ಉತ್ತರ ಪ್ರದೇಶ | ಜೈಲಿನಿಂದ ಹೊರಬಂದ ಆಜಂ ಖಾನ್:ಚುನಾವಣಾ ಕಣದಲ್ಲಿ ಸಂಚಲನ ಮೂಡಿಸುವುದೇ ಈ ಬಿಡುಗಡೆ?

Date:

ಹನ್ನೊಂದು ತಿಂಗಳ ಸುದೀರ್ಘ ಜೈಲುವಾಸದ ನಂತರ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿರುವ ಸಮಾಜವಾದಿ ಪಕ್ಷದ (SP) ಹಿರಿಯ ನಾಯಕ ಆಜಂ ಖಾನ್ ಅವರ ಆಕ್ರಮಣಕಾರಿ ಮಾತುಗಳು ಉತ್ತರ ಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆಯ ಕಾವು ಏರಿಸಿವೆ. ನವೆಂಬರ್ 18ರಂದು ಘಾಜಿಯಾಬಾದ್‌ನ ದಾಸ್ನಾ ಜೈಲಿನಿಂದ ಬಿಡುಗಡೆಯಾಗಿ ತವರು ಕ್ಷೇತ್ರ ರಾಮಪುರಕ್ಕೆ ಮರಳಿದ 78ರ ಹರೆಯದ ಖಾನ್, ತಮ್ಮ ಬಿಡುಗಡೆಯನ್ನು ಕೇವಲ ವೈಯಕ್ತಿಕ ಕಾನೂನು ಜಯವನ್ನಾಗಿ ನೋಡದೆ, ಮುಂಬರುವ ಚುನಾವಣಾ ರಣರಂಗದ ದಿಕ್ಸೂಚಿಯಂತೆ ಬಿಂಬಿಸಿದ್ದಾರೆ.

- Advertisement -

ಕಳೆದ ವರ್ಷದ ನವೆಂಬರ್‌ನಿಂದ ರಾಮಪುರ ಜೈಲಿನಲ್ಲಿದ್ದ ಆಜಂ ಖಾನ್ ಅವರ ವಿರುದ್ಧ ನಕಲಿ ದಾಖಲೆ ಸೃಷ್ಟಿ, ದ್ವೇಷ ಭಾಷಣ ಹಾಗೂ ಭೂಕಬಳಿಕೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಮುಖ್ಯವಾಗಿ, ತಮ್ಮ ಪುತ್ರನ ಎರಡು ಪ್ಯಾನ್ ಕಾರ್ಡ್‌ಗಳು ಮತ್ತು ಜನನ ಪ್ರಮಾಣಪತ್ರದ ನಕಲಿ ದಾಖಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಅವರು ಜೈಲು ಸೇರಿದ್ದರು. ಈ ಎಲ್ಲಾ ಪ್ರಕರಣಗಳು ಆಡಳಿತಾರೂಢ ಬಿಜೆಪಿ ಸರ್ಕಾರದ ರಾಜಕೀಯ ಪ್ರತೀಕಾರದ ಭಾಗವಾಗಿದ್ದು, ತಮ್ಮ ಕುಟುಂಬವನ್ನು ಗುರಿಯಾಗಿಸಿ ಸುಳ್ಳು ಕೇಸುಗಳನ್ನು ದಾಖಲಿಸಲಾಗಿದೆ ಎಂದು ಆಜಂ ಖಾನ್ ಹಾಗೂ ಸಮಾಜವಾದಿ ಪಕ್ಷ ನಿರಂತರವಾಗಿ ಆರೋಪಿಸುತ್ತಾ ಬಂದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಧರ್ಮಗಳ ಜನಸಂಖ್ಯೆಯ ಲೆಕ್ಕಾಚಾರಕ್ಕಿಂತ ಸಂಪನ್ಮೂಲಗಳ ನ್ಯಾಯಯುತ ಹಂಚಿಕೆಯ ಚರ್ಚೆ...

