ದಾಲ್ಮಿಯಾ ಸಿಮೆಂಟ್ ಕಂಪನಿಯ ಗಣಿಗಾರಿಕೆ ವಿಸ್ತರಣೆಗಾಗಿ ಒಡಿಶಾದ ಸುಂದರ್‌ಗಢ ಜಿಲ್ಲೆಯ ಮೂರು ಗ್ರಾಮಗಳ ಕೃಷಿ ಭೂಮಿಯನ್ನು 2021ರಲ್ಲಿ ಸ್ವಾಧೀನಪಡಿಸಿಕೊಂಡಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದುಗೊಳಿಸಿದೆ. ಗ್ರಾಮಸಭೆ ಮತ್ತು ಭೂಮಿ ಕಳೆದುಕೊಳ್ಳುವ ಕುಟುಂಬಗಳ ಕಡ್ಡಾಯ ಒಪ್ಪಿಗೆಯನ್ನು ಪಡೆಯದ ಕಾರಣ ಈ ಭೂಸ್ವಾಧೀನ ಪ್ರಕ್ರಿಯೆ ಕಾನೂನುಬಾಹಿರ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು, ಸುಂದರ್‌ಗಢ ಜಿಲ್ಲೆಯ ಕುಕುಡಾ, ಬಿಹಾಬಂಧ ಮತ್ತು ಲಾಂಜಿಬೆರ್ನಾ ಗ್ರಾಮಗಳಲ್ಲಿ ‘ದಾಲ್ಮಿಯಾ ಸಿಮೆಂಟ್ಸ್ (ಭಾರತ್) ಲಿಮಿಟೆಡ್’ ಕಂಪನಿಗಾಗಿ ನಡೆಸಿದ್ದ ಭೂಸ್ವಾಧೀನವನ್ನು ಎತ್ತಿಹಿಡಿದಿದ್ದ ಒಡಿಶಾ ಹೈಕೋರ್ಟ್‌ನ 2024ರ ಸೆಪ್ಟೆಂಬರ್ ತೀರ್ಪನ್ನು ವಜಾಗೊಳಿಸಿದೆ. ಆದಾಗ್ಯೂ, ಕಾನೂನುಬದ್ಧ ನಿಯಮಗಳನ್ನು ಪಾಲಿಸುವ ಮೂಲಕ ಹೊಸದಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ರಾಜ್ಯ ಸರ್ಕಾರಕ್ಕೆ ಮುಕ್ತ ಅವಕಾಶವಿದೆ ಎಂದು ಪೀಠ ಹೇಳಿದೆ.
‘ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‌ನಿರ್ಮಾಣದಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಕಾಯ್ದೆ– 2013’ರ (2013ರ ಕಾಯ್ದೆ) ಅಡಿಯಲ್ಲಿ ಸಂತ್ರಸ್ತ ಕುಟುಂಬಗಳು ಮತ್ತು ಗ್ರಾಮಸಭೆಗಳ ಕಡ್ಡಾಯ ಒಪ್ಪಿಗೆ ಪಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. “2013ರ ಕಾಯ್ದೆಯಡಿ ಪರಿಶಿಷ್ಟ ಪ್ರದೇಶಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುವ ಮುನ್ನ ಗ್ರಾಮ ಪಂಚಾಯಿತಿಯ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಇದನ್ನು ಪಾಲಿಸದಿದ್ದರೆ ಇಡೀ ಭೂಸ್ವಾಧೀನ ಪ್ರಕ್ರಿಯೆಯೇ ಅಸಿಂಧುವಾಗುತ್ತದೆ” ಎಂದು ಪೀಠ ತೀರ್ಪಿನಲ್ಲಿ ತಿಳಿಸಿದೆ.
