ಬಾ.ಹ. ರಮಾಕುಮಾರಿ ಅವರ ಕತೆ | ನಿಯೋಗ

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

“ಜಯಂತಿ ‘ಪರ್ವ’ ಕಾದಂಬರಿ ಓದಿದ್ದಾಯ್ತ, ತಗೊಂಡು ಹೋಗಿ ರಾಮಣ್ಣನಿಗೆ ಕೊಟ್ಟು ಬಿಡಲಾ, ಕೇಳ್ತಾ ಇದ್ದ” ಎಂದು ಸತೀಶ ನುಡಿದಾಗ ಜಯಂತಿ “ಇರೀ ಅದ್ನ ಇನ್ನೊಂದ್ಸಲ ಓದಬೇಕು. ಒಂದ್ಸಲ ಓದಿದರೆ ಅರ್ಥಾನೇ ಆಗೋಲ್ಲ” ಎಂದು ರಾಗ ಎಳೆದಾಗ, ಸತೀಶ “ಹಾಗಿದ್ರೆ ಬೇಗ ಓದಿಬಿಡು. ಮುಂದಿನವಾರ ಕೊಟ್ಟು ಬರ್‍ತೀನಿ” ಎಂದು ಬಟ್ಟೆ ಬದಲಿಸಿ ಮಂಚದ ಮೇಲೆ ಒರಗಿದ. ಜಯಂತಿ ‘ಪರ್ವ’ ಹಿಡಿದು ಇವನ ಬಳಿಯೇ ಬಂದು ಇವನಿಗೆ ಒರಗಿಕೊಂಡೇ “ರೀ ಇದರಲ್ಲಿ ‘ನಿಯೋಗ’ ಅಂತ ಒಂದು ಕಡೆ ಬರುತ್ತೆ, ಅದೇನ್ರಿ” ಎಂದಾಗ, “ನಾನೆಲ್ಲಿ ‘ಪರ್ವ’ ಓದಿದ್ದೇನೆ. ಓದಿದ್ರೆ ಹೇಳಬಹುದಿತ್ತು. ‘ಪರ್ವ’ದಲ್ಲಿ ನಿಯೋಗದ ಸಂದರ್ಭ ಹೇಗೆ, ಯಾಕೆ ಬಂದಿದೆಯೋ ಗೊತ್ತಿಲ್ಲ. ಆದರೆ ನಿಯೋಗ ಅಂದ್ರೆ ಏನು ಅಂತ ಗೊತ್ತು. ಅಷ್ಟನ್ನ ಮಾತ್ರ ಹೇಳ್ತೀನಿ. ಇದೊಂದು ಪದ್ಧತಿ. ಮಹಾಭಾರತ ಕಾಲದಲ್ಲಿ ಹೆಚ್ಚು ರೂಢಿಯಲ್ಲಿತ್ತು. ಭಾರತ ಕಥೆಯಲ್ಲಿ ಅಂತಹ ಪ್ರಸಂಗಗಳು ಕಂಡುಬರುತ್ತವೆ. ಈ ಪದ್ಧತಿ ಪ್ರಕಾರ ಮಕ್ಕಳಿಲ್ಲದವರು ಮಕ್ಕಳಾಗುವುದಕ್ಕೆ ಮಾತ್ರ ಬೇರೊಬ್ಬನನ್ನು ಕೂಡಿ ಮಕ್ಕಳನ್ನು ಪಡೆಯಬಹುದಿತ್ತು. ಓನ್ಲಿ ದಟ್ ಪರ್‌ಪಸ್. ಅದು ತೀರಿದ ಮೇಲೆ ಅಥವಾ ಇನ್ನ್ಯಾವಾಗಲೂ ಆತನನ್ನು ಕೂಡಬಾರದು, ಹಾಗೂ ಲೈಂಗಿಕವಾಗಿ ಆತನನ್ನು ಬಯಸಬಾರದಿತ್ತು.”

- Advertisement -

“ಥೂ! ಅದ್ಹೆಂಗ್ರಿ ಸಾಧ್ಯ ಬೇರೊಬ್ಬನಿಂದ ಹುಟ್ಟಿದ ಮಗೂನ ತನ್ನದು ಅಂತ ಭಾವಿಸೋದು ಹೇಗೆ?”

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

“ಆ ಕಾಲದಲ್ಲಿ ಧರ್ಮ, ಸಂಸ್ಕೃತಿ, ಸಮಾಜವೂ ಅದನ್ನು ಸ್ವಾಗತಿಸಿತ್ತಲ್ಲ. ಅದಕ್ಕೆ ಬೆಲೇನೂ ಕೊಡ್ತಾ ಇದ್ರು.”

“ಏನೇ ಆದ್ರೂ… ತಾಯಿಯೇನೋ ತನ್ನ ಬಸಿರಲ್ಲಿ ಹುಟ್ಟಿದ್ದು, ತಾನು ತಾಯಿ ಅಂತ ಆ ಮಗೂನ ಸ್ವೀಕರಿಸಬಹುದು. ಆದ್ರೆ ಅವಳ ಗಂಡ ಅಂಥ ಮಗೂನ ತನ್ನ ಮಗು ಅಂತ ಒಪ್ಕೋತಿದ್ನ… ಒಪ್ಕೊಳಕ್ಕೆ ಆಗುತ್ತ?”

“ಯಾಕಾಗೊಲ್ಲ ನಾವು ಪವಿತ್ರ, ಶೀಲ ಇಂತದ್ನೆಲ್ಲ ಈಗ ಭಾವಿಸಿದ್ದೀವಲ್ಲ. ಆ ಅರ್ಥದಿಂದ ಹೊರಗಿಟ್ಟು ನೋಡಿದರೆ ಈಗಲೂ ಒಪ್ಕೋಬಹುದು. ಆ ಕಾಲದಲ್ಲಿ ಅದೇ ರೂಢಿಯಲ್ಲಿತ್ತು. ಒಪ್ಕೋತಿದ್ರು. ಬೇರಾವ ಭಾವನೇನೂ ಅವ್ರಿಗೆ ಬರ್ತಿರಲಿಲ್ಲ. ಆಗ ಅದೇ ಅವರಿಗೆ ಸಹಜ ಅನ್ನಿಸ್ತಿತ್ತು. ಈ ಕಾಲಕ್ಕೆ ಅದು ನಮಗೆ ಅಶ್ಲೀಲ ಎನಿಸಬಹುದು. ಈಗಿನ ಕುಟುಂಬ ಯೋಜನೆ ಹಿಂದಿನವರಿಗೆ ಅಸಹ್ಯ ಅನ್ನಿಸಲ್ವ ಹಾಗೆ.”

ಇದನ್ನು ಓದಿದ್ದೀರಾ?: ಬರಗೂರು ರಾಮಚಂದ್ರಪ್ಪ ಅವರ ಕತೆ | ಕ್ಷಾಮ

“ಅಲ್ರಿ ಹೆಂಗಸ್ರೂ ಅದ್ನ ಒಪ್ಕೊಳ್ತಿದ್ರಾ; ಮಕ್ಕಳಾಗ್ಲಿ ಅಂತ ಇನ್ನೊಬ್ರ ಹತ್ರ ಹೋಗೋದು…. ಓಹ್ ಹಾರಿಬಲ್….”