ಭಾರತದ ಆರ್ಥಿಕತೆ ಬೆಳೆಯುತ್ತಿದೆ ಎಂಬುದು ಒಂದು ವಾಸ್ತವ. ದೇಶದ ಒಟ್ಟು ಆಂತರಿಕ ಉತ್ಪನ್ನ ಹೆಚ್ಚಳ, ಕೈಗಾರಿಕಾ ಬೆಳವಣಿಗೆ, ತಂತ್ರಜ್ಞಾನ ಅಭಿವೃದ್ಧಿ, ಮೂಲಸೌಕರ್ಯ ವಿಸ್ತರಣೆ ಮತ್ತು ಸೇವಾ ವಲಯದ ಪ್ರಗತಿ ಆರ್ಥಿಕ ಬೆಳವಣಿಗೆಯ ಸೂಚಕಗಳಾಗಿವೆ....

ನ್ಯಾಯಕ್ಕಾಗಿ ಬಿಲ್ಕಿಸ್ ಬಾನೋ 22 ವರ್ಷಗಳ ಅಲೆದಾಟ: ಇಂದಿಗೂ...

2002ರ ಗುಜರಾತ್ ಗಲಭೆಯ ಕರಾಳ ನೆನಪುಗಳನ್ನು ಹೊತ್ತು, ತಮ್ಮವರನ್ನೆಲ್ಲಾ ಕಳೆದುಕೊಂಡು, ಅತ್ಯಾಚಾರದ ಘೋರ ಕ್ರೌರ್ಯಕ್ಕೆ ತುತ್ತಾದ ಬಿಲ್ಕಿಸ್ ಬಾನೋ ಬದುಕು ಇಂದಿಗೂ ನೆಮ್ಮದಿ ಕಂಡಿಲ್ಲ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಇಬ್ಬರು ಅಪರಾಧಿಗಳ ಜೀವಾವಧಿ...

ಡಿಪಿಡಿಪಿ ಕಾಯ್ದೆ: ನಾಗರಿಕರ ಖಾಸಗಿತನದ ರಕ್ಷಣೆಯೋ, ಪತ್ರಿಕಾ ಸ್ವಾತಂತ್ರ್ಯದ...

ಡಿಪಿಡಿಪಿ ಕಾಯ್ದೆ ನಾಗರಿಕರ ಗೌಪ್ಯತೆಯನ್ನು ಕಾಪಾಡುವ ಭರವಸೆ ನೀಡುತ್ತಿದೆ. ಆದರೆ, ಇದೇ ಕಾಯ್ದೆಯು ಪತ್ರಕರ್ತರ ಮೂಲಭೂತ ಹಕ್ಕು ಮತ್ತು ತನಿಖಾ ಪತ್ರಿಕೋದ್ಯಮದ ಮೇಲೆ ಕರಿನೆರಳು ಬೀರಲಿದೆಯೇ? ಆರ್‌ಟಿಐ ದುರ್ಬಲಗೊಳ್ಳುತ್ತಿದೆಯೇ? ಒಂದೆಡೆ ವ್ಯಕ್ತಿಯ ಖಾಸಗಿತನದ...

ಇತ್ತೀಚೆಗೆ ಎರಡು ಪ್ಯಾನ್ ಕಾರ್ಡ್ ಪ್ರಕರಣದಲ್ಲಿ ಜಾಮೀನು ಪಡೆದ ಬೆನ್ನಲ್ಲೇ, ರಾಮಪುರದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ನಿರ್ಮಾಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಅಕ್ಟೋಬರ್ 31ರಂದು ಅವರನ್ನು ವಶಕ್ಕೆ ಪಡೆದು ಘಾಜಿಯಾಬಾದ್‌ನ ದಾಸ್ನಾ ಜೈಲಿಗೆ ಸ್ಥಳಾಂತರಿಸಿತ್ತು. ಅಷ್ಟೇ ಅಲ್ಲದೆ, ಅಕ್ಟೋಬರ್ 28ರಂದು ಇ.ಡಿ. ಸಂಸ್ಥೆಯು ಜೌಹರ್ ವಿಶ್ವವಿದ್ಯಾಲಯದ ಸುಮಾರು ₹426 ಕೋಟಿ ಮೌಲ್ಯದ ಭೂಮಿ ಮತ್ತು ಕಟ್ಟಡಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಇದೀಗ ಈ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಅಜಂ ಖಾನ್‌ ದಾಸ್ನಾ ಜೈಲಿನಿಂದ ಹೊರಬಂದಿದ್ದಾರೆ. ವಿಶೇಷವೆಂದರೆ, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಇ.ಡಿ. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೂ, ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. “ಆಕಾಶವೇನೂ ಕಳಚಿ ಬೀಳುವುದಿಲ್ಲ, ಅವರು ಜಾಮೀನಿನ ಮೇಲೆ ಹೊರಗಿರಲಿ” ಎಂದು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರು ಹೇಳಿರುವುದು ಖಾನ್ ಪಾಳಯಕ್ಕೆ ದೊಡ್ಡ ನೈತಿಕ ಬಲ ತಂದಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 10 ರಂದು ಹೈಕೋರ್ಟ್‌ನಲ್ಲಿ ನಡೆಯಲಿದೆ.