ದಾಲ್ಮಿಯಾ ಸಿಮೆಂಟ್ ಕಂಪನಿಯ ಗಣಿಗಾರಿಕೆ ವಿಸ್ತರಣೆಗಾಗಿ ಕೈಗೊಂಡಿದ್ದ ಭೂಸ್ವಾಧೀನವನ್ನು ಪ್ರಶ್ನಿಸಿ ಮೂರು ಗ್ರಾಮಗಳ ನಿವಾಸಿಗಳಾದ ಬಿಬೋಲ್ ಟೊಪ್ಪೊ ಮತ್ತು ಇತರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ದಾಲ್ಮಿಯಾ ಕಂಪನಿಯು 2040ರವರೆಗೆ ಅಂದಾಜು 873 ಹೆಕ್ಟೇರ್ ಪ್ರದೇಶದ ಗಣಿಗಾರಿಕೆ ಗುತ್ತಿಗೆಯನ್ನು ಹೊಂದಿದೆ. ಗಣಿಗಾರಿಕೆ ಚಟುವಟಿಕೆಗಳನ್ನು ವಿಸ್ತರಿಸುವ ಸಲುವಾಗಿ 273.57 ಎಕರೆ ಕೃಷಿ ಭೂಮಿಯ ಮೇಲ್ಮೈ ಹಕ್ಕು (ಸರ್ಫೇಸ್ ರೈಟ್ಸ್) ನೀಡುವಂತೆ ಕಂಪನಿಯು 2015ರ ಡಿಸೆಂಬರ್‌ನಲ್ಲಿ ಕೋರಿತ್ತು. ಕಂಪನಿಯ ಈ ಪ್ರಸ್ತಾವನೆಯ ಆಧಾರದ ಮೇಲೆ ರಾಜ್ಯ ಸರ್ಕಾರವು 2013ರ ಕಾಯ್ದೆಯಡಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿತ್ತು.
ಭೂಸ್ವಾಧೀನದ ಸ್ವರೂಪ ಮತ್ತು ಉದ್ದೇಶವು ಅದಕ್ಕೆ ಅನ್ವಯವಾಗುವ ಶಾಸನಬದ್ಧ ಸುರಕ್ಷತಾ ಕ್ರಮಗಳನ್ನು ನಿರ್ಧರಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಪ್ರಕರಣದಲ್ಲಿ ಖಾಸಗಿ ಕಂಪನಿಯ ಗಣಿಗಾರಿಕೆ ಉದ್ದೇಶಕ್ಕಾಗಿಯೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದರಿಂದ, ಕಾಯ್ದೆಯ ಸೆಕ್ಷನ್ 2(2)(ಬಿ) ಅನ್ವಯ ಸಾಮಾಜಿಕ ಪರಿಣಾಮದ ಮೌಲ್ಯಮಾಪನದ (ಎಸ್‌ಐಎ) ಜೊತೆಗೆ ಭೂಮಿ ಕಳೆದುಕೊಳ್ಳುವ ಕನಿಷ್ಠ ಶೇ 80ರಷ್ಟು ಕುಟುಂಬಗಳ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಸ್ವಾಧೀನಪಡಿಸಿಕೊಂಡ ಭೂಮಿಯ ಒಡೆತನ ಸರ್ಕಾರದ ಬಳಿಯೇ ಇರುತ್ತದೆ ಎಂಬ ಕಾರಣಕ್ಕೆ, ಅದರ ಖಾಸಗಿ ಉದ್ದೇಶ ಬದಲಾಗುವುದಿಲ್ಲ ಮತ್ತು ಕಡ್ಡಾಯ ಒಪ್ಪಿಗೆಯ ನಿಯಮದಿಂದ ವಿನಾಯಿತಿ ಸಿಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅಲ್ಲದೆ, ಈ ಭೂಮಿಯು ಸಂವಿಧಾನದ ಐದನೇ ಅನುಸೂಚಿಯಡಿ ಬರುವ ‘ಪರಿಶಿಷ್ಟ ಪ್ರದೇಶ’ದ (ಷೆಡ್ಯೂಲ್ಡ್ ಏರಿಯಾ) ವ್ಯಾಪ್ತಿಗೆ ಒಳಪಡುವುದರಿಂದ, ಕಾಯ್ದೆಯ ಸೆಕ್ಷನ್ 41(3)ರ ಪ್ರಕಾರ ಗ್ರಾಮಸಭೆಯ ಪೂರ್ವಾನುಮತಿ ಪಡೆಯುವುದು ಹೆಚ್ಚುವರಿ ಕಡ್ಡಾಯ ನಿಯಮವಾಗಿದೆ ಎಂದು ಪೀಠ ಹೇಳಿದೆ.
