ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಬೆಂಗಳೂರಿನ ನಾಲ್ವರು ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟವರಲ್ಲಿ ಬೆಂಗಳೂರಿನ ನಾಲ್ವರು ಕಾರ್ತಿಕ್ (31), ನಕುಲ್ (19), ಪವನ್ (30) ಹಾಗೂ ಚೇತನ್ (19) ಎಂದು ಗುರುತಿಸಲಾಗಿದೆ. ಓರ್ವನ ಮೃತದೇಹ ಪತ್ತೆಯಾಗಿದ್ದು, ಉಳಿದವರ ಶವಕ್ಕಾಗಿ ಹುಡುಕಾಟ ನಡೆದಿದೆ.
ಬೆಂಗಳೂರಿನ ಕತ್ರಿಗುಪ್ಪೆಯಿಂದ ಮದುವೆ ಸಮಾರಂಭಕ್ಕಾಗಿ ವಕೀಲರ ತಂಡವೊಂದು ಶಿವಮೊಗ್ಗ ನಗರಕ್ಕೆ ಬಂದಿತ್ತು. ಅಲ್ಲಿಂದ ಸ್ಥಳವೊಂದನ್ನು ನೋಡಿಕೊಂಡು ಎರಡು ಟಿಟಿಯಲ್ಲಿ ತೀರ್ಥಹಳ್ಳಿ ಕಡೆಗೆ ಬಂದಿದ್ದರು ಎನ್ನಲಾಗಿದೆ. ಮಹಿಷಿ ಸಮೀಪದ ತುಂಗಾ ನದಿಯಲ್ಲಿ ನೀರಿಗಿಳಿದಾಗ ಒಬ್ಬಾತ ಮುಳುಗಿದ್ದು, ಆತನನ್ನು ಕಾಪಾಡಲು ತೆರಳಿದ ಉಳಿದ ಮೂವರು ಕೂಡ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಗ್ನಿಶಾಮಕದಳ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.