WhatsApp Image 2026 11 20 at 9.49.41 AM

ಜೈಲಿನಿಂದ ಹೊರಬಂದ ಬೆನ್ನಲ್ಲೇ ರಾಮಪುರದಲ್ಲಿ ನೆರೆದಿದ್ದ ಅಪಾರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಆಜಂ ಖಾನ್, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಕುರಿತು ಮಹತ್ವದ ರಾಜಕೀಯ ಸಂದೇಶ ರವಾನಿಸಿದ್ದಾರೆ. “ಈ ಬಾರಿ ಕೇವಲ ಚುನಾವಣೆ ನಡೆಯುವುದಿಲ್ಲ, ಬದಲಿಗೆ ಕ್ರಾಂತಿ ನಡೆಯಲಿದೆ. ಬದಲಾವಣೆಯಲ್ಲ, ಜನಬೆಂಬಲದ ಮಹಾಪೂರವೇ ಹರಿಯಲಿದೆ” ಎಂಬ ಅವರ ಘೋಷಣೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಜೈಲಿನ ಹೊರಗೆ ಮತ್ತು ರಾಮಪುರದ ನಿವಾಸದ ಬಳಿ ಕಂಡುಬಂದ ಜನಸಂದಣಿಯನ್ನು ಉಲ್ಲೇಖಿಸಿರುವ ಖಾನ್, ಇದು ಆಡಳಿತಾರೂಢ ಬಿಜೆಪಿ ವಿರುದ್ಧ ಮಡುಗಟ್ಟಿರುವ ಜನಾಕ್ರೋಶದ ಸಂಕೇತ ಎಂದು ವಿಶ್ಲೇಷಿಸಿದ್ದಾರೆ. ಕಳೆದ ಲೋಕಸಭಾ ಮತ್ತು ವಿಧಾನ ಪರಿಷತ್ ಚುನಾವಣೆಗಳ ಫಲಿತಾಂಶಗಳನ್ನು ಪ್ರಸ್ತಾಪಿಸುತ್ತಾ, ಬಿಜೆಪಿಯ ನೆಲೆ ಕುಸಿಯುತ್ತಿದೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ.