“ಆಗ್ಲೂ ಕೆಲವು ಹೆಂಗಸರು ಅದನ್ನು ಇಷ್ಟಪಡ್ತಿರಲಿಲ್ಲ. ಅಂತಹ ಅನೇಕ ಪ್ರಕರಣಗಳಿವೆ. ಆ ಪದ್ಧತೀನ ಪ್ರತಿಭಟಿಸೋ ಸ್ವಾತಂತ್ರ್ಯ ಇಲ್ದೇ ಕೆಲವು ಬಾರಿ ಇಷ್ಟವಿಲ್ದೇ ಇದ್ರೂ ಒಳಪಡಬೇಕಿತ್ತು. ಅದಕ್ಕೆ ಅವರವರ ಗಂಡಂದಿರೇ ಒಪ್ಪಿಸುತ್ತಿದ್ದುದೂ ಅದಕ್ಕಾಗಿ ಹಿಂಸೆ ಕೊಡುತ್ತಿದ್ದುದೂ ಉಂಟು. ಆ ಕಾಲದಲ್ಲಿ ಮಕ್ಕಳಿಲ್ಲದ ಹೆಂಗಸಿಗೆ ಪ್ರಾಮುಖ್ಯ ನೀಡ್ತಾ ಇರಲಿಲ್ಲ. ಅದಕ್ಕಾಗಿ ಹೆಂಗಸರು ಒಪ್ಕೋತಿದ್ರು. ಒಂದ್ಸಲ ಮಹಾಭಾರತಾನ ಪೂರ್ತಿ ಓದು ಎಲ್ಲ ಅರ್ಥ ಆಗುತ್ತೆ. ಶೂರನಾದ, ವೀರ್ಯವಂತನಾದ ಮಗನನ್ನು ಪಡೆಯಲು ಹುಡುಕಿ ಹುಡುಕಿ ಮಹಾನ್ ವ್ಯಕ್ತಿನ ‘ನಿಯೋಗ’ಕ್ಕೆ ಆರಿಸುತ್ತಿದ್ದರು.”

“ಹೌದೂ ರೀ ದ್ರೌಪದಿಗೆ ಐದು ಜನ ಗಂಡಂದಿರು ಇದ್ರು ಅನ್ನೋದ್ನ ನಂಬೋದಾದ್ರೆ ನಿಯೋಗ ಪದ್ಧತಿ ಇತ್ತೆಂಬುದನ್ನು ಅಲ್ಲಗಳೆಯೋಕೆ ಆಗೊಲ್ಲ. ಯಾಕೇಂದ್ರೆ ಆಗಿನ ಸಂಸ್ಕೃತಿ, ಸಮಾಜ ಐದು ಜನರಿಗೆ ಒಬ್ಬಳೇ ಹೆಂಡ್ತಿ ಇರೋದ್ನ ಒಪ್ಕೋತಿತ್ತು ಎಂದ್ರೆ ನಿಯೋಗ ಪದ್ಧತಿನೂ ಖಂಡಿತ ಒಪ್ಕೊಂಡಿತ್ತು ಅನ್ನಿಸುತ್ತೆ.”

ಇಬ್ಬರಲ್ಲೂ ಮೌನ. ಆದರೆ ಮನಸ್ಸು ನಿಯೋಗ ಪದ್ಧತಿಯ ಸುತ್ತಲೇ ಅಲೆಯುತ್ತಿತ್ತು.

ಮಲಗಿದರೂ ನಿದ್ದೆ ಹತ್ತಿರ ಸುಳಿಯದೆ ಇಬ್ಬರ ಮನಸ್ಸಿನಲ್ಲೂ ಗೊಂದಲ, ಚಿಂತೆಗಳು ಮುತ್ತುತ್ತಿದ್ದವು. ಸತೀಶನಿಗೆ ಇವಳು ಯಾಕೆ ನಿಯೋಗದ ಬಗ್ಗೆ ಅಷ್ಟು ಆಸಕ್ತಿ ವಹಿಸಿ ಎಳೆ ಎಳೆಯನ್ನೂ ಕೇಳಿದಳಲ್ಲ ಎಂದು ಚಿಂತಿಸಿದರೆ, ಜಯಂತಿಯ ಮನ ಸತೀಶ ಯಾಕೆ ನಿಯೋಗದ ಬಗ್ಗೆ ನಾನು ಕೇಳಿದ್ರೆ ಅಷ್ಟು ವಿವರವಾಗಿ ಹೇಳಿದ. ಅವನ ಮನಸ್ಸು ನಿಯೋಗ ಪದ್ಧತಿ ಕಡೆ ವಾಲುತ್ತಿದೆಯೇ! ಚಿಂತೆಯ ಸುಳಿಯಲ್ಲೇ ಸುತ್ತಾಡಿ ಸುತ್ತಾಡಿ ಯಾವಾಗಲೋ ಅವರಿಬ್ಬರೂ ನಿದ್ರಾವಶರಾಗಿದ್ದರು.

ಇದನ್ನು ಓದಿದ್ದೀರಾ?: ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ

ಸತೀಶ ಕಲ್ಕತ್ತಾದ ಒಂದು ಫರ್ಮ್‌ನಲ್ಲಿ ಇಂಜಿನಿಯರ್ ಆಗಿದ್ದ. ತನ್ನ ಮಾವನ ಮಗಳಾದ ಜಯಂತಿಯನ್ನೇ ಮೆಚ್ಚಿ ಮದುವೆಯಾಗಿದ್ದ. ಸುಖ-ಸಮೃದ್ಧ ಸಂಸಾರ, ಸ್ವಂತದ್ದೇ ಫ್ಲಾಟ್, ಓಡಾಟಕ್ಕೆ ಕಾರು, ತಿಂಗಳ ಕೊನೆಯ ಚಿಂತೆ ಇರದಂತೆ ಜೇಬು ತುಂಬಿರುವ ಹಣ, ಕೊರತೆ ಇಲ್ಲದ ಬದುಕು, ರೂಪವಂತೆ ಹೆಂಡತಿ, ಪ್ರೀತಿ ವಾತ್ಸಲ್ಯಗಳಿಂದ ಕಾಣುವ ಬಂಧು ಬಳಗ ಎಲ್ಲವೂ ಇತ್ತು. ಆದರೆ ಏನೋ ಕೊರತೆ ಅವ್ಯಕ್ತವಾಗಿ ಬಾಧಿಸುತ್ತಿತ್ತು. ವಯೋವೃದ್ಧ ತಂದೆತಾಯಿಯ ಹಿರಿಯ ಮಗನಾಗಿದ್ದ ಸತೀಶನಿಗೆ ಮೊಮ್ಮಕ್ಕಳನ್ನು ವಂಶದ ಕುಡಿ ಚಿಗುರುವುದನ್ನು ಕಾಣಲು ಬಲವಂತವಾಗಿ ಮದುವೆ ಮಾಡಿಸಿದ್ದರು. ಇನ್ನೊಂದರೆಡು ವರ್ಷ ಮದುವೆ ಬೇಡವೆಂದರೂ ಕೇಳದೆ ಯಾವ ಉದ್ದೇಶಕ್ಕಾಗಿ ಅವನಿಗೆ ಮದುವೆ ಮಾಡಿದ್ದರೋ ಆ ಉದ್ದೇಶ ಐದು ವರ್ಷ ಕಳೆದರೂ ಈಡೇರಿರಲಿಲ್ಲ. ವರ್ಷಕ್ಕೊಮ್ಮೆ ಒಂದು ತಿಂಗಳ ರಜೆ ಪಡೆದು ತನ್ನೂರಿಗೆ ಬಂದಾಗಲೆಲ್ಲಾ ಸತೀಶನ ಮತ್ತು ಜಯಂತಿಯ ತಂದೆ ತಾಯಿಯರು ಹೇಳುವ ದೇವರ ಪೂಜೆ, ವ್ರತ ಇತ್ಯಾದಿಗಳನ್ನೆಲ್ಲ ಮಾಡಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ. ಸತೀಶ ಇಂಜಿನಿಯರ್ ಆಗಿದ್ದರೂ ತಂದೆ ತಾಯಿಗಳ ಮನ ನೋಯಿಸಬಾರದೆಂದು ವ್ರತ, ನಿಯಮ, ಪೂಜೆಗಳನ್ನು ಮಾಡಲು ಒಪ್ಪುತ್ತಿದ್ದ. ಹೀಗಾದ್ರು ಮಕ್ಕಳಾದರೆ ಸಾಕು ಎಂಬ ಮನಸಿನಾಳದ ಆಸೆ!

