ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯ ರೈತರು ಹಾಗೂ ಕೃಷಿ ಕೂಲಿಕಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಯಾದಗಿರಿ ಜಿಲ್ಲೆಯನ್ನು ತಕ್ಷಣ ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ಬೆಳೆ ನಷ್ಟಕ್ಕೊಳಗಾದ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸಿದೆ.
ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘದ ಮುಖಂಡರು, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಆನೇಗುಂದಿ, ‘ಮೇ ತಿಂಗಳಲ್ಲೇ ದುಬಾರಿ ಬೆಲೆಗೆ ಬೀಜ ಹಾಗೂ ರಸಗೊಬ್ಬರ ಖರೀದಿಸಿ ಸಾಲ ಮಾಡಿ ಬಿತ್ತನೆ ನಡೆಸಿದ ರೈತರು ಕಳೆದ 45 ದಿನಗಳಿಂದ ಸಮರ್ಪಕ ಮಳೆಯಿಲ್ಲದೆ ಸಂಕಷ್ಟದಲ್ಲಿದ್ದಾರೆ. ಹತ್ತಿ, ತೊಗರಿ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿದ್ದು, ರೈತರ ಬದುಕು ಅತಂತ್ರವಾಗಿದೆ’ ಎಂದು ಹೇಳಿದರು.
‘ಬೆಳೆ ನಷ್ಟ ಹಾಗೂ ಸಾಲದ ಹೊರೆಯಿಂದ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಶಹಾಪುರ ತಾಲೂಕಿನ ತಿಪ್ಪನಹಳ್ಳಿ ಗ್ರಾಮದ ಸುಂದರಾಜ, ಚಟ್ನಳ್ಳಿ ಗ್ರಾಮದ ಮಲ್ಲಿಕಾರ್ಜುನ ಹಾಗೂ ಬೇವಿನಹಳ್ಳಿ ಗ್ರಾಮದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಉಲ್ಲೇಖಿಸಿ, ಮೃತ ರೈತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡಬೇಕು ಹಾಗೂ ರಾಜ್ಯದಲ್ಲಿ ಋಣಮುಕ್ತಿ ಕಾಯ್ದೆ ಜಾರಿಗೊಳಿಸಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.
‘ಮಳೆ ಕೊರತೆಯಿಂದ ಕೃಷಿ ಕೂಲಿಕಾರರಿಗೆ ಉದ್ಯೋಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ನರೇಗಾ ಯೋಜನೆಯಡಿ ನಿರಂತರ ಕೆಲಸ ಒದಗಿಸಿ, ಪ್ರತಿ 15 ದಿನಗಳಿಗೊಮ್ಮೆ ಕೂಲಿ ಪಾವತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ಆಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಿದ್ದರೂ ಜಿಲ್ಲೆಯ ಕೆರೆ-ಕೊಳಗಳು ಬತ್ತಿದ್ದು, ಸುರಪುರ ಹಾಗೂ ಶಹಾಪುರ ತಾಲೂಕಿನ ವಿವಿಧ ಕೆರೆಗಳಿಗೆ ನೀರು ತುಂಬಿಸಿ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.
‘ಶಹಾಪುರ ತಾಲೂಕಿನ ಶೆಟ್ಟಿಕೇರಿ ಗ್ರಾಮದಲ್ಲಿ ಆಶ್ರಯ ಯೋಜನೆಯ ಜಮೀನಿನಲ್ಲಿ ಕಳೆದ 20 ವರ್ಷಗಳಿಂದ ವಾಸಿಸುತ್ತಿರುವ 13 ದಲಿತ ಕುಟುಂಬಗಳಿಗೆ ಭೂಹಕ್ಕು ಪತ್ರ ನೀಡಿ, ಮೂಲಸೌಲಭ್ಯಗಳೊಂದಿಗೆ ಶಾಶ್ವತ ಮನೆಗಳನ್ನು ನಿರ್ಮಿಸಿಕೊಡಬೇಕು’ ಎಂದು ಆಗ್ರಹಿಸಿದರು.
‘ಬೆಂಗಳೂರು ಸಮೀಪದ ಬಿಡದಿಯಲ್ಲಿ ರೈತರ ಫಲವತ್ತಾದ ಭೂಮಿ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರ ಮೇಲೆ ಲಾಠಿಚಾರ್ಜ್ ನಡೆಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು’ ಎಂದರು.
‘ಯಾದಗಿರಿ ಜಿಲ್ಲೆಯ ಜಲ್ ಜೀವನ್ ಮಿಷನ್ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ, ಅಕ್ರಮ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಹೊಸಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ನಿರ್ಮಿಸದೇ ಹಣ ದುರುಪಯೋಗ ಮಾಡಿದ ಆರೋಪದ ಕುರಿತು ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.
‘ಖಾಸಗಿ ಕಂಪನಿಗಳ ಮೂಲಕ ಜಾರಿಯಲ್ಲಿರುವ ಬೆಳೆ ವಿಮೆ ಯೋಜನೆಯನ್ನು ಕೈಬಿಟ್ಟು, ಸರ್ಕಾರವೇ ಗ್ರಾಮ ಮಟ್ಟದಲ್ಲಿ ಬೆಳೆ ಸಮೀಕ್ಷೆ ನಡೆಸಿ ಪಾರದರ್ಶಕವಾಗಿ ರೈತರಿಗೆ ವಿಮೆ ಪರಿಹಾರ ವಿತರಿಸಬೇಕು’ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
‘ಶಹಾಪುರ ಪಟ್ಟಣದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಂಚಾರ ದಟ್ಟಣೆ ಹಾಗೂ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತ್ಯೇಕ ನಗರ ಸಂಚಾರ ಪೊಲೀಸ್ ಠಾಣೆಯನ್ನು ತಕ್ಷಣ ಆರಂಭಿಸಬೇಕು ಎಂದು ಆಗ್ರಹಿಸಲಾಗಿದೆ. ಇದರಿಂದ ಸಂಚಾರ ವ್ಯವಸ್ಥೆ ಸುಧಾರಿಸುವುದರ ಜೊತೆಗೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ₹72.50 ಲಕ್ಷ ವೆಚ್ಚದ 5 ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ಸಚಿವ ಡಾ. ಶರಣಪ್ರಕಾಶ ಪಾಟೀಲ್
ಪ್ರತಿಭಟನೆಯಲ್ಲಿ ಕೆಪಿಆರ್ಎಸ್ ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಎಸ್.ಎಂ. ಸಾಗರ, ತಾಲೂಕ ಅಧ್ಯಕ್ಷ ತಮ್ಮಣ್ಣ ಜಾಹಗೀರದಾರ, ತಾಲೂಕ ಕಾರ್ಯದರ್ಶಿ ಭೀಮಣ್ಣ ಟಫೆದಾರ, ಸುರಪುರ ತಾಲೂಕ ಮುಖಂಡ ವೆಂಕೋಬ ದೊರೆ, ಮಲ್ಲಣ್ಣ ದೊರೆ ಚನ್ನೂರ, ಮಲ್ಲಣ್ಣಗೌಡ ಮಾ. ಪಾಟೀಲ್, ಮಹಾದೇವಪ್ಪ ಸೇರಿದಂತೆ ಸುರಪುರ, ಶಹಾಪುರ ಹಾಗೂ ವಡಗೇರಾ ತಾಲೂಕಿನ ಸಂಘದ ಪದಾಧಿಕಾರಿಗಳು ಹಾಗೂ ರೈತರು ಭಾಗವಹಿಸಿದರು.




