರಗಳನ್ನು ಅಳವಡಿಸಬೇಕು. ಇಳುವರಿ ಲೆಕ್ಕಾಚಾರದಲ್ಲಿ ನಡೆಯುವ ವಂಚನೆ ತಡೆಯಲು ಸ್ಥಳೀಯ ತಜ್ಞರ ಸಮಿತಿ ರಚಿಸಿ, ಕಾರ್ಖಾನೆಗಳ ಮುಂದೆ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಹೊಸ ಸಕ್ಕರೆ ಕಾರ್ಖಾನೆಗಳ ಆರಂಭ ಹಾಗೂ ಕಬ್ಬು ಮೀಸಲು ಪ್ರದೇಶಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ತೆಗೆದುಹಾಕಬೇಕು. ಕಬ್ಬು ಬೆಳೆಯನ್ನೂ ಬೆಳೆ ವಿಮೆ ವ್ಯಾಪ್ತಿಗೆ ತರಬೇಕು. ಕಬ್ಬು ಬೆಳೆಗಾರರ ಜೀವ ಮತ್ತು ಜೀವನೋಪಾಯದ ರಕ್ಷಣೆಗಾಗಿ ಪ್ರತ್ಯೇಕ ವಿಮಾ ಯೋಜನೆ ಜಾರಿಗೆ ತರಬೇಕು. ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಮೇಲಿನ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ರೈತರ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಏಕರೂಪ ಸಮಾನ ಶಿಕ್ಷಣ ಜಾರಿಗೆ ಆಗ್ರಹ: ಸಿಎಂಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾದ ಪ್ರತಿಭಟನಾಕಾರರ ಬಂಧನ
ಪ್ರತಿಭಟನೆಯಲ್ಲಿ ಕೆರೆಹುಂಡಿ ರಾಜಣ್ಣ, ಪ್ರಕಾಶ್ ಗಾಂಧಿ, ಹಾಲಿನ ನಾಗರಾಜ್, ಮಾಲಿಯೂರು ಮಹೇಂದ್ರ, ಮುದ್ದಾಳಿ ಮಧು, ಗೌಡಿಕೆ ಶಿವಣ್ಣ, ಜೆಸಿಬಿ ಚಿದಂಬರ, ಅಂಡುವಿನಹಳ್ಳಿ ಜಗದೀಶ್, ಮಹೇಶ್, ದೇವಿರಮ್ಮನಹಳ್ಳಿ ಪ್ರಭು, ಸುಜ್ಜಲೂರು ಜಯಸ್ವಾಮಿ, ಹೆಚ್. ಗುಂಡ್ಲಾ ಜಗದೀಶ್, ಊರ್ದಳ್ಳಿ ರಾಮಣ್ಣ, ಶಾನಂಡಳ್ಳಿ ಬಸವರಾಜಪ್ಪ, ಗುರುಪುರ ಚಂದ್ರಪ್ಪ, ಪುಟ್ಟ ಮಲ್ಲೇಗೌಡ ಸೇರಿದಂತೆ ನೂರಕ್ಕೂ ಹೆಚ್ಚು ಕಬ್ಬು ಬೆಳೆಗಾರರು ಇದ್ದರು.