ಇಬ್ಬರೂ ವೈದ್ಯರಲ್ಲಿ ಪರೀಕ್ಷಿಸಿಕೊಂಡರೂ, ಚಿಕಿತ್ಸೆ ಇತ್ಯಾದಿ ಪಡೆದರೂ ಪ್ರಯೋಜನವಾಗಿರಲಿಲ್ಲ. ಅತ್ತ ಸತೀಶನ ತಂದೆ ತಾಯಿಗಳು ತಾವು ಕಣ್ಣು ಮುಚ್ಚುವ ಮುನ್ನ ಮೊಮ್ಮಗನನ್ನು ನೋಡಿ ವಂಶದ ಕುಡಿ ಚಿಗುರಿತೆಂದು ಖಾತರಿ ಮಾಡಿಕೊಂಡೇ ಸಾಯಬೇಕು, ಸಾಯುವಷ್ಟರಲ್ಲಿ ತಮ್ಮಾಸೆ ಈಡೇರಬೇಕೆಂದು ಬಯಸಿದ್ದರು. ಅದಕ್ಕಾಗಿ ಮಗನಿಗೆ ಇನ್ನೊಂದು ಮದುವೆ ಮಾಡುವ ಬಗ್ಗೆ ಯೋಚಿಸುತ್ತಿದ್ದರು. ಅಸ್ಪಷ್ಟವಾಗಿ ಅದು ಸತೀಶನಿಗೆ ಗೋಚರಿಸಿದರೂ, ಮನಸ್ಸು ಒಲಿದಿರಲಿಲ್ಲ.

ಅನುರೂಪದ ದಾಂಪತ್ಯ ಅವರದು. ಮಕ್ಕಳ ಕೊರತೆ ಬಿಟ್ಟರೆ ಪ್ರಪಂಚದಲ್ಲೆ ಅತ್ಯಂತ ಸುಖಿಗಳು, ಒಬ್ಬರನ್ನೊಬ್ಬರು ಬಿಟ್ಟಿರಲಾರದ ಪ್ರೇಮಬಾಂಧವ್ಯ.

ಇದನ್ನು ಓದಿದ್ದೀರಾ?: ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

ಒಂದು ಮಗುವಿಗಾಗಿ ಹಂಬಲಿಸುವ ಅವರ ಮನಗಳು ಪರಸ್ಪರರಿಗಾಗಿ ಮರುಗುತ್ತಿದ್ದವು, ಮಿಡಿಯುತ್ತಿದ್ದವು. ತನ್ನಿಂದ ಇವರ ಮನೆಗೆ ಒಂದು ಮಗುವನ್ನು ಕೊಡಲು ಆಗುತ್ತಿಲ್ಲವಲ್ಲ ಎಂದು ಜಯಂತಿಯ ಕೊರಗು. ತನ್ನಿಂದ ಜಯಂತಿಯ ಒಡಲಲ್ಲಿ ಒಂದು ಹೂ ಅರಳಿಸಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಸತೀಶನ ಕೊರಗು. ಕೆಲವೊಮ್ಮೆ ಅವನಿಗೆ ಕೃತಕ ವೀರ್ಯಧಾರಣೆಯಿಂದ ಗರ್ಭಧಾರಣೆ ಮಾಡಿ ಮಗು ಪಡೆದರೆ ಹೇಗೆ ಎಂಬ ಯೋಚನೆ ಬಂದು ಜಯಂತಿಯೊಂದಿಗೆ ಚರ್ಚಿಸಿದ. ಅವಳು ಒಪ್ಪಲಿಲ್ಲ. ಯಾರ್‍ಯಾರದೋ ಎಂಥದೋ ಅದು. ಅದರಿಂದ ಕೆಟ್ಟ ಮಗು ಹುಟ್ಟಿದರೆ… ಎಂದು ತಳ್ಳಿ ಹಾಕಿದಳು. ಕೆಲ ಕಾಲ ಮತ್ತೆ ಅದರ ಪ್ರಸ್ತಾಪ ಆಗಲಿಲ್ಲ.