ಉತ್ತರ ಪ್ರದೇಶದ ಚುನಾವಣೆಗಳಲ್ಲಿ ಸಾಮಾನ್ಯವಾಗಿ ಜಾತಿ ಮತ್ತು ಧರ್ಮದ ಸಮೀಕರಣಗಳೇ ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೆ ಈ ಬಾರಿ ಜನರು ಜಾತಿ-ಧರ್ಮದ ಹೆಸರಿನಲ್ಲಿ ಹೋರಾಡದೆ, ನೈಜ ಸಮಸ್ಯೆಗಳ ಆಧಾರದ ಮೇಲೆ ಮತ ಚಲಾಯಿಸಲಿದ್ದಾರೆ ಎಂದು ಆಜಂ ಖಾನ್ ಪ್ರತಿಪಾದಿಸಿದ್ದಾರೆ. “ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ, ಆದರೆ ಸಂವಿಧಾನ ಬಂಧಿಯಾಗಿದೆ, ಸಂವಿಧಾನವನ್ನು ಮುಕ್ತಗೊಳಿಸಲು ನಾವೆಲ್ಲರೂ ಒಗ್ಗೂಡಬೇಕು” ಎಂಬ ಅವರ ಮಾತು, ವಿರೋಧ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಬಳಸುತ್ತಿರುವ ‘ಸಂವಿಧಾನ ಉಳಿಸಿ’ ಅಭಿಯಾನಕ್ಕೆ ಉತ್ತರ ಪ್ರದೇಶದಲ್ಲಿ ಸ್ಥಳೀಯ ಬಲ ತುಂಬುವ ಪ್ರಯತ್ನವಾಗಿದೆ. ಅಲ್ಲದೆ, ಎಸ್‌ಪಿ ಅಧಿಕಾರಕ್ಕೆ ಬಂದರೆ ನ್ಯಾಯ ಸಿಗುತ್ತದೆ ಎಂಬ ಅಖಿಲೇಶ್ ಯಾದವ್ ಭರವಸೆಗೆ ಪ್ರತಿಕ್ರಿಯಿಸಿರುವ ಖಾನ್, “ನ್ಯಾಯ ಸಿಗಬೇಕು, ಆದರೆ ಯಾರ ವಿರುದ್ಧವೂ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ವಿರುದ್ಧ ದಾಖಲಾಗಿರುವ ಸುಮಾರು 90ಕ್ಕೂ ಹೆಚ್ಚು ಪ್ರಕರಣಗಳು ಮತ್ತು ‘ಮಾಫಿಯಾ’ ಎಂಬ ಆರೋಪಗಳನ್ನು ಅವರು ಸಾರ್ವಜನಿಕವಾಗಿ ಪ್ರಶ್ನಿಸಿದ್ದಾರೆ. ಮಕ್ಕಳಿಗಾಗಿ ಶಾಲೆಗಳನ್ನು ಕಟ್ಟಿಸಿ, ವಿಶ್ವವಿದ್ಯಾಲಯ ಸ್ಥಾಪಿಸಿದವರನ್ನು ಮಾಫಿಯಾ ಎನ್ನಲಾಗುತ್ತದೆಯೇ ಎಂದು ಕೇಳಿರುವ ಅವರು, “ಮದನ್ ಮೋಹನ್ ಮಾಳವೀಯ ಮತ್ತು ಸರ್ ಸೈಯದ್ ಅಹ್ಮದ್ ಖಾನ್ ಅವರ ಕಾಲದಲ್ಲಿ ಇ.ಡಿ., ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳಿದ್ದಿದ್ದರೆ, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದಕ್ಕಾಗಿ ಅವರನ್ನೂ ಜೈಲಿಗೆ ಹಾಕಲಾಗುತ್ತಿತ್ತು” ಎಂದು ಮೊನಚಾಗಿ ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ, ಆಜಂ ಖಾನ್ ಅವರು ಕೇವಲ ಬಿಜೆಪಿ ಮಾತ್ರವಲ್ಲದೆ, ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ವಿರುದ್ಧವೂ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. “ನನಗೆ ಹೈದರಾಬಾದಿ ಬಿರಿಯಾನಿ ಇಷ್ಟವಿಲ್ಲ” ಮತ್ತು “ಗಡ್ಡ ಬಿಟ್ಟ ಮಾತ್ರಕ್ಕೆ ಯಾರೂ ಮೌಲಾನಾ ಆಗುವುದಿಲ್ಲ, ಅವರು ಬ್ಯಾರಿಸ್ಟರ್” ಎಂಬ ಖಾನ್ ಅವರ ಹೇಳಿಕೆಗಳು, ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತಗಳ ವಿಭಜನೆಯನ್ನು ತಡೆಯಲು ಸಮಾಜವಾದಿ ಪಕ್ಷವು ಓವೈಸಿ ವಿರುದ್ಧ ಆಜಂ ಖಾನ್ ಅವರನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದನ್ನು ಸೂಚಿಸುತ್ತದೆ.

