ಆಗಸ್ಟ್‌ನಲ್ಲಿ ಇರದ ದಾರಿದ್ರ್ಯ ಸೆಪ್ಟೆಂಬರ್‌ನಲ್ಲಿ ಬಂದಿದ್ದು ಯಾರಿಗೆ, ಜೆಡಿಎಸ್‌ಗೋ? ಅಥವಾ ಬಿಜೆಪಿಗೋ? ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣದ ಎಕ್ಸ್ (ಟ್ವಿಟ್ಟರ್)ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರವಾಗಿ ಕುಟುಕಿರುವ ಕಾಂಗ್ರೆಸ್, “ಬಿಜೆಪಿ ಜೊತೆ ಹೋಗುವ ದಾರಿದ್ರ್ಯ ನಮಗೆ ಬಂದಿಲ್ಲ ಎಂದು ಕುಮಾರಸ್ವಾಮಿ ಮೊದಲು ಹೇಳಿದ್ದರು. ಕುಮಾರಸ್ವಾಮಿಯೊಂದಿಗೆ ಹೋಗುವ ದಾರಿದ್ರ್ಯ ಬಿಜೆಪಿಗೆ ಬಂದಿಲ್ಲ ಎಂದು ಸುನಿಲ್ ಕುಮಾರ್ ನಂತರ ಹೇಳಿದ್ದರು. ಇಂತಹ ಯೂಟರ್ನ್ ಗಳಿಂದಲೇ ಉಭಯ ಪಕ್ಷಗಳನ್ನು ರಾಜ್ಯದ ಜನತೆ ನಂಬಿಕೆಗೆ ಅರ್ಹವಲ್ಲ ಎಂದು ತೀರ್ಮಾನಿಸಿ ಹೀನಾಯವಾಗಿ ತಿರಸ್ಕರಿಸಿದೆ. ದಾರಿದ್ರ್ಯ ಬಂದಿದ್ದು ಯಾರಿಗೆ ಎಂಬುದನ್ನು ಉಭಯ ಪಕ್ಷಗಳೂ ಅವಲೋಕನ ನಡೆಸಿ ರಾಜ್ಯದ ಜನತೆಗೆ ತಿಳಿಸಲಿ!” ಎಂದಿದೆ.
“ಜೆಡಿಎಸ್‌ನವರು ವಚನ ಭ್ರಷ್ಟರು, ಜೀವಮಾನದಲ್ಲಿ ಅವರ ಸಹವಾಸ ಮಾಡುವುದಿಲ್ಲ ಎನ್ನುತ್ತಿದ್ದ ಯಡಿಯೂರಪ್ಪವರು ಜೆಡಿಎಸ್ ಜೊತೆಗಿನ ಸಖ್ಯ ಬೆಳೆಸುವ ಮಾತಾಡಿದ್ದರು, ಈಗ ಮತ್ತೆ ಯೂಟರ್ನ್ ಹೊಡೆದಿದ್ದಾರೆ. ಮೈತ್ರಿಯ ಚೌಕಸಿ ವ್ಯವಹಾರ ಕುದುರಲಿಲ್ಲವೇ ಅಥವಾ ಯಡಿಯೂರಪ್ಪನವರನ್ನು ಕಟ್ಟಿಹಾಕಲು ಬಿಜೆಪಿ ಈ ಕಡಿವಾಣ ಹಾಕುತ್ತಿದೆಯಾ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.