*

ಅದಾದನಂತರ ಇದೀಗ ನಿಯೋಗದ ಮಾತು. ಅವನಿಗೆ ನೆನಪಾಯಿತು. “ಯಾರ್‍ಯಾರದೋ…. ಕೆಟ್ಟ ಮಗು ಹುಟ್ಟಿದರೆ….” ಅಂದ್ರೆ ಇದು ಅವಳಿಗೆ ಆಸೆ ಇರುವುದನ್ನು ತೋರಿಸುತ್ತದೆ! ಒಳ್ಳೆ ಮಗು ಹುಟ್ಟಿದರೆ ಆಗಲಿ ಎಂದು ಅವಳ ಮನದ ಭಾವನೆಯೆ? ಅದಕ್ಕೇ ನಿಯೋಗದ ಬಗ್ಗೆ ಅಷ್ಟು ಆಸಕ್ತಿಯೇ…. ಕೆಲವು ದಿನ ಇಬ್ಬರ ನಡುವೆಯೂ ಮೌನ. ಜಯಂತಿಯ ಮನದಲ್ಲೂ ಯೋಚನೆಯ ಭಾವನೆಗಳ ತಾಕಲಾಟ. ಸತೀಶನಿಗೆ ತಾನು ನಿಯೋಗದ ಮೂಲಕವಾದರೂ ಸರಿ ಮಗುವನ್ನು ಹಡೆದುಕೊಡಬೇಕೆಂಬ ಹಂಬಲವಿದೆಯೋ? ಅದಕ್ಕೇ ನಿಯೋಗದ ಬಗ್ಗೆ ಅಷ್ಟು ಹೇಳಿದನೇ. ಹೆಣ್ಣಿಗೆ ದೈವದತ್ತವಾದ ತಾಯ್ತನದ ಅಪೂರ್ವ ಅನುಭವವನ್ನು ಅನುಭವಿಸಲು ನನಗೆ ಅದೃಷ್ಟವಿಲ್ಲವಲ್ಲ ಎಂದು ಕೊರಗುವಳು. ಒಂದು ಅನಾಥ ಮಗುವನ್ನು ಹುಟ್ಟಿದ ಕೂಡಲೇ ತಂದು ಸಾಕಿದರೆ? ಅದರಿಂದ ತನಗೆ ತಾಯ್ತನ ದೊರಕಿದಂತಾಯ್ತೆ? ತನ್ನೊಡಲಲ್ಲಿ ಹೂವು ಅರಳಿದಂತಾಗುವುದೇ? ಇಲ್ಲ…. ಇಲ್ಲ. ತನ್ನೊಡಲು ಬರಡು ನೆಲವಾಗಲು ಬಿಡಬಾರದು. ಫಲವತ್ತಾಗಿಸಲು, ನಗುವ ಹೂವರಳಿಸಲು ಸಿದ್ಧಗೊಳಿಸಬೇಕು. ಹೌದು…. ಆದರೆ ಹೇಗೆ? ಚಿಂತೆಯಲ್ಲೇ ಕೊರಗಿ ನರಳಿದಳು. ಇದನ್ನೆಲ್ಲಾ ಸತೀಶ ಗಮನಿಸಿದರೂ ತಾನು ಅಸಹಾಯಕನೆಂದು ಅರಿತು ಅವಳಿಗೆ ಸಾಂತ್ವನ ಹೇಳಲೂ ಧೈರ್ಯವಿಲ್ಲದೆ ತನ್ನಲ್ಲಿಯೇ ಕೊರಗಿದ.

ಅವನಲ್ಲಿ ಯೋಚನೆಯ ಹಾಗೂ ಯೋಜನೆಯ ನಾನಾ ತರಂಗಗಳು ಮೂಡಿ ಮೂಡಿ ಮರೆಯಾಗುತ್ತಿದ್ದವು. ಮನಸ್ಸು ಸ್ವಾಗತಿಸಿದರೆ ಬುದ್ಧಿ ಸ್ವಾಗತಿಸುತ್ತಿರಲಿಲ್ಲ. ಕೆಲವನ್ನು ಬುದ್ಧಿ ಒಪ್ಪಿದರೂ ಮನಸ್ಸು ಇಷ್ಟಪಡುತ್ತಿರಲಿಲ್ಲ.

ಇದನ್ನು ಓದಿದ್ದೀರಾ?: ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

ವೈಜ್ಞಾನಿಕ ಯುಗದ ಇಂದಿನ ದಿನಗಳಲ್ಲಿ ಒಂದು ಮಗುವನ್ನು ಪಡೆಯಲು ಇಷ್ಟೆಲ್ಲಾ ವ್ಯಥೆಯೇ ಎಂದು ಇಂಜಿನಿಯರ್ ಬುದ್ಧಿ ಪ್ರಶ್ನಿಸಿದರೆ ವೈಜ್ಞಾನಿಕ ಯುಗದ ಅಗತ್ಯಗಳೇ ಬೇರೆ, ಮನುಷ್ಯನ ಬದುಕಿನ ಅಗತ್ಯಗಳೇ ಬೇರೆ. ಯಾಂತ್ರಿಕ ಜೀವನಕ್ಕೂ, ಭಾವನಾತ್ಮಕ ಜೀವನಕ್ಕೂ ವ್ಯತ್ಯಾಸವಿದೆ ಎಂದು ಮನಸ್ಸು ಪಿಸುಗುಟ್ಟುತ್ತಿತ್ತು.

ಹೌದು ಭಾರತೀಯ ಪರಂಪರೆಯಲ್ಲಿ, ಯಾವುದೇ ಒಂದು ಚೌಕಟ್ಟಿನಲ್ಲಿ, ಯಾರೋ ನಿರ್ಮಿಸಿದ ಚೌಕಟ್ಟಿನಲ್ಲಿ ತಾನು ಬದುಕಬೇಕಾದ ಸನ್ನಿವೇಶದಲ್ಲಿ ಚೌಕಟ್ಟಿನ ನಿರ್ಬಂಧಗಳನ್ನು ಪಾಲಿಸಬೇಕು ಎಂಬ ಮನೋಧರ್ಮಕ್ಕೆ ಒಳಗಾಗಿ ಸೋತುಬಿಡುತ್ತಿದ್ದ. ಛೇ, ಮಾನವೀಯ ನೆಲೆಗಟ್ಟಿನಲ್ಲಿ ಭಾವನಾತ್ಮಕ ಸಂಬಂಧ ಹುಡುಕುತ್ತಾ ಹೋಗಿ ಕೇವಲ ರಿಜಿಡ್ ಆಗಿ ಮುರುಟಿಹೋದ ಮನಸಿನವನಾಗಿ ಬಿಡಬೇಕೆ? ಬುದ್ಧಿ ಇದೆ. ವಿಜ್ಞಾನದ ತಿಳಿವಳಿಕೆ ಇದೆ. ಕೇವಲ ವಂಶಾಭಿವೃದ್ಧಿಗಾಗಿ ತನ್ನ ಜೀವದ ತಳಿಯನ್ನೇ ಬಿತ್ತಿ ಬೆಳೆಯಬೇಕೆಂಬ ಹಂಬಲವೆ? ಸೃಷ್ಟಿ ಒಂದು ನಿಯಮ. ಮನೆತನ, ಅನುವಂಶಿಕತೆ ಇವೆಲ್ಲಾ ಸೃಷ್ಟಿ ನಿಯಮಗಳ ಮಿತಿ ಅಷ್ಟೆ, ಅಲ್ಲವೇ, ಅದು ನೈತಿಕ ನೆಲೆಗಟ್ಟಿನ ಮೇಲೆ ನಿಲ್ಲಿಸಿರುವಂತಾದ್ದು. ಬದುಕಿನಲ್ಲಿ ಅವೆಲ್ಲಕ್ಕೂ ಅರ್ಥ ಇದೆಯೇ? ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ. ಮನಸ್ಸಿನಲ್ಲಿ ಅವುಗಳಿಗೆ ಅರ್ಥಕೊಟ್ಟರೆ ಬದುಕಿನಲ್ಲಿ ಅರ್ಥ ಇದೆ. ಇಲ್ಲಾಂದ್ರೆ ಇಲ್ಲ. ತನಗಾದರೂ ತನ್ನದೇ ಮಗು ಹುಟ್ಟಬೇಕೆಂಬ ಹಂಬಲ ಏಕೆ? ಒಂದು ಮಗು ತಂದು ಸಾಕಿದರೆ? ತಂದೆ ತಾಯಿಗಳಿಗೆ ಅದು ತಮ್ಮದೇ ಎಂದು ಹೇಳಿದರೆ ಹೇಗೆ? ಮಗು ತಂದು ಸಾಕಿದರೆ ಮನೆಗೊಂದು ಮಗು ಸಿಗಬಹುದು. ಅದಕ್ಕೊಂದು ಆಸರೆ ಸಿಗಬಹುದು. ಆದರೆ ತಾಯ್ತನದ ಅನುಭವ ಸಿಗಬಹುದೇ? ಆ ಮಗುವಿನಿಂದ ಅವಳಿಗೆ ತೃಪ್ತಿ ದೊರಕುವುದೆ? ದೇವರು ಪ್ರಪಂಚಾನ ಸೃಷ್ಟಿ ಮಾಡಿ ಮನುಷ್ಯನಿಗೇ ಬಿಟ್ಟುಕೊಟ್ಟ. ಆದರೆ ಅಗತ್ಯ, ಅವಕಾಶಗಳನ್ನು ಮಾತ್ರ ಅರೆಬರೆ ಮಾಡಿಬಿಟ್ಟ ಎನಿಸಿತು. ಇದೇನು ಇವತ್ತು ಮನಸ್ಸು ದೇವರು. ಸೃಷ್ಟಿ ಈ ಬಗ್ಗೆಯೇ ಯೋಚಿಸ್ತಿದೆಯಲ್ಲ ಅಂತ ನಗು ಬಂದಿತು.

ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ

ಮತ್ತೆ ಮತ್ತೆ ‘ನಿಯೋಗ’ವೇ ಅವನ ಮನೋವಲಯದಲ್ಲಿ ಸುತ್ತಿಸುತ್ತಿ ಬರುತ್ತಿತ್ತು. ಎಷ್ಟೋ ಹೊತ್ತು ಹಾಗೇ ಕುಳಿತು ಯೋಚಿಸಿದ. ಧರ್ಮವೇ ನಿಯೋಗ ಪದ್ಧತಿಯನ್ನು ಬಳಸಿಕೊಂಡಿರುವುದನ್ನು ನೋಡಿದರೆ ಅದನ್ನು ಯಾಕೆ ಪ್ರಯೋಗಿಸಬಾರದು ಎನ್ನಿಸಿತು. ಆದರೆ ತಾನಾಗಲೀ, ಜಯಂತಿಯಾಗಲೀ ಇದಕ್ಕೆ ಸಮ್ಮತಿಸುವುದು ಸಾಧ್ಯವೇ ಎನಿಸಿತು. ಅದಕ್ಕೆ ಬೇಕಾದ ಮಾನಸಿಕ ಸಿದ್ಧತೆಯನ್ನು ತಾನು ಪ್ರಯತ್ನಿಸಿದರೆ ಮಾಡಿಕೊಳ್ಳಬಹುದು. ಆದರೆ ಜಯಂತಿಯನ್ನು ಒಪ್ಪಿಸುವುದು ಹೇಗೆ? ಭಾವನಾತ್ಮಕ ಸಂಬಂಧ, ಕಲ್ಪಿತ ಸಂಪ್ರದಾಯ, ಮಡಿವಂತಿಕೆ ಎಲ್ಲವನ್ನೂ ಬಿಟ್ಟು ಯೋಚಿಸಿದಾಗ ನಿರ್ಧಾರ ದೃಢವಾಯಿತು. ಆದರೂ ಏನೋ ಒಂದು ರೀತಿಯ ಅಳುಕು. ಅದು ಯಾತರಿಂದ ಎಂಬುದು ಅಸ್ಪಷ್ಟ. ಏನೋ ನಿರ್ಧಾರ ತಾಳಿದವನಂತೆ ತಲೆ ಕೊಡವಿ ಎದ್ದು ಮನೆಗೆ ಬಂದ.

ತುಂಬಾ ಖುಷಿಯಲ್ಲಿರುವಂತೆ ಕಂಡ ಸತೀಶನನ್ನು ಬೆರಗುಗಣ್ಣಿನಿಂದ ದಿಟ್ಟಿಸಿದಳು ಜಯಂತಿ. ಸುಮಾರು ದಿನಗಳಿಂದ ಅಸ್ತವ್ಯಸ್ತಗೊಂಡ ಮನಸ್ಸು ಮುದಗೊಂಡ ಪರಿ ಅವಳನ್ನು ಸುಪ್ರೀತಳನ್ನಾಗಿಸಿತು.

ಸತೀಶ ಇಂದೇಕೆ ತುಂಬ ಕುಶಾಲಿನಲ್ಲಿದ್ದಂತೆ ಕಾಣುತ್ತದಲ್ಲ ಅಂತ ಅನ್ನಿಸಿದರೂ ಜಯಂತಿ ತುಟಿ ಎರಡು ಮಾಡಲಿಲ್ಲ.

ಮಲಗಿದಾಗ ಹತ್ತಿರ ಸರಿದು ಮೆಲ್ಲನೆ ವಿಷಯ ತೆಗೆದ ಸತೀಶ. ಅವಳ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದ. ಮೈದಡವುತ್ತಾ ಪ್ರೀತಿ ಹೊಳೆ ಹರಿಸಿದ, ದುಃಖತಪ್ತ ಮೊಗವನ್ನು ತನ್ನೆದೆಗೆ ಒತ್ತಿಕೊಂಡು ರಮಿಸಿದ. ಹಾಗೇ ಅವಳನ್ನು ತೋಳಿನಲ್ಲಿ ತೆಗೆದುಕೊಂಡು ‘ನಿಯೋಗ’ದ ಪ್ರಸ್ತಾಪ ತೆಗೆದು, ನೇರವಾಗಿ ನುಡಿದ. ಅವನ ಮಾತು ಕೇಳಿ ಜಯಂತಿ ಸೆಟೆದು ಸಿಟ್ಟಿನಿಂದ ಬೆಂಕಿಯಾಗಿ ದೂರ ಸರಿಯಲು ಯತ್ನಿಸಿದಳು. ಅವನ ಬಾಹುಗಳು ಬಲವಾಗಿ ಅವಳನ್ನು ಬಿಗಿದು ಮತ್ತೆ ಮತ್ತೆ ಸಮಾಧಾನಪಡಿಸಿದವು.

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

“ನೀವು ಏನೇ ಹೇಳಿ ಅದು ನಮಗೆ ಸಾಧ್ಯವಿಲ್ಲ. ಯಾರಾದ್ರೂ ನಗ್ತಾರೆ. ಅಲ್ದೇ ನಿಮ್ ಮನಸ್ಸು ಇಂಥಾದ್ಕೆ ಹ್ಯಾಗ್ರಿ ಒಪ್ಪುತ್ತೆ.”

“ಯಾಕೆ ಒಪ್ಪೋಲ್ಲ. ನಾನು ಎಲ್ಲಾ ದೃಷ್ಟಿಯಿಂದ್ಲೂ ಯೋಚನೆ ಮಾಡಿ ನಿರ್ಧಾರ ಮಾಡಿದ್ದೀನಿ. ನನ್ನ ಮನಸ್ಸು ಯಾವ ವಿಕಾರಾನೂ ಇಲ್ದೇ ನೂರಕ್ಕೆ ನೂರು ಭಾಗ ಒಪ್ಕೊಂಡಿದೆ. ನೀನು ಮಡಿವಂತಿಕೇನ ಬಿಟ್ಟು ಯೋಚನೆ ಮಾಡು. ನಿನಗೇ ಸ್ಪಷ್ಟವಾಗುತ್ತೆ.”