ಆಜಂ ಖಾನ್ ಬಿಡುಗಡೆಯು ಸಮಾಜವಾದಿ ಪಕ್ಷದ (SP) ಚುನಾವಣಾ ಸಿದ್ಧತೆಗಳಿಗೆ ಪ್ರಮುಖ ತಿರುವು ನೀಡುವ ಸಾಧ್ಯತೆಯಿದೆ. ರಾಮಪುರ, ಮೊರಾದಾಬಾದ್, ಸಂಭಾಲ್ ಸೇರಿದಂತೆ ಪಶ್ಚಿಮ ಉತ್ತರ ಪ್ರದೇಶದ ರೋಹಿಲ್‌ಖಂಡ್ ಪ್ರದೇಶದಲ್ಲಿ ಆಜಂ ಖಾನ್ ಅವರಿಗೆ ದಶಕಗಳ ಕಾಲದ ಪ್ರಭಾವವಿದೆ. ಅವರ ಅನುಪಸ್ಥಿತಿಯಲ್ಲಿ ಪಕ್ಷಕ್ಕೆ ಎದುರಾಗಿದ್ದ ನಾಯಕತ್ವದ ಶೂನ್ಯವನ್ನು ಈ ಬಿಡುಗಡೆ ತುಂಬಲಿದೆ. ಸಮಾಜವಾದಿ ಪಕ್ಷದ ಪ್ರಮುಖ ಮತಬ್ಯಾಂಕ್ ಆಗಿರುವ ಅಲ್ಪಸಂಖ್ಯಾತ ಸಮುದಾಯದಲ್ಲಿ, ತಮ್ಮ ಹಿರಿಯ ನಾಯಕನ ಪರವಾಗಿ ಪಕ್ಷ ಗಟ್ಟಿಯಾಗಿ ನಿಂತಿದೆ ಎಂಬ ಸಂದೇಶ ರವಾನೆಯಾಗಲಿದೆ. ಅಖಿಲೇಶ್ ಯಾದವ್ ಅವರು ಖಾನ್ ಬಿಡುಗಡೆಯನ್ನು ಸ್ವಾಗತಿಸಿ, ದಬ್ಬಾಳಿಕೆ ಮಿತಿ ಮೀರಿದಾಗ ಅಧಿಕಾರದಲ್ಲಿರುವವರ ಅಂತ್ಯ ಸಮೀಪಿಸುತ್ತದೆ ಎಂದು ನೀಡಿರುವ ಹೇಳಿಕೆ ಇದಕ್ಕೆ ಪೂರಕವಾಗಿದೆ.

photo 6053323746346472162 x 1

ಕಾನೂನು ತೊಡಕುಗಳಿಂದಾಗಿ ಆಜಂ ಖಾನ್ ಮತ್ತು ಅವರ ಪುತ್ರ ಅಬ್ದುಲ್ಲಾ ಆಜಂ ಖಾನ್ 2027ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದಿದ್ದರೆ, ರಾಮಪುರ ಮತ್ತು ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ತನ್ನ ಹಿಡಿತವನ್ನು ಉಳಿಸಿಕೊಳ್ಳಲು ಸಮಾಜವಾದಿ ಪಕ್ಷವು ಬಹುಮುಖಿ ಪರ್ಯಾಯ ಕಾರ್ಯತಂತ್ರವನ್ನು ಅನುಸರಿಸಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಮೊದಲನೆಯದಾಗಿ, ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಆಜಂ ಖಾನ್ ಅವರನ್ನು ಚುನಾವಣಾ ಅಭ್ಯರ್ಥಿಯ ಬದಲಿಗೆ ‘ಸ್ಟಾರ್ ಪ್ರಚಾರಕರನ್ನಾಗಿ’ ಬಳಸಿಕೊಂಡು, ಅವರ ಅಭಿಮಾನದ ಅಲೆಯನ್ನು ಪಶ್ಚಿಮ ಉತ್ತರದಾದ್ಯಂತ ಮತಗಳಾಗಿ ಪರಿವರ್ತಿಸಲು ಪ್ರಯತ್ನಿಸಬಹುದು. ಎರಡನೆಯದಾಗಿ, ರಾಮಪುರ ಮತ್ತು ಸ್ವಾರ್ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯ ಸಂಪೂರ್ಣ ನಿರ್ಧಾರವನ್ನು ಆಜಂ ಖಾನ್ ಅವರ ಕುಟುಂಬಕ್ಕೇ ಬಿಟ್ಟುಕೊಡುವ ಮೂಲಕ, ಅವರ ನಿಷ್ಠಾವಂತ ಬೆಂಬಲಿಗರು ಅಥವಾ ಕುಟುಂಬದ ಇತರ ಸದಸ್ಯರನ್ನು ಕಣಕ್ಕಿಳಿಸಿ ಸ್ಥಳೀಯ ಮತಬ್ಯಾಂಕ್ ವಿಭಜನೆಯಾಗದಂತೆ ತಡೆಯುವ ತಂತ್ರವನ್ನು ಎಸ್‌ಪಿ ಹೆಣೆಯಬಹುದು. ಇನ್ನೊಂದೆಡೆ, ಖಾನ್ ಅವರ ಪತ್ನಿ ತಜೀನ್ ಫಾತಿಮಾ ಅವರು ನ್ಯಾಯಾಂಗದ ಮೇಲೆ ಭರವಸೆ ವ್ಯಕ್ತಪಡಿಸಿದ್ದರೆ, ಪುತ್ರ ಅದೀಬ್ ಆಜಂ ಖಾನ್ ಅವರು ತಮ್ಮ ತಂದೆ ಮುಂಬರುವ ಚುನಾವಣಾ ಕಣಕ್ಕೆ ಖಂಡಿತವಾಗಿಯೂ ಇಳಿಯಲಿದ್ದಾರೆ ಎಂದು ಸುಳಿವು ನೀಡಿದ್ದಾರೆ.