ಗ್ರಾಮಸಭೆ ತಿರಸ್ಕರಿಸಿದ್ದರೂ ಮುಂದುವರಿದಿದ್ದ ಸರ್ಕಾರ:
2020ರ ಜನವರಿ 26ರಂದು ನಡೆದ ಗ್ರಾಮಸಭೆಗಳಲ್ಲಿ ಭೂಸ್ವಾಧೀನ ಪ್ರಸ್ತಾವನೆಯನ್ನು ಸರ್ವಾನುಮತದಿಂದ ತಿರಸ್ಕರಿಸಲಾಗಿತ್ತು ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ. ಗ್ರಾಮಸಭೆಯ ವಿರೋಧದ ನಡುವೆಯೂ ರಾಜ್ಯ ಸರ್ಕಾರವು 2021ರ ಜೂನ್‌ನಲ್ಲಿ ಸಾಮಾಜಿಕ ಪರಿಣಾಮದ ಮೌಲ್ಯಮಾಪನ (ಎಸ್‌ಐಎ) ವರದಿಯೊಂದಿಗೆ ಮುಂದುವರಿದಿತ್ತು. ಜುಲೈನಲ್ಲಿ ಸೆಕ್ಷನ್ 11ರ ಅಡಿ ಅಧಿಸೂಚನೆ ಹೊರಡಿಸಿ, ಅಕ್ಟೋಬರ್‌ನಲ್ಲಿ ಸಾರ್ವಜನಿಕರ ಆಕ್ಷೇಪಣೆಗಳನ್ನು ತಿರಸ್ಕರಿಸಿತ್ತು. ಬಳಿಕ 2021ರ ನವೆಂಬರ್ 3ರಂದು ಸೆಕ್ಷನ್ 19ರ ಅಡಿ ಅಂತಿಮ ಘೋಷಣೆ ಹೊರಡಿಸಿತ್ತು.
ಗ್ರಾಮಸಭೆಯ ಒಪ್ಪಿಗೆಯನ್ನು ಕೇವಲ ಕಾರ್ಯವಿಧಾನದ ಅಗತ್ಯವೆಂದು ಪರಿಗಣಿಸಿದ್ದ ಒಡಿಶಾ ಹೈಕೋರ್ಟ್‌ನ ಧೋರಣೆಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಟೀಕಿಸಿದೆ. ಹೈಕೋರ್ಟ್‌ನ ಈ ನಡೆ “ಶಾಸನಬದ್ಧ ಕಡ್ಡಾಯ ನಿಯಮವನ್ನು ಕೇವಲ ಕಾಗದದ ಮೇಲಿನ ಔಪಚಾರಿಕತೆಗೆ ಸೀಮಿತಗೊಳಿಸಿದಂತಾಗಿದೆ” ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ. “ಈ ಪ್ರಕರಣದಲ್ಲಿ ಗ್ರಾಮಸಭೆಯ ಅರ್ಥಪೂರ್ಣ ಒಪ್ಪಿಗೆಯಂತೂ ದೂರದ ಮಾತು, ಕನಿಷ್ಠ ಕಾಗದದ ಮೇಲಿನ ಒಪ್ಪಿಗೆಯೂ ಇಲ್ಲ” ಎಂದು ನ್ಯಾಯಾಲಯ ಕಟುವಾಗಿ ನುಡಿದಿದೆ.