“ಬೇಡಾರೀ, ಮಕ್ಕಳಿಲ್ದೇ ಇದ್ರೂ ಪರ್ವಾಗಿಲ್ಲ ಅಂಥಾದ್ನ ಮಾಡಬಾರ್ದು.”

“ಛೇ, ನೀನು ಪಾಪಪ್ರಜ್ಞೆ ಮೂಡಿಸ್ಕೋತಿದೀಯಾ. ಈಗ ನೋಡು ನಮಗೆ ಅಗತ್ಯ ಇರೋದ್ನ, ನಮ್ಮ ಬಳಿ ಇಲ್ದೇ ಇರೋದ್ನ ಎಲ್ಲಾದ್ರೂ ಸರಿ ಹೊರಗೆ ಪಡಕೊಳ್ತೀವಲ್ಲ ಹಾಗೆ ಇದೂನೂ… ಅಲ್ವಾ… ಧರ್ಮಾನೇ ಅದ್ನ ಒಪ್ಕೊಂಡಿದೆ ಅಂದಮೇಲೆ, ಅದ್ರಲ್ಲೂ ನಿಯಮಗಳೂ ಇವೆಯಲ್ಲ. ಅದೇನೂ ವೇಶ್ಯಾವೃತ್ತಿ ಆಗೋಯ್ತೇ… ಒಂದೇ ಒಂದು ಮಗು ಆಗೋದಿಕ್ಕೆ ಒಂದೇ ಒಂದ್ಸಲ ಅಷ್ಟೆ, ನಂತ್ರ ಏನೂ ಇಲ್ಲಾ….”

ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ

“ಅದ್ಸರೀರಿ, ಈ ಕಾಲ್ದಲ್ಲಿ ಅದ್ನ ಯಾರ್‍ರೀ ಒಪ್ತಾರೆ….” ಸ್ವಲ್ಪ ಕರಗಿದಂತೆ ಕಂಡವಳನ್ನು “ನೀನೇನೂ ಯೋಚೆ ಮಾಡಬೇಡ. ನಾನು ಏರ್ಪಾಡು ಮಾಡ್ತಿನಿ. ಮೊದ್ಲು ಶುದ್ದ ಮನಸ್ಸಿನಿಂದ ನೀನು ಒಪ್ಕೋಬೇಕು ಅಷ್ಟೆ ಒಂದು ಉದ್ದೇಶದ ಈಡೇರಿಕೆಗೆ. ನೀನೇನೂ ಅವಿದ್ಯಾವಂತೆಯಲ್ಲ. ಶೀಲ, ಪವಿತ್ರ, ಮಡಿವಂತಿಕೆ, ಪಾಪ, ಪುಣ್ಯ ಎಲ್ಲ ಮರೆತು ಕೇವಲ ಬಾಂಧವ್ಯ, ಸಂಬಂಧದ ದೃಷ್ಟಿಯಿಂದ ನೋಡು. ಇದೊಂದು ಹೊಸ ಪ್ರಯೋಗವೇ ಆಗಿಬಿಡಲಿ. ಆಂ…” ಮೆಲ್ಲನೆ ಕಣ್ಣುಗಳನ್ನು ಚುಂಬಿಸಿದ. ಸತೀಶನನ್ನು ತಬ್ಬಿಕೊಂಡು ಯಾವಾಗಲೋ ನಿದ್ರಾವಶವಾಗಿದ್ದಳು- ಜಯಂತಿ.

*

ತನ್ನ ಸ್ನೇಹಿತ ಲಕ್ಷ್ಮಣನೇ ಇದಕ್ಕೆ ಸೂಕ್ತ ಎಂದು ಭಾವಿಸಿದ ಸತೀಶ ಪರಿಪರಿಯಾಗಿ ಅವನ ಮನವೊಲಿಸಿ ಒಪ್ಪಿಸಿದ್ದ. ಲಕ್ಷ್ಮಣ್ ನಲವತ್ತೈದು ವರ್ಷದ ಬ್ರಹ್ಮಚಾರಿ. ಮದುವೆಯಾಗಬಾರದೆಂದು ನಿರ್ಧರಿಸಿ ಹಾಗೇ ಉಳಿದಿದ್ದ. ಅಸಾಧ್ಯ ಬುದ್ಧಿವಂತ. ಮಹೇಂದ್ರಕ‌ರ್ ಫರ್ಮ್‌ನಲ್ಲಿ ಮ್ಯಾನೇಜರ್ ಆಗಿದ್ದ. ದೃಢಕಾಯ, ಆಕರ್ಷಕ ವ್ಯಕ್ತಿ. ಕೆಮಿಕಲ್ ಇಂಜಿನಿಯರ್ ತನಕವೂ ಗೋಲ್ಡ್ ಮೆಡಲ್ ಪಡೆದಿದ್ದ ಮೇಧಾವಿ. ಒಳ್ಳೇ ಫುಟ್‌ಬಾಲ್ ಆಟಗಾರ, ಸಕಲ ಗುಣಸಂಪನ್ನತೆಯನ್ನು ಅವನಲ್ಲಿ ಕಂಡಿದ್ದ ಸತೀಶ ತನ್ನ ತೀರಾ ಆತ್ಮೀಯ ಸ್ನೇಹಿತನ ರೂಪ, ಗುಣ, ಬುದ್ಧಿಮತ್ತೆಯನ್ನು ಹೊತ್ತೇ ತನಗೊಂದು ಗಂಡು ಮಗುವಾಗಲಿ ಎಂದು ಬಯಸಿದ. ಆದರೆ ಹೆಣ್ಣು ಮಗುವಾದರೆ ಎಂಬುದನ್ನು ಕಲ್ಪನೆಯಲ್ಲೂ ನೆನೆಯಲಾರದಾದ.

ಇದನ್ನು ಓದಿದ್ದೀರಾ?: ಪಾಟೀಲ ಪುಟ್ಟಪ್ಪ ಅವರ ಕತೆ | ಸಾವಿನ ಮೇಜವಾನಿ

ಬದುಕು ಎಂತಹ ಮಾರ್ಮಿಕ ಸತ್ಯ ಹಾಗೂ ವಾಸ್ತವಗಳನ್ನು ಹೊಂದಿರುತ್ತದೆ. ಅದನ್ನು ಮನುಷ್ಯ ಸ್ವೀಕರಿಸುವ ಬಗೆ, ಬದಲಿಸಿಕೊಳ್ಳುವ ನೀತಿ, ಜಾಣತನ, ಅಗತ್ಯಗಳಿಗಾಗಿ ತನ್ನ ಮನೋಬಲವನ್ನೇ ಅಲ್ಲಾಡಿಸಲು ಹೆಣಗುವ ಭಾವ ಸಂಬಂಧಗಳು. ಏನೆಲ್ಲಾ ಗೋಜಲು, ಇನ್ನೆಷ್ಟು ವರ್ಷ ಬದುಕಲು ಈ ಆಟ. ಒಮ್ಮೊಮ್ಮೆ ವೇದಾಂತವೇ ಸರಿ ಎನಿಸುತ್ತಿತ್ತು. ಆದರೆ ತನ್ನ ಈ ಪ್ರಯೋಗ ತನ್ನ ಜೀವನದಲ್ಲಿಯೇ ಒಂದು ರೆಕಾರ್ಡ್ ಬ್ರೇಕ್ ಆಗಲಿ ಎಂದು ಸತೀಶ ಚಾಲೆಂಜ್ ಆಗಿ ಸ್ವೀಕರಿಸಿದ್ದ.

