ಸರ್ಕಾರಿ ಜಮೀನುಗಳನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಸದುಪಯೋಗಪಡಿಸಿಕೊಂಡು, ಶಿಕ್ಷಣ ಹಾಗೂ ವಸತಿ ಸೌಲಭ್ಯಗಳಿಂದ ವಂಚಿತರಾಗಿರುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸುವಂತೆ ಶಿವಮೊಗ್ಗ ಪೀಸ್ ಆರ್ಗನೈಸೇಷನ್ (ರಿ.) ವತಿಯಿಂದ ಇಂದು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಗೆ ಎರಡು ಪ್ರತ್ಯೇಕ ಮನವಿಗಳನ್ನು ಸಲ್ಲಿಸಲಾಗಿದೆ.
ಸಂಘಟನೆಯ ಅಧ್ಯಕ್ಷ ರಿಯಾಜ್ ಅಹಮದ್ ಅವರು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಸಲ್ಲಿಸಿದ ಮೊದಲ ಮನವಿಯಲ್ಲಿ, ತುಂಗಾನಗರ ಪೊಲೀಸ್ ಠಾಣೆಯ ಎದುರಿನ ಕಾಮತ್ ಲೇಔಟ್ ವ್ಯಾಪ್ತಿಯ ಸರ್ವೆ ನಂ. 115, 132/1, 132/2, 134, 145/2, 146/2, 147, 148, 149, 150, 157 ಮತ್ತು 158ರ ಜಮೀನುಗಳಿಗೆ ಸಂಬಂಧಿಸಿದ ಸರ್ಕಾರಿ B-ಖರಾಬ್ ಜಾಗಗಳ ದಾಖಲೆಗಳನ್ನು ಪರಿಶೀಲಿಸಿ, ಕಾನೂನುಬದ್ಧವಾಗಿ ಮಂಜೂರಾತಿಗೆ ಅರ್ಹವಾಗಿರುವ ಖಾಲಿ ಜಾಗದಲ್ಲಿ ಪಿಯುಸಿ ಕಾಲೇಜು ಹಾಗೂ ಪದವಿ, ವೃತ್ತಿಪರ ಮತ್ತು ಕೌಶಲ್ಯಾಭಿವೃದ್ಧಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಲೇಔಟ್ ನಕ್ಷೆಯಲ್ಲಿ ನಮೂದಿಸಿರುವ 2 ಎಕರೆ 14 ಗುಂಟೆ ಹಾಗೂ 9 ಗುಂಟೆ B-ಖರಾಬ್ ಜಾಗಗಳ ನೈಜ ಸ್ಥಿತಿ, ಗಡಿ ಮತ್ತು ವರ್ಗೀಕರಣವನ್ನು ಸಂಬಂಧಪಟ್ಟ ಇಲಾಖೆಗಳು ಜಂಟಿಯಾಗಿ ಪರಿಶೀಲಿಸಬೇಕು.

ಕೆರೆ, ಕಾಲುವೆ, ಪಾರ್ಕ್ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ಜಾಗಗಳನ್ನು ಸಂರಕ್ಷಿಸಿ, ಶಿಕ್ಷಣ ಸಂಸ್ಥೆಗೆ ಕಾನೂನುಬದ್ಧವಾಗಿ ಯೋಗ್ಯವಾದ ಜಾಗವನ್ನು ಮಾತ್ರ ಗುರುತಿಸಬೇಕು. ಸರ್ಕಾರಿ ಆಸ್ತಿಗಳ ಒತ್ತುವರಿ ತಡೆಗೆ ಅಗತ್ಯವಿರುವ ಕಡೆ ಗಡಿ ಗುರುತು, ತಂತಿ ಬೇಲಿ ಹಾಗೂ ಎಚ್ಚರಿಕೆ ನಾಮಫಲಕಗಳನ್ನು ಅಳವಡಿಸುವಂತೆಯೂ ಮನವಿ ಮಾಡಲಾಯಿತು.