ಇದರ ಜೊತೆಗೆ, ರಾಮಪುರದ ಉಪಚುನಾವಣೆಗಳಲ್ಲಿ ಎದುರಾದ ಹಿನ್ನಡೆಗಳಿಂದ ಪಾಠ ಕಲಿತಿರುವ ಸಮಾಜವಾದಿ ಪಕ್ಷವು, ಕೇವಲ ಅಲ್ಪಸಂಖ್ಯಾತ ಮತಗಳನ್ನೇ ನೆಚ್ಚಿಕೊಳ್ಳದೆ, ತನ್ನ ‘PDA’ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ಸೂತ್ರದಡಿ ಸ್ಥಳೀಯ ಒಬಿಸಿ ಮತ್ತು ದಲಿತ ನಾಯಕರನ್ನು ಒಗ್ಗೂಡಿಸಿ ಬಲಿಷ್ಠ ಸಂಘಟನಾ ಜಾಲವನ್ನು ಕಟ್ಟುವ ಮೂಲಕ ಆಜಂ ಖಾನ್ ಅವರ ಅನುಪಸ್ಥಿತಿಯನ್ನು ತುಂಬಲು ಮುಂದಾಗಬಹುದು.

ಆದರೆ, ಆಜಂ ಖಾನ್ ಅವರ ಬಿಡುಗಡೆಯನ್ನು ಆಡಳಿತಾರೂಢ ಬಿಜೆಪಿ ಸಂಪೂರ್ಣವಾಗಿ ತಳ್ಳಿಹಾಕಿದೆ. ಖಾನ್ ವಿರುದ್ಧದ ಹಲವು ಪ್ರಕರಣಗಳ ಪ್ರಮುಖ ದೂರುದಾರರು ಹಾಗೂ ರಾಮಪುರ ಸದರ್ ಕ್ಷೇತ್ರದ ಬಿಜೆಪಿ ಶಾಸಕ ಆಕಾಶ್ ಸಕ್ಸೇನಾ ಅವರು, “ಅತೀಕ್ ಅಹ್ಮದ್ ಮತ್ತು ಮುಖ್ತಾರ್ ಅನ್ಸಾರಿ ಜೈಲಿನಲ್ಲಿದ್ದಾಗ ಅಥವಾ ಹೊರಗಿದ್ದಾಗ ಯಾವುದೇ ಪ್ರಭಾವ ಬೀರದಂತೆಯೇ, ಆಜಂ ಖಾನ್ ಹೊರಬಂದಿರುವುದರಿಂದಲೂ ಯುಪಿ ರಾಜಕಾರಣದಲ್ಲಿ ಶೂನ್ಯ ಪರಿಣಾಮ ಬೀರಲಿದೆ” ಎಂದು ಟೀಕಿಸಿದ್ದಾರೆ. ಹಾಗೆಯೇ, ರಾಮಪುರದ ಎಲ್ಲಾ 5 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲು ಬೂತ್ ಮಟ್ಟದಲ್ಲಿ ಪಕ್ಷ ಸಜ್ಜಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹರೀಶ್ ಗಂಗ್ವಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