ಸತೀಶ ತನ್ನ ಇಂಜಿನಿಯರ್ ಬುದ್ಧಿಯನ್ನೆಲ್ಲಾ ಪ್ರಯೋಗಿಸಿ ಖರ್ಚು ಮಾಡಿ ಬ್ರಹ್ಮಚಾರಿಯನ್ನು ಮಣಿಸುವಲ್ಲಿ ಯಶಸ್ವಿಯಾದ. ಅವನ ಪ್ರಯೋಗ ಯಶಸ್ವಿಯಾಗಿತ್ತು.

ಒಂದು ದಿನ ಸತೀಶ ಕಚೇರಿಯಲ್ಲಿದ್ದಾಗಲೇ ಹೆಂಡತಿಯ ಊರಿನಿಂದ ಟೆಲಿಗ್ರಾಂ ಬಂತು. ‘ಜಯಂತಿ ಗಂಡು ಮಗುವಿನ ತಾಯಿ. ಇಬ್ಬರೂ ಆರೋಗ್ಯವಾಗಿದ್ದಾರೆ’ ಎಂದು. ಕೂಡಲೇ ಸತೀಶ ತಿಂಗಳ ಕಾಲ ರಜೆ ಹಾಕಿ ಯಾರಿಗೂ ಹೇಳದೇ ಊರಿಗೆ ಹೊರಟ.

ಒಂದೆರಡು ದಿನಗಳ ಕಾಲ ಸತೀಶ ಕಾಣದೇ ಹೋದದ್ದು ಅರಿವಾಗಿ ಯೋಚಿಸಿದ ಲಕ್ಷ್ಮಣ್‌ಗೆ ಕಾರಣ ಹೊಳೆಯಿತು. ತನಗೆ ಹೇಳದೇ ಹೋದ ಸತೀಶನ ಬಗ್ಗೆ ತಿರಸ್ಕಾರ ಮೂಡಿತು. ತನಗೊಂದು ಮಾತು ಹೇಳದೇ ಹೋದನಲ್ಲ ಎಂದು ಮರುಗಿದ. ಸತೀಶನ ಮನೆಯ ಬಳಿ ಹೋಗಿ ಪಕ್ಕದ ಫ್ಲಾಟಿನ ಅನಿತಾ ಬಳಿ ಜಯಂತಿಯ ವಿಳಾಸ ಪಡೆದು, ಒಂದು ವಾರ ರಜೆ ಹಾಕಿ ಹೊರಟ.

ಇದನ್ನು ಓದಿದ್ದೀರಾ?: ಎಚ್. ನಾಗವೇಣಿ ಅವರ ಕತೆ | ಧಣಿಗಳ ಬೆಳ್ಳಿಲೋಟ

ಲಕ್ಷ್ಮಣ ಸಿರಿಗಾನಹಳ್ಳಿ ತಲುಪಿ ಪಟೇಲರ ಮನೆ ಕೇಳಿದಾಗ ಹಲವಾರು ಮಂದಿ ದಾರಿ ತೋರಿದರು. ಅವನು ಮನೆ ತಲುಪಿದಾಗ ಮೊದಲು ಎದುರಾದವನೇ ಸತೀಶ. ಲಕ್ಷ್ಮಣನನ್ನು ನೋಡುತ್ತಲೇ ಸತೀಶನ ಮುಖ ಕಪ್ಪಿಟ್ಟಿತು. ಇವನೆಲ್ಲಿ ಗಂಟುಬಿದ್ದನಪ್ಪ ಎಂದು ಬೇಸರವೂ ಮೂಡಿತು. ಆದರೂ ಔಪಚಾರಿಕವಾಗಿ “ಬಾ ಲಕ್ಷ್ಮಣ್, ನಿನಗೆ ಹೇಳಲಿಕ್ಕೆ ಆಗಲಿಲ್ಲ. ಗಡಿಬಿಡಿಯಲ್ಲಿ ಬಂದು ಬಿಟ್ಟೆ” ಎಂದು ಮನೆ ಒಳಗೆ ಕರೆದೊಯ್ದ. ಮಗುವನ್ನು ಅವನು ನೋಡುವಾಗ ಜಯಂತಿ ತಲೆ ತಗ್ಗಿಸಿಯೇ ಇದ್ದಳು. ಲಕ್ಷ್ಮಣನಿಗೆ ಮಗುವನ್ನೆತ್ತಿ ಕುಣಿದಾಡಬೇಕೆನಿಸಿತು.

ಊಟ ವಿಶ್ರಾಂತಿ ಎಲ್ಲ ಆದಮೇಲೆ ಲಕ್ಷ್ಮಣ, ಸತೀಶನನ್ನು ಕುರಿತು ‘ಹೊಲ ಗದ್ದೆಗಳ ಕಡೆ ಅಡ್ಡಾಡೋಣ ಬಾ’ ಎಂದ.

ಇಬ್ಬರೂ ಮೌನವಾಗಿ ನಡೆದು ತಮ್ಮ ಮಾವನವರ ತೋಟಕ್ಕೆ ಬಂದಾಗ ಸತೀಶ ವಿವರಿಸಿದ ತೆಂಗಿನ ತೋಟ, ಬಾಳೆ ತೋಟ, ಅಡಿಕೆ, ಗದ್ದೆ, ತರಕಾರಿ, ಹಣ್ಣಿನ ಗಿಡಗಳು ಎಲ್ಲವೂ ಒಂದೇ ಪ್ರದೇಶದಲ್ಲಿದ್ದವು. ದೊಡ್ಡದಾದ ಪಂಪ್‌ಸೆಟ್ ಬಾವಿಯಲ್ಲಿ ದೊಡ್ಡ ದೊಡ್ಡ ಮೀನುಗಳನ್ನು ಸಾಕಲು ಬಿಟ್ಟಿದ್ದರು. ಅವರು ಒಂದೆಡೆ ಕುಳಿತು ಲೋಕಾಭಿರಾಮ ಮಾತಾಡುತ್ತಿದ್ದರೂ ಸತೀಶನ ಮನಸ್ಸು ಬೇರೇನೋ ಯೋಚಿಸುತ್ತಿತ್ತು. ತನ್ನ ಗೊಂದಲದಲ್ಲಿ ನಿಜಸ್ಥಿತಿ ಗೊತ್ತಾಗಿಬಿಟ್ಟರೆ ಹೇಗೆ! ಆಗ ಎಷ್ಟು ಅಪಮಾನ! ಜಯಂತಿ ಸ್ಥಿತಿ ಏನಾಗಬಹುದು? ಎಂದೆಲ್ಲಾ ಚಿಂತಿಸಿ ಸತೀಶ ಹಣ್ಣಾದ.