ಇನ್ನು ಎರಡನೇ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದ್ದು, ಶಿವಮೊಗ್ಗ ತಾಲ್ಲೂಕಿನ ಕಸಬಾ-1 ಹೋಬಳಿಯ ಗೋವಿಂದಪುರ ಗ್ರಾಮದ ಸರ್ವೆ ನಂ. 8, 9 ಮತ್ತು 126ರ ಸರ್ಕಾರಿ ಜಮೀನುಗಳ ದಾಖಲೆಗಳನ್ನು ಪರಿಶೀಲಿಸಿ, ನಿವೇಶನ ಹಂಚಿಕೆಗೆ ಕಾನೂನುಬದ್ಧವಾಗಿ ಲಭ್ಯವಿರುವ ಜಾಗವನ್ನು ಗುರುತಿಸುವಂತೆ ಕೋರಲಾಗಿದೆ. ಸ್ವಂತ ನಿವೇಶನವಿಲ್ಲದೆ ಬಾಡಿಗೆ ಮನೆಗಳಲ್ಲಿ ಜೀವನ ನಡೆಸುತ್ತಿರುವ ಆಟೋ ಚಾಲಕರು, ಕೂಲಿ ಕಾರ್ಮಿಕರು, ದಿನಗೂಲಿ ನೌಕರರು, ನಿರ್ಗತಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ಮಧ್ಯಮ ವರ್ಗದ ಕುಟುಂಬಗಳಿಗೆ 30×40 ಅಳತೆಯ ನಿವೇಶನಗಳನ್ನು ರೂಪಿಸಿ ಸರ್ಕಾರದ ನಿಯಮಾನುಸಾರ ಹಂಚಿಕೆ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಎರಡೂ ಮನವಿಗಳಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಂದ ಜಂಟಿ ಸ್ಥಳ ಪರಿಶೀಲನೆ, ಅಧಿಕೃತ ಸರ್ವೆ, ಸರ್ಕಾರಿ ಜಮೀನಿನ ಗಡಿ ಗುರುತಿಸುವಿಕೆ ಹಾಗೂ ಒತ್ತುವರಿ ತಡೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಸರ್ಕಾರಿ ಜಮೀನುಗಳು ಖಾಸಗಿ ಸ್ವಾರ್ಥಕ್ಕೆ ಬಲಿಯಾಗದೆ, ಬಡ ಮಕ್ಕಳ ಶಿಕ್ಷಣ ಮತ್ತು ನಿವೇಶನ ರಹಿತ ಕುಟುಂಬಗಳ ಬದುಕಿಗೆ ಆಸರೆಯಾಗಬೇಕು. ಸಾರ್ವಜನಿಕ ಆಸ್ತಿಯನ್ನು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಸಂರಕ್ಷಿಸಿ, ಶಿಕ್ಷಣ ಮತ್ತು ವಸತಿ ಉದ್ದೇಶಗಳಿಗೆ ಸಮರ್ಪಕವಾಗಿ ಬಳಸುವುದು ಸರ್ಕಾರ ಹಾಗೂ ಆಡಳಿತ ವ್ಯವಸ್ಥೆಯ ಜವಾಬ್ದಾರಿಯಾಗಿದೆ ಎಂದು ರಿಯಾಜ್ ಅಹಮದ್ ತಿಳಿಸಿದರು.
ಈ ಸಂದರ್ಭದಲ್ಲಿ ರಿಯಾಜ್ ಅಹಮದ್ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಅಲ್ಲಾಹ್ ಬಕಾಶ್, ಸಮಾಜ ಸೇವಕರಾದ ಇಂಡಿಯನ್ ಸಲೀಂ, ಮಹಮ್ಮದ್ ಸಮೀವುಲ್ಲಾ, ಜವಾಜ್ ಅಹಮದ್, ಜಹೀರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.




