ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆ ಅಡಿ ವೈಯಕ್ತಿಕ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್ ಒದಗಿಸುತ್ತಿದೆ. ಈ ಯೋಜನೆ ಪ್ರಾರಂಭವಾಗಿ ಸುಮಾರು ಆರು ತಿಂಗಳು ಕಳೆದರೂ, ಬಾಡಿಗೆದಾರರು ಮನೆಗಳನ್ನು ಸ್ಥಳಾಂತರಿಸುವಾಗ ಸಂಪರ್ಕ ವಿವರಗಳನ್ನು ನವೀಕರಿಸಲು ಕಷ್ಟಪಡುತ್ತಿದ್ದಾರೆ.
“ಆಧಾರ್ ಕಾನೂನುಬದ್ಧ ದಾಖಲೆಯಾಗಿರುವುದರಿಂದ, ಬಾಡಿಗೆದಾರರು ಪದೇ ಪದೆ ಅರ್ಜಿಯ ವಿವರಗಳನ್ನು ನವೀಕರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಗೃಹಜ್ಯೋತಿ ಯೋಜನೆ ಪ್ರಯೋಜನ ಕಳೆದುಕೊಳ್ಳಲು ಕಾರಣವಾಗಬಹುದು” ಎಂದು ಮೈಸೂರಿನ ಸೆಸ್ಕಾಂ ಅಧಿಕಾರಿಗಳು ಎಚ್ಚರಿಸಿದ್ದಾರೆ.
“ತಮ್ಮ ಖಾತೆ ಮತ್ತು ಸಂಪರ್ಕ ವಿವರಗಳನ್ನು ಆನ್‌ಲೈನ್‌ನಲ್ಲಿ ಮಾರ್ಪಡಿಸಲು ಸಾಧ್ಯವಾಗುತ್ತಿಲ್ಲ. ನಾನು ನವೆಂಬರ್ 2023ರಲ್ಲಿ ಮತ್ತೊಂದು ಮನೆಗೆ ಸ್ಥಳಾಂತರಗೊಂಡೆ. ಹೊಸದಾಗಿ ಬಾಡಿಗೆಗೆ ಪಡೆದ ಮನೆಯಲ್ಲಿ, ನನ್ನ ಸಂಖ್ಯೆಯನ್ನು ಹಿಂದಿನ ಮನೆಯ ಖಾತೆ ಸಂಖ್ಯೆಗೆ ಲಿಂಕ್ ಮಾಡಿದ್ದರಿಂದ ಪ್ರಯೋಜನ ಪಡೆಯಲು ನಾನು ನನ್ನ ಹೆಂಡತಿಯ ಆಧಾರ್ ಸಂಖ್ಯೆಯನ್ನು ಬಳಸಿದೆ. ಹಿಂದಿನ ಮನೆಯಲ್ಲಿ, ಹೊಸ ಬಾಡಿಗೆದಾರನು ನನ್ನ ಆಧಾರ್ ದಾಖಲೆಯ ಆಧಾರದ ಮೇಲೆ ಉಚಿತ ವಿದ್ಯುತ್ ಪಡೆಯುತ್ತಿದ್ದಾನೆ” ಎಂದು ಇತ್ತೀಚೆಗೆ ತಮ್ಮ ಮನೆಯನ್ನು ಸ್ಥಳಾಂತರಿಸಿದ ಬಾಡಿಗೆದಾರ ಹೇಳಿದ್ದಾರೆ.
“ಈ ಯೋಜನೆಯನ್ನು ಪ್ರಾರಂಭಿಸಿದ ನಂತರ ನೂರಾರು ಕುಟುಂಬಗಳು ತಮ್ಮ ಮನೆಗಳನ್ನು ಬದಲಾಯಿಸಿವೆ. ಆದರೆ ಕೆಲವರು ಮಾತ್ರ ವಿವರಗಳನ್ನು ನವೀಕರಿಸಲು ಕಚೇರಿಗಳನ್ನು ಸಂಪರ್ಕಿಸುತ್ತಿದ್ದಾರೆ. ನಮ್ಮ ಹೆಚ್ಚಿನ ಸಿಬ್ಬಂದಿಗೆ ಕಾರ್ಯವಿಧಾನದ ಬಗ್ಗೆ ತಿಳಿದಿಲ್ಲ” ಎಂದು ಅಧಿಕಾರಿಯೊಬ್ಬರು ವಿವರಿಸಿದರು.
“ಹೊಸ ಬಾಡಿಗೆದಾರರಿಗೆ ಉಂಟಾಗುತ್ತಿರುವ ಗೃಹಜ್ಯೋತಿ ಯೊಜನೆಯ ದೋಷವನ್ನು ಕೂಡಲೇ ಸರಿಪಡಿಸಬೇಕು. ತಾಂತ್ರಿಕ ದೋಷದಿಂದಾಗಿ ಯಾವುದೇ ಗ್ರಾಹಕರಿಗೆ ಗೃಹ ಜ್ಯೋತಿಯ ಪ್ರಯೋಜನಗಳನ್ನು ನಿರಾಕರಿಸಿದರೆ, ಸಮಸ್ಯೆ ಬಗೆಹರಿಯುವವರೆಗೆ ಸರ್ಕಾರವು ವಿದ್ಯುತ್ ಬಿಲ್ ಮೊತ್ತವನ್ನು ಮರುಪಾವತಿಸಬೇಕು. ಜತೆಗೆ ಆಡಳಿತವು ಆದಷ್ಟು ಬೇಗ ಪರಿಹಾರ ಕಂಡುಹಿಡಿಯಬೇಕು” ಎಂದು ಇಂಧನ ತಜ್ಞ ಅನಿಲ್ ಕುಮಾರ್ ನಾಡಿಗೇರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ನಾಡಗೌಡರ ಕುಟುಂಬದ ಹೆಚ್ಚುವರಿ ಭೂಮಿ ಪಡೆಯುವ ಪ್ರಕರಣ; 100 ದಿನ ಪೂರೈಸಿದ ಧರಣಿ
“ಸಾರ್ವಜನಿಕರು ಹತ್ತಿರದ ಸೆಸ್ಕ್ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಹೊಸ ಸಂಪರ್ಕ ವಿವರಗಳನ್ನು ನವೀಕರಿಸಬಹುದು. ಈ ಉದ್ದೇಶಕ್ಕಾಗಿ ಆನ್‌ಲೈನ್ ಆಯ್ಕೆಯನ್ನೂ ಕೂಡ ಒದಗಿಸಲಾಗಿದೆ” ಎಂದು ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಸಿ ಎನ್ ಶ್ರೀಧರ್ ಹೇಳಿದರು.