ಸ್ವಲ್ಪ ಹೊತ್ತಾದ ಬಳಿಕ ಇಬ್ಬರೂ ಎಳನೀರು ಕುಡಿದು ಅಡ್ಡಾಡಿ, ಬಾವಿ ಬಳಿ ಬಂದರು. ಮೀನುಗಳನ್ನು ತೋರಿಸುತ್ತ ಸತೀಶ ಬಾವಿಯಲ್ಲಿ ಬಗ್ಗಿ ನೋಡುತ್ತಿದ್ದ. ಲಕ್ಷ್ಮಣನೂ ಎಲ್ಲಿ ಕಾಣುತ್ತಲೇ ಇಲ್ಲವಲ್ಲ ಎಂದು ಹುಡುಕುವವನಂತೆ ಬಾಗಿ ನೋಡುತ್ತಿದ್ದ. ಅಲ್ಲಲ್ಲಿ ಇಣುಕುತ್ತಿದ್ದ ಮೇಲೆ ಬಂದು ಮತ್ತೆ ಪುಳಕ್ಕನೆ ನೀರಿನೊಳಗೆ ಮುಳುಗುತ್ತಾ ಆಟವಾಡುವ ವಿವಿಧ ಜಾತಿಯ ಮೀನುಗಳನ್ನು ನೋಡುತ್ತ ನಿಂತರು. ಸಂಜೆ ಗಾಳಿ ತೀಡುತ್ತಿದ್ದುದು ಇದ್ದಕ್ಕಿದ್ದಂತೆ ಮೋಡ ಆವರಿಸಿ ಬಿರುಗಾಳಿ ಎದ್ದಿತು. ಮಣ್ಣಿನ ಕಂಪು ವಾಸನೆ ದೂರದಿಂದ ಮಳೆ ಬರುತ್ತಿರುವುದನ್ನು ಸಾರುತ್ತಿತ್ತು. ಜೋರಾಗಿ ಬಿರುಗಾಳಿ ಬೀಸುತ್ತಲೇ ಇತ್ತು. ಜಯಂತಿಯ ಅಣ್ಣ ಗೋಪಾಲ್ ತೋಟದಲ್ಲಿ ಕೆಲಸ ಮಾಡುತ್ತಿದ್ದವನು ಕೂಗಿ ಹೇಳಿದ: “ಮಳೆ ಗಾಳಿ ಬರುತ್ತಿದೆ, ಬೇಗ ಮನೆಗೆ ನಡೆಯಿರಿ”.

(ಕೃಪೆ: ತುಂಬೆ ಹೂವು, ಸಂ: ಡಾ. ಕರೀಗೌಡ ಬೀಚನಹಳ್ಳಿ, ಪ್ರ: ಕಿರಂ ಪ್ರಕಾಶನ, ಬೆಂಗಳೂರು)

ಬಾ.ಹ. ರಮಾಕುಮಾರಿ

ಬಾ.ಹ. ರಮಾಕುಮಾರಿ (1954): ಇವರು ತುಮಕೂರು ಜಿಲ್ಲೆ ಬಾಣಸಂದ್ರದಲ್ಲಿ 1954 ಮೇ 2ರಂದು ಜನಿಸಿದರು. ತಾಯಿ ಬಸಮ್ಮ, ತಂದೆ ಬಿ.ಟಿ.ಎಚ್. ಗೌಡ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಕರ್ನಾಟಕ ಸರ್ಕಾರದ ಸೇವೆಯಲ್ಲಿದ್ದು ನಿವೃತ್ತರು. ಇವರು ಪ್ರಧಾನವಾಗಿ ಕವಯಿತ್ರಿ ನಂತರ ಕಥೆ, ವಿಚಾರ ಪ್ರಬಂಧಗಳನ್ನೂ ಬರೆದಿದ್ದಾರೆ. ಪ್ರಕಟಿತ ಕೃತಿಗಳು: ಅನಾವರಣ, ಕಳೆದು ಹೋಗಿದ್ದಾನೆ, ಧ್ವನಿಗಳು, ಅನಾಮಿಕ ಹಕ್ಕಿಯ ಸ್ವಗತ, ನಕ್ಕಾವು ಚುಕ್ಕಿ(ಕವನ ಸಂಕಲನ); ಧಗಧಗಿಸುವ ಆತ್ಮಗಳು, ಕಾನೂನಿನಲ್ಲಿ ಮಹಿಳೆ, ವೈದ್ಯಕೀಯ ಗರ್ಭಪಾತ, ಕನಸಿನಾಳದ ಕಣ್ಣು, ಅಕ್ಕಮಹಾದೇವಿ, ರಂಗಾಪುರದ ಹುಡುಗರು, ಓದುವ ವಯಸ್ಸಿನಲ್ಲಿ ದುಡಿಮೆ ಯಾಕೆ, ಮಹಿಳೆಯರ ಸ್ಥಾನಮಾನ ಮತ್ತು ಸಂಘಟನೆ, ದತ್ತು ತೆಗೆದುಕೊಳ್ಳುವುದು ಹೇಗೆ?(ಲೇಖನಗಳ ಸಂಕಲನ); ಹೀಗೊಂದು ಪ್ರೇಮಕಥೆ (ಕಥಾ ಸಂಕಲನ); ಅಕ್ಕಮಹಾದೇವಿ, ಅಮ್ಮುಗೆ ರಾಯಮ್ಮ-ದೇವಯ್ಯ ರಾಯಸದ ಮಂಚಣ್ಣ-ರಾಯಮ್ಮ (ಜೀವನ ಚರಿತ್ರೆ). ಬಾಣಸಂದ್ರದ ಬೆಳ್ಳಿಕಿರಣ, ಸುವರ್ಣಸಿರಿ, ತುಮಕೂರು ಜಿಲ್ಲೆಯ ಸಾಹಿತಿಗಳ ಮಾಹಿತಿ ಕೋಶ ಸೇರಿದಂತೆ ಒಟ್ಟು 22 ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಕನ್ನಡ ಸಂಸ್ಕೃತಿ ಇಲಾಖೆಯ ಫೆಲೋಶಿಪ್, ಗೊರೂರು ಪ್ರಶಸ್ತಿ, ಗೀತಾದೇಸಾಯಿ ದತ್ತಿ ಬಹುಮಾನ, ರಾಕ್‌ಲೈನ್ ಪ್ರಶಸ್ತಿ, ಅನುಪಮ ನಿರಂಜನ ಪ್ರಶಸ್ತಿ, ಸಣ್ಣ ಗುಡ್ಡಯ್ಯ ಸಾಹಿತ್ಯ ಪ್ರಶಸ್ತಿ, ಕನ್ನಡ ಅರವಿಂದ ಪ್ರಶಸ್ತಿಗಳು ಸಂದಿವೆ. ಇವರು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಂಘದ ಕಟ್ಟಡ ನಿರ್ಮಾಣಕ್ಕೆ ಮತ್ತು ಜಿಲ್ಲಾ ಸಾಹಿತಿಗಳ ಹಾಗೂ ಸಾಹಿತ್ಯದ ಸಂವರ್ಧನೆಗೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಚ್. ನಾಗವೇಣಿ ಅವರ ಕತೆ | ಧಣಿಗಳ ಬೆಳ್ಳಿಲೋಟ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಅಮರೇಶ ನುಗಡೋಣಿ ಅವರ ಕತೆ | ತಮಂಧದ ಕೇಡು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...