WhatsApp Image 2026 11 20 at 9.49.42 AM

ಒಟ್ಟಾರೆಯಾಗಿ, ಆಜಂ ಖಾನ್ ಅವರ ಬಿಡುಗಡೆ ವಿರೋಧ ಪಕ್ಷಗಳ ಪಾಳಯದಲ್ಲಿ ಉತ್ಸಾಹ ತುಂಬಿದ್ದರೂ, ಡಿಸೆಂಬರ್ 10ರ ಹೈಕೋರ್ಟ್ ವಿಚಾರಣೆ ಹಾಗೂ ಬಾಕಿ ಇರುವ ಹತ್ತಾರು ಪ್ರಕರಣಗಳ ತೂಗುಕತ್ತಿ ಅವರ ಮೇಲಿದೆ. ಆದರೂ, ಜೈಲಿನಿಂದ ಹೊರಬಂದ ಆಜಂ ಖಾನ್ ರಾಮಪುರದ ಸ್ಥಳೀಯ ರಾಜಕಾರಣವನ್ನು ಮೀರಿ, ಇಡೀ ಉತ್ತರ ಪ್ರದೇಶದ ಚುನಾವಣಾ ಚರ್ಚೆಗಳನ್ನು ‘ಸಂವಿಧಾನ, ತನಿಖಾ ಸಂಸ್ಥೆಗಳ ವಿಶ್ವಾಸಾರ್ಹತೆ ಮತ್ತು ರಾಜಕೀಯ ಪ್ರತೀಕಾರ’ದ ಸುತ್ತ ಕೇಂದ್ರೀಕರಿಸುವಂತೆ ಮಾಡಿದ್ದಾರೆ. ಇದು ಮುಂಬರುವ ಚುನಾವಣೆಯಲ್ಲಿ ಮತದಾರರ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕಬ್ಬಿಗೆ ₹4,000 ಬೆಲೆ ನಿಗದಿಗೆ ಆಗ್ರಹ: ಸಿಡಿದ ಆಕ್ರೋಶ, ವಿವಿಧೆಡೆ ರೈತರಿಂದ ʼರಸ್ತಾ ರೋಕೊʼ

ಕಬ್ಬಿಗೆ ಪ್ರತಿ ಟನ್‌ಗೆ ಕನಿಷ್ಠ ₹4,000 ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ...

ಬಾಗಲಕೋಟೆ |ರಾಜ್ಯಮಟ್ಟದ ಮಿನಿ ಒಲಿಂಪಿಕ್ಸ್‌ನಲ್ಲಿ 14 ಪದಕ ಗೆದ್ದ ಕ್ರೀಡಾಪಟುಗಳು

ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಬಾಗಲಕೋಟೆ ಜಿಲ್ಲೆಯ ಕ್ರೀಡಾಪಟುಗಳು 14 ಪದಕಗಳನ್ನು ಗೆಲ್ಲುವ ಮೂಲಕ...

10 ವರ್ಷಗಳಲ್ಲಿ ‘ಗ್ರೀನ್ ಇಂಡಿಯಾ ಮಿಷನ್’ ಸಂಪೂರ್ಣ ವಿಫಲ: ಕೆ ಸಿ ವೇಣುಗೋಪಾಲ್ ತೀವ್ರ ಅಸಮಾಧಾನ

ದೇಶದ ಜೈವಿಕ ಸಂಪನ್ಮೂಲಗಳು ಮತ್ತು ಅರಣ್ಯ ಪ್ರದೇಶವನ್ನು ಸಂರಕ್ಷಿಸುವ ಉದ್ದೇಶದಿಂದ ಜಾರಿಗೆ...

ವಿಶ್ವದ ‘ದಿ ಮುಸ್ಲಿಮ್-500’ ಪಟ್ಟಿಯಲ್ಲಿ ಮೊದಲಿಗರು ಯಾರು? ಭಾರತೀಯರು ಇದ್ದಾರಾ?

ವಿಶ್ವದ 500 ಅತ್ಯಂತ ಪ್ರಭಾವಿ ಮುಸ್ಲಿಮರ ಈ ಪಟ್ಟಿಯನ್ನು ‘ದಿ ಮುಸ್ಲಿಮ್...